ಕೊರೋನಾ ನಿಯಂತ್ರಣ ಸಂಬಂಧ ಸರ್ವಪಕ್ಷ ಸಭೆಯಲ್ಲಿ ಸರ್ಕಾರಕ್ಕೆ ಸಿದ್ದರಾಮಯ್ಯ ನೀಡಿದ ಸಲಹೆ ಮತ್ತು ಮಾಡಿದ ಒತ್ತಾಯಗಳೇನು?

ಕೋವಿಡ್ ಸಂದರ್ಭದಲ್ಲೂ ರಾಜ್ಯ ಸರ್ಕಾರ ಪಡಿತರ ಧಾನ್ಯಗಳನ್ನು ಕಡಿಮೆ ಮಾಡಿದೆ. ಬಿ.ಪಿ.ಎಲ್ ಕುಟುಂಬಗಳಿಗೆ ಏಪ್ರಿಲ್ 1 ರಿಂದ ಅಕ್ಕಿಯನ್ನು 2 ಕೆ.ಜಿ ಗೆ ಇಳಿಸಿದ್ದಾರೆ. 3 ಕೆ.ಜಿ. ರಾಗಿ ನೀಡುತ್ತಿದ್ದಾರಂತೆ. ಇದು ಅತ್ಯಂತ ಅಮಾನವೀಯ. ಆದ್ದರಿಂದ ಪ್ರತಿ ಕುಟುಂಬಕ್ಕೂ ಕನಿಷ್ಠ 15 ಕೆ.ಜಿ. ಅಕ್ಕಿ ನೀಡಬೇಕು. ಜೊತೆಗೆ ಬೇಳೆ, ಎಣ್ಣೆ, ವಿಟಮಿನ್ ಮಾತ್ರೆಗಳನ್ನು ಒದಗಿಸಬೇಕು.

ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ.

ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ.

 • Share this:
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯಪಾಲರ ನೇತೃತ್ವದಲ್ಲಿ ಇಂದು ಸರ್ವಪಕ್ಷಗಳ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ರಾಜ್ಯಪಾಲರು, ಸಿಎಂ ಬಿಎಸ್ ಯಡಿಯೂರಪ್ಪ, ಸಚಿವರು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಾಗೂ ಮಾಜಿ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿ ಹಲವು ನಾಯಕರು ಭಾಗವಹಿಸಿದ್ದರು. ಸಭೆಯಲ್ಲಿ ಸಿದ್ದರಾಮಯ್ಯ ಅವರು ಸರ್ಕಾರ ಹಲವು ಸೂಚನೆ ನೀಡುವುದರ ಜೊತೆಗೆ ಸರ್ಕಾರದ ಕ್ರಮಗಳನ್ನು ತರಾಟೆಗೆ ತೆಗೆದುಕೊಂಡರು.

ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಮಾಡಿದ ಒತ್ತಾಯಗಳು

1. ರಾಜ್ಯದಲ್ಲಿ ಕೂಡಲೇ ಆರೋಗ್ಯ  ತುರ್ತು ಪರಿಸ್ಥಿತಿಯನ್ನು ಘೋಷಿಸಲು ಕ್ರಮ ವಹಿಸಬೇಕು ಮತ್ತು ಕೊರೋನ ಸಾಂಕ್ರಾಮಿಕ ಮತ್ತೆ ಭೀಕರವಾಗಿರುವ ಹಿನ್ನೆಲೆಯಲ್ಲಿ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು.

2. ರಾಜ್ಯದ ಪ್ರತಿ ಬಡ ಕುಟುಂಬಕ್ಕೆ 10000 ರೂಪಾಯಿಗಳನ್ನು ಕೂಡಲೇ ನೀಡಬೇಕು. ಒಟ್ಟಾರೆ 30000 ಕೋಟಿ ರೂಪಾಯಿಗಳನ್ನು ಕೋವಿಡ್ ನಿರ್ವಹಣೆಗೆ ಮತ್ತು ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಮೀಸಲಿರಿಸಬೇಕು.

3. ಮೌಢ್ಯದ, ಮೂರ್ಖತನದ ಕಾರ್ಯಕ್ರಮಗಳ ಬದಲಿಗೆ ಜನರನ್ನು ಶಿಕ್ಷಿತರನ್ನಾಗಿಸುವ ವೈಜ್ಞಾನಿಕ ಮಾರ್ಗಸೂಚಿಗಳನ್ನು ಹೊರಡಿಸಬೇಕು.

4. ಖಾಸಗಿ ಆಸ್ಪತ್ರೆಗಳನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು. ಸರ್ಕಾರದ ನಿರ್ದೇಶನಗಳನ್ನು ಒಪ್ಪದ, ಪಾಲಿಸದ ಆಸ್ಪತ್ರೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ತೀವ್ರ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು.

5. ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ರಷ್ಟು ಬೆಡ್ ಗಳನ್ನು ಪಡೆಯುವ ಬದಲು ನಿರ್ದಿಷ್ಟಪಡಿಸಿದ ಆಸ್ಪತ್ರೆಗಳನ್ನು ಪೂರ್ತಿಯಾಗಿ ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಬೇಕು.

6. ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಸಾಧಿಸುವುದಷ್ಟೇ  ಅಲ್ಲ. ಅಲ್ಲಿ  ಸಾಕಷ್ಟು ಸಂಖ್ಯೆಯಲ್ಲಿ ವೈದ್ಯರು, ದಾದಿಯರು ಇರುವಂತೆ ನೋಡಿಕೊಳ್ಳಬೇಕು.

7. ಈಗ ರೆಮ್‍ಡಿಸ್ವೀರ್ ಔಷಧ ಸಿಗುತ್ತಿಲ್ಲವೆಂದು ಆಸ್ಪತ್ರೆಗಳು ಪರದಾಡುತ್ತಿವೆ. ಈ ಕೂಡಲೇ ರೆಮ್‍ಡಿಸ್ವೀರ್ ಔಷಧಿಯನ್ನು ಸಮರ್ಪಕವಾಗಿ ಅಂದಾಜು ಮಾಡಿ ಸಾಕಷ್ಟು ಸಂಖ್ಯೆ ಮತ್ತು ಪ್ರಮಾಣದಲ್ಲಿ ಸಂಗ್ರಹಿಸಿಡಬೇಕು. ಕೇಂದ್ರ ಸರ್ಕಾರ ಈ ಕೂಡಲೇ ಅಗತ್ಯ ಇರುವಷ್ಟು ಔಷಧವನ್ನು ರಾಜ್ಯಗಳಿಗೆ ಸರಬರಾಜು ಮಾಡುವಂತೆ ರಾಜ್ಯ ಸರ್ಕಾರ ಒತ್ತಾಯಿಸಬೇಕು. ಎರಡೂ ಕಡೆ ಒಂದೇ ಸರ್ಕಾರವಿದ್ದರೆ ಸ್ವರ್ಗ ಸೃಷ್ಟಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿಯ ಹೇಡಿತನ, ನಿರ್ಲಕ್ಷ್ಯ, ಬೇಜವಾಬ್ಧಾರಿತನ, ಸರ್ವಾಧಿಕಾರಿ ಪ್ರವೃತ್ತಿಗಳು ರಾಜ್ಯವನ್ನು ನರಕಕ್ಕೆ ದೂಡಿವೆ. ಜನರ ಸಾವುಗಳನ್ನು ಗಂಭೀರವಾಗಿ ಪರಿಗಣಿಸದ ವಿಕೃತ ಮನೋಭಾವ ಪ್ರಧಾನಿಯವರಿಗಿರುವಂತಿದೆ. ದೇಶದ ಇಂದಿನ ಎರಡನೇ ಅಲೆಯ ಗಂಡಾಂತರಕ್ಕೆ ದೇಶದ ಆಡಳಿತ ನಡೆಸುವವರೇ ನೇರ ಕಾರಣ.

8. ಇದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ, ರೋಗ ಬಂದ ಮೇಲೆ ಅದನ್ನು ನಿರ್ವಹಿಸುವುದಕ್ಕೆ ಬೇಕಾದ ಔಷಧಗಳು ಯಾವುವು ಎಂಬುದರ ಕುರಿತು ಬುಲೆಟಿನ್ ಗಳನ್ನು ಹೊರಡಿಸಿ ಜನರಿಗೆ, ವೈದ್ಯರಿಗೆ ತಿಳಿಸಬೇಕು.

9. ರೋಗಿಗಳ ಸಂಖ್ಯೆ ಪ್ರತಿ ನಿತ್ಯವೂ ದ್ವಿಗುಣ ಗೊಳ್ಳುತ್ತಿರುವ ಸಂದರ್ಭದಲ್ಲಿ ಅನೇಕ ಜನರಿಗೆ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತಿದೆ. ಔಷಧಿಗಳ ಹಾಗೆಯೇ ಆಕ್ಸಿಜನ್ ವ್ಯವಸ್ಥೆ, ವೆಂಟಿಲೇಟರ್ ವ್ಯವಸ್ಥೆಗಳು ಕೂಡ ಬಹಳ ಮುಖ್ಯ. ಇವುಗಳಿಲ್ಲದೆ ರೋಗವನ್ನು ವ್ಯವಸ್ಥಿತವಾಗಿ ನಿಭಾಯಿಸಲಾಗದು. ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಅಗತ್ಯ ವಸ್ತುಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ವ್ಯವಸ್ಥೆ ಮಾಡಬೇಕು. ಸಮರ್ಪಕವಾಗಿ ಕೆಲಸ ಮಾಡುವ,  ಕಡಿಮೆ ದರದಲ್ಲಿ ಸಿಗುವ ಉತ್ತಮ ದರ್ಜೆಯ ವೆಂಟಿಲೇಟರ್ ಗಳನ್ನು, ಆಕ್ಸಿಜನ್ ಸಿಲಿಂಡರ್​ಗಳನ್ನು ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು.

10. ಕಳೆದ ಬಾರಿಯಂತೆ ಈ ಬಾರಿಯೂ ಕೇಂದ್ರ ಸರ್ಕಾರ ಮೂರ್ಖತನದ ಕೆಲಸಗಳನ್ನು ಮಾಡುತ್ತಿದೆ. ಈ ಕುರಿತು ಹಲವು ಪತ್ರಿಕೆಗಳೂ ಬರೆಯುತ್ತಿವೆ. ಕೋಟ್ಯಾಂತರ ಜನ ಸೇರುವ ಕುಂಭಮೇಳವನ್ನು ನಡೆಸಲು ಅನುಮತಿ ನೀಡಿರುವುದೇ ಗಂಡಾಂತರಕರ ಸಂಗತಿ. ಅಲ್ಲಿ ಯಾವ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇರುವುದನ್ನು ನೋಡಿದರೆ ಪ್ರತಿನಿತ್ಯ  ಲಕ್ಷಗಳಲ್ಲಿ ದಾಖಲಾಗುತ್ತಿರುವ  ಕೊರೋನ ಕೋಟಿಗಳಿಗೆ ಮುಟ್ಟಿದರೆ ಆಶ್ಚರ್ಯವಿಲ್ಲ. ಇದನ್ನು ನಿಭಾಯಿಸಲು ದೇಶದ ಮುಂದೆ ಕಾರ್ಯಸೂಚಿಗಳೇನಿವೆ. ಅವುಗಳನ್ನು ದೇಶದ ಜನರ ಮುಂದೆ ಹೇಳಬೇಕಲ್ಲವೇ?

11. ಪ್ರತಿ ವಾರ್ಡ್ ಮತ್ತು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಒಂದು ಒಂಬುಡ್ಸ್‍ಮನ್ ವ್ಯವಸ್ಥೆ ನೇಮಿಸಬೇಕು. ಅದರಲ್ಲಿ ತಜ್ಞರು, ನಾಗರಿಕರು, ಅಧಿಕಾರಿಗಳು, ಜನಪ್ರತಿನಿಧಿಗಳು ಇರುವಂತೆ ನೋಡಿಕೊಳ್ಳಬೇಕು. ಇದೊಂದು ಅಧಿಕಾರಯುತ ಸಮಿತಿಯ ಹಾಗೆ ಕೆಲಸ ಮಾಡಬೇಕು. ಈ ಸಮಿತಿಗಳು ಕೊರೋನಾ ಸಮಸ್ಯೆಯನ್ನು ನಿಭಾಯಿಸುವುದರ ಜೊತೆಗೆ ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಹಸಿವಿನಿಂದ ನರಳದಂತೆ ನೋಡಿಕೊಳ್ಳುವುದು ಮುಂತಾದ ಕೆಲಸಗಳನ್ನು ಮಾಡಬೇಕು.

12. ಗ್ರಾಮ ಪಂಚಾಯ್ತಿ ಅಥವಾ ವಾರ್ಡ್ ಮಟ್ಟದ ಸಮಿತಿಗಳ ನಂತರ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲೂ ಸಮಿತಿಗಳನ್ನು ನೇಮಿಸಬೇಕು.

13. ರಾಜ್ಯ ಮಟ್ಟದ ಸಮಿತಿಯಲ್ಲಿ ಎಲ್ಲ ಪಕ್ಷಗಳ ಆಯ್ದ  ವಿಧಾನ ಸಭೆ/ ಪರಿಷತ್ತಿನ ಸದಸ್ಯರು ಇರುವಂತೆ ನೋಡಿಕೊಳ್ಳಬೇಕು.

14. ಈ ಸಮಿತಿಗಳು ನಾಗರಿಕರಲ್ಲಿ ವೈಜ್ಞಾನಿಕ ಮನೋಭಾವದ ಮೂಲಕ ಈ ಸಾಂಕ್ರಾಮಿಕವನ್ನು ಹೇಗೆ ಎದುರಿಸುವುದು ಎಂಬುದರ ಕಡೆಗೆ ಪದೇ ಪದೇ ಮನವಿ, ಮಾಡಬೇಕು. ಅರಿವು  ಮೂಡಿಸಬೇಕು.  ಜೊತೆಗೆ ಕೋವಿಡ್ ಸಂಬಂಧವಾಗಿ ಎಲ್ಲ ಕಡೆ ತಪಾಸಣೆ ನಡೆಸುವ, ಪರಿಶೀಲಿಸುವ, ಅಗತ್ಯ ಬಿದ್ದ ಕಡೆ ನಿರ್ದೇಶನಗಳನ್ನು ನೀಡುವ ಅಧಿಕಾರಗಳನ್ನು ಹೊಂದಿರಬೇಕು.

15. ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗುತ್ತಿರುವುದರಿಂದ, ಪ್ರಸ್ತುತ ರೈತರು ಬೆಳೆದ ಬೆಳೆಗಳಿಗೆ ಬೆಲೆಯಿಲ್ಲದೇ ಸಂಕಷ್ಟದಲ್ಲಿರುವುದರಿಂದ ರೈತರ ಕೈಯಲ್ಲಿ ಹಣ ಇರುವುದಿಲ್ಲ. ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅವರಿಗೆ ತುರ್ತಾಗಿ ಹಣಕಾಸಿನ ನೆರವಿನ ಅಗತ್ಯವಿದೆ. ಆದ್ದರಿಂದ ಎಲ್ಲ ಸಹಕಾರಿ/ವಾಣಿಜ್ಯ ಬ್ಯಾಂಕ್‍ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕನಿಷ್ಟ ರೂ.10,000/- ಕೋಟಿಗಳನ್ನು ಬಿಡುಗಡೆ ಮಾಡಿ, ರೈತರಿಗೆ ಸಾಲ ಸೌಲಭ್ಯ ಒದಗಿಸಬೇಕು ಹಾಗೂ ರೈತರಿಗೆ ಬೇಕಾದ ಬಿತ್ತನೆ ಬೀಜ, ಗೊಬ್ಬರ, ಅಗತ್ಯ ಔಷಧಿ ಹಾಗೂ ಇತರೇ ಸಲಕರಣೆಗಳನ್ನು ರೈತರಿಗೆ ಉಚಿತವಾಗಿ ನೀಡಲು ಕ್ರಮ ಜರುಗಿಸುವುದು ಹಾಗೂ ವಿವಿಧ ಬ್ಯಾಂಕುಗಳಲ್ಲಿ ರೈತರಿಗೆ ನೀಡಿರುವ ಸಾಲ ವಸೂಲಾತಿ ಕೊರೋನ ಅವಧಿ ಮುಗಿಯುವವರೆಗೂ ಷರತ್ತು ರಹಿತವಾಗಿ ಮುಂದೂಡಬೇಕು. ಹಾಗೂ ಈ ಅವಧಿಯ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು.

16. ರಾಜ್ಯದಲ್ಲಿ ಕಟ್ಟಡ ಕಾರ್ಮಿಕರಲ್ಲದೆ ಸುಮಾರು 32 ವಲಯಗಳ ಕಾರ್ಮಿಕರು, ಕೃಷಿ ಕಾರ್ಮಿಕರು ಹಾಗೂ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿರುವ 1 ಕೋಟಿ 32 ಲಕ್ಷ ಕಾರ್ಮಿಕರಿದ್ದಾರೆ. ಅವರನ್ನು ಸಂಕಷ್ಟಕ್ಕೆ ಸಿಲುಕಿಕೊಳ್ಳದಂತೆ ನೋಡಿಕೊಳ್ಳಬೇಕು.

17. ಸ್ವಾತಂತ್ರ್ಯ ಬಂದ ಲಾಗಾಯ್ತಿನಿಂದ ಪ್ರಕೃತಿ ವಿಕೋಪ ಮುಂತಾದ ಸಂಕಷ್ಟಗಳನ್ನು ಎದುರಿಸಲು ಪ್ರಧಾನ ಮಂತ್ರಿಗಳ ಪರಿಹಾರ ನಿಧಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಗಳ ವ್ಯವಸ್ಥೆ ಇರುತ್ತದೆ. ಆ ನಿಧಿಗಳಿಗೆ ಅನೇಕ ದಾನಿಗಳು ಉದಾರ ದೇಣಿಗೆಗಳನ್ನು ನೀಡುತ್ತಾ ಬಂದಿರುತ್ತಾರೆ. ಆ ವ್ಯವಸ್ಥೆಯನ್ನು ಬಳಸಿಕೊಳ್ಳದೆ ಏಕಾಏಕಿ ಪ್ರಧಾನಮಂತ್ರಿಗಳು ಕೊರೋನಾ ರೋಗ ನಿರ್ವಹಣೆ ಹಿನ್ನೆಲೆಯಲ್ಲಿ ಪಿ.ಎಂ. ಕೇರ್ಸ್ ಎಂಬ ಹೊಸ ನಿಧಿಯನ್ನು ಪ್ರಾರಂಭಿಸಿದ್ದಾರೆ. ಆ ನಿಧಿಗೆ ‘ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ’ ನಿಯಮಗಳ ಅಡಿ ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು, ಬಂಡವಾಳಿಗರು ನೀಡಬೇಕಾದ ಬದ್ಧತೆಯ ಹಣದಲ್ಲಿ ಬೃಹತ್ ಮೊತ್ತದ ಹಣವನ್ನು ಪಿ.ಎಂ.ಕೇರ್ಸ್ ನಿಧಿಗೆ ಪಡೆದಿದ್ದಾರೆ.  ಆ ನಿಧಿಗೆ ನೀಡಿದರೆ ಮಾತ್ರ ಸಿಂಧುವಾಗುತ್ತದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರೆ ಅದು ಅಸಿಂಧುವಾಗುತ್ತದೆ ಎಂದು ಹೇಳಿ ಜನರ ದಾರಿ ತಪ್ಪಿಸಲಾಗಿದೆ. ಪಿ.ಎಂ.ಕೇರ್ಸ್ ನಿಧಿಗೆ ರಾಜ್ಯದಿಂದಲೂ ಬೃಹತ್ ಪ್ರಮಾಣದ ಹಣ ಹರಿದುಹೋಗಿದೆ. ಆದರೆ ಇದುವರೆಗೂ ಆ ಹಣದ ಕುರಿತು ಮಾಹಿತಿಯಿಲ್ಲ. ಆದ್ದರಿಂದ ತುರ್ತಾಗಿ ರಾಜ್ಯ ಸರ್ಕಾರ ಪ್ರಧಾನಮಂತ್ರಿಗಳ ಪಿ.ಎಂ.ಕೇರ್ಸ್, ನಿಧಿಗೆ ಎಷ್ಟು ಹಣ ಬಂದಿದೆ ಎಂಬುದರ ಮಾಹಿತಿ ಪಡೆಯುವುದು ಹಾಗೂ ನಮ್ಮ ರಾಜ್ಯದಿಂದ ಪಿ.ಎಂ.ಕೇರ್ಸ್ ನಿಧಿಗೆ ಹೋಗಿರುವ ಎಲ್ಲಾ ಹಣವನ್ನು ಮರಳಿ ರಾಜ್ಯಕ್ಕೆ ನೀಡುವಂತೆ ಒತ್ತಾಯಿಸಬೇಕು. ಪಿ.ಎಂ ಕೇರ್ಸ್ ನಿಂದ ರಾಜ್ಯ ನಯಾಪೈಸೆಯನ್ನೂ ಸ್ವೀಕರಿಸಿಲ್ಲ ಎಂದರೆ  ಯಾಕೆ ರಾಜ್ಯ ಸರ್ಕಾರ ಈ ಕುರಿತು ಪ್ರಸ್ತಾಪಿಸುತ್ತಿಲ್ಲ? ಪ್ರತಿಭಟಿಸುತ್ತಿಲ್ಲ?

ಇದನ್ನು ಓದಿ: Coronavirus | ಮಹಾರಾಷ್ಟ್ರದಲ್ಲಿ ಬೆಳಗ್ಗೆ 7ರಿಂದ 11ಗಂಟೆಯವರೆಗೆ ಮಾತ್ರ ದಿನಸಿ ಅಂಗಡಿ ತೆರೆಯಲು ಅವಕಾಶ

18. ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆಗೆ ಇಲ್ಲಿಯವರೆಗೆ ಎಷ್ಟು ಹಣ ಬಂದಿದೆ? ಇದನ್ನು ಯಾವ, ಯಾವ ಬಾಬತ್ತಿಗಾಗಿ ಖರ್ಚು ಮಾಡಲಾಗಿದೆ? ಉಳಿಕೆ ಎಷ್ಟು ಹಣ ಲಭ್ಯವಿದೆ? ಎಂಬ ಮಾಹಿತಿಯನ್ನು ‘ಶ್ವೇತ ಪತ್ರ’ ಹೊರಡಿಸುವುದರ ಮೂಲಕ ರಾಜ್ಯದ ಜನರಿಗೆ ತಿಳಿಸಲು ಕ್ರಮವಹಿಸಬೇಕು.

19. ಬೇಸಿಗೆಯಲ್ಲಿ ಮದುವೆ, ಮುಂಜಿಗಳು ನಡೆಯದ ಕಾರಣಕ್ಕೆ ರೈತರು ಬೆಳೆದ ತರಕಾರಿಗಳ ಬೆಲೆಗಳು ವಿಪರೀತ ಕಡಿಮೆ ಆಗಿವೆ. ಆದ್ದರಿಂದ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ರೈತರಿಗೆ ಪರಿಹಾರದ  ಪ್ಯಾಕೇಜನ್ನು ಘೋಷಿಸಬೇಕು. ಹಾಗೆಯೇ ಎಲ್ಲ ದುಡಿಯುವ ವರ್ಗಗಳಿಗೂ ಸೂಕ್ತ ಪ್ಯಾಕೇಜು ಘೋಷಿಸಬೇಕು.

20. ಜನರನ್ನು ದಿವಾಳಿ ಮಾಡಲೆಂದೇ ಹೆಚ್ಚಿಸಿರುವ ಡೀಸೆಲ್, ಪೆಟ್ರೋಲ್, ವಿದ್ಯುತ್, ಗ್ಯಾಸ್, ರಸಗೊಬ್ಬರ ಮುಂತಾದವುಗಳ ಬೆಲೆಗಳನ್ನು ಈ ಕೂಡಲೇ ತಗ್ಗಿಸಬೇಕು. ಅಡುಗೆ ಅನಿಲ, ರಸಗೊಬ್ಬರಗಳ ಮೇಲೆ ನೀಡುತ್ತಿದ್ದ ಸಬ್ಸಿಡಿಗಳನ್ನು ಯಾವ ಕಾರಣಕ್ಕೂ ನಿಲ್ಲಿಸಬಾರದು. ಬದಲಾಗಿ ಹೆಚ್ಚಿಸಬೇಕು.

21. ರಾಜ್ಯದಲ್ಲಿ ಇಂದಿರಾ ಕ್ಯಾಂಟೀನುಗಳನ್ನು ಸಮರ್ಪಕ ಪ್ರಮಾಣದಲ್ಲಿ ಪ್ರಾರಂಭಿಸಿ ಹಸಿದವರಿಗೆಲ್ಲ ಉಚಿತವಾಗಿ ಊಟ ನೀಡಬೇಕು.

22. ಗ್ರಾಮೀಣ ಭಾಗದ ಜನರ ಸಂಕಷ್ಟಗಳನ್ನು ನೀಗಿಸಲು ನೆರವಿಗೆ ಬಂದ ಯೋಜನೆಯೇ ನರೇಗಾ. ದೇಶದ ಇಂಥ ಸಂಕಷ್ಟಗಳ ಕಾಲದಲ್ಲಿ ನರೇಗಾದಂಥ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ನರೇಗಾ ಯೋಜನೆಯಲ್ಲಿ ನೀಡುವ ಕೂಲಿಗಳನ್ನು ಹಣದುಬ್ಬರವನ್ನು ಆಧರಿಸಿ ಹೆಚ್ಚಿಸಬೇಕು. ಬೇಡಿಕೆ ಆಧರಿಸಿ  ಕೆಲಸ ನೀಡಬೇಕು. ಅಥವಾ ವರ್ಷಕ್ಕೆ ಕನಿಷ್ಠ 200 ದಿನಗಳಾದರೂ ಕೆಲಸ ನೀಡಬೇಕು.

23. ಕೋವಿಡ್ ಸಂದರ್ಭದಲ್ಲೂ ರಾಜ್ಯ ಸರ್ಕಾರ ಪಡಿತರ ಧಾನ್ಯಗಳನ್ನು ಕಡಿಮೆ ಮಾಡಿದೆ. ಬಿ.ಪಿ.ಎಲ್ ಕುಟುಂಬಗಳಿಗೆ ಏಪ್ರಿಲ್ 1 ರಿಂದ ಅಕ್ಕಿಯನ್ನು 2 ಕೆ.ಜಿ ಗೆ ಇಳಿಸಿದ್ದಾರೆ. 3 ಕೆ.ಜಿ. ರಾಗಿ ನೀಡುತ್ತಿದ್ದಾರಂತೆ. ಇದು ಅತ್ಯಂತ ಅಮಾನವೀಯ. ಆದ್ದರಿಂದ ಪ್ರತಿ ಕುಟುಂಬಕ್ಕೂ ಕನಿಷ್ಠ 15 ಕೆ.ಜಿ. ಅಕ್ಕಿ ನೀಡಬೇಕು. ಜೊತೆಗೆ ಬೇಳೆ, ಎಣ್ಣೆ, ವಿಟಮಿನ್ ಮಾತ್ರೆಗಳನ್ನು ಒದಗಿಸಬೇಕು.

24. ಹಿಂದಿನ ಸರ್ಕಾರಗಳು ಪೋಲಿಯೋ, ಸಿಡುಬು, ದಡಾರ ಮುಂತಾದ ಅಭಿಯಾನಗಳನ್ನು ನಡೆಸಿದಂತೆ ಕೋವಿಡ್ ಲಸಿಕೆಯ ಅಭಿಯಾನ ನಡೆಸಬೇಕು. ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ನಡೆಸಬೇಕು. ಅದಕ್ಕೂ ಮೊದಲು ದೇಶದಲ್ಲಿ ನೀಡುತ್ತಿರುವ  ಲಸಿಕೆಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ [ಡಬ್ಲ್ಯುಎಚ್​ಒ] ಪ್ರಮಾಣೀಕರಿಸಬೇಕು.

ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ನೀಡಿದ ಸಲಹೆಗಳು

 • RT-PCR ಟೆಸ್ಟ್ ಮಾಡಿಸಿದ ಫಲಿತಾಂಶ ಕಡ್ಡಾಯವಾಗಿ 24 ಗಂಟೆಯೊಳಗೆ ಲಭ್ಯವಾಗಬೇಕು. ಇದರಿಂದ ಕೋವಿಡ್-19 ಪಾಸಿಟಿವ್ ರೋಗಿಗೆ ಸೂಕ್ತ ಚಿಕಿತ್ಸೆ ಕೊಡಲು
  ಸಾಧ್ಯವಾಗಿ ಮರಣದಿಂದ ರಕ್ಷಿಸಬಹುದು. ರಿಪೋರ್ಟ್ ಬೇಗ ಬರುವುದರಿಂದ
  ರೋಗ ಬೇರೆಯವರಿಗೆ ಹಬ್ಬದಂತೆ ತಡೆಯಬಹುದು.

 • 24×7 ಆಕ್ಸಿಜನ್ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವಂತೆ
  ನೋಡಿ ಕೊಳ್ಳಬೇಕು.

 • ಜಿಲ್ಲಾ ಮಂತ್ರಿಗಳು ಆಯಾ ಶಾಸಕರು ಮತ್ತು ಸಂಸದರ ಸಭೆ ನಡೆಸಿ ಅವರ
  ಪೂರ್ಣ ಸಹಕಾರ ಪಡೆಯಬೇಕು.

 • PHC ಯಿಂದ ಉನ್ನತ ಆಸ್ಪತ್ರೆಯವರೆಗೆ ಮೆಡಿಕಲ್ ಸ್ಟಾಪ್ ಸರ್ಕಾರಿ ಆಸ್ಪತ್ರೆಯಗಳಲ್ಲಿ ಲಭ್ಯವಿರುವ ವ್ಯವಸ್ಥೆ ಮಾಡಬೇಕು. ತಾತ್ಕಾಲಿಕ ನೇಮಕ ಕೂಡಲೇ ಪ್ರಾರಂಭಿಸಬೇಕು.

 • ಮೆಡಿಕಲ್ ಕಾಲೇಜು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪೂರ್ಣ ರಕ್ಷಣೆ ನೀಡಿ ಅವರ ಸೇವೆ ಪಡೆಯಬೇಕು. ಮಹಾ ಮಾರಿಯನ್ನು ಎದುರಿಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು.

 • ಶೀತ, ಜ್ವರ,ಕೆಮ್ಮು ರೋಗಗಳಿಗೆ ಸಂಬಂಧಿಸಿದ ಎಲ್ಲಾ ಔಷಧಗಳು ಆಸ್ಪತ್ರೆಯಲ್ಲಿ ಸದಾ ದೊರಕುವಂತೆ ಮಾಡಬೇಕು.

 • ಕೋವಿಡ್-19 ಟೆಸ್ಟ್ ಹೆಚ್ಚಿಸಬೇಕು.

 • ಸ್ಮಶಾನದಲ್ಲಿ ಸೇವೆ ಸಲ್ಲಿಸುವ ನೌಕರರಿಗೆ ಸಕಾಲದಲ್ಲಿ ಅವರ ಸಂಬಳ ಭತ್ಯೆ ಸಿಗುವಂತೆ ಕ್ರಮ ಕೈಗೊಳ್ಳಬೇಕು.

 • ವೆಂಟಿಲೇಟರ್ ಲಭ್ಯವಿರುವ ಬಗ್ಗೆ ಪೂರ್ಣ ಮಾಹಿತಿ ಕೇಂದ್ರಿಕೃತಗೊಳಿಸಬೇಕು.

 • ಕೋವಿಡ್-19 ವಾರಿಯರ್ ಆಗಿ ಸೇವೆ ಸಲ್ಲಿಸುವ ಎಲ್ಲಾ ನೌಕರರಿಗೆ ಕಳೆದ ವರ್ಷದಂತೆ ವಿಮೆ ಮಾಡಿಸಬೇಕು. ಕೇಂದ್ರ ಸರ್ಕಾರ ವಿಮೆ ರದ್ದುಗೊಳಿಸಿದೆ.

 • ಆರೋಗ್ಯ ಇಲಾಖೆಯ ಮತ್ತು ಪೌರ ಕಾರ್ಮಿಕರಿಗೆ ಎಲ್ಲಾ ಜೀವರಕ್ಷಕ ಸೌಲಭ್ಯ ಒದಗಿಸಬೇಕು.

 • ಆನ್ ಲೈನ್ ಕೌನ್ಸಿಲಿಂಗ್ ಸದಾ ಲಭ್ಯವಿರುವ ನೋಡಿ ಕೊಳ್ಳಬೇಕು

Published by:HR Ramesh
First published: