ಬೆಂಗಳೂರು(ಮಾ.16): ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಕೊರೋನಾ ವೈರಸ್ ವಾರ್ ರೂಮ್ ಆರಂಭ ಮತ್ತು ಪರೀಕ್ಷಾ ಕೇಂದ್ರಗಳ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದರು. ಇಂದು ಸೋಮವಾರ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಚಿವ ಡಾ.ಕೆ ಸುಧಾಕರ್, ಎಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜುಗಳ ನಿರ್ದೇಶಕರೊಂದಿಗೆ ಸಭೆ ನಡೆಸಲಾಗಿದೆ. ಕೋವಿಡ್-19 ಹೇಗೆ ತಡೆಯಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ. ಇದರ ಭಾಗವಾಗಿಯೇ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಕೊರೋನಾ ವೈರಸ್ ವಾರ್ ರೂಮ್ ಮತ್ತು ಪರೀಕ್ಷಾ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತಿದೆ ಎಂದರು.
ಕೊರೋನಾ ವೈರಸ್ ತಡೆಗೆ ಸಾಕಷ್ಟು ಶ್ರಮಿಸುತ್ತಿದ್ದೇವೆ. ಬೆಂಗಳೂರು, ಹಾಸನ, ಮಂಗಳೂರು, ಹುಬ್ಬಳ್ಳಿ, ಕಲಬುರಗಿ ಸೇರಿದಂತೆ ಹಲವು ಕಡೆ ಕೊರೋನಾ ವೈರಸ್ ವಾರ್ ರೂಮ್ ಮತ್ತು ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ರಾಜ್ಯಾದ್ಯಂತ ಹೆಲ್ಪ್ ಡೆಸ್ಕ್ ಆರಂಭಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿಯೇ ಪ್ರತಿ ಜಿಲ್ಲೆಯಲ್ಲಿ 150-250 ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡಲಾಗುವುದು. ಇದನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಲಾಗುವುದು ಎಂದರು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್.
ಹೀಗೆ ಮಾತು ಮುಂದುವರಿಸಿದ ಅವರು, ಪ್ರಸ್ತುತ ಕಲಬುರಗಿಯಲ್ಲಿ ಮತ್ತೊಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಮೃತ ವೃದ್ಧನ ನೋಡಿಕೊಳ್ಳುತ್ತಿದ್ದ ಮಗಳಿಗೆ ಈ ವೈರಸ್ ತಗುಲಿದೆ. ಈಕೆ 77 ಜನರ ಜತೆ ಪ್ರಾಥಮಿಕ ಸಂಪರ್ಕ, 277 ಜನರೊಂದಿಗೆ ದೂರದಿಂದ ಸಂಪರ್ಕದಲ್ಲಿದ್ದರು. ಈ ಎಲ್ಲರ ಮೇಲೆಯೂ ಇಲಾಖೆ ತೀವ್ರ ನಿಗಾ ಇಟ್ಟಿದೆ ಎಂದರು.
ಇದನ್ನೂ ಓದಿ: ನಿರ್ಭಯಾ ಅತ್ಯಾಚಾರಿಗಳ ಗಲ್ಲಿಗಿಂತ ಮೂರು ದಿನ ಮುಂಚೆ ಹಾಜರಾಗುವಂತೆ ಹ್ಯಾಂಗ್ಮ್ಯಾನ್ಗೆ ಆದೇಶ
ಇನ್ನು, ಸೂಪರ್ ಮಾರ್ಕೆಟ್ಗಳು ತೆರೆದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನಿಸಿದ ಡಾ.ಕೆ ಸುಧಾಕರ್, ಈ ಬಗ್ಗೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸೂಪರ್ ಮಾರ್ಕೆಟ್ಗಳು ಮುಚ್ಚಬೇಕಾ, ಬೇಡವೋ ಎಂಬುದರ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.
ಕೊರೋನಾ ವೈರಸ್ ದಾಳಿಯಿಂದ ಭಾರತದಲ್ಲಿ ಈವರೆಗೆ ಇಬ್ಬರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಇದುವರೆಗೂ ಒಟ್ಟಾರೆ 110 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ವಿಶ್ವಾದ್ಯಂತ ಕೊರೋನಾಗೆ 6,515 ಜನರು ಬಲಿಯಾಗಿದ್ದಾರೆ. ಇಟಲಿ, ಚೀನಾ, ಇರಾನ್, ಅಮೆರಿಕ, ಜಪಾನ್ ದೇಶಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.
ಭಾರತದಲ್ಲಿ 110 ಜನರಿಗೆ ಕೊರೋನಾ ವೈರಸ್ ಹರಡಿದೆ. 93 ಭಾರತೀಯರು, 17 ವಿದೇಶಿಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ 32, ಕೇರಳದಲ್ಲಿ 22, ಹರಿಯಾಣದಲ್ಲಿ 14, ಉತ್ತರ ಪ್ರದೇಶದಲ್ಲಿ 13, ದೆಹಲಿಯಲ್ಲಿ 7, ಲಡಾಖ್ನಲ್ಲಿ 3, ರಾಜಸ್ಥಾನದಲ್ಲಿ 4, ಕರ್ನಾಟಕದಲ್ಲಿ 7, ತೆಲಂಗಾಣದಲ್ಲಿ 3, ಜಮ್ಮು-ಕಾಶ್ಮೀರದಲ್ಲಿ 2, ಉತ್ತರಾಖಂಡ್, ಆಂಧ್ರ ಪ್ರದೇಶ, ತಮಿಳುನಾಡು, ಪಂಜಾಬ್ನಲ್ಲಿ ತಲಾ ಒಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ