ಬೆಂಗಳೂರು: ರಾಜ್ಯದಲ್ಲಿ 395 ಪ್ರಕರಣಗಳಿದ್ದರೂ ಈವರೆಗೂ 16 ಮಂದಿ ಸತ್ತಿದ್ದಾರೆ. ಸಾವನ್ನು ಹೇಗೆ ತಪ್ಪಿಸಬಹುದು ಎಂಬುದರ ಬಗ್ಗೆ ಮಾರ್ಗಸೂಚಿ ಮಾಡಲಾಗಿದೆ. ಹಿರಿಯ ನಾಗರಿಕರಲ್ಲಿ ಸೋಂಕು ತಗುಲಿ, ಸಾವು ಜಾಸ್ತಿ ಆಗಿದೆ. ಮೃತರೆಲ್ಲಾ 55-80 ವರ್ಷದರಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೆ.ಸುಧಾಕರ್, ಅಸ್ತಮಾ ಇರೋರು, ಶ್ವಾಸಕೋಶ ತೊಂದರೆ ಇರೋರು, ಕ್ಷಯ ರೋಗ ಇರೋರು, ಹೃದಯ ಸಂಬಂಧಿ ಕಾಯಿಲೆ ಇರೋರು ಎಚ್ಚರಿಕೆಯಿಂದ ಇರಬೇಕು. ಮೂತ್ರಪಿಂಡ, ಲೀವರ್, ಮದ್ಯ ವ್ಯಸನಿಗಳು, ಶುಗರ್, ಬಿಪಿ, ಕ್ಯಾನ್ಸರ್, ಹೆಚ್ಐವಿ ಇರೋರು ಕೂಡ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
55 ವರ್ಷದವರಿಗೆ ಯಾವುದೇ ಕಾಯಿಲೆ ಇದ್ದರೂ, ಅಂದರೆ ಸಣ್ಣ ಆಯಾಸ, ನೆಗಡಿ,ಕೆಮ್ಮು ಸೇರಿ ಇತರೆ ಸಮಸ್ಯೆ ಇದ್ದರೂ ಸರ್ಕಾರದ ವತಿಯಿಂದ ಪರೀಕ್ಷೆ ಮಾಡಲಾಗುತ್ತಿದೆ. 60 ವರ್ಷದ ಮೇಲ್ಪಟ್ಟು ಕರ್ನಾಟಕದಲ್ಲಿ ಶೇ. 7.7 ಹಿರಿಯ ನಾಗರಿಕರಿದ್ದಾರೆ. 2011 ರ ಜನಗಣತಿಯ ಪ್ರಕಾರ, 57.91 ಲಕ್ಷ ಮಂದಿ ಆಗುತ್ತಾರೆ. ನಾವು ರೋಗದ ಗುಣಲಕ್ಷಣಗಳನ್ನು ಅರ್ಥ ಮಾಡಿಕೊಳ್ಳಬೇಕು. ಮೊದಲು ಜ್ವರ ಬರುತ್ತದೆ. ಶೇ. 13.6 ಗಂಟಲು ಬೇನೆ, ಶೇ. 69.8 ಕೆಮ್ಮು ಬರುವಂತಹದ್ದು ತಿಳಿದು ಬಂದಿದೆ. ಬಹಳ ಮಂದಿ ಕೊನೆಯ ಹಂತಕ್ಕೆ ಬಂದಾಗ ವೈದ್ಯರ ಬಳಿ ಬಂದರೆ, ಯಾರು ಏನು ಮಾಡಲು ಸಾಧ್ಯವಿಲ್ಲ. ಕಳೆದ ವಾರ ಇಬ್ಬರು ಕೊನೆ ಹಂತಕ್ಕೆ ರೋಗದ ಗುಣಲಕ್ಷಣಗಳು ಬಂದಾಗ ವೈದ್ಯರ ಬಳಿ ಬಂದಿದ್ರು. ಆ ಎರಡು ಜೀವಗಳನ್ನು ಉಳಿಸಲು ಸಾಧ್ಯವಾಗಲಿಲ್ಲ. ರೋಗದ ಲಕ್ಷಣಗಳು ಕಂಡು ಬಂದ ತಕ್ಷಣವೇ ವೈದ್ಯರ ಬಳಿ ಬನ್ನಿ ಎಂದು ಸುಧಾಕರ್ ಅವರು ಮನವಿ ಮಾಡಿದರು
ಇಂದು ಸಂಪುಟ ಸಭೆಯಲ್ಲಿ ಮೇ 3 ರವರೆಗೆ ಲಾಕ್ಡೌನ್ ಮುಂದುವರಿಕೆ ಮಾಡಲು ತೀರ್ಮಾನಿಸಲಾಗಿದೆ. ಆರ್ಥಿಕ ಸಮಸ್ಯೆ ಆಗುತ್ತಿದೆ. ಆದರೂ ಜನರ ಜೀವ ಬಹಳ ಮುಖ್ಯ. ಹೀಗಾಗಿ ನಾವು ಮೇ 3 ರವರೆಗೂ ಲಾಕ್ಡೌನ್ ಮುಂದುವರೆಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಇದನ್ನು ಓದಿ: ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಚಾರ ; ಸಾಮಾನ್ಯರಿಗೊಂದು ನ್ಯಾಯ, ಸಚಿವರಿಗೊಂದು ನ್ಯಾಯ?
ನಾವು ಕೊರೋನಾ ವೈರಸ್ ಪರೀಕ್ಷೆಯಲ್ಲಿ 3 ನೇ ಸ್ಥಾನದಲ್ಲಿದ್ದೇವೆ. ಮೊದಲು ಕೇರಳ ಇದೆ. ಎರಡನೇ ಸ್ಥಾನದಲ್ಲಿ ಹರಿಯಾಣ ಇದೆ. ನಾವು ಮೂರನೇ ಸ್ಥಾನದಲ್ಲಿದ್ದೇವೆ. ರ್ಯಾಪಿಡ್ ಟೆಸ್ಟ್ ಕಿಟ್ ಉಪಯೋಗವಾಗುವುದು ಸೋಂಕು ತಗುಲಿ, ನಿವಾರಣೆಯಾದ ಬಳಿಕ ಕಿಟ್ ಉಪಯೋಗ ಆಗುತ್ತದೆ. ನಮ್ಮಲ್ಲಿ 59 ಮಂದಿಗೆ ಪರೀಕ್ಷೆ ಮಾಡಿದ್ರೆ, 1 ರಲ್ಲಿ ಸೋಂಕು ಕಂಡು ಬರುತ್ತಿದೆ. ಅಂದರೆ ಶೇ. 59.21 ರಷ್ಟು ಪರೀಕ್ಷೆಯಲ್ಲಿ ಸೋಂಕು ಕಂಡು ಬರುತ್ತಿದೆ. ಈಗ ನಾವು 2000 ಕ್ಕೂ ಹೆಚ್ಚು ಪರೀಕ್ಷೆಗಳನ್ನು ಮಾಡುತ್ತಿದ್ದೇವೆ. ಸದ್ಯ ರಾಜ್ಯದಲ್ಲಿ 17 ಲ್ಯಾಬ್ಗಳಿವೆ. ಮುಂದೆ ಲ್ಯಾಬ್ಗಳು ಹೆಚ್ಚಾಗಲಿವೆ. ಮೇ ಅಂತ್ಯದೊಳಗೆ 60 ಲ್ಯಾಬ್ಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದು ಭರವಸೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ