ಯಡಿಯೂರಪ್ಪ ಸಿಎಂ ಆಗಿ ಸಂಪೂರ್ಣ ವಿಫಲ, ಸಮರ್ಥ ನಾಯಕರಿಲ್ಲದ ಕಾರಣ ಮುಂದುವರಿಕೆ; ಸಿದ್ಧರಾಮಯ್ಯ

ಬಿಜೆಪಿಯಲ್ಲಿ ನಿತ್ಯ ಬೀದಿ ಜಗಳ ನಡೀತಿದೆ. ಹಾದಿಗೊಂದು, ಬೀದಿಗೊಂದು ಹೇಳಿಕೆಗಳನ್ನು ನೀಡಲಾಗುತ್ತಿದೆ. ಬಿಜೆಪಿಯಲ್ಲಿ ಸಿಎಂ ಸ್ಥಾನಕ್ಕೆ ಸಮರ್ಥರೇ ಇಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ, ಬಿ.ಎಸ್​.ಯಡಿಯೂರಪ್ಪ

ಸಿದ್ದರಾಮಯ್ಯ, ಬಿ.ಎಸ್​.ಯಡಿಯೂರಪ್ಪ

  • Share this:
ಹುಬ್ಬಳ್ಳಿ: ಯಡಿಯೂರಪ್ಪ ಸಿಎಂ ಆಗಿ ಸಂಪೂರ್ಣ ವಿಫಲರಾಗಿದ್ದಾರೆ. ಬಿಜೆಪಿಯಲ್ಲಿ ಸಮರ್ಥ ನಾಯಕರಿಲ್ಲ ಅನ್ನೋ ಕಾರಣಕ್ಕೆ ಆ ಸ್ಥಾನದಲ್ಲಿ ಮುಂದುವರಿದಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಆರೋಪಿಸಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್ ವಿಚಾರದಲ್ಲಿ ಯಡಿಯೂರಪ್ಪ ಸಿಎಂ ಆಗಿ ಸಂಪೂರ್ಣ ವಿಫಲರಾಗಿದ್ದಾರೆ. ಕೊರೋನಾ ಬಂದಿದ್ದರಿಂದ ಅವರನ್ನು ಉಳಿಸಿಕೊಂಡಿದ್ದಾರೆ. ಬಿಜೆಪಿಯಲ್ಲಿ ನಿತ್ಯ ಬೀದಿ ಜಗಳ ನಡೀತಿದೆ. ಹಾದಿಗೊಂದು, ಬೀದಿಗೊಂದು ಹೇಳಿಕೆಗಳನ್ನು ನೀಡಲಾಗುತ್ತಿದೆ. ಬಿಜೆಪಿಯಲ್ಲಿ ಸಿಎಂ ಸ್ಥಾನಕ್ಕೆ ಸಮರ್ಥರೇ ಇಲ್ಲ. ಸಮರ್ಥರಿಲ್ಲ ಅನ್ನೋ ಕಾರಣಕ್ಕೆ ನಾಯಕತ್ವ ಬದಲಾವಣೆಯಾಗಿಲ್ಲ.

ಈಗಲೂ ನಾಯಕತ್ವ ಬದಲಾಯಿಸ್ತಾರೆ ಅಂತ ಮಾಹಿತಿ ಇದೆ. ಕೊರೋನಾ ಕಾರಣದಿಂದ ವಿಳಂಬವಾಗಿರಬಹುದಷ್ಟೆ ಎಂದರು. ಯಡಿಯೂರಪ್ಪ ವಿಚಾರದಲ್ಲಿ ಸಾಫ್ಟ್ ಕಾರ್ನರ್ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಮೇಲೆ ವೈಯಕ್ತಿಕವಾಗಿ ಪ್ರೀತೀನೂ ಇಲ್ಲ, ಯಾರ ಮೇಲೆ ದ್ವೇಷವೂ ಇಲ್ಲ. ಮನುಷ್ಯತ್ವದ ಪ್ರೀತಿ ಇದೆಯೇ ಹೊರತು ಬೇರೇನು ಅಲ್ಲ. ಅವರ ವಿರುದ್ಧ ಮಾತನಾಡಿಲ್ಲ ಅಂದ್ರೆ ಸಾಫ್ಟ್ ಆಗಿದ್ದೇವೆ ಅಂತಲ್ಲ.

ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆ ಸಂಪೂರ್ಣ ವಿಫಲವಾಗಿದೆ. ಯಾವುದು ಬೇಕೊ ಅದನ್ನು ಸಿದ್ಧತೆ ಮಾಡಿಕೊಳ್ಳಲಿಲ್ಲ. ಆಕ್ಸೀಜನ್ ಬೆಡ್', ವೆಂಟಿಲೇಟರ್ ವ್ಯವಸ್ಥೆ ಮಾಡಲಿಲ್ಲ. ಮೂರನೇ ಅಲೆ ಬರುತ್ತೆ ಅಂತ ತಜ್ಞರು ಹೇಳಿದ್ರೂ ಸಿದ್ಧತೆ ಮಾಡಿಕೊಂಡಿಲ್ಲ. ಬರೀ ಸುಳ್ಳುಗಳನ್ನು ಹೇಳಿಕೊಂಡು ಸಾಗಿದ್ದಾರೆ. ಸತ್ಯ ಹೊರ ಬರುತ್ತೆ ಅಂತ ಭಯದಿಂದ ನನಗೆ ಸಭೆ ಮಾಡಲು ಅವಕಾಶ ಕೊಡ್ಲಿಲ್ಲ.

ಚಾಮರಾಜ ನಗರದಲ್ಲಿ ಆಕ್ಸೀಜನ್ ಕೊರತೆಯಿಂದ 36 ಜನ ಸತ್ರು. ಆದ್ರೆ ಸಂಬಂಧಿಸಿದ ಸಚಿವ ಸುಧಾಕರ್ ಮೂರು ಅಂತ ಸುಳ್ಳು ಹೇಳಿದ್ರು. ಚಾಮರಾಜ ನಗರವೊಂದೇ ಅಲ್ಲ ಬೇರೆ ಕಡೆಗಳಲ್ಲೂ ಸಾವಿನ ಸಂಖ್ಯೆ ಮುಚ್ಚಿಡ್ತಿದಾರೆ. ಯೋಗೇಶ್ವರ್ ಮೂರು ಪಕ್ಷದ ಸರ್ಕಾರ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಬಿಜೆಪಿಯವರು ಕಾಂಗ್ರೆಸ್, ಜೆಡಿಎಸ್ ಪಕ್ಷದವರನ್ನು ಸೇರಿಸಿಕೊಂಡು ಸರ್ಕಾರ ರಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರು ಪಕ್ಷದ ಸರ್ಕಾರ ಅಂತ ಹೇಳಿರಬೇಕು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬದಲಾವಣೆಯ ಮಾತೇ ಇಲ್ಲ, ಯಡಿಯೂರಪ್ಪನವರೇ ರಾಜ್ಯಕ್ಕೆ ಪೂರ್ಣ ಅವಧಿ ಸಿಎಂ; ಸಚಿವ ಆರ್. ಶಂಕರ್​

ರಮೇಶ್ ಜಾರಕಿಹೊಳಿಗೆ ಸರ್ಕಾರದ ಶ್ರೀರಕ್ಷೆ ಆರೋಪ:

ಅತ್ಯಾಚಾರ ಆರೋಪ ಹೊತ್ತಿರೋ ರಮೇಶ್ ಜಾರಕಿ ಹೊಳಿಗೆ ಸರ್ಕಾರವೇ ಶ್ರೀರಕ್ಷೆ ನೀಡುತ್ತಿದ್ದು, ಕೂಡಲೇ ಬಂಧಿಸಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ. ಒಂದು ಕಡೆ ಎಸ್.ಐ.ಟಿ. ಯಿಂದ ತನಿಖೆ ನಡೀತಿದೆ. ಯುವತಿಯೂ ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ್ದಾರೆ. ಇಷ್ಟೆಲ್ಲ ಆದ್ರೂ ಆರೋಪಿಯನ್ನು ಬಂಧಿಸದೇ ಇರೋ ದೇಶದ ಏಕೈಕ ಪ್ರಕರಣ ಇದಾಗಿದೆ. ಅತ್ಯಾಚಾರ ಪ್ರಕರಣದ ಅರೋಪಿ ಸ್ಥಾನದಲ್ಲಿರೊ ವ್ಯಕ್ತಿ ಗೃಹ ಸಚಿವರನ್ನು ಭೇಟಿಯಾಗ್ತಾರೆ.

ಇದನ್ನೂ ಓದಿ: CoronaVirus: ಕೊರೋನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಎದುರಾಗಲಿದೆ ಆತಂಕ: ರಾಜ್ಯದಲ್ಲಿದೆ ಮಕ್ಕಳ ತಜ್ಞ ವೈದ್ಯರ ಕೊರತೆ

ಇದರಿಂದಲೇ ಗೊತ್ತಾಗುತ್ತೆ ಪ್ರಕರಣವನ್ನು ಮುಚ್ಚಿ ಹಾಕ್ತಾರೆ ಅಂತ. ಜಾರಕಿಹೊಳಿಗೆ ಗೃಹ ಸಚಿವ ಬವರಾಜ ಬೊಮ್ಮಾಯಿ ಶ್ರೀರಕ್ಷೆ ಇದೆ. ಕೂಡಲೇ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆರೋಪ ಹೊತ್ತ ಜಾರಕಿಹೊಳಿಯನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು. ಬೆಂಗಳೂರಿನಲ್ಲಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಅರೋಪಿಗಳನ್ನು ಕೂಡಲೇ ಬಂಧಿಸಬೇಕು. ಯಾರೇ ಅತ್ಯಾಚಾರ ಆರೋಪಿಗಳಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

(ವರದಿ - ಶಿವರಾಮ ಅಸುಂಡಿ)

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿ ಸಬೇಕು.
Published by:MAshok Kumar
First published: