ನವದೆಹಲಿ(ಜುಲೈ 01): ಗುಜರಾತ್ನ ಅಹ್ಮದಾಬಾದ್ ಮೂಲದ ಫಾರ್ಮಾ ಕಂಪನಿ ಝೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಝೈಕೋವಿ-ಡಿ (ZyCoV-D) ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿದೆ. ವಿಶ್ವದ ಮೊದಲ ಪ್ಲಾಸ್ಮಿಡ್ ಡಿಎನ್ಎ ಆಧಾರಿತ ವ್ಯಾಕ್ಸಿನ್ ಎಂದು ಹೆಸರು ಮಾಡಿರುವ ಝೈಡಸ್ನ ಈ ಲಸಿಕೆ ಇನ್ನೂ ಎರಡು ಹಂತಗಳ ಟ್ರಯಲ್ಗೆ ಒಳಪಡಬೇಕಿದೆ. ಆದರೆ, ಮೊದಲ ಹಂತದ ಟ್ರಯಲ್ನಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿರುವುದಾಗಿ ಹೇಳಿರುವ ಝೈಡಸ್ ಕ್ಯಾಡಿಲಾ, ಒಂದು ವೇಳೆ ತುರ್ತು ಬಳಕೆಗೆ ಅನುಮತಿ ಕೊಟ್ಟರೆ 45ರಿಂದ 60 ದಿನದೊಳಗೆ ಲಸಿಕೆ ಪೂರೈಕೆ ಆರಂಭಿಸುವುದಾಗಿ ಸ್ಪಷ್ಟಪಡಿಸಿದೆ. ವರ್ಷಕ್ಕೆ 10-12 ಕೋಟಿ ಲಸಿಕೆ ಉತ್ಪಾದನೆ ಮಾಡುವ ಯೋಜನೆ ಈ ಕಂಪನಿಯದ್ದು.
ಝೈಡಸ್ ಕ್ಯಾಡಿಲಾ ಕಂಪನಿ ನೀಡಿರುವ ಮಾಹಿತಿ ಪ್ರಕಾರ, ಈ ಲಸಿಕೆಯು ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು ರೋಗ ಲಕ್ಷಗಳಿರುವ ಪ್ರಕರಣಗಳಲ್ಲಿ ಶೇ. 66.6ರಷ್ಟು ಪರಿಣಾಮಕಾರಿಯಂತೆ. ಅದೇ ರೋಗಲಕ್ಷಣಗಳಿಲ್ಲದ ಪಾಸಿಟಿವ್ ಕೇಸ್ಗಳಲ್ಲಿ ಇದು ಶೇ. 100ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನಲಾಗಿದೆ.
ಝೈಡಸ್ ಲಸಿಕೆಯು ಮೂರು ಡೋಸ್ಗಳನ್ನ ಒಳಗೊಂಡಿದೆ. ಎರಡು ಡೋಸ್ ತೆಗೆದುಕೊಂಡ ಬಳಿಕ ಯಾವುದೇ ಕೋವಿಡ್ ಸೋಂಕಿತನಿಗೆ ತೀವ್ರ ರೀತಿಯಲ್ಲಿ ಸೋಂಕು ವ್ಯಾಪಿಸಿಲ್ಲ. ಯಾರಿಗೂ ಸಾವು ಸಂಭವಿಸಿಲ್ಲ. ಮೂರೂ ಡೋಸ್ ತೆಗೆದುಕೊಂಡ ವ್ಯಕ್ತಿಯಲ್ಲಿ ಸೋಂಕು ತೀವ್ರಮಟ್ಟದಲ್ಲಿ ಇರುವುದು ಬೆಳಕಿಗೆ ಬಂದಿಲ್ಲ ಝೈಡಸ್ ಕ್ಯಾಡಿಲಾ ಹೆಲ್ತ್ಕೇರ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಶರ್ವಿಲ್ ಪಟೇಲ್ ಹೇಳುತ್ತಾರೆ.
ಕೋವಿಡ್-19 ರೋಗದ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ದೇಶಾದ್ಯಂತ 50 ಕ್ಕೂ ಹೆಚ್ಚು ಕ್ಲಿನಿಕಲ್ ತಾಣಗಳಲ್ಲಿ ಈ ಲಸಿಕೆಯ ಅಧ್ಯಯನ ಕೈಗೊಳ್ಳಲಾಗಿದೆ. ಇದು ಹೊಸ ರೂಪಾಂತರಿ ಕೋವಿಡ್ ವೈರಸ್ಗಳ ಎದುರೂ ಪರಿಣಾಮಕಾರಿಯಾಗಿದೆ.
ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆ ಪಡೆದವರ ಯುರೋಪ್ ಪ್ರಯಾಣಕ್ಕೆ ಒಪ್ಪಿಗೆ: ಸ್ವಿಜರ್ಲ್ಯಾಂಡ್ ಸೇರಿ 9 ದೇಶಗಳಲ್ಲಿ ಗ್ರೀನ್ಸಿಗ್ನಲ್
ಪ್ಲಾಸ್ಮಿಡ್ ಡಿಎನ್ಎ ತಂತ್ರಜ್ಞಾನದ ವಿಶೇಷತೆ?
ಕೋವಿಡ್ ವೈರಸ್ ರೀತಿಯ ಕೋಡಿಂಗ್ ಸೀಕ್ವೆನ್ಸ್ಗಳಿರುವ ಆಂಟಿಜೆನ್ಗಳನ್ನ ಒಳಗೊಂಡಿರುವ ಶುದ್ಧೀಕರಿಸಿದ ಪ್ಲಾಸ್ಮಿಡ್ ಡಿಎನ್ಎ ಅನ್ನು ಇಂಜೆಕ್ಷನ್ ಮೂಲಕ ದೇಹದ ಜೀವಕೋಶಕ್ಕೆ ನೀಡಲಾಗುತ್ತದೆ. ಒಂದೊಮ್ಮೆ ಅಲ್ಲಿಗೆ ಸೇರಿದರೆ ಆಂಟಿಜೆನ್ ಸಾಕಷ್ಟು ಪ್ರಮಾಣದಲ್ಲಿ ಹೊರಬಂದು ದೇಹದಲ್ಲಿ ನಿರ್ದಿಷ್ಟ ರೀತಿಯಲ್ಲಿ ಪ್ರತಿರೋಧಕ ಸೃಷ್ಟಿಯಾಗುವಂತೆ ಪ್ರೇರೇಪಿಸುತ್ತದೆ. ಇಂಥ ಡಿಎನ್ಎ ವ್ಯಾಕ್ಸಿನ್ಗಳು ವೈರಸ್, ಪ್ಯಾರಸೈಟ್ ಹಾಗೂ ಕ್ಯಾನ್ಸರ್ ಕೋಶಗಳ ಮೇಲೆ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ದೃಢಪಟ್ಟ ಸಂಗತಿ.
ಬಹಳ ಸುಲಭ ನಿರ್ವಹಣೆಯ ಲಸಿಕೆ:
ಝೈಡಸ್ ಲಸಿಕೆಯ ಒಂದು ಪ್ರಮುಖ ವಿಶೇಷತೆ ಎಂದರೆ ಒಂದೊಮ್ಮೆ ಕೋವಿಡ್ ವೈರಸ್ ಡೆಲ್ಟಾ ಪ್ಲಸ್ಗಿಂತಲೂ ಬೇರೆ ರೀತಿಯಲ್ಲಿ ರೂಪಾಂತರಗೊಂಡರೂ ಪರಿಣಾಮಕಾರಿ ಎನಿಸುತ್ತದೆ. ಒಂದು ವೇಳೆ ಇದು ಪರಿಣಾಮಕಾರಿ ಎನಿಸದೇ ಇದ್ದರೆ ಲಸಿಕೆಯಲ್ಲಿ ತುಸು ಮಾರ್ಪಾಡು ಮಾಡುವ ಅವಕಾಶವೂ ಇದೆ. ಇದರಿಂದ ಹೊಸದಾಗಿ ಲಸಿಕೆ ಅಭಿವೃದ್ದಿಪಡಿಸುವ ಪ್ರಮೇಯ ತಪ್ಪುತ್ತದೆ.
ಇದನ್ನೂ ಓದಿ: Xi Jinping - ಚೀನಾವನ್ನು ಬೆದರಿಸಲು ಬಂದವರು ರಕ್ತಪಾತ ನೋಡಬೇಕಾಗುತ್ತದೆ: ಕ್ಸಿ ಜಿನ್ಪಿಂಗ್
ಅಲ್ಲದೇ, ಝೈಡಸ್ ಲಸಿಕೆಯನ್ನ ಬಯೋ ಸೇಫ್ಟಿ ಲೆವೆಲ್ 1ರ ಲ್ಯಾಬ್ನಲ್ಲೇ ಉತ್ಪಾದನೆ ಮಾಡಬಹುದು. ಕೋವ್ಯಾಕ್ಸಿನ್ ಅನ್ನು ಬಯೋ ಸೇಫ್ಟಿ ಲೆವೆಲ್ 3 ಲ್ಯಾಬ್ನಲ್ಲಿ ಮಾತ್ರ ಉತ್ಪಾದಿಸಲು ಸಾಧ್ಯ. ಹಾಗೆಯೇ, ಝೈಡಸ್ ಲಸಿಕೆಯನ್ನು ಕೇವಲ 2-8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಸಂಗ್ರಹಿಸಲು ಸಾಧ್ಯ. ಇದರಿಂದ ಇದರ ಸರಬರಾಜು ಪ್ರಕ್ರಿಯೆ ಸುಲಭವಾಗುತ್ತದೆ.
ಅಂದಹಾಗೆ, ಝೈಡಸ್ ಕ್ಯಾಡಿಲಾ ಸಂಸ್ಥೆಯ ಈ ಲಸಿಕೆ ಕೋವ್ಯಾಕ್ಸಿನ್ ಬಳಿಕ ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಯಾಗಿರುವ ಎರಡನೇ ಲಸಿಕೆಯಾಗಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿದ್ದಾಗಿದೆ. ಸೀರಂ ಸಂಸ್ಥೆ ಉತ್ಪಾದಿಸಿರುವ ಕೋವಿಶೀಲ್ಡ್ ಅನ್ನು ಅಭಿವೃದ್ಧಿಪಡಿಸಿರುವುದು ವಿದೇಶದಲ್ಲಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ