HOME » NEWS » Coronavirus-latest-news » WHY DONT YOU BUY 100 PERCENTAGE OF COVID 19 VACCINES SUPREME COURTS 10 QUESTIONS TO CENTRE MAK

Supreme Court: ಶೇ.100 ರಷ್ಟು ಲಸಿಕೆಯನ್ನು ನೀವೆ ಏಕೆ ಖರೀದಿಸಬಾರದು?; ಮೋದಿ ಸರ್ಕಾರದ ಎದುರು 10 ಪ್ರಶ್ನೆಗಳನ್ನಿಟ್ಟ ಸುಪ್ರೀಂ

18-44 ವಯಸ್ಸಿನವರಿಗೆ ಯಾವಾಗ ಲಸಿಕೆ ನೀಡಲಾಗುತ್ತದೆ? ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು. ಈ ಕುರಿತು ಅಫಿಡವಿಟ್ ಸಲ್ಲಿಸುತ್ತೀರಾ ಎಂದು ಪ್ರಶ್ನಿಸಿರುವ ಕೋರ್ಟ್, ಅನಕ್ಷರಸ್ಥ ಅಥವಾ ಇಂಟರ್ನೆಟ್ ಲಭ್ಯತೆ ಇಲ್ಲದ ವ್ಯಕ್ತಿಗಳಿಗೆ ಲಸಿಕೆ ನೋಂದಣಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಗೆ ಶಕ್ತಗೊಳಿಸುತ್ತವೆ ಎಂದಿದೆ.

news18-kannada
Updated:May 1, 2021, 8:34 PM IST
Supreme Court: ಶೇ.100 ರಷ್ಟು ಲಸಿಕೆಯನ್ನು ನೀವೆ ಏಕೆ ಖರೀದಿಸಬಾರದು?; ಮೋದಿ ಸರ್ಕಾರದ ಎದುರು 10 ಪ್ರಶ್ನೆಗಳನ್ನಿಟ್ಟ ಸುಪ್ರೀಂ
ಸರ್ವೋಚ್ಚ ನ್ಯಾಯಾಲಯ.
  • Share this:
ನವ ದೆಹಲಿ (ಮೇ 01); ಭಾರತದಲ್ಲಿ ಕೊರೋನಾ ಕೇಕೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ದಿನವೊಂದಕ್ಕೆ 4 ಲಕ್ಷ ಜನ ಸೋಂಕಿಗೆ ಒಳಗಾದರೆ, ಸಾವಿರಾರು ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಕೊರೋನಾವನ್ನು ನಿಯಂತ್ರಿಸುವ ಸಲುವಾಗಿ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಮೇ.01 ರಿಂದ 18 ವರ್ಷದಿಂದ 45 ವರ್ಷದವರಿಗೆ ಕೊರೋನಾ ಲಸಿಕೆ ಕಡ್ಡಾಯ ಎಂದು ಘೋಷಿಸಿದ್ದರು. ಈ ಪ್ರಕಾರ ಇಂದಿನಿಂದ ದೇಶದೆಲ್ಲೆಡೆ ಕೊರೋನಾ ಲಸಿಕೆ ಕಾರ್ಯಕ್ರಮ ಆರಂಭವಾಗಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಈವರೆಗೆ ರಾಜ್ಯಗಳಿಗೆ ಅಗತ್ಯವಾದ ಲಸಿಕೆ ಪೂರೈಕೆ ಮಾಡದ ಕಾರಣ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿಲ್ಲ. ಹಲವೆಡೆ ಆರಂಭವೇ ಆಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಎದುರು 10 ಪ್ರಮುಖ ಪ್ರಶ್ನೆಗಳನ್ನಿಟ್ಟಿರುವ ಸುಪ್ರೀಂ ಕೋರ್ಟ್​, "ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಅರಿತು ಕೇಂದ್ರವೇ ಏಕೆ ಎಲ್ಲಾ ಲಸಿಕೆ ಖರೀದಿಸಬಾರದು? ಹಾಗಾದಾಗ ಅದು ಎಲ್ಲಾ ರಾಜ್ಯಗಳಿಗೆ ಸಮಾನ ಪ್ರಮಾಣದಲ್ಲಿ ಹಂಚಬಹುದಲ್ಲವೇ?" ಎಂದು ಹೇಳಿದೆ.

ಕೋವಿಡ್ ಲಸಿಕೆಯ ಉತ್ಪಾದನೆ, ದರನಿಗಧಿ ಮತ್ತು ವಿತರಣೆಯಲ್ಲಿ ಉಂಟಾಗಿರುವ ಸಮಸ್ಯೆಯ ಕುರಿತು ಸ್ವಯಂ ವಿಚಾರಣೆಯನ್ನು ಕೈಗತ್ತಿಕೊಂಡಿರುವ ಜಸ್ಟೀಸ್ ಚಂದ್ರಚೂಡ್‌ರವರ ನೇತೃತ್ವದ ಪೀಠ ಹಲವು ವಿಚಾರದಲ್ಲಿ ಕೇಂದ್ರ ಸರ್ಕಾರ ಎಡವುತ್ತಿರುವುದನ್ನು ಬೊಟ್ಟು ಮಾಡಿ ತೋರಿಸಿದೆ.

ಲಸಿಕೆಯ ದರನಿಗಧಿ ಮತ್ತು ವಿತರಣೆಯ ನಿರ್ಧಾರವನ್ನು ತಯಾರಿಕ ಕಂಪನಿಗಳಿಗೆ ಬಿಡಬಾರದು. ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದ ಈ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಹೊತ್ತುಕೊಳ್ಳಬೇಕು ಮತ್ತು ತನ್ನ ಅಧಿಕಾರ ಬಳಸಿ ಕಾರ್ಯಗತಗೊಳಿಸಬೇಕು ಎಂದು ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರವರಿಗೆ ಜಸ್ಟೀಸ್ ಚಂದ್ರಚೂಡ್‌ ತಿಳಿಸಿದ್ದಾರೆ.

ಅಸ್ಟ್ರಜನಕಾ ಕಂಪನಿಯು ಅಮೆರಿಕದ ನಾಗರಿಕರಿಗೆ ಅತಿ ಕಡಿಮೆ ಬೆಲೆಗೆ ಲಸಿಕೆ ನೀಡುತ್ತಿದೆ. ಆದರೆ ನಾವು ಮಾತ್ರ ಏಕೆ ಹೆಚ್ಚು ಪಾವತಿ ಮಾಡಬೇಕು? ತಯಾರಕರು ಕೇಂದ್ರ ಸರ್ಕಾರಕ್ಕೆ ಅಂದರೆ ನಿಮಗೆ 150ರೂ ಡೋಸ್ ನೀಡುತ್ತಾರೆ. ಆದರೆ ರಾಜ್ಯಗಳು 300 ಅಥವಾ 400 ರೂ ಭರಿಸಬೇಕು. ದೇಶವೇಕೆ ಇಷ್ಟು ಹಣ ಪಾವತಿ ಮಾಡಬೇಕು ಎಂದು ಜಸ್ಟೀಸ್ ರವೀಂದ್ರ ಭಟ್ ಪ್ರಶ್ನಿಸಿದ್ದಾರೆ.

"ಲಸಿಕೆಯ ಬೆಲೆ ಸಮಸ್ಯೆಗಳು ತೀರಾ ಗಂಭೀರವಾದ ವಿಷಯವಾಗಿದೆ. ಈ ದೇಶದ ಬಹುಸಂಖ್ಯಾತರು ಬಡವರು ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಾಗಿವೆ. ನಮ್ಮಲ್ಲಿ ಖಾಸಗಿ ವಲಯದ ಮಾದರಿ ಸಾಧ್ಯವಿಲ್ಲ. ಹಾಗಾಗಿ ನಾವು ರಾಷ್ಟ್ರೀಯ ರೋಗನಿರೋಧಕ ಮಾದರಿಯನ್ನು ಅನುಸರಿಸಬೇಕು" ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.

ರೆಮ್ಡೆಸಿವಿರ್, ಫಾಸಿಪುರಾವಿರ್ ಮತ್ತು ಟೊಸಿಲಿಜುಮಾಬ್ ಮುಂತಾದ ಔಷಧಗಳ ವಿಷಯದಲ್ಲಿ ಪೇಟೆಂಟ್ ಕಾಯ್ದೆಯ ಸೆಕ್ಷನ್ 100 ರ ಅಡಿಯಲ್ಲಿ ಸರ್ಕಾರಿ ಉದ್ದೇಶಗಳಿಗಾಗಿ ಪೇಟೆಂಟ್ ಬಳಸಲು ಉನ್ನತ ನ್ಯಾಯಾಲಯ ಏಕೆ ಅಧಿಕಾರ ನೀಡಬಾರದು? ಅಥವಾ ಪೇಟೆಂಟ್ ಕಾಯ್ದೆಯ ಸೆಕ್ಷನ್ 92 ರ ಅಡಿಯಲ್ಲಿ ಕಡ್ಡಾಯ ಪರವಾನಗಿಗಳನ್ನು ಏಕೆ ನೀಡಬಾರದು? ವಿಶೇಷವಾಗಿ ಅಂತಹ ನಿರ್ದೇಶನವು ಕಾನೂನು ಕ್ರಮಗಳ ಭಯವಿಲ್ಲದೆ ಈ ಔ ಷಧಿಗಳನ್ನು ತಯಾರಿಸಲು ಜೆನೆರಿಕ್ಸ್‌ಗೆ ಅನುವು ಮಾಡಿಕೊಡುತ್ತದೆ ಎಂದು ಸುಪ್ರೀಂ ತಿಳಿಸಿದೆ.

ಕೇಂದ್ರ ಸರ್ಕಾರವು ಖರೀದಿಸುವ ಶೇ.50 ರಷ್ಟು ಲಸಿಕೆಗಳನ್ನು ರಾಜ್ಯಗಳಿಗೆ ಯಾವಾಗ ನೀಡುತ್ತೀರಿ? ಅಲ್ಲದೇ ಕೇಂದ್ರ ಮತ್ತು ರಾಜ್ಯಗಳಿಗೆ ಲಸಿಕೆ ಬೆಲೆಯಲ್ಲಿನ ವ್ಯತ್ಯಾಸಕ್ಕೆ ತರ್ಕವೇನು? ಎಂದು ಕೋರ್ಟ್ ಕೇಂದ್ರವನ್ನು ಪ್ರಶ್ನಿಸಿದೆ.ಇದನ್ನೂ ಓದಿ: Siddaramaiah: ವೀರಾವೇಶದಿಂದ ಮೇ.1 ರಿಂದ ಲಸಿಕೆ ಘೋಷಿಸಿದ ಮಾತಿನ ಶೂರ ಮೋದಿ ಈಗ ಎಲ್ಲಿದ್ದಾರೆ?; ಸಿದ್ದರಾಮಯ್ಯ ವ್ಯಂಗ್ಯ

ಮುಂದಿನ ಆರು ತಿಂಗಳುಗಳವರೆಗೆ ಲಸಿಕೆ ದಾಸ್ತಾನುಗಳ ಪ್ರಸ್ತುತ ಮತ್ತು ಯೋಜಿತ ಲಭ್ಯತೆಯನ್ನು ಕೇಂದ್ರ ಮತ್ತು ರಾಜ್ಯಗಳು ಸೂಚಿಸಬಹುದೇ? ರಾಜ್ಯಗಳಿಗೆ ಸಮಾನವಾಗಿ ಲಸಿಕೆ ಸಿಗುತ್ತದೆಯೇ? ಏಕೆಂದರೆ ಕೆಲ ರಾಜ್ಯಗಳು ಒಮ್ಮೆಗೆ ಹೆಚ್ಚು ಆರ್ಡರ್ ಮಾಡಿದರೆ ಉಳಿದ ರಾಜ್ಯಗಳು ಕಾಯುತ್ತಾ ಕೂರಬೇಕೆ? ಇದನ್ನು ಕೇಂದ್ರ ಸರ್ಕಾರ ಮೇಲ್ವಿಚಾರಣೆ ನಡೆಸುತ್ತದೆಯೇ? ಈಗಾಗಲೇ 45 ವ‍ರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊರತೆಯಾಗುತ್ತಿದೆ ಎಂಬ ಪ್ರಶ್ನೆಗಳಿಗೆ ಉತ್ತರವೇನು ಎಂದು ಪ್ರಶ್ನಿಸಿದೆ.
Youtube Video

18-44 ವಯಸ್ಸಿನವರಿಗೆ ಯಾವಾಗ ಲಸಿಕೆ ನೀಡಲಾಗುತ್ತದೆ? ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು. ಈ ಕುರಿತು ಅಫಿಡವಿಟ್ ಸಲ್ಲಿಸುತ್ತೀರಾ ಎಂದು ಪ್ರಶ್ನಿಸಿರುವ ಕೋರ್ಟ್, ಅನಕ್ಷರಸ್ಥ ಅಥವಾ ಇಂಟರ್ನೆಟ್ ಲಭ್ಯತೆ ಇಲ್ಲದ ವ್ಯಕ್ತಿಗಳಿಗೆ ಲಸಿಕೆ ನೋಂದಣಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಗೆ ಶಕ್ತಗೊಳಿಸುತ್ತವೆ ಎಂದಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 10 ರಂದು ನಡೆಸುತ್ತೇವೆ ಎಂದು ಕೋರ್ಟ್ ತಿಳಿಸಿದೆ.
Published by: MAshok Kumar
First published: May 1, 2021, 8:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories