ಹಾಸನ: ಆನ್ಲೈನ್ನಲ್ಲಿ ಐಫೋನ್ ಅರ್ಡರ್ (iPhone) ಮಾಡಿದ್ದ ಯುವಕ ಫೋನ್ ಖರೀದಿಸಲು ಹಣವಿಲ್ಲದೆ ಮೊಬೈಲ್ (Mobile) ಡೆಲಿವರಿ ನೀಡಲು ಬಂದ ಡೆಲಿವರಿ ಬಾಯ್‌ನನ್ನೇ (Delivery Boy) ಬರ್ಬರವಾಗಿ ಕೊಲೆ ಮಾಡಿರುವ ಶಾಕಿಂಗ್ ಘಟನೆ ಹಾಸನದಲ್ಲಿ (Hassan) ನಡೆದಿದೆ. ಡೆಲಿವರಿ ಬಾಯ್ನನ್ನು ಕೊಲೆ ಮಾಡಿದ್ದ ಕಿರಾತಕ ಆತನ ಮತದೇಹವನ್ನು ಬರೋಬ್ಬರಿ ಮೂರು ದಿನಗಳ ಕಾಲ ತನ್ನ ಮನೆಯಲ್ಲೇ ಇಟ್ಟುಕೊಂಡು ಬಳಿಕ ಸುಟ್ಟು ಹಾಕಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಹೇಗಾದರೂ ಮಾಡಿ ಸಾಕ್ಷಿ ನಾಶ (Evidence) ಮಾಡಿ ಪೊಲೀಸರಿಂದ (Police) ತಪ್ಪಿಸಿಕೊಳ್ಳಬೇಕು ಎಂದು ಕೊಂಡಿದ್ದ ಆರೋಪಿ ಮೃತದೇಹವನ್ನು ಸುಟ್ಟು ಹಾಕಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಏನಿದು ಪ್ರಕರಣ?
ಇದೇ ತಿಂಗಳ ಫೆಬ್ರವರಿ 11ರಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊರವಲಯದ ಕೊಪ್ಪಲು ರೈಲ್ವೆ ಗೇಟ್ ಸಮೀಪ ಸುಟ್ಟ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. ಅರಸೀಕೆರೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಎಸ್ಪಿ ಹರಿರಾಮ್ ಶಂಕರ್ ಅವರು, ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಸ್ಥಳೀಯರು ಮೃತದೇಹ ಪತ್ತೆಯಾಗಿರುವ ಬಗ್ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಗೋಣಿ ಚೀಲದಲ್ಲಿ ವ್ಯಕ್ತಿಯನ್ನು ತಂದು ಯಾವುದೋ ರಾಸಾಯನಿಕ ಬಳಿಸಿ ಮೃತದೇಹವನ್ನು ಸುಟ್ಟು ಹಾಕಿ ಸಾಕ್ಷಿ ನಾಶ ಮಾಡಲು ಯತ್ನಿಸಿದ್ದಾರೆ. ಈ ಬಗ್ಗೆ ತನಿಖೆ ಆರಂಭ ಮಾಡಿದ್ದೇವೆ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎರಡು ನಾಪತ್ತೆ ಪ್ರಕರಣಗಳು ದಾಖಲಾಗಿರುವ ಕುರಿತು ಮಾಹಿತಿ ಇದೆ. ಎಲ್ಲಾ ರೀತಿಯಲ್ಲೂ ನಾವು ತನಿಖೆ ಮಾಡುತ್ತಿದ್ದೇವೆ. ಮೊದಲು ರೈಲ್ವೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಕೇಸ್ ಹಸ್ತಾಂತರ ಮಾಡಲಿದ್ದಾರೆ. ನಾವು ಕೂಡ ತನಿಖೆ ಶುರು ಮಾಡಿದ್ದೇವೆ ಎಂದು ಎಸ್ಪಿ ತಿಳಿಸಿದ್ದರು.
ಇದನ್ನೂ ಓದಿ: Tumakuru: ಗಂಡನ ಕೊಲೆಗೆ ಪತ್ನಿಯಿಂದಲೇ ಸುಪಾರಿ; ಹುಟ್ಟುಹಬ್ಬದಂದೇ ಕೊಲೆಗೈದು ಕೆರೆಗೆ ಎಸೆದ್ರು!
ಅಸಲಿಗೆ ಆಗಿದ್ದೇನು?
ಕೊಲೆಯಾದ ವ್ಯಕ್ತಿ ಅರಸೀಕೆರೆ ತಾಲೂಕಿನ ಹಳೆಕಲ್ಲನಾಯಕನ ಹಳ್ಳಿಯ ಹೇಮಂತ್ ನಾಯ್ಕ್ (23) ಎಂದು ಗುರುತಿಸಲಾಗಿದೆ. ಅರಸೀಕೆರೆ ನಗರ ಲಕ್ಷ್ಮೀಪುರದ ಹೇಮಂತ್ ದತ್ತ (20) ಕೊಲೆ ಮಾಡಿದ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧನ ಮಾಡಿ ಜೈಲಿಗಟ್ಟಿದ್ದಾರೆ.
ಫೆ.7 ರಂದು ಇ-ಕಾರ್ಟ್ ಎಕ್ಸಪ್ರೆಸ್ನಲ್ಲಿ ಡೆಲಿವರಿ ಬಾಯ್ ಆಗಿದ್ದ ಹೇಮಂತ್ ನಾಯ್ಕ್, ಆರೋಪಿ ಹೇಮಂತ್ ದತ್ತ ಮಾಡಿದ್ದ ಸೆಕೆಂಡ್ ಹ್ಯಾಂಡ್ ಐಫೋನ್ ಅರ್ಡರ್ ಡೆಲಿವರಿ ಮಾಡಲು ಅರಸೀಕೆರೆಯ ನಿವಾಸಕ್ಕೆ ಆಗಮಿಸಿದ್ದ. ಈ ವೇಳೆ ಪಾರ್ಸಲ್ ನೀಡಲು ಬಂದ ಡೆಲಿವರಿ ಬಾಯ್ ಹೇಮಂತ್ ನಾಯ್ಕ್ನನ್ನು ಮನೆಯಲ್ಲಿ ಕುಳಿತುಕೊಳ್ಳಿ ಹಣ ತರುತ್ತೇನೆ ಎಂದು ಮನೆಯ ಒಳಗೆ ಹೋಗಿದ್ದ.
ಆರೋಪಿ ಮಾತನ್ನು ನಂಬಿದ್ದ ಹೇಮಂತ್ ನಾಯ್ಕ್ ಮನೆಯಲ್ಲಿದ್ದ ಚೇರ್ ಮೇಲೆ ಕುಳಿತುಕೊಂಡಿದ್ದ. ಇತ್ತ ಹಣ ತರುತ್ತೇನೆ ಎಂದು ಹೇಳಿ ಹೋಗಿದ್ದ ಆರೋಪಿ ಹೇಮಂತ್ ದತ್ತ, ಹಿಂಬದಿಯಿಂದ ಹೇಮಂತ್ ನಾಯ್ಕ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಅನಿರೀಕ್ಷಿತ ದಾಳಿಗೆ ಸಿಲುಕಿದ್ದ ಹೇಮಂತ್ ನಾಯ್ಕ್ ತೀವ್ರ ರಕ್ತಸ್ರಾವದಿಂದ ಮನೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಸಾಕ್ಷಿ ನಾಶ ಮಾಡಲು ಮೃತದೇಹ ಸುಟ್ಟು ಹಾಕಿದ
ಇನ್ನು, ಡೆಲಿವರಿ ಬಾಯ್ನನ್ನು ಕೊಲೆ ಮಾಡಿ ಬಳಿಕ ಆರೋಪಿ ಹೇಮಂತ್ ದತ್ತ ಮೂರು ದಿನಗಳ ಕಾಲ ಮನೆಯಲ್ಲೇ ಮೃತದೇಹವನ್ನು ಇಟ್ಟುಕೊಂಡಿದ್ದ. ಆ ಬಳಿಕ ಫೆ.11ರಂದು ಒಂದು ಗೋಣಿ ಚೀಲದಲ್ಲಿ ಮೃತದೇಹವನ್ನು ಹಾಕಿ, ಚೀಲವನ್ನು ಸ್ಕೂಟರ್ ಮೇಲಿಟ್ಟುಕೊಂಡು ಬಂದು ಅರಸೀಕೆರೆ ತಾಲೂಕಿನ ಹೊರವಲಯದ ಕೊಪ್ಪಲು ರೈಲ್ವೆ ಗೇಟ್ ಸಮೀಪ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದ.
ಇದನ್ನೂ ಓದಿ: Sudha Murthy: ಮೊನ್ನೆ ಅಪ್ಪು ಫೋಟೋ, ಇಂದು ಸುಧಾ ಮೂರ್ತಿ; ಕನಕಪುರಕ್ಕೆ ಆಸ್ಪತ್ರೆ ಕೊಟ್ಟ ಇನ್ಫೋಸಿಸ್ ಬಿಟ್ಟು ಕಾರ್ಯಕ್ರಮ
ಸಿಕ್ಕಿ ಬಿದ್ದಿದ್ದು ಹೇಗೆ?
ಪ್ರಕರಣ ದಾಖಲಿಸಿಕೊಂಡ ಬಳಿಕ ಮಿಸ್ಸಿಂಗ್ ಪ್ರಕರಣಗಳ ಜಾಡು ಹಿಡಿದು ಹೊರಟ ಪೊಲೀಸರು ತನಿಖೆ ಶುರು ಮಾಡಿದ್ದರು. ಅಲ್ಲದೆ ಕೃತ್ಯ ನಡೆದ ಸ್ಥಳದಲ್ಲಿದ್ದ ಹಲವು ಸಿಸಿಟಿವಿ ವಿಡಿಯೋ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದರು. ಈ ವೇಳೆ ಫೆಬ್ರವರಿ 11ರಂದು ಆರೋಪಿ ಹೇಮಂತ್ ದತ್ತ, ತನ್ನ ಸ್ಕೂಟರ್ನಲ್ಲಿ ಪೆಟ್ರೋಲ್ ಬಂಕ್ಗೆ ಆಗಮಿಸಿ ಬಾಟೆಲ್ನಲ್ಲಿ ಪೆಟ್ರೋಲ್ ತುಂಬಿಸಿಕೊಂಡ ದೃಶ್ಯ ಸಿಕ್ಕಿತ್ತು.
ಇತ್ತ ಹೇಮಂತ್ ನಾಯ್ಕ್ ನಾಪತ್ತೆ ಆಗಿರುವುದು ಕಂಡು ಬಂದಿತ್ತು. ಪ್ರಕರಣ ವಿಚಾರಣೆಯನ್ನು ತೀವ್ರಗೊಳಿಸಿದ್ದ ಪೊಲೀಸರು, ಸದ್ಯ ಆರೋಪಿಯನ್ನು ಬಂಧನ ಮಾಡಿ ಜೈಲಿಗೆ ಕಳುಹಿಸಿದ್ದಾರೆ. ಆದರೆ ಏನು ತಿಳಿಯದ ಡೆಲಿವರಿ ಬಾಯ್ ಹೇಮಂತ್ ನಾಯ್ಕ್ ಕಿರಾತಕನ ಕೃತ್ಯಕ್ಕೆ ಬಲಿಯಾಗಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ