news18-kannada Updated:April 14, 2020, 5:00 PM IST
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ
ಬೆಂಗಳೂರು(ಏ.14): ಪ್ರಧಾನಿ ನರೇಂದ್ರ ಮೋದಿಯವರು ಲಾಕ್ ಡೌನ್ ಮೇ 3 ವರೆಗೆ ವಿಸ್ತರಣೆ ಮಾಡಿದ್ದಾರೆ. ಇದಕ್ಕೆ ನಮ್ಮ ಬೆಂಬಲವಿದೆ. ಪ್ರಧಾನಿಗಳು ಹೇಳಿದ ಎಲ್ಲಾ ಕೆಲಸವನ್ನು ನಾವು ಮಾಡಿದ್ದು, ಚಪ್ಪಾಳೆ ಹೊಡೆದು, ದೀಪ ಹಚ್ಚಿದ್ದೇವೆ. ಈಗಲೂ ಬೆಂಬಲ ಕೊಡುತ್ತೇವೆ. ಆದರೆ, ನನ್ನ ಪತ್ರಕ್ಕೆ ಇನ್ನೂ ಉತ್ತರ ಬಂದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಕೇವಲ ನಮ್ಮ ರಾಜ್ಯಕ್ಕಾಗಿ ಪತ್ರ ಬರೆದಿಲ್ಲ. ಎಲ್ಲಾ ರಾಜ್ಯದ ವಿಚಾರವನ್ನು ಗ್ರಹಿಸಿ ಪತ್ರ ಬರೆದಿದ್ದೇನೆ. ಅದರ ಬಗ್ಗೆ ಕ್ರಮ ತೆಗೆದುಕೊಳ್ತಾರಾ ನೋಡೋಣ. ಬಡವರು ನಾನಾ ರೀತಿ ತೊಂದರೆ ಅನುಭವಿಸುತ್ತಿದ್ದಾರೆ. ಇದು ಪ್ರಧಾನಿಗಳ ಗಮನಕ್ಕೆ ಬಂದಿದೆ. ಕೆಲವರಿಗೆ ಊಟವೂ ಸಿಗುತ್ತಿಲ್ಲ. ದೆಹಲಿ, ಉತ್ತರ ಪ್ರದೇಶ ಸೇರಿದಂತೆ ಅನೇಕ ಕಡೆಗೆ ಕಾರ್ಮಿಕರು ಗುಳೆ ಹೋಗುತ್ತಿದ್ದಾರೆ ಎಂದರು.
ಮಾಲೀಕರಿಗೆ ಸಂಬಳ ಕೊಡಿ ಎಂದು ಹೇಳಿದರೂ ಕೊಡುತ್ತಿಲ್ಲ. ಸರ್ಕಾರದ ಸೂಚನೆಯನ್ನು ಕಟ್ಟಡ ಮಾಲೀಕರು ಪಾಲನೆ ಮಾಡಿಲ್ಲ. ಅನೇಕ ರಾಜ್ಯದಲ್ಲಿ ಇದು ಜಾರಿಗೆ ಬಂದಿಲ್ಲ. ಕೆಲ ರಾಜ್ಯದಲ್ಲಿ ಮಾತ್ರ ಇದು ಜಾರಿಗೆ ಬಂದಿದೆ. ದೆಹಲಿಯಲ್ಲಿ 5 ಸಾವಿರ, ಬೇರೆ ಕಡೆ 2 ಸಾವಿರ ಕೊಡುತ್ತಿದ್ದಾರೆ. ಆದರೆ, ಕೆಲವು ಕಡೆ ಕಾರ್ಮಿಕರಿಗೆ ಸಂಬಳ ಕೊಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಣಕಾಸು ಸಹಕಾರ ಕೊಡಿ ಅಂತ ಸಿಎಂಗಳು ಮನವಿ ಮಾಡಿದ್ದಾರೆ. ಆದರೆ, ಪ್ರಧಾನಿಗಳು ಏನು ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ನಾಳೆ ಕೆಲ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ನಾಳೆ ಪ್ರಧಾನಿಗಳು ಘೋಷಣೆ ನಂತರ ನಾನು ಮಾತನಾಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ :
ಕೊರೋನಾ ಸಾವಿನ ಬೆನ್ನ ಹಿಂದೆ ಮತ್ತೆ ಮೂರು ಪಾಸಿಟಿವ್ - ಕಲಬುರ್ಗಿಯಲ್ಲಿ ಆತಂಕದ ಕಾರ್ಮೋಡ
ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರಗಳಿಗೆ ಎಲ್ಲಾ ಹಂತದಲ್ಲಿ ಸಹಕಾರ ಕೊಟ್ಟಿದ್ದೇವೆ. ಈಗಲೂ ಸಹಕಾರ ಕೊಡುತ್ತೇವೆ. ಇನ್ನು ಬೇರೆ ರಾಷ್ಟ್ರಗಳಲ್ಲಿ ವೇಗವಾಗಿ ಸೋಂಕು ಹರಡುತ್ತಿದೆ. ನಮ್ಮ ದೇಶದಲ್ಲಿ ಜನಸಂಖ್ಯೆಗೆ ಹೊಲಿಸಿದ್ರೆ ಸಾವಿನ ಪ್ರಮಾಣ ಕಡಿಮೆ ಇದೆ. ನಮ್ಮ ರಾಜ್ಯದಲ್ಲಿ 9 ಜನ ಸತ್ತಿದ್ದು, ಹೀಗಾಗಿ ಪ್ರಧಾನಿಯವರ ಕಾರ್ಯಕ್ರಮಕ್ಕೆ ನಾವು ಬೆಂಬಲ ಕೊಡುತ್ತೇವೆ ಎಂದರು.
First published:
April 14, 2020, 5:00 PM IST