ಅಸ್ಸಾಂ: ರಾಜ್ಯದಲ್ಲಿ ಬಾಲ್ಯ ವಿವಾಹದ (Child Marriage) ನಿಗ್ರಹಕ್ಕೆ ಪಣತೊಟ್ಟಿರುವ ಅಸ್ಸಾಂ (Assam) ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಬಾಲ್ಯ ವಿವಾಹ ಆಗಿರುವವರು, ಬಾಲ್ಯ ವಿವಾಹ ಮಾಡುತ್ತಿದ್ದವರು ಮತ್ತುಅದಕ್ಕೆ ಪ್ರೇರಣೆ ನೀಡುತ್ತಿದ್ದವರನ್ನು ಬಂಧಿಸಲು ಸೂಚನೆ ನೀಡಿದ್ದಾರೆ. ಈಗಾಗಲೆ ರಾಜ್ಯದಲ್ಲಿ ಕಾರ್ಯಾಚಾರಣೆ ಆರಂಭವಾಗಿದ್ದು, 1,800 ಮಂದಿಯನ್ನು ಬಂಧಿಸಲಾಗಿದೆ ಎಂದು ಹಿಮಂತ ಬಿಸ್ವಾ ಶರ್ಮಾ ಶುಕ್ರವಾರ ಹೇಳಿದ್ದಾರೆ. ಬಾಲ್ಯ ವಿವಾಹ ತಡೆಯಲು ಈ ಕ್ರಮ ತೆಗೆದುಕೊಂಡಿದ್ದು, ಈ ವಿಚಾರದಲ್ಲಿ ಶೂನ್ಯ ಸಹಿಷ್ಣುತೆಯ ಮನೋಭಾವದಿಂದ ವರ್ತಿಸುವಂತೆ ಅಸ್ಸಾಂ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಒಂದೇ ದಿನ 1800 ಬಂಧನ
" ಬಾಲ್ಯ ವಿವಾಹ ನಿಷೇಧ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸುವವರ ವಿರುದ್ಧ ರಾಜ್ಯಾದ್ಯಂತ ಬಂಧನಗಳು ನಡೆಯುತ್ತಿವೆ. 1800 ಹೆಚ್ಚು ಮಂದಿಯನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ. ಮಹಿಳೆಯರ ಮೇಲಿನ ಅಕ್ಷಮ್ಯ ಮತ್ತು ಘೋರ ಅಪರಾಧ ವಿರುದ್ಧ ಶೂನ್ಯ ಸಹಿಷ್ಣುತೆಯ ಮನೋಭಾವದಿಂದ ವರ್ತಿಸುವಂತೆ ನಾನು ಪೊಲೀಸರಿಗೆ ಸೂಚಿಸಿದ್ದೇನೆ " ಎಂದು ಅಸ್ಸಾಂ ಸಿಎಂ ಟ್ವೀಟ್ ಮಾಡಿದ್ದಾರೆ.
ಮೊದಲೇ ಎಚ್ಚರಿಕೆ ನೀಡಿದ್ದ ಸಿಎಂ
ದೇಶದಲ್ಲಿ ಬಾಲ್ಯ ವಿವಾಹ ದೊಡ್ಡ ಪಿಡುಗಾಗಿದೆ. ಇದನ್ನು ಕೊನೆಗಾಣಿಸುವ ಸಲುವಾಗಿ ಅಸ್ಸಾಂ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಜನವರಿ 23ರಂದು ನಡೆದ ಸಚಿವ ಸಂಪುಟದಲ್ಲಿ ಮಾತನಾಡಿದ್ದ ಸಿಎಂ ಹಿಮಂತ ಬಿಸ್ವಾ ಶರ್ಮಾ, ರಾಜ್ಯದಲ್ಲಿ ಶೇ. 31ರಷ್ಟು ವಿವಾಹಗಳು ಹೆಣ್ಣುಮಕ್ಕಳಿಗೆ 18 ವರ್ಷ ತುಂಬುವ ಮೊದಲೇ ಆಗುತ್ತಿದೆ. 2019-20ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಶೇ.11.7ರಷ್ಟು ಹೆಣ್ಣು ಮಕ್ಕಳು ತಾಯ್ತನದ ಹೊರೆ ಹೊರುತ್ತಿದ್ದಾರೆ. ಬಾಲ್ಯವಿವಾಹದಿಂದ ತಾಯಿ ಮತ್ತು ಮಗುವಿನ ಮರಣ ಪ್ರಮಾಣವೂ ಹೆಚ್ಚಾಗುತ್ತಿದೆ. ಹಾಗಾಗಿ ಬಾಲ್ಯ ವಿವಾಹವಾದ ಪುರುಷರ ವಿರುದ್ಧ ಕಾನೂನು ಕ್ರಮ ಜರುಗಿಸುವಾಗಿ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: Crime News: ತವರಿಗೆ ಹೋದ ಹೆಂಡತಿಯರು ವಾಪಸ್ ಬರಲೇ ಇಲ್ಲ, ದುಡುಕಿ ನೇಣಿಗೆ ಶರಣಾದ ಗಂಡಂದಿರು!
ಪೋಕ್ಸೋ ಕೇಸ್ ಹಾಕಲು ಸೂಚನೆ
14 ವರ್ಷಕ್ಕಿಂತ ಕಳೆಗಿನ ಬಾಲಕಿಯರನ್ನು ವಿವಾಹವಾಗುವ ಪುರುಷರ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಲು ಹಿಮಂತ್ ಸೂಚನೆ ನೀಡಿದ್ದಾರೆ. 18 ವರ್ಷಕ್ಕಿಂತ ಕಳೆಗಿನ ಬಾಲಕಿಯರ ಮದುವೆಯಾಗಿರುವ ಪುರುಷರೂ ಕೂಡ ಜೈಲು ಸೇರಬೇಕಿದೆ. ಈಗಾಗಲೇ ಬಾಲ್ಯ ವಿವಾಹವಾಗಿ ಬಾಲಕಿಗೆ 18 ವರ್ಷ ತುಂಬಿದ್ದರೂ ಸಹಾ ಪತಿಗೆ ಜೈಲು ಶಿಕ್ಷೆ ತಪ್ಪಿದ್ದಲ್ಲ.
ಜಾತಿ-ಧರ್ಮ ಲೆಕ್ಕವಿಲ್ಲದೆ ಕ್ರಮ
ಬಾಲ್ಯ ವಿವಾಹ ವಿರುದ್ಧ ಸರ್ಕಾರ ನಡೆಯುತ್ತಿರುವ ಈ ಅಭಿಯಾನ ಯಾವುದೇ ಒಂದು ಸಮುದಾಯ ಅಥವಾ ಧರ್ಮವನ್ನು ಗುರಿಯಾಗಿಸಿಲ್ಲ. ಬಾಲ್ಯ ವಿವಾಹದ ವಿರುದ್ಧ ಕಠಿಣ ಕ್ರಮ ಜರುಗಿಸುವುದೊಂದೆ ಸರ್ಕಾರದ ಮಂತ್ರವಾಗಿದೆ. ಈ ವಿಚಾರದಲ್ಲಿ ಆರೋಪಿಗಳ ಧರ್ಮ, ಜಾತಿಗಳನ್ನು ನೋಡಲಾಗುವುದಿಲ್ಲ. ಕಾನೂನು ಪ್ರಕಾರ ಕ್ರಮ ಜರುಗಿಸಲಾಗುತ್ತಿದೆ. ಈಗಾಗಲೇ ಪೊಲೀಸರು 4,000 ಕ್ಕೂ ಹೆಚ್ಚು ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದಾರೆ.
ತಾಯ್ತನಕ್ಕೆ 22-30 ವಯಸ್ಸು ಸೂಕ್ತ
ಮಹಿಳೆಯರು 22 ರಿಂದ 30 ವರ್ಷಗಳ ನಡುವೆ ತಾಯ್ತನದ ಸಮೃದ್ಧ ಅವಧಿಯನ್ನು ಹೊಂದಿರುತ್ತಾರೆ. ಇದಕ್ಕಿಂತ ಕಡಿಮೆ ವಯಸ್ಸಿನಲ್ಲಿ ತಾಯಿಯಾದರೆ, ಅದು ವೈದ್ಯಕೀಯ ತೊಡಕುಗಳಿಗೆ ಕಾರಣವಾಗುತ್ತದೆ. ಇದರಿಂದ ತಾಯಿ ಅಥವಾ ಇಬ್ಬರೂ ಅಪಾಯ ಎದುರಿಸಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ