news18-kannada Updated:April 11, 2020, 2:59 PM IST
ಸಾಂದರ್ಭಿಕ ಚಿತ್ರ
ಶಹಜಹಾನಪುರ್, ಉ.ಪ್ರ.(ಏ. 11): ಮಹಿಳೆಯೊಬ್ಬರು ರಸ್ತೆ ಮಧ್ಯೆಯೇ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ 10 ಕಿಮೀ ದೂರದ ಆಸ್ಪತ್ರೆಗೆ ಸೈಕಲ್ನಲ್ಲಿ ಹೋಗುವಾಗ ಮಾರ್ಗ ಮಧ್ಯೆಯೇ ಹೆರಿಗೆಯಾಗಿದೆ. ಶಹಜಹಾನಪುರ್ನ ಸಿಕಂದರ್ಪುರ್ ಕ್ರಾಸಿಂಗ್ ಬಳಿ ಮೊನ್ನೆ ಗುರುವಾರ ಈ ಘಟನೆ ನಡೆದಿದೆ ಎಂದು ಇಲ್ಲಿಯ ಪೊಲೀಸರು ಮಾಹಿತಿ ನೀಡಿದ್ದಾರೆ.
“ಏಪ್ರಿಲ್ 9ರಂದು ರಘುನಾಥಪುರ್ ಗ್ರಾಮದ ನಿವಾಸಿಯಾದ ಮಹಿಳೆಯನ್ನು ಆಕೆಯ ಪತಿ ಸೈಕಲ್ನಲ್ಲಿ ಕೂರಿಸಿಕೊಂಡು 10 ಕಿಮೀ ದೂರದಲ್ಲಿರುವ ಮಾದ್ನಾಪುರ್ ಸಾಯುದಾಯಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದರು. ಐದು ಕಿಮೀ ದೂರ ಹೋದ ನಂತರ ಸಿಕಂದರ್ಪುರ್ ಕ್ರಾಸಿಂಗ್ ಬಳಿ ಮಹಿಳೆಯು ಹೆಣ್ಣುಮಗುವಿಗೆ ಜನ್ಮ ನೀಡಿದರು” ಎಂದು ಶಹಜಹಾನ್ಪುರ್ ಗ್ರಾಮೀಣ ಭಾಗದ ಎಸ್ಪಿ ಅಪರ್ಣಾ ಗೌತಮ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೋನಾ ಹಿನ್ನೆಲೆ ಅಮೆರಿಕನ್ ಪ್ರಜೆಗಳನ್ನು ವಾಪಸ್ ಕಳುಹಿಸದ ರಾಷ್ಟ್ರಗಳ ವೀಸಾ ನಿರ್ಬಂಧಕ್ಕೆ ಮುಂದಾದ ಟ್ರಂಪ್
ರಸ್ತೆಯಲ್ಲೇ ಈ ಮಹಿಳೆ ಹೆರಿಗೆಯಾಗಿದ್ದನ್ನು ಕಂಡ ದಾರಿಹೋಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಈ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ಧಾರೆ.
ಮಹಿಳೆಗೆ ಹೆರಿಗೆಯಾದ ಸ್ಥಳಕ್ಕೆ ಧಾವಿಸಿದ ಪೊಲೀಸ್ ಸ್ಪಂದನಾ ವಾಹನದ (ಪಿಆರ್ವಿ) ಸಿಬ್ಬಂದಿ ಮೀಟು ಟೋಮರ್ ಅವರು ಅಲ್ಲೇ ಸಮೀಪದಲ್ಲಿ ಕೆಲಸ ಮಾಡುತ್ತಿದ್ದ ಮತ್ತೋರ್ವ ಮಹಿಳೆಯರ ಸಹಾಯದಿಂದ ಮಾದ್ನಾಪುರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಈಗ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಅಪರ್ಣಾ ಗೌತಮ್ ಹೇಳಿದ್ಧಾರೆ. ತ್ವರಿತವಾಗಿ ಸಹಾಯಕ್ಕೆ ಧಾವಿಸಿದ ಮೀತು ತೋಮರ್ ಅವರಿಗೆ ಪೊಲೀಸ್ ಇಲಾಖೆ ಶ್ಲಾಘನೆ ವ್ಯಕ್ತಪಡಿಸಿದೆ.
First published:
April 11, 2020, 2:47 PM IST