ಆಕ್ಸಿಜನ್ ಕಾನ್ಸಂಟರೇಟರ್ (Oxygen Concentrator)...ಪ್ರಸ್ತುತ ಕೊರೋನಾ ಸೋಂಕಿಗೆ ತುತ್ತಾಗಿರುವ ರೋಗಿಗಳಿಗೆ ತುರ್ತಾಗಿ ಅಗತ್ಯವಿರುವ ಒಂದು ಸಾಧನ. ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಲೇ ಇದೆ. ಹೀಗಾಗಿ ಆಸ್ಪತ್ರೆಗಳ ಮೇಲೆ ಒತ್ತಡವೂ ಹೆಚ್ಚಾಗುತ್ತಲೇ ಇದೆ. ಲಕ್ಷಾಂತರ ರೋಗಿಗಳಿಗೆ ಏಕ ಕಾಲದಲ್ಲಿ ಆಕ್ಸಿಜನ್ ನೀಡುವುದು ಸಾಧಾರಣ ಕೆಲಸವಲ್ಲ. ಹೀಗಾಗಿ ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಆಕ್ಸಿಜನ್ ಕಾನ್ಸಂಟೇಟರ್ಗಳು ಮಹತ್ವದ ಪಾತ್ರ ನಿರ್ವಹಿಸುತ್ತದೆ. ಏಕೆಂದರೆ ಸೋಂಕು ದೃಢಪಟ್ಟ ತಕ್ಷಣ ರೋಗಿ ಆಸ್ಪತ್ರೆಗೆ ಧಾವಿಸಬೇಕಿಲ್ಲ. ಆರಂಭದ 5 ದಿನಗಳ ಜಾಲ ಮನೆಯಲ್ಲೇ ಆಕ್ಸಿಜನ್ ಕಾನ್ಸಂಟರೇಟರ್ ಮೂಲಕ ರೋಗಿಗಳಿಗೆ ಉಸಿರಾಟದ ವ್ಯವಸ್ಥೆ ಮಾಡಬಹುದು.
ಈ ಆಕ್ಸಿಜನ್ ಕಾನ್ಸಂಟರೇಟರ್ಗಳು ಸುತ್ತಮುತ್ತಲಿನ ಗಾಳಿಯಲ್ಲಿರುವ ಆಮ್ಲಜನಕ ಮತ್ತು ಸಾರಜನಕವನ್ನು ಸಂಗ್ರಹಿಸುತ್ತದೆ ಮತ್ತು ಮೂಗಿನ ತೂರುನಳಿಗೆ ಅಥವಾ ಆಕ್ಸಿಜನ್ ಮಾಸ್ಕ್‌ಗಳ ಮೂಲಕ ರೋಗಿಗೆ ಒದಗಿಸುವ ಗಾಳಿಯನ್ನು ಶೋಧಿಸುತ್ತದೆ. ಆಮ್ಲಜನಕ ಸಾಂದ್ರಕಗಳು ಶೇ.95 ಶುದ್ಧ ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ.
ಅವುಗಳು ಇನ್ ಬಿಲ್ಟ್ ಆಮ್ಲಜನಕ ಸಂವೇದಕಗಳನ್ನು ಹೊಂದಿರುವುದರಿಂದ, ಸಾಂದ್ರತೆಯಲ್ಲಿ ಶುದ್ಧತೆಯ ಮಟ್ಟ ಕಡಿಮೆಯಾದರೆ ಅದನ್ನು ಸ್ಪಷ್ಟವಾಗಿ ಕಾಣಬಹುದು. ಹೀಗಾಗಿಯೇ ಕೋವಿಡ್ ರೋಗಿಗಳ ಅತ್ಯಾವಶ್ಯಕ ವಸ್ತುಗಳ ಪಟ್ಟಿಯಲ್ಲಿ ಆಕ್ಸಿಜನ್ ಕಾನ್ಸಂಟರೇಟರ್ಗಳು ಬಹು ಮುಖ್ಯವಾದ ಸ್ಥಾನವನ್ನು ಪಡೆದಿದೆ.
ಆದರೆ, ವಿಪರ್ಯಾಸವೆಂದರೆ ಕರ್ನಾಟಕದಲ್ಲಿ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಗೆ ಆಕ್ಸಿಜನ್ ಇಲ್ಲ. ಮನೆಯಲ್ಲೂ ಅವರಿಗೆ ಆಕ್ಸಿಜನ್ ಕಾನ್ಸಂಟರೇಟರ್ಗಳನ್ನು ನೀಡಲು ರಾಜ್ಯ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ.
ಆಕ್ಸಿಜನ್ ಕಾನ್ಸಂಟೇಟರ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ, ದಿನಗೂಲಿ ನೌಕರರು, ಕಾರ್ಮಿಕರು, ಬಡವರು ಮತ್ತು ಸಮಾಜದ ಕೆಳಸ್ಥರದಲ್ಲಿರುವವರಿಗೆ ಅದನ್ನು ಕೊಳ್ಳುವುದು ಸುಲಭದ ಕೆಲಸವಲ್ಲ. ಹೀಗಾಗಿ ಅವರಿಗೆ ಆಕ್ಸಿಜನ್ ಕಾನ್ಸಂಟೇಟರ್ ಸೌಲಭ್ಯಗಳನ್ನು ನೀಡುವುದು ಸರ್ಕಾರದ ಕೆಲಸ ಮಾತ್ರವಲ್ಲ ಜವಾಬ್ದಾರಿಯೂ ಕೂಡ ಹೌದು.
ಆದರೆ, ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿರುವ ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿ ಜಿಲ್ಲೆಗೆ ಕೇವಲ 25 ಆಕ್ಸಿಜನ್ ಕಾನ್ಸಂಟರೇಟರ್ಗಳನ್ನು ಮಾತ್ರ ನೀಡಲು ಸಾಧ್ಯ ಎಂದು ಹೇಳಿದ್ದಾರೆ. ಅಸಲಿಗೆ ಪ್ರತಿ ತಾಲೂಕು ಮತ್ತು ಜಿಲ್ಲೆಗಳಲ್ಲಿ ಸಾವಿರಾರು ಕೊರೋನಾ ಪ್ರಕರಣಗಳು ದಾಖಲಾಗುತ್ತಿರುವಾಗ ಕೇವಲ 25 ಆಕ್ಸಿಜನ್ ಕಾನ್ಸಂಟರೇಟರ್ಗಳು ಎಲ್ಲಿ ಸಾಲುತ್ತವೆ ಎಂಬುದು ಪ್ರಶ್ನೆ.
ಎಎಪಿಯಿಂದ ಸಾಧ್ಯವಾಗುವುದು ರಾಜ್ಯ ಸರ್ಕಾರದಿಂದ ಏಕಿಲ್ಲ?;
ಭಾರತದಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಮುಂಬೈ ನಂತರ ದೆಹಲಿ ಅತಿಹೆಚ್ಚು ಕೊರೋನಾ ರೋಗಿಗಳನ್ನು ಹೊಂದಿದ್ದ ರಾಜ್ಯವಾಗಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇದೆ ಎಂದು ಆಸ್ಪತ್ರೆಗಳೇ ಹೈಕೋರ್ಟ್ ಮೊರೆ ಹೋಗಿದ್ದವು. ಅನೇಕರು ಆಕ್ಸಿಜನ್ ಇಲ್ಲದೆ ಮೃತಪಟ್ಟ ಸುದ್ದಿಗಳು ಸದ್ದು ಮಾಡುತ್ತಿತ್ತು. ಆದರೆ, ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ಸುಮ್ಮನೆ ಕೈಕಟ್ಟಿ ಕುಳಿತಿರಿಲ್ಲ.
ಬದಲಾಗಿ ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರ್ಕಾರ ದೆಹಲಿಯ 7 ಜಿಲ್ಲೆಗಳಲ್ಲಿ 200 ಕಾನ್ಸಂಟರೇಟರ್ (Oxygen Concentratoರ) ಬ್ಯಾಂಕ್ ಗಳನ್ನು ಸ್ಥಾಪಿಸಿದೆ. ಹೀಗಾಗಿ ದೆಹಲಿಯಲ್ಲಿ ಇಂದು ಆಕ್ಸಿಜನ್ ಇಲ್ಲದೆ ಯಾವೊಬ್ಬ ರೋಗಿಯೂ ಸತ್ತ ಉದಾಹರಣೆ ಇಲ್ಲ ಎಂಬಂತಾಗಿದೆ.
ಇನ್ನೂ ಕರ್ನಾಟಕದಲ್ಲೂ ಸಹ ಎಎಪಿ ಪಕ್ಷ ಗಮನಾರ್ಹ ಕೆಲಸ ಮಾಡುತ್ತಿದೆ. ಎಲ್ಲರೂ ಬಡವರಿಗೆ ಕೊರೋನಾ ಕಿಟ್ ಹೆಸರಿನಲ್ಲಿ ಔಷಧಗಳನ್ನು ನೀಡುತ್ತಿದ್ದರೆ, ಎಎಪಿ ಒಂದು ಹೆಜ್ಜೆ ಮುಂದಿಟ್ಟು ಬಡವರಿಗೆ ಆಕ್ಸಿಜನ್ ಕಾನ್ಸಂಟರೇಟರ್ ನೀಡಲು ಮುಂದಾಗಿದೆ. ಬೆಂಗಳೂರಿನಲ್ಲೇ 50 ಕ್ಕೂ ಹೆಚ್ಚು ಜನರಿಗೆ ನೀಡಲಾಗಿದೆ. ಅಲ್ಲದೆ, ಇತ್ತೀಚೆಗೆ ಚಾಮರಾಜನಗರಕ್ಕೂ ತೆರಳಿ 35 ವರ್ಷದ ಮಹೇಂದ್ರ ಯುವಕನಿಗೆ ಎಎಪಿ ನಾಯಕ ಮೋಹನ್ ದಾಸರಿ ಆಕ್ಸಿಜನ್ ಕಾನ್ಸಂಟರೇಟರ್ ನೀಡಿ ಜೀವ ಉಳಿಸಿದ್ದು ಸುದ್ದಿಯಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ