HD Kumaraswamy: ಕೋವಿಡ್​ನಿಂದ ಮೃತಪಟ್ಟ ಆಶಾ ಕಾರ್ಯಕರ್ತೆಯರ ಪರಿಹಾರ ಹಣ, ಗೌರವಧನ ಎಲ್ಲಿ? ಕುಮಾರಸ್ವಾಮಿ ಪ್ರಶ್ನೆ

ಕೋವಿಡ್ ನಿರ್ವಹಣೆಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ತಕ್ಷಣವೇ ರಾಜ್ಯ ಸರ್ಕಾರ ಬಾಕಿ ಇರುವ ಗೌರವಧನವನ್ನು ಬಿಡುಗಡೆ ಮಾಡಬೇಕು ಎಂದು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಹೆಚ್​.ಡಿ ಕುಮಾರಸ್ವಾಮಿ.

ಹೆಚ್​.ಡಿ ಕುಮಾರಸ್ವಾಮಿ.

 • Share this:
  ಬೆಂಗಳೂರು (ಮೇ 23); ರಾಜ್ಯ ಸರ್ಕಾರ ಈ ಹಿಂದೆ ಕೊರೋನಾ ವಾರಿಯರ್ಸ್​ಗಳು ಕೆಲಸದ ವೇಳೆ ಮೃತಪಟ್ಟರೆ ಅವರಿಗೆ ಪರಿಹಾರ ನೀಡುತ್ತದೆ ಎಂದು ಘೋಷಿಸಿತ್ತು. ಅಲ್ಲದೆ, ಅಧಿಕೃತವಾಗಿ ಆಶಾ ಕಾರ್ಯಕರ್ತೆಯರೂ ಸಹ ಕೊರೋನಾ ವಾರಿಯರ್ಸ್​ ಎಂದು ಅಧಿಸೂಚನೆ ಹೊರಡಿಸಿತ್ತು. ಈ ನಡುವೆ ರಾಜ್ಯದಲ್ಲಿ ಕೊರೋನಾ ಕಾರ್ಯದ ವೇಳೆ ಸುಮಾರು 16 ಜನ ಆಶಾ ಕಾರ್ಯಕರ್ತೆಯರು ಮೃತಪಟ್ಟಿದ್ದಾರೆ. ಆದರೆ, ಸರ್ಕಾರ ಓರ್ವ ಮಹಿಳೆಗೆ ಮಾತ್ರ ಪರಿಹಾರ ನೀಡಿದೆಯೇ ವಿನಃ ಉಳಿದವರಿಗೆ ಈವರೆಗೆ ಪರಿಹಾರ ನೀಡಿಲ್ಲ. ಅಲ್ಲದೆ, ಬಾಕಿ ಇರುವ ಗೌರವಧನವನ್ನೂ ಬಿಡುಗಡೆ ಮಾಡಿಲ್ಲ. ಪರಿಣಾಮ ಲಾಕ್​ಡೌನ್ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ಸಾಕಷ್ಟು ಸಂಕಷ್ಟವನ್ನು ಎದುರಿಸುವಂತಾಗಿದೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಇಂದು ಈ ಬಗ್ಗೆ ರಾಜ್ಯ ಸರ್ಕಾರದ ನಡೆಯನ್ನು ಟ್ವೀಟ್​ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.  ಆಶಾ ಕಾರ್ಯಕರ್ತೆಯರ ಇಂದಿನ ಪರಿಸ್ಥಿತಿ ಬಗ್ಗೆ ಸರಣಿ ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಕುಮಾರಸ್ವಾಮಿ, "ಕೊರೋನಾ ವಾರಿಯರ್ಸ್ ಎಂದು ಹಣೆಪಟ್ಟಿ ಹಚ್ಚಿದ ಸರ್ಕಾರ ಒಬ್ಬ ಆಶಾ ಕಾರ್ಯಕರ್ತೆಗೆ ಮಾತ್ರ 50 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಉಳಿದ 15 ಮಂದಿಗೆ ಪರಿಹಾರ ಕೊಟ್ಟಿಲ್ಲ. ಸರ್ಕಾರದ ಇಂತಹ ಬೇಜವಾಬ್ದಾರಿಗಳಿಂದ ಬೇಸತ್ತು ಆಶಾ ಕಾರ್ಯಕರ್ತೆಯರು ದೂರ ಉಳಿದರೆ ಕೋವಿಡ್ 19 ನಿಯಂತ್ರಣ ಕೈ ಮೀರುತ್ತದೆ. ಸರ್ಕಾರಕ್ಕೆ ಇದು ಎಚ್ಚರಿಕೆಯ ಗಂಟೆ ಕೂಡ" ಎಂದು ಎಚ್ಚರಿಕೆ ನೀಡಿದ್ದಾರೆ.

  ಮತ್ತೊಂದು ಟ್ವೀಟ್​ನಲ್ಲಿ, "ಕೋವಿಡ್ ನಿರ್ವಹಣೆಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ತಕ್ಷಣವೇ ರಾಜ್ಯ ಸರ್ಕಾರ ಬಾಕಿ ಇರುವ ಗೌರವಧನವನ್ನು ಬಿಡುಗಡೆ ಮಾಡಬೇಕು.  3 ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಇಲ್ಲ. ಸಂಬಳವನ್ನೆ ನಂಬಿರುವ ಅವರ ಬದುಕು ದುಸ್ತರವಾಗಿದೆ. ಕೋವಿಡ್ ಮೊದಲ ಅಲೆಯಲ್ಲಿ ಜೀವಪಣಕ್ಕಿಟ್ಟು ದುಡಿದ ಆಶಾ ಕಾರ್ಯಕರ್ತೆಯರಿಗೆ ಗೌರವ ಧನದ ಜೊತೆಗೆ ತಲಾ ₹3 ಸಾವಿರ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದ್ದ ಸರ್ಕಾರ ಶೇಕಡಾ 50ರಷ್ಟು ಮಂದಿಗೆ ಕೊಟ್ಟು ಉಳಿದವರಿಗೆ ವಂಚಿಸಿದೆ.

  ಇದನ್ನೂ ಓದಿ: Sonu Sood: ಮಿಲಿಟರಿ ಕೊರೋನಾ ಕೇಂದ್ರಕ್ಕೆ ನಟ ಸೋನು ಸೂದ್​​ ಸಹಾಯ ಕೋರಿದ ಕಮಾಂಡರ್; ಸೇನಾಧಿಕಾರಿಗಳು ತರಾಟೆ

  ಕೋವಿಡ್ 19  ನಿಯಂತ್ರಣಕ್ಕಾಗಿ ಶ್ರಮಿಸಿದ 16 ಮಂದಿ ಆಶಾ ಕಾರ್ಯಕರ್ತೆಯರು ಈ ವರೆಗೆ ಸಾವನ್ನಪ್ಪಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಕೊರೋನಾ ವೈರಸ್‌ ಸೋಂಕಿತರಾಗಿದ್ದಾರೆ. ಮಾಸಿಕ ಗೌರವಧನ ಕೊಡುವಲ್ಲಿ ಸೋತಿರುವ ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ.

  ಕೊರೋನಾ ವಾರಿಯರ್ಸ್ ಎಂದು ಬಾಯಿಮಾತಿನಲ್ಲಿ ಹೇಳಿದ ಸರ್ಕಾರ ಪ್ರತಿ ತಿಂಗಳು ಆಶಾ ಕಾರ್ಯಕರ್ತೆಯರಿಗೆ ಸಕಾಲಕ್ಕೆ ಗೌರವಧನ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ದುಡಿದವರಿಗೆ ಗೌರವಧನ ಕೊಡಲು ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರ 1250 ಕೋಟಿ ರೂಗಳ ಪ್ಯಾಕೇಜನ್ನು ಅನುಷ್ಠಾನಗೊಳಿಸುತ್ತದೆ ಎಂಬುದು ಭ್ರಮೆ ಅಲ್ಲದೆ ಮತ್ತೇನು?" ಎಂದು ಪ್ರಶ್ನೆ ಮಾಡಿದ್ದಾರೆ.  ಇದೇ ಸಂದರ್ಭದಲ್ಲಿ ಬ್ಲಾಕ್​ ಫಂಗಸ್​ ಸೋಂಕಿನ ಸಾಂಕ್ರಾಮಿಕದ ಬಗ್ಗೆಯೂ ಉಲ್ಲೇಖಿಸಿರುವ ಕುಮಾರಸ್ವಾಮಿ, "ಕಪ್ಪು ಶಿಲೀಂಧ್ರದ ಚಿಕಿತ್ಸೆಗೆ ಅಗತ್ಯವಿರುವ ಔಷಧ ಪೂರೈಕೆಯಲ್ಲಿನ ಕೇಂದ್ರದ ತಾರತಮ್ಯ, ಔಷಧ ಸಂಗ್ರಹಿಸಲು ತೆಲಂಗಾಣ ಕೈಗೊಂಡ ಕ್ರಮಗಳ ಕುರಿತು 22-05-2021ರಂದು ಟ್ವೀಟ್‌ ಮಾಡಿ ಸರ್ಕಾರವನ್ನು ಎಚ್ಚರಿಸಿದ್ದೆ. ಅದು ವರದಿಯೂ ಆಗಿತ್ತು. ಅದರ ಮರುದಿನವೇ ಔಷಧ ಪೂರೈಕೆಗೆ ಸರ್ಕಾರ ಕಂಪನಿಗಳಿಂದ ದರ ಪಟ್ಟಿ ಆಹ್ವಾನಿಸಿದೆ.ಇದು ಸ್ವಾಗತಾರ್ಹ ಕ್ರಮ.

  ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಅಗತ್ಯವಿರುವ ಔಷಧ ಸಂಗ್ರಹಿಸಲು ಸರ್ಕಾರ ತಡವಾಗಿಯಾದರೂ ಎಚ್ಚೆತ್ತುಕೊಂಡಿದೆ. ಪ್ರತಿಯೊಂದಕ್ಕೂ ಕೇಂದ್ರದತ್ತ ನೋಡದೇ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವಂತೆ ನೀಡಿದ್ದ ಸಲಹೆಯನ್ನು ಸರ್ಕಾರ ಪರಿಗಣಿಸಿದೆ. ಸೂಕ್ತ ಸಮಯದಲ್ಲಿ ನೀಡಲಾಗುವ ಸೂಕ್ತ ಸಲಹೆಗಳನ್ನು ಮನ್ನಿಸುವುದು ರಾಜ್ಯದ ಹಿತದೃಷ್ಟಿಯಿಂದಲೂ ಒಳ್ಳೆಯದು" ಎಂದು ತಿಳಿಸಿದ್ದಾರೆ.
  Published by:MAshok Kumar
  First published: