ಬೆಂಗಳೂರು: ಅತ್ಯಾಚಾರ, ವೇಶ್ಯಾವಾಟಿಕೆ, ವಂಚನೆ, ಜಾತಿ ನಿಂದನೆ (Atrocity), ದೌರ್ಜನ್ಯ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನಲೆಯಲ್ಲಿ ಮಂಜುನಾಥ್ ಕೆಎಸ್ ಅಲಿಯಾಸ್ ಸ್ಯಾಂಟ್ರೋ ರವಿಗೆ (Santro Ravi) ಮತ್ತೊಂದು ಸಂಕಷ್ಟ ಎದುರಾಗಿದೆ. ಅವರ ಪತ್ನಿ ಕಾಟನ್ ಪೇಟೆಯ (Cottonpet) ಮಾನವ ಹಕ್ಕುಗಳ ಆಯೋಗ, ನಗರ ಪೊಲೀಸ್ ಆಯುಕ್ತರು ಹಾಗೂ ಕಾಟನ್ ಪೇಟೆ ಇನ್ಸ್ಪೆಕ್ಟರ್ಗೆ ಪೋಸ್ಟ್ ಮೂಲಕ ದೂರು ದಾಖಲಿಸಿದ್ದಾರೆ. ತಮ್ಮ ಹಾಗೂ ತಮ್ಮ ಸಹೋದರಿಯ ಮೆಲೆ ಬೋಗಸ್ ಪ್ರಕರಣ ದಾಖಲಿಸಿ ಬಲವಂತವಾಗಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು ಎಂದು ದೂರು ಸಲ್ಲಿಸಿದ್ದಾರೆ.
ರಿಜಿಸ್ಟ್ರಾರ್ ಪೋಸ್ಟ್ ಮೂಲಕ ಸ್ಯಾಂಟ್ರೋ ರವಿ ಪತ್ನಿ ದೂರು ನೀಡಿದ್ದು, ಅದರಲ್ಲಿ ನನ್ನ ಮೇಲೆ ಸುಳ್ಳು ದರೋಡೆ ಪ್ರಕರಣ ದಾಖಲಿಸಿದ್ದಾರೆ. ನಾನು ಮೈಸೂರಿನಲ್ಲಿದ್ದರೂ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ನಮ್ಮಿಂಬ್ಬರಿಂದ ಹಲವು ಪೊಲೀಸರು ಬಲವಂತದಿಂದ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ದೂರಲ್ಲಿ ತಿಳಿಸಿದ್ದಾರೆ, ದೂರಿನಲ್ಲಿ ಇನ್ಸ್ಪೆಕ್ಟರ್ ಹಾಗೂ ಕಾಟನ್ ಪೇಟೆ ಠಾಣೆಯ 7 ಸಿಬ್ಬಂದಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಸಹೋದರಿ ವಿದ್ಯಾಭ್ಯಾಸಕ್ಕೆ ತೊಂದರೆ
ಸ್ಯಾಂಟ್ರೋ ರವಿ ಕಾಟನ್ ಪೇಟೆ ಠಾಣೆಯ ಪೊಲೀಸರ ಸಹಾಯದಿಂದ ನನ್ನ ಹಾಗೂ ನನ್ನ ಸಹೋದರಿ ವಿರುದ್ಧ ಸುಳ್ಳು ದರೋಡೆ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ನನ್ನ ತಂಗಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಪರೀಕ್ಷಾ ಪೂರ್ವ ಸಿದ್ಧತೆಗಳನ್ನು ಮಾಡಲು ಸಾಧ್ಯವಾಗಿಲ್ಲ ಎಂದು ಜನವರಿ 20 ರಂದು ಸ್ಯಾಂಟ್ರೋ ರವಿ ಪತ್ನಿ ನೀಡಿದ ದೂರನ್ನು ಕಾಟನ್ ಪೇಟೆ ಪೊಲೀಸರು ಸಿಸಿಬಿಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ನಕಲಿ ವಂಚನೆ ಆರೋಪ
ಸ್ಯಾಂಟ್ರೋ ರವಿ ಪತ್ನಿ ಆರ್ಥಿಕ ಸಮಸ್ಯೆ ಹೇಳಿಕೊಂಡು ತನ್ನ ಬಳಿಯಿಂದ 5 ಲಕ್ಷ ರೂ ಸಾಲ ಪಡೆದು ಮೂರು ತಿಂಗಳಲ್ಲಿ ವಾಪಸ್ ನೀಡುವುದಾಗಿ ಹೇಳಿದ್ದರು. ಈ ಸಂಬಂಧ ಒಂದು ಚೆಕ್, ಪಾಸ್ಬುಕ್ ಜೆರಾಕ್ಸ್ ಸಹ ನೀಡಿದ್ದರು. ಆದರೆ ಹಣ ವಾಪಸ್ ನೀಡುವುದಾಗಿ ಕರೆಸಿಕೊಂಡು ಹಣ ಕೊಡದೇ ಹಲ್ಲೆ ನಡೆಸಿ ತನ್ನ ಬಳಿ ಇದ್ದ ಚಿನ್ನ ಕದ್ದು ಪರಾರಿಯಾಗಿದ್ದಾರೆ ಎಂದು ಸ್ಯಾಂಟ್ರೋ ರವಿ ತನ್ನ ಪತ್ನಿ ವಿರುದ್ಧವೇ ಶಿವಪ್ರಕಾಶ್ ಎಂಬುವವರ ಕಡೆಯಿಂದ ದೂರು ನೀಡಿ ಜೈಲು ಸೇರುವಂತೆ ಮಾಡಿದ್ದನು.
ಲ್ಯಾಪ್ಟಾಪ್ಗಾಗಿ ಪಡೆದುಕೊಳ್ಳಲು ದೂರು?
ತನ್ನ ಪತ್ನಿ ಬಳಿಯಿದ್ದ ಲ್ಯಾಪ್ಟಾಪ್ ಅನ್ನು ಪಡೆದುಕೊಳ್ಳಲು ಸ್ಯಾಂಟ್ರೋ ರವಿ ತನ್ನ ಪತ್ನಿಯ ವಿರುದ್ಧವೇ ಸಂಚು ರೂಪಿಸಿದ್ದ. ಇದಕ್ಕಾಗಿ ಆತ ಕಾಟನ್ಪೇಟೆ ಠಾಣಾ ಇನ್ಸ್ಪೆಕ್ಟರ್ ಪ್ರವೀಣ್ ಅವರನ್ನು ಬಳಕೆ ಮಾಡಿಕೊಂಡಿದ್ದ. ವರ್ಗಾವಣೆ ತಡೆ ಆಮಿಷವೊಡ್ಡಿ ಇನ್ಸ್ಪೆಕ್ಟರ್ ಮೂಲಕ ನಕಲಿ ವಂಚನೆ ಪ್ರಕರಣ ದಾಖಲಿಸಿದ್ದನು. ಅದರಂತೆ ಇನ್ಸ್ಪೆಕ್ಟರ್ ಮೂವರು ಅಮಾಯಕರನ್ನು ಬಂಧಿಸಿದ್ದರು. ಇವರು ಜೈಲುವಾಸ ಅನುಭವಿಸಿ ಹೊರಬಂದ ನಂತರ ಸ್ಯಾಂಟ್ರೋ ರವಿ ವಿರುದ್ಧ ಅತ್ಯಾಚಾರ, ವಂಚನೆ , ಜಾತಿನಿಂದನೆ ಸಂಬಂಧ ದೂರುಗಳನ್ನು ದಾಖಲಿಸಿದ್ದರು.
ಕಳೆದ ವಾರ ಮೈಸೂರಿನಲ್ಲಿ ದೂರು
ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಕಳೆದ ವಾರ ಆಕೆಯ ಪತ್ನಿಯೇ ಮತ್ತೊಂದು ದೂರು ನೀಡಿದ್ದರು. ಮೈಸೂರಿನ ದೇವರಾಜ ಪೋಲಿಸ್ ಠಾಣೆಯಲ್ಲಿ ಚೆಕ್ ಬುಕ್ ಕಳ್ಳತನದ ದೂರು ನೀಡಿದ್ದರು. 2022ರ ಸೆಪ್ಟೆಂಬರ್ 22ರಂದು ನಾನು ಮೈಸೂರಿನ ದೇವರಾಜ ಮಾರುಕಟ್ಟೆಗೆ ಹೋಗಿದ್ದೆ. ನನ್ನ ಸ್ಕೂಟರ್ ಡಿಕ್ಕಿಯಲ್ಲಿ ಚೆಕ್ಬುಕ್ ಇಟ್ಟಿದ್ದೆ. ಸ್ಯಾಂಟ್ರೋ ರವಿ ಮತ್ತು ಪ್ರಕಾಶ್ ಸ್ಕೂಟರ್ಗೆ ಡಿಕ್ಕಿ ಹೊಡೆದು ಚೆಕ್ ಬುಕ್ ಕಳವು ಮಾಡಿದ್ದಲ್ಲದೆ, ಸಹಿ ಮಾಡಿಟ್ಟಿದ್ದ ಎರಡು ಚೆಕ್ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆ ಮಹಿಳೆ ಆರೋಪಿಸಿದ್ದರು.
ಗುಜರಾತ್ನಲ್ಲಿ ಬಂಧನ
ಪತ್ನಿ ರವಿ ವಿರುದ್ಧ ಪ್ರಕರಣ ದಾಖಲಿಸಿದ ನಂತರ ನಾಪತ್ತೆಯಾಗಿದ್ದ ಸ್ಯಾಂಟ್ರೋ ರವಿಯನ್ನು ಪೊಲೀಸರು 11 ದಿನಗಳ ನಂತರ ಗುಜರಾತ್ನಲ್ಲಿ ಬಂಧಿಸಿದ್ದರು. ಬಳಿಕ ಗುಜರಾತ್ನಿಂದ ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ಕರೆತಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದ ನ್ಯಾಯಾಲಯ ಆತನನ್ನು ಜನವರಿ 25ರವರೆಗೆ ಸಿಐಡಿ ಕಸ್ಟಡಿಗೆ ವಹಿಸಿ ಆದೇಶ ನೀಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ