ಮಾಸ್ಟರ್ ಬ್ಲಾಸ್ಟರ್ ಎಂದೇ ಖ್ಯಾತಿಯಾಗಿರುವ ಸಚಿನ್ ತೆಂಡೂಲ್ಕರ್ ತಮ್ಮ ಹೊಸ ಬಾಣಸಿಗನ ಅವತಾರದಿಂದ ತಮ್ಮ ಅಭಿಮಾನಿಗಳನ್ನು ಕ್ಲೀನ್ ಬೌಲ್ಡ್ ಮಾಡಿದ್ದಾರೆ. ಹಲವು ದಶಕಗಳವರೆಗೆ ಕ್ರಿಕೆಟ್ ಆಟದ ಮೈದಾನದಲ್ಲಿ ತಮ್ಮ ಸ್ಪೋಟಕ ಆಟದಿಂದ ಅಭಿಮಾನಿಗಳ ಮನ ತಣಿಸಿದ ಸಚಿನ್, ಈಗ ತಮ್ಮ ಬಿಡುವಿನ ಸಮಯದಲ್ಲಿ ಮನೆಯಲ್ಲಿ ಅಡುಗೆ ಮಾಡಿ, ಆ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದು, ಈ ವಿಡಿಯೋ ನೋಡಿದ ಅವರ ಅಭಿಮಾನಿಗಳು ಕ್ಲೀನ್ ಬೌಲ್ಡ್ ಆಗಿದ್ದಾರೆ. ಸಚಿನ್ ಅವರಿಗೆ ಕ್ರಿಕೆಟ್ ಆಟದಿಂದ ಬಿಡುವಿನ ಸಮಯ ದೊರೆತಿದ್ದು, ತಮ್ಮ ಕುಟುಂಬದ ಸದಸ್ಯರೊಡನೆ ಮುಂಬೈಯ ತಮ್ಮ ಮನೆಯಲ್ಲಿ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಅಷ್ಟೊಂದು ಆ್ಯಕ್ಟೀವ್ ಇರಲಿಲ್ಲ.
ಆದರೆ ಕೆಲವು ದಿನಗಳಿಂದ ಅವರು ತಮ್ಮ ಅಭಿಮಾನಿಗಳಿಗಾಗಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆ್ಯಕ್ಟೀವ್ ಆಗಿರಲು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಈ ರೀತಿಯ ಮನಸ್ಸಿಗೆ ಮುದ ನೀಡುವಂತಹ ವಿಡಿಯೋಗಳನ್ನು ಹಾಕುತ್ತಿದ್ದಾರೆ.
ಜುಲೈ 9 ರಂದು ಅವರು ಹಾಕಿದ ಈ ಅಡುಗೆ ಮಾಡುವ ವಿಡಿಯೋ ಅವರ ಅಭಿಮಾನಿಗಳನ್ನು ತುಂಬಾ ರಂಜಿಸಿದೆ ಎಂದು ಹೇಳಬಹುದು. 48 ವರ್ಷದ ಸಚಿನ್ ತಾವು ಅಪ್ಲೋಡ್ ಮಾಡಿದ ವಿಡಿಯೋದಲ್ಲಿ ಅಡುಗೆ ಮಾಡುತ್ತಿರುವುದಾಗಿ ಹೇಳಿದ್ದು, ನನಗೂ ಗೊತ್ತಿಲ್ಲ. ನಾನು ಯಾವ ಅಡುಗೆ ಮಾಡುತಿದ್ದೇನೆ ಎಂದು ನೀವೇ ಊಹಿಸಿ ನೋಡೋಣ ಎಂದು ತಮ್ಮ ಅಭಿಮಾನಿಗಳಿಗೆ ಕೇಳಿದ್ದಾರೆ. ಈಗ ಬ್ಯಾಟ್ಸ್‌ಮನ್ ರೆಡಿಯಾಗಿದ್ದಾನೆ ಬೌಲರ್ಗಳು ಸಜ್ಜಾಗಬೇಕಿದೆ ಎಂದು ಹೇಳುತ್ತಾ ಸಚಿನ್ ತಾವು ಕೆಲವು ದಿನಗಳಿಂದ ಅಡುಗೆ ಮಾಡುತ್ತಿದ್ದು, ಹೇಗೆ ಮಾಡಬೇಕೆಂಬುದನ್ನು ನಾನು ಕಲಿತಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಅಡುಗೆ ಮಾಡುತ್ತಲೇ ಮಾತನಾಡಿದ ಸಚಿನ್ ಅಡುಗೆ ಮಾಡಿ ಮುಗಿಸಿದ್ದು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ತುಂಬಾ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೋ ಕೆಳಗಡೆ "ಸೇ ಹಾಯ್ ಟು ಇವರ್ ಚೆಫ್ ಫಾರ್ ಟುಡೇ.. ಗೆಸ್ ವಾಟ್ಸ್ ಕುಕ್ಕಿಂಗ್" ಅಂತಾ ಬರೆದಿದ್ದಾರೆ. ಅವರು ಮಾರ್ಚ್ನಲ್ಲಿ ರೋಡ್ ಸೇಫ್ಟಿ ಸೀರಿಸ್ ಆಡಿದ ನಂತರ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು 21 ದಿನಗಳ ಕಾಲ ಅವರು ಐಸೋಲೇಷನ್ನಲ್ಲಿದ್ದು ನಂತರ ಗುಣಮುಖರಾಗಿ ಈಗ ಕುಟುಂಬದವರೊಡನೆ ಕಾಲ ಕಳೆಯುತ್ತಿದ್ದಾರೆ.
ಈ ಪಂದ್ಯಾವಳಿಗಳನ್ನು ಆಡಿದಂತಹ ಇತರೆ ಭಾರತೀಯ ಕ್ರಿಕೆಟ್ ಆಟಗಾರರಾದ ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಮತ್ತು ಎಸ್ ಭದ್ರಿನಾಥ್ ಅವರಿಗೂ ಸಹ ಕೋವಿಡ್ ಪಾಸಿಟಿವ್ ಬಂದಿತ್ತು. ಈಗ ಅವರೆಲ್ಲರೂ ಗುಣಮುಖರಾಗಿದ್ದಾರೆ. ಸಚಿನ್ ಅವರು ಕೋವಿಡ್ -19 ಹಿನ್ನಲೆಯಲ್ಲಿ ಈ ವರ್ಷದಲ್ಲಿ ನಡೆದಂತಹ ಐಪಿಎಲ್ 2021 ಮೊದಲನೆಯ ಹಂತದ ಪಂದ್ಯಾವಳಿಗಳಿಗೆ ತಮ್ಮ ಮುಂಬೈ ತಂಡದ ಜತೆ ಬಂದು ಸೇರಿರಲಿಲ್ಲ. ಎರಡನೆಯ ಹಂತದ ಐಪಿಎಲ್ ಪಂದ್ಯಾವಳಿಗಳಿಗೂ ಸಹ ಯುಎಇಗೆ ಇವರು ತೆರಳುವುದು ಅನುಮಾನವಾಗಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.