ಬೆಳಗಾವಿ(ಜ.27): ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ (Social Media) ಬಳಕೆ ಎಷ್ಟು ಹೆಚ್ಚುತ್ತಿದೆಯೋ ಅಷ್ಟೇ ಅಕ್ರಮಗಳೂ (Scam) ನಡೆಯುತ್ತಿವೆ. ಮೋಸ ಮಾಡಿ ಹಣ ವಂಚನೆ, ಖಾತೆ ಹ್ಯಾಕಿಂಗ್ ಹೀಗೆ ನಾನಾ ಬಗೆಯ ಅಪರಾಧ (Crime) ಕೃತ್ಯಗಳು ಬಯಲಿಗೆ ಬರುತ್ತಲೇ ಇರುತ್ತವೆ. ಇಂತಹ ಖದೀಮರನ್ನು ಪತ್ತೆ ಹಚ್ಚುವ ಪೊಲೀಸರು ಕಂಬಿ ಎಣಿಸುವಂತೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ಚಾಲಾಕಿ ಪೊಲೀಸ್ ಸಬ್ ಇನ್ಸ್ಟ್ಪೆಕ್ಟರ್ ಹೆಸರನ್ನೇ ಬಳಸಿ ಬರೋಬ್ಬರಿ 50 ಮಹಿಳೆಯರಿಗೆ ವಂಚಿಸಿದ್ದಲ್ಲದೇ, ಅವರಿಂದ ನಾಲ್ಕು ಲಕ್ಷ ರೂಪಾಯಿಯನ್ನೂ ಪಡೆದಿದ್ದಾನೆ.
ಹೌದು ಬೆಳಗಾವಿಯ ನಿಪ್ಪಾಣಿಯಲ್ಲಿ ಇಂತಹುದ್ದೊಂದು ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು 28 ವರ್ಷದ ವಿಜಯ ಕುಮಾರ್ ಬರಲಿ ಎಂದು ಗುರುತಿಸಲಾಗಿದೆ. ಈತ ಇನ್ಸ್ಟಾಗ್ರಾಂ ಮೂಲಕ ಐವತ್ತು ಮಹಿಳೆಯರಿಗೆ ಆಮಿಷವೊಡ್ಡಿ ನಾಲ್ಕು ಲಕ್ಷ ರೂಪಾಯಿ ವಂಚಿಸಿದ್ದಾನೆ. ಆನ್ಲೈನ್ ವಂಚನೆಯನ್ನೇ ತನ್ನ ಕಸುಬಾಗಿಸಿಕೊಂಡಿದ್ದ ಈತ ಒಟ್ಟು ಒಂಬತ್ತು ಇನ್ಸ್ಟಾಗ್ರಾಂ ನಕಲಿ ಖಾತೆಗಳನ್ನು ನಿರ್ವಹಿಸುತ್ತಿದ್ದ. ಈ ಮೂಲಕ ಮಹಿಳೆಯರನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ.
ಇದನ್ನೂ ಓದಿ: Hubballi News: ಹುಬ್ಬಳ್ಳಿಯಲ್ಲಿ ಮೆಣಸಿನಕಾಯಿ ಮೇಳ, ಉತ್ತರ ಕರ್ನಾಟಕ ಭಾಗದ ರೈತರಲ್ಲಿ ಹೆಚ್ಚಿದ ನಿರೀಕ್ಷೆ
ಇತ್ತೀಚೆಗೆ ವಿಜಯ್ ಕುಮಾರ್ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಕಂಬಾರ್ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ಸೃಷ್ಟಿಸಿದ್ದ. ಈ ಖಾತೆ ಮೂಲಕ ಹಲವರಿಗೆ ರಿಕ್ವೆಸ್ಟ್ ಕೂಡಾ ಕಳುಹಿಸಿದ್ದು. ಈ ನಕಲಿ ಖಾತೆ ಮೂಲಕ ಆರೋಪಿ ವಿಜಯ್ ಒಟ್ಟು 1.20 ಲಕ್ಷ ಫಾಲೋವರ್ಸ್ ಹೊಂದಿದ್ದ. ಆದರೆ ಈ ವಿಚಾರ ಗಮನಕ್ಕೆ ಬಂದ ಬೆನ್ನಲ್ಲೇ ಪಿಎಸ್ಐ ಅನಿಲ್ ಕುಮಾರ್ ಕಂಬಾರ್ ದೂರು ನೀಡಿದ್ದರು. ಈ ದೂರಿನನ್ವಯ ತನಿಖೆ ಆರಂಭಿಸಿದ ಪೊಲೀಸರಿಗೆ ಬೆಚ್ಚಿ ಬೀಳಿಸುವ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: JOB News: ಅಮೆಜಾನ್ ಕಂಪನಿಯಲ್ಲಿ ಉದ್ಯೋಗ ಮಾಡಲು ಇಲ್ಲಿದೆ ಅವಕಾಶ! ಹುಬ್ಬಳ್ಳಿಯಲ್ಲಿ ಕೆಲಸ
ಆರೋಪಿ ವಿಜಯ ಕುಮಾರ್ ಬರಲಿ ಇದೊಂದೇ ಖಾತೆ ಅಲ್ಲದೇ ಇಂತಹುದೇ ಒಟ್ಟು ಒಂಭತ್ತು ನಕಲಿ ಖಾತೆ ಹೊಂದಿದ್ದು, ಈ ಮೂಲಕ ಹಲವು ಮಹಿಳೆಯರಿಗೆ ಆಮಿಷವೊಡ್ಡಿ ವಂಚಿಸುವ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಈ ಖಾತೆಗಳಿಂದ ಆತ ಒಟ್ಟು ಐವತ್ತು ಮಹಿಳೆಯರಿಗೆ ನಾಲ್ಕು ಲಕ್ಷ ರೂಪಾಯಿ ವಂಚಿಸಿರುವುದೂ ಬೆಳಕಿಗೆ ಬಂದಿದೆ. ಈ ಮಾಹಿತಿ ಪಡೆದ ಬೆಳಗಾವಿ ಸಿಇಎನ್ ಪೊಲೀಸರು ಆರೋಪಿ ವಿಜಯ ಕುಮಾರ್ ಬರಲಿ ಆಟಕ್ಕೆ ಬ್ರೇಕ್ ಹಾಕಿದ್ದಾರೆ. ಆತನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಇಂತಹುದೇ ಹಲವು ಪ್ರಕರಣಗಳು ದಿನ ಬೆಳಗಾಗುವಾಗ ವರದಿಯಾಗುತ್ತಲೇ ಇರುತ್ತವೆ. ಹೀಗಾಗಿ ಸಾಮಾಜಿಕ ಖಾತೆಗಳನ್ನು ಬಳಸುವಾಗ ಎಚ್ಚರದಿಂದಿರಿ. ಇಂತಹ ನಕಲಿ ಖಾತೆಗಳ ವಿಚಾರ ನಿಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಸೂಕ್ತ ವ್ಯಕ್ತಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ, ಇಲ್ಲವೇ ಖಾತೆಯನ್ನು ರಿಪೋರ್ಟ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ