Vaccine Side-effects - ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳು ಹೆಣ್ಣುಮಕ್ಕಳಿಗೇ ಹೆಚ್ಚಂತೆ

ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳು ಮಹಿಳೆಯರಲ್ಲೇ ತುಸು ಹೆಚ್ಚು ಎಂಬ ಅಂಶ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಈ ಆಸ್ಪತ್ರೆಯಲ್ಲಿ ಲಸಿಕೆ ಪಡೆದ ಶೇ. 75ರಷ್ಟು ಮಹಿಳೆಯರಲ್ಲಿ ಸೈಡ್ ಎಫೆಕ್ಟ್ಸ್ ಕಂಡುಬಂದಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಕೋವಿಡ್ ಸೋಂಕಿನ ಮೇಲೆ ಹಿಡಿತ ಸಾಧಿಸೋಕೆ ಸದ್ಯದ ಪರಿಸ್ಥಿತಿಯಲ್ಲಿ ಲಸಿಕೆಯೊಂದೇ ರಾಮಬಾಣ ಎಂದು ಇಡೀ ಪ್ರಪಂಚವೇ ಒಪ್ಪಿಕೊಂಡಿದೆ. ಆದ್ರೆ ಕೋವಿಡ್ ಲಸಿಕೆ ಮೇಲೆ ಯಾಕೋ ಬಹುತೇಕರಿಗೆ ಇನ್ನೂ ನಂಬಿಕೆಯೇ ಇಲ್ಲ. ಸಾಲದ್ದಕ್ಕೆ ಆಗಾಗ ಲಸಿಕೆ ಪಡೆದ ಕೆಲವರಲ್ಲಿ ಒಂದಷ್ಟು ಅಡ್ಡಪರಿಣಾಮಗಳು ಕೂಡಾ ಕಂಡುಬಂದಿದ್ದು ಇದು ಮತ್ತಷ್ಟು ಜನರನ್ನು ಲಸಿಕೆಯಿಂದ ದೂರ ಸರಿಯುವಂತೆ ಮಾಡುತ್ತಿದೆ. ಇದೆಲ್ಲದರ ನಡುವೆ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆ ಲಸಿಕೆಯ ಅಡ್ಡಪರಿಣಾಮಗಳ ಕುರಿತು ವಿವರವಾಗಿ ಸಂಶೋಧನೆ ಮಾಡಿದೆ.

ಬೇರೆಲ್ಲಾ ಆಸ್ಪತ್ರೆಗಳಂತೆ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲೂ ಅಲ್ಲಿನ ಆರೋಗ್ಯ ಸಿಬ್ಬಂದಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ. ಒಟ್ಟು 218 ಸಿಬ್ಬಂದಿಗೆ ಲಸಿಕೆ ನೀಡಲಾಗಿದ್ದು ಇವರೆಲ್ಲರ ಆರೋಗ್ಯ ತಪಾಸಣೆಯನ್ನು ಮಾಡಲಾಗಿದೆ. ಮೊದಲ ಡೋಸ್ ಪಡೆದ ನಂತರ ಇವರಲ್ಲಿ ಶೇ. 75.5 ಅಂದರೆ 172 ಮಹಿಳೆಯರಲ್ಲಿ ಅಡ್ಡಪರಿಣಾಮಗಳು ಕಂಡುಬಂದವು. ಇದಕ್ಕೆ ಪ್ರತಿಯಾಗಿ ಲಸಿಕೆ ಪಡೆದ ಕೇವಲ 45% ಪುರುಷರಲ್ಲಿ ಅಡ್ಡಪರಿಣಾಮಗಳು ಕಂಡುಬಂದಿವೆ.

ಕೋವಿಶೀಲ್ಡ್ ಲಸಿಕೆಯ ಇಂಜೆಕ್ಷನ್ ಪಡೆದವರಲ್ಲಿ ಅತಿ ಹೆಚ್ಚು ಜನರಿಗೆ ಕೈ ಮತ್ತು ತೋಳಿನಲ್ಲಿ ನೋವು ಕಾಣಿಸಿಕೊಂಡಿದೆ. ಇನ್ನು ಕೆಲವರಲ್ಲಿ ಹೊಟ್ಟೆ ಕೆಟ್ಟಿರುವುದು, ವಾಂತಿ, ಸುಸ್ತು ಮತ್ತು ಜ್ವರ ಕೂಡಾ ಕಂಡು ಬಂದಿದೆ. ಈ ಎಲ್ಲಾ ಅಡ್ಡಪರಿಣಾಮಗಳು ಕ್ರಮೇಣ ಸಂಪೂರ್ಣವಾಗಿ ಗುಣವಾಗಿವೆ ಮತ್ತು ಇವ್ಯಾವೂ ಜೀವಕ್ಕೆ ಹಾನಿ ಮಾಡುವಷ್ಟು ಗಂಭೀರ ಸ್ವರೂಪದ್ದಾಗಿಲ್ಲ ಎಂಬುದು ಇಲ್ಲಿ ಗಮನಿಸ ಬೇಕಾದ ಅಂಶ.

ಇದನ್ನೂ ಓದಿ: Bangalore: ಟೆರೇಸ್‌ ಮೇಲೆ 1,700 ಮರಗಳನ್ನು ಬೆಳೆಸಿದ ಬೆಂಗಳೂರಿನ ಟೆಕ್ಕಿ!; ಬೇಸಿಗೆಯಲ್ಲೂ ಈ ಮನೆ ಕೂಲ್ ಕೂಲ್

ಕೋವಿಡ್ ಲಸಿಕೆಯ ಕುರಿತಾಗಿ ಯಾವುದೇ ವಿಚಾರವಿದ್ದರೂ ಅದನ್ನು ಕೂಲಂಕಷವಾಗಿ ಅಧ್ಯಯನ ಮಾಡುವ ಪರಿಪಾಠ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿದೆ. ಇದು ಹೊಸ ವೈರಸ್, ಹಾಗಾಗಿ ಲಸಿಕೆಯೂ ಕೂಡ ಹೊಸತೆ. ಅಲ್ಲದೇ ಅತ್ಯಂತ ಶೀಘ್ರವಾಗಿ ತಯಾರಾದ ಲಸಿಕೆ ಇದಾಗಿರೋದ್ರಿಂದ ಇದರ ಬಗ್ಗೆ ಬರುವ ಪ್ರತಿಯೊಂದು ಸಣ್ಣ ಮಾಹಿತಿಯೂ ಅತ್ಯಂತ ಮಹತ್ವಪೂರ್ಣದ್ದಾಗಿದೆ.

ಕರ್ನಾಟಕ ರಾಜ್ಯದಲ್ಲಿ ಇದುವರೆಗೆ 35,90,581 ಜನರಿಗೆ ಲಸಿಕೆ ನೀಡಲಾಗಿದೆ. ಇದು ಅಂದುಕೊಂಡದ್ದಕ್ಕಿಂತ ಬಹಳ ಕಡಿಮೆ ಸಂಖ್ಯೆಯಾಗಿದೆ. ವೈದ್ಯಲೋಕದ ಅನೇಕ ಹಿರಿ ಕಿರಿಯರು ಇನ್ನೂ ಲಸಿಕೆ ಪಡೆಯಲು ಆಸಕ್ತಿ ತೋರಿಸಿಲ್ಲ. ಲಸಿಕೆ ಬಂದ ಆರಂಭದ ದಿನಗಳಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ ಸಿ ಎನ್ ಮಂಜುನಾಥ್, ಮಣಿಪಾಲ್ ಆಸ್ಪತ್ರೆ ನಿರ್ದೇಶಕ ಡಾ ಸುದರ್ಶನ್ ಬಲ್ಲಾಳ್, ನಾರಾಯಣ ಹೆಲ್ತ್ ನ ಡಾ ದೇವಿಪ್ರಸಾದ್ ಶೆಟ್ಟಿ ಸೇರಿದಂತೆ ಅನೇಕ ಹಿರಿಯ ವೈದ್ಯರು ಲಸಿಕೆ ಪಡೆದು ಇದು ಸೇಫ್ ಇದೆ ಎನ್ನುವ ಸಂದೇಶವನ್ನು ಜನರಿಗೆ ರವಾನಿಸಿದ್ದರು.

ಇಷ್ಟೆಲ್ಲಾ ಇದ್ದರೂ ಇಂದಿಗೂ ಅನೇಕ ಫ್ರಂಟ್ ಲೈನ್ ವಾರಿಯರ್ಸ್ ಮತ್ತು ಆರೋಗ್ಯ ಸಿಬ್ಬಂದಿ ಲಸಿಕೆ ಪಡೆದೇ ಇಲ್ಲ. ಸಾಮಾನ್ಯ ಜನರಲ್ಲಿ ಲಸಿಕೆಯ ಕುರಿತು ಭರವಸೆ ಹುಟ್ಟಿಸುವ ಕೆಲಸ ಮಾಡಬೇಕಾದ ವರ್ಗವೇ ಈ ಕೆಲಸದಲ್ಲಿ ಹಿಂದುಳಿದಿದೆ. ಈಗಂತೂ ರಾಜ್ಯದಲ್ಲಿ ಆಕ್ಟಿವ್ ಕೋವಿಡ್ ಸಂಖ್ಯೆ 0.6% ನಿಂದ 2.6% ಗೆ ಏರಿಕೆಯಾಗಿದೆ. 4 ತಿಂಗಳ ನಂತರ ಕೋವಿಡ್ ನಿಂದ ಉಂಟಾದ ಸಾವಿನ ಸಂಖ್ಯೆಯೂ 20ರ ಗಡಿ ದಾಟಿ 21 ಕ್ಕೆ ಏರಿಕೆಯಾಗಿದೆ.

ವರದಿ: ಸೌಮ್ಯಾ ಕಳಸ
Published by:Vijayasarthy SN
First published: