ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ಕದನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 1 ರನ್ಗಳ ರೋಚಕ ಗೆಲುವು ಸಾಧಿಸಿದ್ದು, 4ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಶೇನ್ ವಾಟ್ಸನ್ರ ಹೋರಾಟದ ಹೊರತಾಗಿಯು ಮುಂಬೈ ಬೌಲರ್ಗಳ ಅಮೋಘ ಪ್ರದರ್ಶನದ ಫಲವಾಗಿ ಮುಂಬೈ ಇಂಡಿಯನ್ಸ್ 4ನೇ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ಬರೆದಿದೆ.
ಐಪಿಎಲ್ ಫೈನಲ್ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿ ಆಗಿದ್ದು ಇದು ನಾಲ್ಕನೇ ಬಾರಿ. 2010ರಲ್ಲಿ ಚೆನ್ನೈ ಗೆಲುವು ಸಾಧಿಸಿದ್ದರೆ, 2013 ಹಾಗೂ 2015 ಮುಂಬೈ ಗೆದ್ದಿತ್ತು. ಇದೀಗ 2019ರಲ್ಲಿ ಚೆನ್ನೈ ವಿರುದ್ಧ ಮತ್ತೆ ಮುಂಬೈ ಕಿರೀಟ ಎತ್ತಿ ಹಿಡಿದು ದಾಖಲೆ ಬರೆದಿದೆ.
ಪ್ರಮುಖ ಪಂದ್ಯದಲ್ಲಿ ಮುಂಬೈ ನೀಡಿದ್ದ 150 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಚೆನ್ನೈಗೆ ಫಾಫ್ ಡುಪ್ಲೆಸಿಸ್ ಸ್ಫೋಟಕ ಆರಂಭ ಒದಗಿಸಿ ಔಟ್ ಆದರು. 13 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸ್ ಸಿಡಿಸಿ ಡುಪ್ಲೆಸಿಸ್ 26 ರನ್ಗೆ ನಿರ್ಗಮಿಸಿದರು. 2ನೇ ವಿಕೆಟ್ಗೆ ವಾಟ್ಸನ್ ಜೊತೆಯಾದ ಸುರೇಶ್ ರೈನಾ ಉತ್ತಮ ಜೊತೆಯಾಟ ಆಡಿದರು. ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ, ಅದರಲ್ಲು ವಾಟ್ಸನ್ ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದರು. ಉತ್ತಮ ಸಾತ್ ನೀಡುತ್ತಿದ್ದ ರೈನಾ 8 ರನ್ ಗಳಿಸಿರುವಾಗ ರಾಹುಲ್ ಎಸೆತದಲ್ಲಿ ಎಲ್ಬಿ ಬಲೆಗೆ ಸಿಲುಕಿದರು. ಇದಾದ ಬೆನ್ನಲ್ಲೆ ಅಂಬಟಿ ರಾಯುಡು(1) ಅವರನ್ನು ಬುಮ್ರಾ ಪೆವಿಲಿಯನ್ಗೆ ಅಟ್ಟಿದರು.
ಹೀಗೆ ದಿಢೀರ್ ಕುಸಿತ ಕಂಡ ತಂಡಕ್ಕೆ ವಾಟ್ಸನ್ ಹಾಗೂ ನಾಯಕ ಎಂಎಸ್ ಧೋನಿ ಆಸರೆಯಾಗುತ್ತಾರೆ ಎಂದು ನಂಬಲಾಗಿತ್ತು. ಆದರೆ ಇಶಾನ್ ಕಿಶನ್ರಿಂದ ರನೌಟ್ಗೆ ಬಲಿಯಾದ ಧೋನಿ ಕೇವಲ 2 ರನ್ಗಳಿಸಿ ಹೊರ ನಡೆದರು. ದೊಡ್ಡ ವಿಕೆಟ್ ಕಳೆದುಕೊಂಡ ಚೆನ್ನೈಗೆ ಮತ್ತೆ ಗೆಲುವಿನ ರುಚಿ ನೀಡಿದ್ದು ವಾಟ್ಸನ್ ಹಾಗೂ ಡ್ವೇನ್ ಬ್ರಾವೋ.
ಮುಂಬೈ ಆಟಗಾರರು ಕೈಚೆಲ್ಲಿದ ಕ್ಯಾಚ್ ಅನ್ನು ಸರಿಯಾಗೇ ಉಪಯೋಗಿಸಿಕೊಂಡ ವಾಟ್ಸನ್, ಅಬ್ಬರದ ಬ್ಯಾಟಿಂಗ್ ನಡೆಸಿದರು. ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ ವಾಟ್ಸನ್ ತಂಡದ ಗೆಲುವನ್ನು ಮತ್ತಷ್ಟು ಹತ್ತಿರ ಮಾಡಿದರು. ಆದರೆ ಅಂತಿಮ ಹಂತದಲ್ಲಿ ಬ್ರಾವೋ(15) ನಿರ್ಗಮಿಸಿದ್ದು ಜೊತೆಗೆ ಬುಮ್ರಾ ಅದ್ಭುತ ಬೌಲಿಂಗ್ ನಡೆಸಿದ ಪರಿಣಾಮ ಕೊನೆಯ 6 ಎಸೆತಗಳಲ್ಲಿ ಚೆನ್ನೈ ಗೆಲುವಿಗೆ 9 ರನ್ಗಳ ಅವಶ್ಯಕತೆಯಿತ್ತು.
IPL 2019 Final Live Score, MI vs CSK: ರೋಚಕ ಪಂದ್ಯದಲ್ಲಿ ಗೆದ್ದ ಮುಂಬೈ; 4ನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ರೋಹಿತ್ ಪಡೆ
ಮಲಿಂಗಾ ಬೌಲಿಂಗ್ನ ಮೊದಲ ಎಸೆತದಲ್ಲಿ ವಾಟ್ಸನ್ 1 ರನ್ ಕಲೆಹಾಕಿದರೆ, 2ನೇ ಎಸೆತದಲ್ಲಿ ಜಡೇಜಾ 1 ರನ್ ಬಾರಿಸಿದರು. 3ನೇ ಎಸೆತದಲ್ಲಿ ವಾಟ್ಸನ್ 2 ರನ್ ಕಲೆಹಾಕಿದರು. 4ನೇ ಎಸೆತದಲ್ಲೂ ಮತ್ತೆ 2 ರನ್ ಕಲೆಹಾಕಲೋಗಿ ವಾಟ್ಸನ್ ರನೌಟ್ಗೆ ಬಲಿಯಾದರು. ವಾಟ್ಸನ್ ಔಟ್ ಆಗಿದ್ದು ತಂಡ ಸೋಲಲು ಪ್ರಮುಖ ಕಾರಣವಾಯಿತು. 59 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಚಚ್ಚಿದ ವಾಟ್ಸನ್ 80 ರನ್ಗಳಿಗೆ ರನೌಟ್ಗೆ ಬಲಿಯಾದರು. ಇದರಿಂದ ಕೊನೆಯ 2 ಎಸೆತದಲ್ಲಿ ಗೆಲುವಿಗೆ 4 ರನ್ಗಳ ಅವಶ್ಯಕತೆಯಿತ್ತು, ಶಾರ್ದೂಲ್ ಠಾಕೂರ್ 5ನೇ ಎಸೆತದಲ್ಲಿ 2 ರನ್ ಕಲೆಹಾಕಿದರೆ, ಕೊನೆಯ ಎಸೆತದಲ್ಲಿ ಎಲ್ಬಿ ಬಲಿಗೆ ಸಿಲುಕಿದರು. ಇದರಿಂದ ಚೆನ್ನೈ 20 ಓವರ್ಗೆ 7 ವಿಕೆಟ್ ಕಳೆದುಕೊಂಡು 148 ರನ್ ಕಲೆಹಾಕಿತಷ್ಟೆ. ಮುಂಬೈ 1 ರನ್ಗಳ ರೋಚಕ ಜಯ ಸಾಧಿಸಿತು. ಮುಂಬೈ ಪರ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಕಿತ್ತರೆ, ಕ್ರುನಾಲ್ ಪಾಂಡ್ಯ, ಲಸಿತ್ ಮಲಿಂಗಾ ಹಾಗೂ ರಾಹುಲ್ ಚಹಾರ್ ತಲಾ 1 ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್ 1 ರನ್ಗಳ ರೋಚಕ ಜಯದೊಂದಿಗೆ 4ನೇ ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಈವರೆಗೆ ಗರಿಷ್ಠ ಬಾರಿ ಟ್ರೋಫಿ ಗೆದ್ದ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
Unprecedented scenes from Hyderabad as @mipaltan became #VIVOIPL champs for the 4⃣th time!
Lasith Malinga showing his true class in the last over 😎#MIvCSK pic.twitter.com/ZzVK0KHx5O
— IndianPremierLeague (@IPL) May 12, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ