Baba Ramdev | ಅಲೋಪಥಿಯನ್ನು ಮೂರ್ಖ ವಿಜ್ಞಾನ ಎಂದ ಬಾಬಾ ರಾಮದೇವ್ ವಿರುದ್ಧ ಸಿಡಿದೆದ್ದ ವೈದ್ಯರು

Baba Ramdev | ರಾಮದೇವ್ ಅಲೋಪಥಿಯನ್ನು ಮೂರ್ಖ ವಿಜ್ಞಾನ ಎಂದು ಕರೆದಿರುವುದು ಸರಿಯಲ್ಲ ಎಂದು ವೈದ್ಯರು ಯೋಗ ಗುರು ಬಾಬಾ ರಾಮದೇವ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬಾಬಾ ರಾಮ್​ದೇವ್​​.

ಬಾಬಾ ರಾಮ್​ದೇವ್​​.

  • Share this:

ಯೋಗ ಗುರು ರಾಮದೇವ್ ಅವರು COVID-19 ಸಾಂಕ್ರಾಮಿಕ ರೋಗ ತಡೆಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳನ್ನು ಸರಿಪಡಿಸಲಾಗದಂತೆ ಹಾನಿ ಮಾಡುತ್ತಿದ್ದಾರೆ. ಇಂತಹ ಸೂಕ್ಷ್ಮ ಸಮಯದಲ್ಲಿ ಜನರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಈ ಮೂಲಕ ರಾಷ್ಟ್ರ ವಿರೋಧಿಯಾಗಿ ಮಾರ್ಪಾಡಾಗುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಂಗಳವಾರ ತಿಳಿಸಿದೆ.ಭಾರತೀಯ ವೈದ್ಯಕೀಯ ಸಂಘವು ಜನಸಾಮಾನ್ಯರಿಗಾಗಿ ಮುಕ್ತವಾದ ಪತ್ರವೊಂದನ್ನು ಬರೆದಿದ್ದು ರಾಮದೇವ್ ಕೋವಿಡ್ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕೋವಿಡ್ ಚಿಕಿತ್ಸಾ ಪ್ರೋಟೋಕಾಲ್ ಮೀರುತ್ತಿದ್ದಾರೆ. ಅಲ್ಲದೆ ವ್ಯಾಕ್ಸಿನೇಷನ್ ಕಾರ್ಯಕ್ರಮದ ವಿರುದ್ಧ ತಮ್ಮ ಪತಂಜಲಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸದಾ ಚಿಂತನೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಮ್‌ದೇವ್‌ ಹೆಜ್ಜೆ ಇಡುತ್ತಿದ್ದಾರೆ ಎಂದು ಐಎಂಎ ಹೇಳಿದೆ.ರಾಮ್‌ದೇವ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಭಾರತ ಸರ್ಕಾರದ ಪ್ರಯತ್ನಗಳನ್ನು ಸರಿಪಡಿಸಲಾಗದಂತೆ ಹಾನಿ ಮಾಡುತ್ತಿದ್ದಾರೆ ಎಂದೂ ಐಎಂಎ ಆರೋಪಿಸಿದೆ. ರಾಷ್ಟ್ರೀಯ ಚಿಕಿತ್ಸಾ ಪ್ರೋಟೋಕಾಲ್‌ಗಳು ಮತ್ತು ರಾಷ್ಟ್ರೀಯ ವ್ಯಾಕ್ಸಿನೇಷನ್ ಕಾರ್ಯಕ್ರಮದ ಬಗ್ಗೆ ಸಾಂಕ್ರಾಮಿಕ ಸಮಯದಲ್ಲಿ ಜನರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಈ ಮೂಲಕ ರಾಮದೇವ್ ದೇಶದ್ರೋಹಿಯಾಗಿ ಮತ್ತು ರಾಷ್ಟ್ರ ವಿರೋಧಿಯಾಗಿ ಮಾರ್ಪಡುತ್ತಿದ್ದಾರೆ. ಅವರು ಜನ ವಿರೋಧಿ ಮತ್ತು ಮಾನವೀಯ ವಿರೋಧಿಯಾಗಿ ಬದಲಾಗುತ್ತಿದ್ದಾರೆ. ಯಾವುದೇ ಕರುಣೆಗೆ ಅರ್ಹರಲ್ಲ ಎಂದು ಐಎಂಎ ಹೇಳಿದೆ.


ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ಸ್ (ಫೋರ್ಡಾ), ಮತ್ತು ರಾಮ್‌ದೇವ್ ವಿರುದ್ಧ ದೇಶದ ಇತರ ವೈದ್ಯಕೀಯ ಹಾಗೂ ನಿವಾಸಿ ವೈದ್ಯರ ಸಂಘಗಳು ಕರೆದ ಕಪ್ಪು ರಿಬ್ಬನ್ ಧರಿಸಿ ಪ್ರತಿಭಟನೆಗೆ ಐಎಂಎ ಬೆಂಬಲ ನೀಡಿದೆ.
ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಆಧುನಿಕ ಔಷಧವು ಮುಂಚೂಣಿಯಲ್ಲಿದೆ ಮತ್ತು 1,300 ವೈದ್ಯರು ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಐಎಂಎ ಹೇಳಿದೆ.


ಇದನ್ನೂ ಓದಿ: Karnataka Weather Today | ಕರ್ನಾಟಕದಲ್ಲಿ ಇಂದು, ನಾಳೆ ಭಾರೀ ಮಳೆ; ಬೆಂಗಳೂರು ಸೇರಿ 17 ಜಿಲ್ಲೆಗಳಲ್ಲಿ ಹಳದಿ ಅಲರ್ಟ್​ ಘೋಷಣೆ

ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ನಿವಾಸಿ ವೈದ್ಯರಿಂದ ಹಿಡಿದು ನಿರ್ಣಾಯಕ ಆರೈಕೆ ಮತ್ತು ತುರ್ತು ಆರೈಕೆ ವೈದ್ಯರವರೆಗೆ ಪ್ರತಿಯೊಬ್ಬ ವೈದ್ಯರನ್ನು ಜನರ ರಕ್ಷಣೆಗೆ ನಿಯೋಜಿಸಲಾಗಿದೆ ಎಂದು ಅದು ಪತ್ರದಲ್ಲಿ ತಿಳಿಸಿದೆ. ರಾಷ್ಟ್ರೀಯ ಕೋವಿಡ್ ಪ್ರೋಟೋಕಾಲ್ಗಳು ಮತ್ತು ರಾಷ್ಟ್ರೀಯ ವ್ಯಾಕ್ಸಿನೇಷನ್ ಕಾರ್ಯಕ್ರಮದ ವಿರುದ್ಧ ಜನರ ಮನಸ್ಸಿನಲ್ಲಿ ಗೊಂದಲವನ್ನು ಸೃಷ್ಟಿಸುವುದು ರಾಷ್ಟ್ರೀಯ ವಿರೋಧಿ ಕೃತ್ಯವಾಗಿದೆ. ಇದನ್ನು ದೇಶದ್ರೋಹ ಎಂದು ಪರಿಗಣಿಸಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಆತನ ಮೇಲೆ (ರಾಮದೇವ್) ಕಾನೂನು ಕ್ರಮ ಜರುಗಿಸಲು ಐಎಂಎ ಒತ್ತಾಯಿಸಿದೆ ಎಂದು ಸಂಘ ಹೇಳಿದೆ.

ಆಧುನಿಕ ಔಷಧಿಯನ್ನು ಅವಿವೇಕಿ ವಿಜ್ಞಾನ ಎಂದು ಕರೆಯುವುದು ಸಂಪೂರ್ಣವಾಗಿ ವಿಭಿನ್ನವಾದ ಅಪರಾಧ ಕ್ರಿಯೆ. ಸರ್ಕಾರದ ನಿಷ್ಕ್ರಿಯತೆಯು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ವೈದ್ಯರನ್ನು ಗಂಭೀರವಾಗಿ ನೋಯಿಸುತ್ತದೆ ಎಂದು ಅದು ಪತ್ರದಲ್ಲಿ ತಿಳಿಸಿದೆ.


ಅಲೋಪಥಿ ವಿರುದ್ಧ ಅಶಿಕ್ಷಿತ ಹೇಳಿಕೆಗಳನ್ನು ನೀಡುವ ಮೂಲಕ ಮತ್ತು ವೈಜ್ಞಾನಿಕ ಆಧುನಿಕ ಔಷಧೀಯ ಪದ್ಧತಿಯನ್ನು ಕೆಣಕುವ ಮೂಲಕ ಯೋಗ ಗುರು ಜನರನ್ನು ದಾರಿ ತಪ್ಪಿಸಿದ್ದಾರೆ ಎಂಬ ಐಎಂಎ ಆರೋಪವನ್ನು ಮೇ 22 ರಂದು ಪತಂಜಲಿ ಯೋಗಪೀಠ ಟ್ರಸ್ಟ್ ನಿರಾಕರಿಸಿದೆ.ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ವಿಡಿಯೋವೊಂದನ್ನು ಉಲ್ಲೇಖಿಸಿದ ಐಎಂಎ, ರಾಮದೇವ್ ಅವರು ಅಲೋಪಥಿಯನ್ನು ಮೂರ್ಖ ವಿಜ್ಞಾನ ಎಂದು ಕರೆದಿರುವುದು ಸರಿಯಲ್ಲ ಎಂದು ಹೇಳಿದೆ. ಆದರೆ,ಕೋವಿಡ್ ಸಾಂಕ್ರಾಮಿಕ ರೋಗದ ಇಂತಹ ಸವಾಲಿನ ಸಮಯದಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿರುವ ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ಅತ್ಯಂತ ಗೌರವಾನ್ವಿತರು. ರಾಮದೇವ್ ಇವರನ್ನು ಗೌರವಿಸುತ್ತಾರೆ ಎಂದು ಹರಿದ್ವಾರ ಮೂಲದ ಪತಂಜಲಿ ಯೋಗಪೀಠ ಟ್ರಸ್ಟ್ ಹೇಳಿಕೆಯಲ್ಲಿ ತಿಳಿಸಿದೆ.
ರಾಮದೇವ್ ಅವರು ಆಧುನಿಕ ವಿಜ್ಞಾನದ ವಿರುದ್ಧ ಯಾವುದೇ ಕೆಟ್ಟ ಇಚ್ಛಾಶಕ್ತಿ ಹೊಂದಿಲ್ಲ ಮತ್ತು ಆಧುನಿಕ ಔಷಧ ಪದ್ಧತಿಯಲ್ಲಿ ಉತ್ತಮ ವೈದ್ಯರು ಇದ್ದಾರೆ. ಅವರ ವಿರುದ್ಧ ಹೇಳಲಾಗುತ್ತಿರುವುದು ಸುಳ್ಳು ಮತ್ತು ಅಸಹ್ಯಕರವಾಗಿದೆ ಎಂದು ಪತಂಜಲಿ ಯೋಗಪೀಠ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಆಚಾರ್ಯ ಬಾಲಕೃಷ್ಣ ಅವರು ಸಹಿ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Published by:Sushma Chakre
First published: