HOME » NEWS » Coronavirus-latest-news » WE TAKE OVER PRIVATE HOSPITALS THAT DO NOT PROVIDE BEDS SAYS MINISTER SUDHAKAR MAK

CoronaVirus: ಕೊರೋನಾ ಸೋಂಕಿತರಿಗೆ ಬೆಡ್ ನೀಡದ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆದು ನಾವೇ ನಡೆಸುತ್ತೇವೆ ಹುಷಾರ್: ಸಚಿವ ಸುಧಾಕರ್ ಎಚ್ಚರಿಕೆ!

ಬೆಂಗಳೂರಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾಗೆ ಕಡಿವಾಣ ಹಾಕಲು ನಾಳೆಯಿಂದ ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿರುವ ಸರ್ಕಾರ ಇಂದು ಪೂರ್ವಭಾವಿ ಸಭೆ ನಡೆಸಿತು.

news18-kannada
Updated:April 18, 2021, 3:44 PM IST
CoronaVirus: ಕೊರೋನಾ ಸೋಂಕಿತರಿಗೆ ಬೆಡ್ ನೀಡದ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆದು ನಾವೇ ನಡೆಸುತ್ತೇವೆ ಹುಷಾರ್: ಸಚಿವ ಸುಧಾಕರ್ ಎಚ್ಚರಿಕೆ!
ಡಾ.ಕೆ. ಸುಧಾಕರ್.
  • Share this:
ಬೆಂಗಳೂರು (ಏಪ್ರಿಲ್ .18) : ಕೋವಿಡ್ ಸೋಂಕಿತರಿಗೆ ಶೇ.50 ರಷ್ಟು ಬೆಡ್ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ಆಕ್ರೋಶ ವ್ಯಕ್ತಪಡಿಸಿ, ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಕ್ರಾ ಹಾಗೂ ಮಣಿಪಾಲ್ ಆಸ್ಪತ್ರೆಗಳು ನಿಗದಿಯಂತೆ ಶೇ.50 ರಷ್ಟು ಬೆಡ್ ಕೊಟ್ಟಿಲ್ಲ. ಹೀಗಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೆ. ಖಾಸಗಿ ಆಸ್ಪತ್ರೆಗಳು ಶೇ.50 ರಷ್ಟು ಬೆಡ್ ಕೊಡಲೇಬೇಕು. ಬೆಡ್ ಕೊಡದೇ ಹೋದರೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ. ದೊಡ್ಡ ದೊಡ್ಡ ಆಸ್ಪತ್ರೆಗಳೇ ಬೆಡ್ ಕೊಟ್ಟಿಲ್ಲ, ಈ ಬಗ್ಗೆ ನನಗೆ ಅಸಮಾಧಾನ ಇದೆ. ಅಂತಹ ಆಸ್ಪತ್ರೆಗಳ ವಿರುದ್ದ ಇಂದಿನಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬೆಡ್ ನೀಡದ ಆಸ್ಪತ್ರೆಗಳನ್ನು ವಶಕ್ಕೆ ಪಡೆದು ಸರ್ಕಾರವೇ ನಡೆಸಲಿದೆ ಎಂದು ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾಗೆ ಕಡಿವಾಣ ಹಾಕಲು ನಾಳೆಯಿಂದ ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿರುವ ಸರ್ಕಾರ ಇಂದು ಪೂರ್ವಭಾವಿ ಸಭೆ ನಡೆಸಿತು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಕೆ.ಸುಧಾಕರ್ ಅವರು ಕುಮಾರಕೃಪ ಅತಿಥಿಗೃಹದಲ್ಲಿ ಪೂರ್ವಭಾವಿ ಸಭೆ ಮಾಡಿ ಚರ್ಚೆ ನಡೆಸಿದರು.

ಬೆಂಗಳೂರಿಗೆ ಪ್ರತ್ಯೇಕ ಕೊರೋನಾ ಕಠಿಣ ಕ್ರಮ ರೂಪಿಸುವುದು, ವಿವಿಧ ಜಿಲ್ಲೆಗಳಿಗೆ ಸರ್ಕಾರ ಮಾಡಿರುವ ಹೊಸ ಕ್ರಮಗಳ ನಿರ್ವಹಣೆಗೆ ಹಣ ಬಿಡುಗಡೆ ಮಾಡುವುದು. ಸರ್ಕಾರದ ನೂತನ ಕ್ರಮಗಳನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಚರ್ಚೆ ನಡೆಯಿತು. ನಾಳೆಯ ಬೆಂಗಳೂರು ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚೆಯಾಗುವ ವಿಷಯಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು.

ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ನಾಳೆಯ ಸಭೆಯ ಪೂರ್ವಭಾವಿಯಾಗಿ ಇಂದು ಅನೌಪಚಾರಿಕವಾಗಿ ಸಭೆ ಮಾಡಿದ್ದೇವೆ. ಕೊರೋನಾ ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಗೃಹ ಇಲಾಖೆ ಜೊತೆ ಚರ್ಚೆ ಆಗಿದೆ. ವಿಪತ್ತು ನಿರ್ವಹಣಾ ಸಮಿತಿಯಿಂದ ಜಿಲ್ಲೆಗೆ ಹಣ ಬಿಡುಗಡೆ ಆಗಬೇಕು. ಇದನ್ನ ರಿಲೀಸ್ ಮಾಡಲು ಮನವಿ ಮಾಡಿದ್ದೇವೆ. ಕಂದಾಯ ಇಲಾಖೆ ಕೂಡ ಹಣ ಬಿಡುಗಡೆಗೆ ಒಪ್ಪಿದೆ. ನಾಳೆ ಬೆಂಗಳೂರು ಜನಪ್ರತಿನಿಧಿಗಳ ಸಭೆಯಲ್ಲಿ ಸಿಗುವ ಸಲಹೆ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ಎರಡೂ ಕಿವಿಗೆ ಮೆಷೀನ್ ಹಾಕೊಂಡರೂ ಯಡಿಯೂರಪ್ಪಗೆ ಕಿವಿ ಕೇಳಲ್ಲ; ಸಿಎಂ ಸ್ಥಾನ ಬಿಟ್ಟುಕೊಡಲ್ಲ: ಯತ್ನಾಳ್

ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ, ಬೆಂಗಳೂರಿನ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಆಗಿದೆ. ನಾಳೆ ಏನು ಚರ್ಚೆ ಮಾಡಬೇಕು. ನ್ಯೂನ್ಯತೆ ಏನಿದೆ ಎಂಬ ಬಗ್ಗೆ ಮಾತಾಡಿದ್ದೇವೆ. ಬೆಡ್ ವ್ಯವಸ್ಥೆ ಬಗ್ಗೆ, ರೆಮಿಡಿಸಿವರ್ ಬಗ್ಗೆ ಸಹ ಚರ್ಚೆ ಆಗಿದೆ. ರೆಮಿಡಿಸಿವರ್ ಕೊರತೆ ಇಲ್ಲ. ಚಿತಾಗಾರದಲ್ಲಿ ಸರದಿ ಸಾಲಿನ ಬಗ್ಗೆಯೂ ಚರ್ಚಿಸಿದೆವು. ಆಸ್ಪತ್ರೆಗಳು ಸೋಂಕಿತರ ಮೃತದೇಹಗಳನ್ನು ಕುಟುಂಬಸ್ಥರಿಂದ ಒಂದೇ ಸಮಯದಲ್ಲಿ ಕೊಡುತ್ತಿರುವುದರಿಂದ ಚಿತಾಗಾರದಲ್ಲಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆ 7 ಗಂಟೆಗೆ ಮೃತದೇಹಗಳನ್ನು ನೀಡಲು ಅಧಿಕಾರಿಗಳಿಗೆ ಹೇಳಿದ್ದೇವೆ ಎಂದು ತಿಳಿಸಿದರು.
ಇನ್ನು ಬೆಡ್ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್ಗೆ ಸೂಚನೆ ನೀಡಲಾಗಿದೆ. ಮದುವೆ, ಜಾತ್ರೆ-ಸಮಾರಂಭಗಳಿಗೆ ನಿಯಮಗಳನ್ನು ರೂಪಿಸಲಾಗಿದ್ದು, ಕಟ್ಟುನಿಟ್ಟಿನಿಂದ ಪಾಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ. ಬೆಂಗಳೂರಲ್ಲಿ ಯಾವುದೇ ಕಾರಣಕ್ಕೂ ಲಾಕ್ಡೌನ್ ಇಲ್ಲ ಎಂದು ಮತ್ತೊಮ್ಮೆ ಸಚಿವ ಅಶೋಕ್ ಸ್ಪಷ್ಟನೆ ನೀಡಿದರು. ನಾಳೆ ಬೆಂಗಳೂರಿಗೆ ವಿಶೇಷ ಮಾರ್ಗಸೂಚಿ ಹೊರಡಿಸುತ್ತೇವೆ. ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಮಾರ್ಗಸೂಚಿ ಹೊರಡಿಸುತ್ತೇವೆ. ನೈಟ್ ಕರ್ಫ್ಯೂ ಮುಂದುವರಿಸುವ ಬಗ್ಗೆ ಸಿಎಂ ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.
Published by: MAshok Kumar
First published: April 18, 2021, 3:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories