HOME » NEWS » Coronavirus-latest-news » YADAGIRI COVID 19 HOSPITAL PATIENT DIED DUE TO OXYGEN SHORTAGE AFTER ELECTRICITY GONE SCT NMPG

ಯಾದಗಿರಿಯ ಕೋವಿಡ್ ಆಸ್ಪತ್ರೆಯಲ್ಲಿ ಪವರ್ ಕಟ್; ಆಕ್ಸಿಜನ್ ಪೂರೈಕೆ ಬಂದ್ ಆಗಿ ಪ್ರಾಣ ಬಿಟ್ಟ ಸೋಂಕಿತ

ಯಾದಗಿರಿ ಕೋವಿಡ್ ಆಸ್ಪತ್ರೆಯಲ್ಲಿ ನಸುಕಿನ ಜಾವ ಕರೆಂಟ್ ಕಟ್ ಆಗಿ ಆಕ್ಸಿಜನ್ ಸಮಸ್ಯೆಯಿಂದ ಸೋಂಕಿತರು ನರಳಾಡುವ ಜೊತೆ ಓರ್ವ ಸೋಂಕಿತ ವ್ಯಕ್ತಿ ಆಕ್ಸಿಜನ್ ಕೊರತೆ ಪರಿಣಾಮ ನರಳಾಡಿ ಪ್ರಾಣ ಬಿಟ್ಟಿದ್ದಾರೆಂದು ಮೃತ ವ್ಯಕ್ತಿಯ ಸಹೋದರ ಈಗ ಗಂಭೀರ ಆರೋಪ ಮಾಡಿದ್ದಾರೆ.

news18-kannada
Updated:April 30, 2021, 2:46 PM IST
ಯಾದಗಿರಿಯ ಕೋವಿಡ್ ಆಸ್ಪತ್ರೆಯಲ್ಲಿ ಪವರ್ ಕಟ್; ಆಕ್ಸಿಜನ್ ಪೂರೈಕೆ ಬಂದ್ ಆಗಿ ಪ್ರಾಣ ಬಿಟ್ಟ ಸೋಂಕಿತ
ಮೃತನ ಸೋದರ
  • Share this:
ಯಾದಗಿರಿ: ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರ ಜೀವ ಉಳಿಸುವ ಕೆಲಸ ಮಾಡಬೇಕಾದ ಆರೋಗ್ಯ ಇಲಾಖೆಯು ಈಗ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಸೋಂಕಿತ ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಎಡವಟ್ಟಿಗೆ ಸೋಂಕಿತರು ನರಳಾಡುವಂತಾಗಿದೆ. ಸರಕಾರ ಜಿಲ್ಲಾಸ್ಪತ್ರೆಯನ್ನು ಈಗ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಿದ್ದು, ಕಲಬುರಗಿ ಜಿಲ್ಲೆಗೆ ಹೋಲಿಕೆ ಮಾಡಿದರೆ ಯಾದಗಿರಿ ತಾಲೂಕಿನ ಮುದ್ನಾಳ ಸಮೀಪದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಸೋಂಕಿತರು ಗುಣಮುಖರಾಗಿ ಊರಿಗೆ ತೆರಳಿದ್ದು ಬಹಳ ಖುಷಿ ಸಂಗತಿಯಾಗಿದೆ.

ಕೋವಿಡ್ ಆಸ್ಪತ್ರೆ ಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿದು ಕಲಬುರಗಿ, ಬೀದರ ಜಿಲ್ಲೆಯಿಂದ ಕೂಡ ಸೋಂಕಿತರು ಆಗಮಿಸಿ ಚಿಕಿತ್ಸೆ ಪಡೆದಿದ್ದಾರೆ. ಆದರೆ, ಕೋವಿಡ್ ಆಸ್ಪತ್ರೆಯಲ್ಲಿ ನಸುಕಿನ ಜಾವ ಕರೆಂಟ್ ಕಟ್ ಆಗಿ ಆಕ್ಸಿಜನ್ ಸಮಸ್ಯೆಯಿಂದ ಸೋಂಕಿತರು ನರಳಾಡುವ ಜೊತೆ ಓರ್ವ ಸೋಂಕಿತ ವ್ಯಕ್ತಿ ಆಕ್ಸಿಜನ್ ಕೊರತೆ ಪರಿಣಾಮ ನರಳಾಡಿ ಪ್ರಾಣ ಬಿಟ್ಟಿದ್ದಾರೆಂದು ಮೃತ ವ್ಯಕ್ತಿಯ ಸಹೋದರ ಈಗ ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆಯು ಈಗ ಜಿಲ್ಲೆಗೆ ಕಪ್ಪು ಚುಕ್ಕೆಯಾಗಿದೆ. ಜೀವದ ಹಂಗು ತೊರೆದು ಕೊರೊನಾ ಸೈನಿಕರು ಸೋಂಕಿತರ ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ,ಕೋವಿಡ್ ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿ ಸೋಂಕಿತರು ನರಳಾಡಿದ್ದು ಕಪ್ಪು ಚುಕ್ಕೆಯಾಗಿದೆ.

ಇಂದು ನಸುಕಿನ ಜಾವ ಎರಡು ಗಂಟೆಗಳ ಕಾಲ ಕರೆಂಟ್ ಫಾಲ್ಟ್ ಆಗಿ ಆಸ್ಪತ್ರೆಗೆ ವಿದ್ಯುತ್ ಪೂರೈಕೆ ಬಂದ್ ಆಗಿತ್ತು. ಆದರೆ, ಜನರೇಟರ್ ಮೂಲಕ ಆಸ್ಪತ್ರೆಗೆ ವಿದ್ಯುತ್ ಪೂರೈಕೆ ಮಾಡಬೇಕಿತ್ತು. ಡಿಸೇಲ್ ಕೊರತೆ ಕಾರಣ ಎರಡು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಬಂದ್ ಮಾಡಲಾಗಿತ್ತು. ಪವರ್ ಕಟ್ ಆದ ನಂತರ ವೆಂಟಿಲೇಟರ್ ನಲ್ಲಿದ್ದ ಸೋಂಕಿತರು ನರಳಾಡಿದ್ದಾರೆ. ಈ ವೇಳೆ ಆಕ್ಸಿಜನ್ ಕೊರತೆ ಕೂಡ ತಲೆದೋರಿತ್ತು ಎಂದು ಸೋಂಕಿತರ ಸಂಬಂಧಿಕರ ಆರೋಪವಾಗಿದೆ. ರೋಗಿಯ ಅಟೆಂಡರ್ ಗಳು ವಿದ್ಯುತ್ ಪೂರೈಕೆ ಬಂದ್ ಆದ ತಕ್ಷಣ ಸೋಂಕಿತರ ಹತ್ತಿರ ಆಗಮಿಸಿ ಟವೆಲ್ ಹಾಗೂ ಬಟ್ಟೆಗಳಿಂದ ಗಾಳಿ ಹೊಡೆದಿದ್ದಾರೆ. ಓರ್ವ ಸೋಂಕಿತ ಆಕ್ಸಿಜನ್ ಸಮಸ್ಯೆ ಕಾರಣ ನರಳಾಡಿದ್ದಾರೆ. ಈ ವೇಳೆ ಸಹೋದರನ್ನು ಟವೆಲ್ ನಿಂದ ಗಾಳಿ ಹಾಕಿ ಜೀವ ಉಳಿಸುವ ಯತ್ನ ಮಾಡಿದ್ದಾರೆ. ನಂತರ ಉಸಿರಾಟ ಸಮಸ್ಯೆದಿಂದ ಬಳಲಿ ನರಳಾಡಿ ಪ್ರಾಣ ಬಿಟ್ಟಿದ್ದಾರಂತೆ.

ಮೃತ ಸೋಂಕಿತ ಸಾವಿನ ಮುನ್ನ ಕೂಡ ಸಹೋದರನ ಮುಂದೆ ನೋವು ತೋಡಿಕೊಂಡಿದ್ದಾರೆ. ವೈದ್ಯರು ಸರಿಯಾಗಿ ನೋಡುತ್ತಿಲ್ಲ. ಇದರಿಂದ ಇನ್ನೂ ಬಹಳ ಜನ ಇಲ್ಲಿ ಸಾಯುತ್ತಾರೆಂದು ನೋವು ತೋಡಿಕೊಂಡಿದ್ದಾರಂತೆ. ಈ ಬಗ್ಗೆ ಮೃತನ ಹಿರಿಯ ಸಹೋದರ ಹೇಳಿದ್ದು, ಆತ ನಮ್ಮ ಮನೆ ಜವಾಬ್ದಾರಿ ಹೊತ್ತು ಮನೆ ನಡೆಸುತ್ತಿದ್ದ. ಈಗ ಅವನಿಲ್ಲದೇ ನಾವು ಬದುಕುವುದು ಹೇಗೆ? ಆಸ್ಪತ್ರೆಯಲ್ಲಿ ಯಾವುದೇ ವೈದ್ಯರು ಬಂದು ಕೇರ್ ಮಾಡುತ್ತಿಲ್ಲ. ನಮ್ಮ ಸಹೋದರನಿಗೆ ಆಕ್ಸಿಜನ್ ಪೂರೈಕೆ ಬಂದ್ ಆದ ಹಿನ್ನೆಲೆ ಮೃತಪಟ್ಟಿದ್ದಾನೆಂದು ಸಹೋದರ ಆರೋಪಿಸಿದ್ದಾರಎ.

ವಿದ್ಯುತ್ ಕಟ್ ಆದ ಬಗ್ಗೆ ಸೋಂಕಿತರ ಸಂಬಂಧಿಕರು ನಸುಕಿನ ಜಾವ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದಾರೆ. ನಂತರ ಸ್ಥಳಕ್ಕೆ ಎಡಿಸಿ ಪ್ರಕಾಶ ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಅವರು ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ನಂತರ ನಸುಕಿನ ಜಾವ ಆಂಬುಲೆನ್ಸ್ ನಲ್ಲಿ ಡೀಸೆಲ್ ತರಿಸಿ ಡೀಸೆಲ್ ಹಾಕಿಸಿ ವಿದ್ಯುತ್ ಪೂರೈಕೆ ಮಾಡಿದ್ದು ನಂತರ ಆಕ್ಸಿಜನ್ ಪೂರೈಕೆ ಮಾಡಲಾಗಿದೆ.

ಅಧಿಕಾರಿಗಳ ನಿಷ್ಕಾಳಜಿ:
ಡೀಸೆಲ್ ಕೊರತೆ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದು ಡೀಸೆಲ್ ತುಂಬಿಸುವ ಕೆಲಸ ಮಾಡಬೇಕಿತ್ತು. ಆದರೆ, ರಾತ್ರೋರಾತ್ರಿ ಡೀಸೆಲ್ ಹುಡುಕುತ್ತಾ ಹೋಗಿದ್ದ ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದಂತಾಗಿದೆ.
Youtube Video

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಜಿಲ್ಲಾ ಶಸ್ತ್ರ ಚಿಕಿತ್ಸಿಕ ಡಾ.ಬಿ.ಎಸ್. ಹಿರೇಮಠ ಮಾತನಾಡಿ, ವಿದ್ಯುತ್ ಕಟ್ ಆದರೂ ಆಕ್ಸಿಜನ್ ಪೂರೈಕೆಯಾಗಿದೆ ಎಂದರು. ಇನ್ನು ಮುಂದಾದರೂ ಆರೋಗ್ಯ ಇಲಾಖೆ ಎಚ್ಚೆತ್ತು ಮುಂದೆ ಯಾವುದೇ ಸಮಸ್ಯೆಯಾಗದಂತೆ ರೋಗಿಗಳ ಜೀವ ಉಳಿಸುವ ಕೆಲಸ ಮಾಡಬೇಕಿದೆ.
Published by: Sushma Chakre
First published: April 30, 2021, 2:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories