ಪ್ರಸ್ತುತ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದು, ಭಾರತ ತಂಡ ಉತ್ತಮ ಪ್ರದರ್ಶನ ತೋರುತ್ತಿರುವುದು ಗಮನಾರ್ಹವಾದ ಸಂಗತಿ. ಆದರೆ ಯಾಕೋ ಗೊತ್ತಿಲ್ಲ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಹೆಚ್ಚು ರನ್ ಬರುತ್ತಿಲ್ಲ. ವಿರಾಟ್ ಕೊಹ್ಲಿ ತಮ್ಮ ವಿಕೆಟ್ ಅನ್ನು ಯಾವ ತಪ್ಪಿನಿಂದಾಗಿ ಇಂಗ್ಲೆಂಡ್ ಬೌಲರ್ಗಳಿಗೆ ಸುಲಭವಾಗಿ ಒಪ್ಪಿಸುತ್ತಿದ್ದಾರೆ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಸರಣಿಯಲ್ಲಿ ಇದುವರೆಗೂ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ 3 ಇನ್ನಿಂಗ್ಸ್ಗಳಲ್ಲಿ 0, 42 ಮತ್ತು 20 ರನ್ಗಳನ್ನು ಗಳಿಸಿ ಕೇವಲ 20.66 ಸರಾಸರಿ ಹೊಂದಿದ್ದಾರೆ.
"ವಿರಾಟ್ ಕೊಹ್ಲಿ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡುವಾಗ ತಮ್ಮ ಕಾಲುಗಳನ್ನು ಸರಿಯಾಗಿ ಚಲಿಸುತ್ತಿಲ್ಲ ಮತ್ತು ಇಂಗ್ಲೆಂಡ್ ಮೈದಾನಗಳಲ್ಲಿ ಚೆಂಡು ತುಂಬಾ ಗಾಳಿಯಲ್ಲಿ ಸ್ವಿಂಗ್ ಆಗುವುದರಿಂದ ಕಾಲುಗಳನ್ನು ಸ್ಟಂಪ್ನಿಂದ ತುಂಬಾ ದೂರದಲ್ಲಿ ಚಾಚಿ ಆಡುವುದರಿಂದ ಅವರು ತಮ್ಮ ವಿಕೆಟ್ ಅನ್ನು ಸರಳವಾಗಿ ಎದುರಾಳಿ ತಂಡದ ಬೌಲರ್ ಗಳಿಗೆ ನೀಡುತ್ತಿದ್ದಾರೆ" ಎಂದು ಸಚಿನ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಇಂತಹ ತಪ್ಪುಗಳಿಂದಾಗಿ ವಿರಾಟ್ ತಮ್ಮ ವಿಕೆಟ್ ಒಪ್ಪಿಸುತ್ತಿದ್ದು, ಹಿಂದಿನ ಟೆಸ್ಟ್ ಸರಣಿಯಲ್ಲಿ ಬಂದಂತಹ ಆಟವನ್ನು ಇಲ್ಲಿ ಮತ್ತೊಮ್ಮೆ ಪ್ರದರ್ಶಿಸಲು ಆಗುತ್ತಿಲ್ಲ ಎಂದು ಸಚಿನ್ ಹೇಳಿದ್ದಾರೆ.
"ವಿರಾಟ್ ಉತ್ತಮ ಆರಂಭ ಪಡೆಯುತ್ತಿಲ್ಲ, ಹಾಗಾಗಿ ಅವರು ಈ ರೀತಿಯ ಚಿಕ್ಕ ಪುಟ್ಟ ತಪ್ಪುಗಳನ್ನು ಮಾಡುತ್ತಿದ್ದಾರೆ. ಆರಂಭ ಉತ್ತಮವಾಗಿಲ್ಲದಿದ್ದರೆ ನೀವು ಬಹಳಷ್ಟು ವಿಷಯಗಳ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೀರಿ, ಆಗ ನಿಮ್ಮ ಆತಂಕವು ಸಹ ಆಟದಲ್ಲಿ ಜಾಸ್ತಿಯಾಗಿ ನಿಮ್ಮ ಕಾಲುಗಳ ಚಲನೆಯ ಬಗ್ಗೆ ನೀವು ಗಮನ ಹರಿಸುವುದಿಲ್ಲ" ಎಂದು ಸಚಿನ್ ಹೇಳಿದ್ದಾರೆ.
"ಒಬ್ಬ ಬ್ಯಾಟ್ಸ್ಮನ್ ಉತ್ತಮ ಫಾರ್ಮ್ನಲ್ಲಿ ಇಲ್ಲದಿದ್ದಾಗ ನಿಮ್ಮ ಕಡೆಯಿಂದ ತಪ್ಪುಗಳು ಆಗುವುದು ಸಹಜ, ಅದಕ್ಕಾಗಿ ಇನ್ನಿಂಗ್ಸ್ನಲ್ಲಿ ಉತ್ತಮ ಆರಂಭ ಪಡೆಯುವುದು ತುಂಬಾ ಮುಖ್ಯವಾಗುತ್ತದೆ" ಎಂದು ಸಚಿನ್ ಹೇಳಿದ್ದಾರೆ.
ಕೊಹ್ಲಿ 2014ರಲ್ಲಿ ಇಂಗ್ಲೆಂಡಿನ ಟೆಸ್ಟ್ ಸರಣಿಯಲ್ಲಿ 4 ಟೆಸ್ಟ್ ಪಂದ್ಯಗಳನ್ನಾಡಿ ಕೇವಲ 13.40 ಸರಾಸರಿಯೊಂದಿಗೆ 134 ರನ್ ಗಳಿಸಿದ್ದರು. ಮತ್ತೆ ನಾಲ್ಕು ವರ್ಷಗಳ ನಂತರ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ 59.30 ಸರಾಸರಿಯೊಂದಿಗೆ 593 ರನ್ ಗಳಿಸಿದ್ದು, ಅದರಲ್ಲಿ 2 ಶತಕಗಳು ಮತ್ತು 3 ಅರ್ಧಶತಕಗಳನ್ನು ಗಳಿಸುವುದರೊಂದಿಗೆ ಆಗ ನಡೆದಂತಹ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದ ಹಿರಿಮೆಗೆ ಕೊಹ್ಲಿ ಪಾತ್ರರಾಗಿದ್ದರು.
ಆದರೆ ಈಗ ನಡೆಯುತ್ತಿರುವ ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇದುವರೆಗೂ ದೊಡ್ಡ ಮೊತ್ತವನ್ನು ವಿರಾಟ್ ತಲುಪದೇ ಇರುವುದು ಸ್ವತಃ ವಿರಾಟ್ಗೆ ತಲೆನೋವಾಗಿ ಪರಿಣಮಿಸಿರುವುದಂತೂ ನಿಜ.
5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದ್ದು, ಅಂತಿಮ ದಿನದ ಅದ್ಭುತ ಪ್ರದರ್ಶನದಿಂದಾಗಿ ಲಾರ್ಡ್ಸ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡವನ್ನು 151 ರನ್ಗಳಿಂದ ಸೋಲಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ