CoronaVirus: ಆಕ್ಸಿಜನ್ ಕೇಳಿದ್ದೇ ತಪ್ಪಾಯ್ತ?; ಟ್ವಿಟರ್​ನಲ್ಲಿ ಮನವಿ ಮಾಡಿದ್ದಕ್ಕೆ ಉತ್ತರಪ್ರದೇಶ ಪೊಲೀಸರಿಂದ ಕೇಸ್!

ಸೋಮವಾರ ಸಂಜೆ, ಶಶಾಂಕ್ ಯಾದವ್ ಎಂಬವರು ನಟ ಸೋನು ಸೂದ್ ಅವರನ್ನು ತಮ್ಮ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿ ಆಕ್ಸಿಜನ್ ಸಿಲಿಂಡರ್‌ಗೆ ಮನವಿ ಮಾಡಿದ್ದರು. ಆದರೆ ಅವರು ಕೊರೋನಾ ಅಥವಾ ಇನ್ಯಾವುದೆ ಕಾಯಿಲೆಯ ಬಗ್ಗೆ ಅವರು ಹೇಳಿಕೊಂಡಿರಲಿಲ್ಲ.

ಯೋಗಿ ಆದಿತ್ಯನಾಥ್.

ಯೋಗಿ ಆದಿತ್ಯನಾಥ್.

  • Share this:
    ಉತ್ತರಪ್ರದೇಶ (ಏಪ್ರಿಲ್ 28); ದೇಶದಲ್ಲಿ ಕೊರೋನಾ ಕೈಮೀರಿದೆ. ಸೋಂಕಿತರಿಗೆ ಆಕ್ಸಿಜನ್​ ಸಹ ನೀಡಲಾಗದ ಸ್ಥಿತಿ ಏರ್ಪಟ್ಟಿದೆ. ಇನ್ನೂ ಉತ್ತರಪ್ರದೇಶದ ಸ್ಥಿತಿಯಂತೂ ಚಿಂತಾಜನಕವಾಗಿದೆ. ಉತ್ತರಪ್ರದೇಶದ ಆಸ್ಪತ್ರೆಗಳ ಎದುರು ರೋಗಿಗಳು ಆಕ್ಸಿಜನ್ ಇಲ್ಲದೆ ಪರದಾಡುತ್ತಿರುವ ದೃಶ್ಯಗಳು ಕಣ್ಣಿಗೆ ರಾಚುವಂತಿದೆ. ಹೀಗಾಗಿ ಯುವಕನೊಬ್ಬ ಸಾವಿನಂಚಿನಲ್ಲಿದ್ದ ತನ್ನ ಕುಟುಂಬದ ಸದಸ್ಯರ ಜೀವ ಉಳಿಸುವ ಸಲುವಾಗಿ ಟ್ವಿಟರ್​ ಮೂಲಕ ಆಕ್ಸಿಜನ್​ಗೆ ಬೇಡಿಕೆ ಇಟ್ಟಿದ್ದ. ಆದರೆ, ಆಕ್ಸಿಜನ್​ಗೆ ಮನವಿ ಮಾಡಿದ್ದ ಯುವಕನ ವಿರುದ್ಧವೇ ಉತ್ತರಪ್ರದೇಶದ ಅಮೆಥಿ ಪೊಲೀಸರು ಮಂಗಳವಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಈ ಸಂಬಂಧ ಸ್ವತಃ ಅಮೆಥಿ ಪೊಲೀಸರು ಟ್ವೀಟ್ ಮೂಲಕವೇ ಸ್ಪಷ್ಟಪಡಿಸಿದ್ದಾರೆ.

    "ಭಯ ಉಂಟುಮಾಡುವ ಉದ್ದೇಶದಿಂದ, ವದಂತಿಯನ್ನು ಪ್ರಸಾರ ಮಾಡಿದ್ದಾರೆ. ಅವರ ಟ್ವೀಟ್‌ ರಾಜ್ಯದ ವಿರುದ್ಧ ಅಥವಾ ಸಾರ್ವಜನಿಕ ನೆಮ್ಮದಿಗೆ ತೊಂದರೆ ಉಂಟು ಮಾಡಿ ಅಪರಾಧ ಮಾಡಲು ಪ್ರೇರೇಪಿಸಲ್ಪಡಬಹುದು" ಎಂದು ಪೊಲೀಸರು ಅವರ ಮೇಲೆ ಆರೋಪವನ್ನು ಹೊರಿಸಿದ್ದಾರೆ.

    ಸೋಮವಾರ ಸಂಜೆ, ಶಶಾಂಕ್ ಯಾದವ್ ಎಂಬವರು ನಟ ಸೋನು ಸೂದ್ ಅವರನ್ನು ತಮ್ಮ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿ ಆಕ್ಸಿಜನ್ ಸಿಲಿಂಡರ್‌ಗೆ ಮನವಿ ಮಾಡಿದ್ದರು. ಆದರೆ ಅವರು ಕೊರೋನಾ ಅಥವಾ ಇನ್ಯಾವುದೆ ಕಾಯಿಲೆಯ ಬಗ್ಗೆ ಅವರು ಹೇಳಿಕೊಂಡಿರಲಿಲ್ಲ.

    ಅವರ ಸ್ನೇಹಿತರಲ್ಲೊಬ್ಬರಾದ ಅಂಕಿತ್ ಎಂಬವರು, ರಾತ್ರಿ 8: 33 ಕ್ಕೆ ಶಶಾಂಕ್‌ ಯಾದವ್ ಅವರ ಮನವಿಯನ್ನು ರಿಟ್ವೀಟ್ ಮಾಡಿದ್ದಾರೆ. ಜೊತೆಗೆ ಟ್ವಿಟರ್‌ನಲ್ಲಿ ದಿ ವೈರ್‌ನ ಹಿರಿಯ ಸಂಪಾದಕಿ ಅರ್ಫಾ ಖಾನೂಮ್ ಶೆರ್ವಾನಿ ಅವರಿಗೆ ಸಹಾಯ ಕೋರಿ ನೇರ ಸಂದೇಶವನ್ನು ಕಳುಹಿಸಿದ್ದರು.



    ಕೊರೊನಾ ತೀವ್ರಗೊಂಡ ಹಿನ್ನಲೆಯಲ್ಲಿ ವೈರ್‌ ಸಂಪಾದಕಿ ಅರ್ಫಾ ಖಾನೂಂ ಅವರು ತನ್ನ ಸಾಮಾಜಿಕ ಜಾಲತಾಣವನ್ನು ಕೊರೊನಾ ಚಿಕಿತ್ಸೆಗೆ ಸಹಾಯ ಕೇಳುತ್ತಿರುವವರಿಗೆ ಸಹಾಯ ಮಾಡುವಂತೆ ಹೇಳಿಕೊಳ್ಳಲು ಬಳಸುತ್ತಿದ್ದಾರೆ. ಅವರು ಈ ರೀತಿಯ ಸಂದೇಶಗಳನ್ನು ಹಂಚಿ ಪ್ರಭಾವಿಗಳ ಗಮನಕ್ಕೆ ತರುತ್ತಿದ್ದರು. ಅದರಂತೆ ಮಧ್ಯರಾತ್ರಿ ಈ ಟ್ವೀಟ್‌ ಅನ್ನು ಅವರು ನೋಡಿದ್ದು, ನಂತರ ಅದನ್ನು ರೀಟ್ವೀಟ್ ಮಾಡಿದ್ದಾರೆ.

    ನಂತರದ ಟ್ವೀಟ್‌‌ಗಳಲ್ಲಿ, ಅಮೆಥಿಯಿಂದ ಸಂಸದರಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಕೊರೊನಾ ರೋಗಿಗಳಿಗೆ ಸಹಾಯ ಮಾಡುವಲ್ಲಿ ತೊಡಗಿಸಿಕೊಂಡಿರುವ ಲಕ್ನೋ ಮೂಲದ ಪ್ರಮುಖ ಸಂಪಾದಕ ಮತ್ತು ಸಮಾಜವಾದಿ ರಾಜಕಾರಣಿಯನ್ನು ಟ್ಯಾಗ್ ಮಾಡಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ, ತಾನು ಶಶಾಂಕ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ, ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.



    ಏತನ್ಮಧ್ಯೆ, ರಾತ್ರೆ 12:44 ಕ್ಕೆ ಅರ್ಫಾ ಖಾನೂಂ ಅವರಿಗೆ, ತನ್ನ ಸ್ನೇಹಿತನ ಅಜ್ಜ ನಿಧನರಾದರು ಎಂದು ಹೇಳಿ ಆಮ್ಲಜನಕ ಬೇಕೆಂದು ಕೇಳಿದ್ದ ಅಂಕಿತ್‌‌ ಅವರು ಸಂದೇಶ ಕಳುಹಿಸಿದ್ದಾರೆ.

    ಜೊತೆಗೆ ಅರ್ಫಾ ಖಾನೂಂ ಅವರು ಸ್ಮೃತಿ ಇರಾನಿಗೆ ಈ ಮಾಹಿತಿಯನ್ನು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವೆ, “ಅವರ ಸಂಖ್ಯೆಗೆ CMO, ಅಮೇಥಿ ಪೊಲೀಸ್ ಸೇರಿದಂತೆ ನಾವೆಲ್ಲರೂ ಕರೆ ಮಾಡಿದ್ದೇವೆ. ಅವರು ತನ್ನ ಫೋನ್ ರಿಸೀವ್ ಮಾಡಬೇಕೆಂದು ನಾನು ಬಯಸಿದ್ದೆ. ನನ್ನ ಸಂತಾಪ” ಎಂದು ಹೇಳಿದ್ದರು.



    ಜೊತೆಗೆ ಸಂತ್ರಸ್ತ ಕುಟುಂಬಕ್ಕೆ ಸಹಾಯ ಮಾಡಲು ಪ್ರಯತ್ನಿಸಿದ್ದಕ್ಕೆ ಅಂಕಿತ್ ಅವರು ಸ್ಮೃತಿ ಇರಾನಿ ಮತ್ತು ಅರ್ಫಾ ಖಾನೂಂ ಅವರಿಗೆ ಧನ್ಯವಾದ ಕೂಡಾ ಅರ್ಪಿಸಿದ್ದರು. ಇದಾಗಿ, ಏಪ್ರಿಲ್ 27 ರಂದು ಮಧ್ಯಾಹ್ನದ ಸಮಯದ ನಂತರ, ಅಮೆಥಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಅಮೆಥಿ ಮುಖ್ಯ ವೈದ್ಯಾಧಿಕಾರಿಯ ವರದಿಯನ್ನು ಅರ್ಫಾ ಖಾನೂಂ ಅವರ ಟ್ವೀಟ್‌ಗೆ ಉತ್ತರವಾಗಿ ಟ್ವೀಟ್ ಮಾಡಿದ್ದರು. ಈ ವರದಿಯು, ಯಾರಿಗೆ ಆಕ್ಸಿಜನ್‌ ಸಿಲಿಂಡರ್‌ ಬೇಕೆಂದು ಕೇಳಿದ್ದರೋ, ಆ ವ್ಯಕ್ತಿಯು ಕೊರೊನಾದಿಂದ ಬಳಲುತ್ತಿರಲಿಲ್ಲ ಹಾಗೂ ದುರ್ಗಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿಸಿತ್ತು.

    ಶಶಾಂಕ್ ಯಾದವ್ ಅಥವಾ ಅರ್ಫಾ ಖಾನೂಂ ಎಲ್ಲಿಯೂ, ‘ಕೊರೊನಾ ರೋಗಿ’ಗೆ ಆಮ್ಲಜನಕದ ಅಗತ್ಯವಿದೆ ಎಂದು ಹೇಳಿಲ್ಲವಾದರೂ, ಪೊಲೀಸರು ಇಬ್ಬರು ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಸೂಚಿಸಿದ್ದಾರೆ. ಮಂಗಳವಾರ ಸಂಜೆ, ಅಮೆಥಿ ಪೊಲೀಸರು ಶಶಾಂಕ್‌ ಯಾದವ್ ಮತ್ತು ಅರ್ಫಾ ಖಾನೂಂ ಅವರು ಮೂಲ ಸಂದೇಶಗಳಿಗೆ ಪ್ರತ್ಯುತ್ತರವನ್ನು ಟ್ವೀಟ್ ಮಾಡಿದ್ದು, ಅದರಲ್ಲಿ “ಅಜ್ಜ ಕೋವಿಡ್‌ನಿಂದ ಬಳಲುತ್ತಿರಲಿಲ್ಲ. ಅವರಿಗೆ ಆಮ್ಲಜನಕದ ಪ್ರಿಸ್ಕ್ರಿಪ್ಷನ್ ಕೂಡಾ ಇರಲಿಲ್ಲ, ಅವರು ‘ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ರೀತಿಯ ವದಂತಿಗಳನ್ನು ಹರಡುವುದು ಖಂಡನೀಯ ಮಾತ್ರವಲ್ಲ, ಕ್ರಿಮಿನಲ್ ಅಪರಾಧವಾಗಿದೆ” ಎಂದು ಬರೆದಿದ್ದರು.



    ಪೊಲೀಸರ ಈ ಎಚ್ಚರಿಕೆಗೆ ಅರ್ಫಾ ಖಾನೂಂ ಅವರು ಪ್ರತಿಕ್ರಿಯಿಸಿ, “ಜನರು ಸಹಾಯ ಕೇಳುತ್ತಿದ್ದಾರೆ, ಜವಾಬ್ದಾರಿಯುತ ಪ್ರಜೆಯಾಗಿ ನನ್ನಲ್ಲಿ ಸಹಾಯ ಕೇಳುವ ಜನರಿಗಾಗಿ ನಾನು ಟ್ವೀಟ್ ಮಾಡುತ್ತೇನೆ. ಸತ್ಯವನ್ನು ಹುಡುಕುವುದು ಪೊಲೀಸರ ಕೆಲಸ. ನಾನು ಟ್ವೀಟ್ ಮಾಡಿರುವ 99% ಜನರ ಬಗ್ಗೆ ನನಗೆ ವೈಯಕ್ತಿಕ ಪರಿಚಯ ಇಲ್ಲ. ಆದರೆ ಭಾರತೀಯ ಪ್ರಜೆಯ ಕರ್ತವ್ಯವನ್ನು ನಿರ್ವಹಿಸುತ್ತಾ ನಾನು ಅವರ ಸಂದೇಶವನ್ನು ಜನರಿಗೆ ಹರಡುತ್ತಿದ್ದೇನೆ” ಎಂದು ತನ್ನೊಂದಿಗೆ ಸಹಾಯ ಕೋರಿದ್ದ ಸಂದೇಶದ ಸ್ಕ್ರೀನ್‌ಶಾಟ್‌ನೊಂದಿಗೆ ಬರೆದಿದ್ದರು.



    ಇದರ ನಂತರ ಪೊಲೀಸರು ಶಶಾಂಕ್‌ ಯಾದವ್‌ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಾಂಕ್ರಾಮಿಕ ಕಾಯ್ದೆಯ ಸೆಕ್ಷನ್ 3 ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 54 ರೊಂದಿಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188, 269 ಮತ್ತು 505 (1) (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.



    ಇದಕ್ಕೆ ಪ್ರತಿಕ್ರಿಯಿಸಿರುವ ದಿ ವೈರ್‌ನ ಸಂಸ್ಥಾಪಕ ಸಂಪಾದಕ ಸಿದ್ದಾರ್ಥ್, ಪೊಲೀಸರ ಈ ಕ್ರಮವು ವೈದ್ಯಕೀಯ ಸಹಾಯಕ್ಕಾಗಿ ಹತಾಶರಾಗಿ ಕೇಳುವ ರೋಗಿಗಳ ಕುಟುಂಬಗಳನ್ನು ಬೆದರಿಸುವ ಪ್ರಯತ್ನವಾಗಿದೆ ಎಂದು ಖಂಡಿಸಿದ್ದಾರೆ.

    ಇದನ್ನೂ ಓದಿ: Covid-19 Vaccine | ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ; ಇಂದಿನಿಂದ ನೋಂದಣಿ ಆರಂಭ

    “ಶಶಾಂಕ್‌ ಯಾದವ್ ವಿರುದ್ಧ ಪೊಲೀಸರು ಮಾಡಿರುವ ಆರೋಪಗಳು ಗಂಭೀರವಾಗಿದ್ದು, ಪೊಲೀಸರು ಈ ಪ್ರಕರಣವನ್ನು ಮುಂದುವರೆಸಿದರೆ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಚಿಕಿತ್ಸೆ ಪಡೆಯುವಲ್ಲಿನ ತೊಂದರೆಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಂತೆ ಉತ್ತರ ಪ್ರದೇಶದಾದ್ಯಂತ ಶಶಾಂಕ್‌ ಯಾದವ್ ಅವರಂತಹ ಕುಟುಂಬಗಳಿಗೆ ಸಂದೇಶ ಕಳುಹಿಸುವುದು ಇದರ ಉದ್ದೇಶವಾಗಿದೆ” ಎಂದು ಸಿದ್ದಾರ್ಥ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    Published by:MAshok Kumar
    First published: