ಯಾದಗಿರಿ (ಮೇ. 24): ಕೊರೋನಾ ಎರಡನೇ ಅಲೆ ಕಡಿವಾಣ ಹಾಕಲು ಪೊಲೀಸರು ಜೀವ ಭಯಬಿಟ್ಟು ಜನಸಾಮಾನ್ಯರ ರಕ್ಷಣೆಗಾಗಿ ಹೋರಾಟ ಮಾಡುತ್ತಿದ್ದಾರೆ. ಲಾಕ್ಡೌನ್ ವೇಳೆ ಜನಸಾಮಾನ್ಯರ ಸಂಕಷ್ಟವನ್ನು ಕಣ್ಣಾರೆ ಕಂಡ ಅವರು ಈಗ ಅವರ ನೆರವಿಗೆ ಧಾವಿಸಿದ್ದು, ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಕೋವಿಡ್ ಕರ್ತವ್ಯ ಪಾಲನೆ ಜೊತೆ ರಾಜ್ಯದಲ್ಲಿ ಅದೆಷ್ಟೋ ಪೊಲೀಸರು ಮಾನವೀಯ ಕಾಳಜಿ ಮೆರೆಯುತ್ತಿದ್ದಾರೆ. ಅದರಂತೆ ಯಾದಗಿರಿಯಲ್ಲಿ ಕೂಡ ಪೊಲೀಸರು ಬಡವರ ಹಸಿವು ನಿಗಿಸುವ ಕಾರ್ಯ ಮಾಡುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಅವರು ಖುದ್ದು ಅಲೆಮಾರಿ ಜನಾಂಗದವರಿಗೆ ಆಹಾರ ಕಿಟ್ ನೀಡಿ ಅವರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ದಿನ ನಿತ್ಯವೂ ಕೊರೋನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದ್ದು, ಜಿಲ್ಲೆಯಲ್ಲಿ ಕೊರೋನಾ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ ಅವರು ನಾಲ್ಕು ದಿನಗಳ ಕಾಲ ಕಠಿಣ ಲಾಕ್ ಡೌನ್ ಮಾಡಿದ್ದಾರೆ. ಸರಕಾರವು ಲಾಕ್ ಡೌನ್ ಮಾಡಿದ್ದು ಆದರೆ, ಪರಿಣಾಮ ಬಡಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಕೈಯಲ್ಲಿ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಹಾಯಕ್ಕಾಗಿ ಅಂಗಲಾಚಿದ ಅಲೆಮಾರಿ ಜನಾಂಗದವರಿಗೆ ಎಸ್ಪಿ ವೇದಮೂರ್ತಿ ಅವರು ಆಹಾರ ಕಿಟ್ ವಿತರಣೆ ಮಾಡಿ ಸಹಾಯ ಮಾಡಿದ್ದಾರೆ.
ಯಾದಗಿರಿಯ ಕೃಪಾನಗರ ,ಮಾತಾಮಾಣಿಕೇಶ್ವರಿ ಹಾಗೂ ವಿವಿಧೆಡೆ ವಾಸವಾಗಿರುವ ಅಲೆಮಾರಿ ಜನಾಂಗದ 110 ಕುಟುಂಬಸ್ಥರಿಗೆ ಅಕ್ಕಿ, ಸಕ್ಕರೆ, ತೊಗರಿ ಬೆಳೆಯ ಆಹಾರ ಕಿಟ್ ಗಳನ್ನು ಎಸ್ಪಿ ವೇದಮೂರ್ತಿ ವಿತರಣೆ ಮಾಡಿದ್ದಾರೆ.
ಇದನ್ನು ಓದಿ: ಕೊಪ್ಪಳದಲ್ಲಿ ಕೋವಿಡ್ಗೆ 11 ವರ್ಷದ ಬಾಲಕಿ ಸಾವು
ಆಹಾರ ಕಿಟ್ ವಿತರಣೆ ಮಾಡಿ ಅಲೆಮಾರಿ ಜನಾಂಗದವರಿಗೆ ಕೋವಿಡ್ ಜಾಗೃತಿ ಮೂಡಿಸಿದ್ದಾರೆ. ಯಾವುದೇ ಕಾರಣಕ್ಕೂ ಜನರು ಮನೆಯಿಂದ ಹೊರಬಾರ ಬೇಕಾದರೆ ಮಾಸ್ಕ್ ಧರಿಸಬೇಕು. ಅಲ್ಲದೇ ಕಟ್ಟುನಿಟ್ಟಿನ ಕೋವಿಡ್ ನಿಯಮ ಪಾಲಿಸಬೇಕೆಂದು ಮನವಿ ಮಾಡಿದರು. ನಿಮಗೆ ಯಾವುದೇ ತೊಂದರೆಯಾಗದಂತೆ ನಿಮ್ಮ ಜೊತೆ ನಾವಿರುತ್ತೆವೆ ಕೋವಿಡ್ ನಿಯಮ ಪಾಲಿಸಬೇಕೆಂದು ವಿನಂತಿ ಮಾಡಿಕೊಂಡರು.
ಇದನ್ನು ಓದಿ: 67ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ; ಸಸಿ ನೆಡುವ ಮೂಲಕ ಆಚರಿಸಿದ ದೇವೇಗೌಡ ದಂಪತಿ
ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಎಸ್ಪಿ ವೇದಮೂರ್ತಿ, ಯಾರು ತೀವ್ರ ಸಂಕಷ್ಟದಲ್ಲಿದ್ದಾರೋ ಅಂತವರಿಗೆ ಆಹಾರ ಕಿಟ್ ನೀಡಲಾಗಿದೆ. ನನ್ನ ಜೊತೆ ನಮ್ಮ ಅಧಿಕಾರಿಗಳು ಎಲ್ಲರೂ ಜೊತೆಯಾಗಿ ಆಹಾರ ಕಿಟ್ ನೀಡಿದ್ದಾರೆ. ಯಾರು ನಿಜವಾದ ಸಮಸ್ಯೆದಲ್ಲಿದ್ದಾರೋ ಅವರಿಗೆ ಉಳ್ಳವರು ನೆರವಾಗಬೇಕೆಂದರು ಅಲ್ಲದೇ, ಎಲ್ಲರು ತಪ್ಪದೇ ಕಟ್ಟುನಿಟ್ಟಾಗಿ ಕೋವಿಡ್ ನಿಯಮ ಪಾಲನೆ ಮಾಡಬೇಕೆಂದರು.
ಎಸ್ಪಿ ವೇದಮೂರ್ತಿ ಅವರ ಕಾರ್ಯಕ್ಕೆ ಡಿವೈಎಸ್ಪಿ ಸಂತೋಷ ಬನ್ನಹಟ್ಟಿ, ಸಿಪಿಐ ಸೋಮಶೇಖರ ಕೆಂಚರೆಡ್ಡಿ ಸಾಥ್ ನೀಡಿದರು. ಕಷ್ಟಕಾಲದಲ್ಲಿ ಎಸ್ಪಿ ಆಹಾರ ಕಿಟ್ ವಿತರಣೆ ಮಾಡಿದಕ್ಕೆ ಅಲೆಮಾರಿ ಜನಾಂಗದವರು ಖುಷಿಗೊಂಡರು. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಅಂಜನೇಯ ಮಾತನಾಡಿ, ನಾವು ಬಹಳ ಕಷ್ಟದಲ್ಲಿದ್ದೇವು. ಕೆಲಸವಿಲ್ಲದೇ ಮನೆಯಲ್ಲಿ ಆಹಾರ ಸಾಮಾಗ್ರಿಗಳು ಇಲ್ಲದೇ ಕಷ್ಟವಾಗಿತ್ತು. ಎಸ್ಪಿ ಸಾಹೇಬ್ರು ನಮ್ಮ ಕಷ್ಟ ಅರಿತು ಹೊಟ್ಟೆ ತುಂಬಿಸುವ ಕೆಲಸ ಮಾಡಿ ಅನುಕೂಲ ಮಾಡಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ