ಕೊರೊನಾ ರೂಪಾಂತರಿ ಸೋಂಕುಗಳಿಗೆ ನಾಮಕರಣ: ಭಾರತದಲ್ಲಿನ ವೈರಸ್​​ಗಳಿಗೆ WHO ಕೊಟ್ಟ ಹೆಸರೇನು?

ಇನ್ಮುಂದೆ ಭಾರತದ ಸೋಂಕು, ಬ್ರಿಟನ್​ ಸೋಂಕು, ಆಫ್ರಿಕಾ ಸೋಂಕು ಎಂದು ದೇಶಗಳನ್ನು ಉಲ್ಲೇಖಿಸಿ ರೂಪಾಂತರಿ ಸೋಂಕನ್ನು ಗುರುತಿಸುವಂತಿಲ್ಲ. ವೈದ್ಯಕೀಯ ಭಾಷೆಯಲ್ಲಿ ರೂಪಾಂತರಿ ಸೋಂಕನ್ನು ಹೆಸರಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್​​​ ಭಾರತದಲ್ಲಿ 2ನೇ ಅಲೆ ಸೃಷ್ಟಿಸಿದೆ. ಸಾಲದಕ್ಕೆ ಕಳೆದ ವರ್ಷ ಕಾಣಿಸಿಕೊಂಡ ವೈರಸ್​​ ದಿನೇ ದಿನೇ ಹಲವು ದೇಶಗಳಲ್ಲಿ ಹಲವು ಮಾದರಿಗಳಲ್ಲಿ ರೂಪಾಂತರಗೊಳ್ಳುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತಿಯೊಂದು ರೂಪಾಂತರಿ ಸೋಂಕಿಗೂ ಪ್ರತ್ಯೇಕ ಹೆಸರನ್ನು ಕೊಟ್ಟಿದ್ದಾರೆ. ಗ್ರೀಕ್​ ಅಕ್ಷರಗಳ ಮೂಲಕ ರೂಪಾಂತರಿ ಸೋಂಕಿಗೆ ನಾಮಕರಣ ಮಾಡಲಾಗಿದೆ. ವಿಶ್ವಾದ್ಯಂತ ಇನ್ಮುಂದೆ ಇದನ್ನೇ ಬಳಸುವಂತೆ ಸೂಚಿಸಲಾಗಿದೆ.

ಭಾರತದಲ್ಲಿ ರೂಪಾಂತರಗೊಂಡ 2 ಸೋಂಕಿಗೆ ಡೆಲ್ಟಾ ಹಾಗೂ ಕಪ್ಪಾ ಎಂದು ಹೆಸರಿಡಲಾಗಿದೆ. ಇನ್ಮುಂದೆ ಭಾರತದ ಸೋಂಕು, ಬ್ರಿಟನ್​ ಸೋಂಕು, ಆಫ್ರಿಕಾ ಸೋಂಕು ಎಂದು ದೇಶಗಳನ್ನು ಉಲ್ಲೇಖಿಸಿ ರೂಪಾಂತರಿ ಸೋಂಕನ್ನು ಗುರುತಿಸುವಂತಿಲ್ಲ. ವೈದ್ಯಕೀಯ ಭಾಷೆಯಲ್ಲಿ ರೂಪಾಂತರಿ ಸೋಂಕನ್ನು ಹೆಸರಿಸಬೇಕು. ಭಾರತದಲ್ಲಿ ಮೊದಲು ಕಾಣಿಸಿಕೊಂಡ B.1.617.1 ಸೋಂಕಿಗೆ ಕಪ್ಪಾ ಎಂದು, ನಂತರ ಕಾಣಿಸಿಕೊಂಡ B1.617.2 ವೈರಸನ್ನು ಡೆಲ್ಟಾ ಎಂದು ನಾಮಕರಣ ಮಾಡಲಾಗಿದೆ. ಎರಡೂ ಮಾದರಿಯ ವೈರಸ್​​ 2020ರ ಅಕ್ಟೋಬರ್​ನಲ್ಲಿ ಭಾರತದಲ್ಲಿ ಪತ್ತೆಯಾಗಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್​​-19 ಟೆಕ್ನಿಕಲ್​​ ಮುಖ್ಯಸ್ಥರಾದ ಡಾ.ಮಾರಿಯಾ ವೆನ್​ ಕೆರಕೋವ ಹೆಸರುಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ದೇಶಗಳ ಹೆಸರನ್ನು ಬಳಸದೆ ಇನ್ಮುಂದೆ ವೈದ್ಯಕೀಯ ಹೆಸರುಗಳ ಮೂಲಕವೇ ರೂಪಾಂತರಿ ವೈರಸನ್ನು ಗುರುತಿಸಲಾಗುವುದು. ಸೋಂಕು ಪತ್ತೆ, ಚಿಕಿತ್ಸೆ, ಅಧ್ಯಯನ ಎಲ್ಲವೂ ಇನ್ಮುಂದೆ ಗ್ರೀಕ್​​​ ಅಕ್ಷರಗಳುಳ್ಳ ಹೆಸರುಗಳ ಮೂಲಕವೇ ನಡೆಯಲಿದೆ ಎಂದು ಸ್ಪಷ್ಟನೆ ನೀಡಿದರು. ಬೇರೆ ದೇಶಗಳಲ್ಲಿ ರೂಪಾಂತರಗೊಂಡಿರುವ ವೈರಸ್​ಗೆ ಆಲ್ಫಾ, ಬೀಟಾ, ಗಮಾ ಸೇರಿದಂತೆ ಹಲವು ಗ್ರೀಕ್​ ಅಕ್ಷರಗಳನ್ನು ನೀಡಲಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: