ವಾಷಿಂಗ್ಟನ್ (ಏಪ್ರಿಲ್ 19): ಮಾರಣಾಂತಿಕ ಕೊರೋನಾ ವೈರಸ್ನಿಂದಾಗಿ ತಮ್ಮ ರಾಷ್ಟ್ರದಲ್ಲಿ ಎಷ್ಟು ಜನ ಮೃತರಾಗಿದ್ದಾರೆ? ಎಂಬ ಕುರಿತು ಚೀನಾ ಸರ್ಕಾರ ನೀಡಿರುವ ಅಧಿಕೃತ ಮಾಹಿತಿ ಅನುಮಾನಾಸ್ಪದವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಮೊಟ್ಟ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಚೀನಾದ ವುಹಾನ್ ಪಟ್ಟಣದಲ್ಲಿ ಈವರೆಗೆ 1,300 ಸಾವುಗಳು ಸಂಭವಿಸಿವೆ, ಚಿನಾದಲ್ಲಿ ಒಟ್ಟಾರೆ 4,600 ಸಾವು ಸಂಭವಿಸಿವೆ ಎಂದು ಚೀನಾದ ಕ್ಸೀ ಚಿನ್ಪಿಂಗ್ ಸರ್ಕಾರ ಮಾಹಿತಿ ನೀಡಿದ ಎರಡು ದಿನಕ್ಕೆ ಅಮೆರಿಕ ಇಂತಹ ಅನುಮಾನವೊಂದನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಇಟ್ಟಿದೆ.
ಈ ಕುರಿತು ಶನಿವಾರ ಅಮೆರಿಕದ ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿರುವ ಡೋನಾಲ್ಡ್ ಟ್ರಂಪ್, “ಕೊರೋನಾ ಸಾವಿನ ಸಂಖ್ಯೆಯಲ್ಲಿ ಅಮೆರಿಕ ನಂಬರ್1 ಅಲ್ಲ. ಚೀನಾ ದೇಶವೇ ನಂಬರ್1. ಸಾವಿನ ಸಂಖ್ಯೆಯಲ್ಲಿ ಅವರು ನಮಗಿಂತ ಮುಂದಿದ್ದಾರೆ” ಎಂದು ತಿಳಿಸಿದ್ದಾರೆ.
“ಇಂಗ್ಲೆಂಡ್, ಫ್ರಾನ್ಸ್, ಬೆಲ್ಜಿಯಂ, ಇಟಲಿ ಮತ್ತು ಸ್ಪೇನ್ನ ಹೆಚ್ಚು ಅಭಿವೃದ್ಧಿ ಹೊಂದಿದ ಆರೋಗ್ಯ ವ್ಯವಸ್ಥೆಗಳನ್ನು ಹೊಂದಿರುವ ದೇಶ. ಆದರೆ, ಇಂತಹ ದೇಶಗಳೇ ಹೆಚ್ಚಿನ ಸಾವಿನ ಪ್ರಮಾಣವನ್ನು ಹೊಂದಿರುವಾಗ ಚೀನಾದಲ್ಲಿ ಇನ್ನೂ ಅಧಿಕ ಪ್ರಮಾಣದ ಸಾವು-ನೋವುಗಳು ಸಂಭವಿಸಿರಬೇಕು. ಚೀನಾ ಅಧಿಕೃತ ಸಾವಿನ ಸಂಖ್ಯೆಗಳಿಗಿಂತ ನಿಜವಾದ ಸಂಖ್ಯೆ ಹೆಚ್ಚು. ಅಲ್ಲಿನ ಸರ್ಕಾರ ಅವಾಸ್ತವಿಕ ಅಂಕಿಅಂಶ ನೀಡಿದೆ” ಎಂದು ಟ್ರಂಪ್ ಆರೋಪಿಸಿದ್ದಾರೆ.
ಇದೇ ಸಂದರ್ಭದಲ್ಲಿ ಚೀನಾ ದೇಶಕ್ಕೆ ಎಚ್ಚರಿಕೆ ನೀಡಿರುವ ಟ್ರಂಪ್, “ಕೊರೋನಾ ಸಾಂಕ್ರಾಮಿಕ ರೋಗವನ್ನು ಉದ್ದೇಶಪೂರ್ವಕವಾಗಿ ಹರಡಿದ್ದೇ ಆಗಿದ್ದರೆ ಇದರ ಪರಿಣಾಮಗಳನ್ನು ಚೀನಾ ಖಂಡಿತ ಎದುರಿಸಲೇಬೇಕಾಗುತ್ತದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ವಿಶ್ವಾದ್ಯಂತ 23 ಲಕ್ಷ ಜನರಿಗೆ ಕೊರೋನಾ; ಅಮೆರಿಕದಲ್ಲಿ 40 ಸಾವಿರದ ಗಡಿ ಸಮೀಪಿಸಿದ ಸಾವಿನ ಸಂಖ್ಯೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ