ಯಾದಗಿರಿ(ಜು.18): ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರು ಸಹಾಯಕ್ಕಾಗಿ ಹಲವು ಬಾರಿ ಎಷ್ಟೇ ಅಂಗಲಾಚಿದರೂ ಯಾರು ನೆರವಾಗುವುದಿಲ್ಲ. ಇಂತಹ ಅನೇಕ ಘಟನೆಗಳು ನಾವು ಕಂಡಿದ್ದೇವೆ. ಕೆಲವರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗುತ್ತಾರೆ. ಆದರೆ, ಬಹುತೇಕ ಜನ ಸಹಾಯ ಮಾಡದೆ ನಮಗ್ಯಾಕೇ ಇವರ ಗೋಳು ಎಂದು ತಮ್ಮ ಪಾಡಿಗೆ ಹೊರಟು ಹೋಗುತ್ತಾರೆ.
ಹೀಗಿರುವಾಗ ಯಾದಗಿರಿ ಜಿಲ್ಲೆಯಲ್ಲಿ ಕರುಳು ಚುರ್ ಎನ್ನುವಂತ ಸನ್ನಿವೇಷವೊಂದು ನಿರ್ಮಾಣವಾಗಿದೆ. ಯಾದಗಿರಿ ತಾಲೂಕಿನ ಅಲ್ಲಿಪುರ ತಾಂಡಾ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡು ನರಳಾಡುತ್ತಿದ್ದರು. ಹೀಗೆ ತೀವ್ರ ಗಾಯಗೊಂಡವರು ಇಬ್ಬರು ಮಹಿಳೆಯರು ಮತ್ತು ಓರ್ವ ವ್ಯಕ್ತಿ.
ಮೂವರು ಗಾಯಾಳುಗಳು ಸಹಾಯಕ್ಕಾಗಿ ಎಷ್ಟೇ ಅಂಗಲಾಚಿದರೂ ಬಹುತೇಕ ಬೈಕುಗಳು ಈ ದೃಶ್ಯ ಕಣ್ಣಿಗೆ ಕಂಡರೂ ಕಾಣದಂತೆ ತಮ್ಮೂರಿಗೆ ಹೊರಟೇಬಿಟ್ಟರು. ಹೀಗಿರುವಾಗಲೇ ಕಲಬುರಗಿ ಜಿಲ್ಲೆಯಿಂದ ಯಾದಗಿರಿಗೆ ಆಗಮಿಸುತ್ತಿದ್ದ ಯಾದಗಿರಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸಣ್ಣಗೌಡ ಪಾಟೀಲ ಯಡಿಯಾಪುರ ಎಂಬುವರು ಇವರಿಗೆ ಸಹಾಯ ಮಾಡಿದ್ದಾರೆ.
ಗಾಯಗೊಂಡವರ ದುಸ್ಥಿತಿ ಅರಿತು ಖುದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಎಂಎಸ್ .ಪಾಟೀಲರಿಗೆ ಕರೆ ಮಾಡಿದ ಬಸಣ್ಣಗೌಡ ಶೀಘ್ರವಾಗಿ ಆ್ಯಂಬುಲೆನ್ಸ್ ತರಿಸುವ ಕೆಲಸ ಮಾಡಿದ್ದಾರೆ. ಜತೆಗೆ ಗಾಯಗೊಂಡವರಿಗೆ ನೀರು ಕುಡಿಸಿ ಆಸ್ಪತ್ರೆಗೆ ಸಾಗಿಸುವ ಕಾರ್ಯ ಮಾಡಿದ್ದಾರೆ.
ಈ ಸಂಬಂಧ ನ್ಯೂಸ್-18 ಕನ್ನಡದ ಪ್ರತಿನಧಿ ಜತೆ ಮಾತಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸಣ್ಣಗೌಡ ಪಾಟೀಲ ಅವರು, ನನ್ನ ಕಣ್ಣೆದುರು ಯಾರಾದರೂ ಹೀಗೆ ಸಹಾಯಕ್ಕಾಗಿ ಅಂಗಲಾಚಿದರೆ ಸುಮ್ಮನೇ ಇರಲು ನನ್ನಿಂದ ಆಗುವುದಿಲ್ಲ. ನನ್ನ ಕೈಲಾದ ಸಹಾಯ ಮಾಡುವ ಮೂಲಕ ನನ್ನ ಕರ್ತವ್ಯ ಮಾಡಿದ್ದೇನೆ ಎಂದರು.
ಹೀಗೆ ಮುಂದುವರಿದ ಅವರು, ಜನ ಘಟನೆ ನೋಡಿ ಸುಮ್ಮನೆ ಇದ್ದರು. ಕೆಲವರಂತೂ ಘಟನೆಯನ್ನು ತಮ್ಮ ಮೊಬೈಲ್ಗಳಲ್ಲಿ ವಿಡಿಯೋ ಮಾಡುತ್ತಿದ್ದರು. ಹೀಗೆ ಮಾಡುವ ಬದಲು ಅವರಿಗೆ ಸಹಾಯ ಮಾಡಬಹುದಿತ್ತು. ಆದರೆ, ನಾನು ಇವರಿಗೆ ಸಹಾಯ ಮಾಡಿದ್ದೇನೆ, ಸದ್ಯ ಗಾಯಗೊಂಡ ಮೂವರು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.