ಕೊರೋನಾ ಆತಂಕ; ಒಂದೇ ಆಸ್ಪತ್ರೆಯಲ್ಲಿದ್ದರೂ ಸಾಯುವ ಮುನ್ನ ಅಪ್ಪನ ಮುಖ ನೋಡಲಾಗಲಿಲ್ಲ!

ತಂದೆ ಸಾವಿನ ಅಂಚಿನಲ್ಲಿದ್ದರೂ ಜವಾಬ್ದಾರಿಯುತ ನಾಗರಿಕನಾಗಿ ವರ್ತಿಸಿದ ಲಿನೋ ಅವರ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Sushma Chakre | news18
Updated:March 23, 2020, 3:19 PM IST
ಕೊರೋನಾ ಆತಂಕ; ಒಂದೇ ಆಸ್ಪತ್ರೆಯಲ್ಲಿದ್ದರೂ ಸಾಯುವ ಮುನ್ನ ಅಪ್ಪನ ಮುಖ ನೋಡಲಾಗಲಿಲ್ಲ!
ಐಸೋಲೇಷನ್​ ವಾರ್ಡ್​ನಲ್ಲಿರುವ ಕೇರಳದ ಲಿನೋ ಎಬೆಲ್
  • News18
  • Last Updated: March 23, 2020, 3:19 PM IST
  • Share this:
ಕೊಟ್ಟಾಯಂ (ಮಾ. 23):  ಅಪ್ಪನ ಕೊನೆಗಾಲದಲ್ಲಿ ಅವರೊಂದಿಗೆ ಇರಲು ವಿದೇಶದಿಂದ ಬಂದ ಮಗನಿಗೆ ಕೊನೆಯ ಬಾರಿ ಹತ್ತಿರದಿಂದ ಅಪ್ಪನ ಮುಖ ನೋಡಲು ಕೂಡ ಅವಕಾಶ ಸಿಕ್ಕಿಲ್ಲ. ಕೊರೋನಾ ವೈರಸ್​ ಶಂಕೆಯಿಂದ ಆತನನ್ನು ಐಸೋಲೇಷನ್ ವಾರ್ಡ್​ನಲ್ಲಿರಿಸಿ, ವಿಡಿಯೋ ಮೂಲಕ ಅಪ್ಪನ ಅಂತ್ಯಕ್ರಿಯೆ ವೀಕ್ಷಿಸಲು ಅವಕಾಶ ಮಾಡಿಕೊಟ್ಟ ಹೃದಯವಿದ್ರಾವಕ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಕೊಟ್ಟಾಯಂನ 30 ವರ್ಷದ ಲಿನೋ ಎಬೆಲ್ ಎಂಬಾತ ಉದ್ಯೋಗಕ್ಕಾಗಿ ಕತಾರ್​ನಲ್ಲಿ ವಾಸವಾಗಿದ್ದರು. ತನ್ನ ಅಪ್ಪ ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಸುದ್ದಿ ಕೇಳಿ ಮಾರ್ಚ್​ 8ರಂದು ಕತಾರ್​ನಿಂದ ಕೇರಳಕ್ಕೆ ಆಗಮಿಸಿದ್ದ ಅವರಿಗೆ ಕೆಮ್ಮು ಶುರುವಾಗಿತ್ತು. ಕತಾರ್​ನಲ್ಲಿ ಕೊರೋನಾ ಸೋಂಕು ತೀವ್ರವಾಗಿ ಹರಡಿರುವುದರಿಂದ ಲಿನೋ ಅವರು ತನ್ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಕೋರಿದರು. ಈ ಹಿನ್ನೆಲೆಯಲ್ಲಿ ಅವರನ್ನು ವಿಮಾನ ನಿಲ್ದಾಣದಿಂದ ಐಸೋಲೇಷನ್ ವಾರ್ಡ್​ಗೆ ಶಿಫ್ಟ್​ ಮಾಡಲಾಯಿತು.

ಇದನ್ನೂ ಓದಿ: ನವಜಾತ ಶಿಶುವಿನಲ್ಲೂ ಕೊರೋನಾ ವೈರಸ್; ಏನು ಅರಿಯದ ಮುಗ್ಧನನ್ನು ಬಲಿ ಪಡೆಯುತ್ತಾ ಈ ಮಹಾಮಾರಿ?

ಕೊಟ್ಟಾಯಂನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಲಿನೋ ಅವರ ಅಪ್ಪ ದಾಖಲಾಗಿದ್ದರು. ಅದೇ ಆಸ್ಪತ್ರೆಯ ಐಸೋಲೇಷನ್ ವಾರ್ಡ್​ಗೆ ಲಿನೋ ಅವರನ್ನು ಶಿಫ್ಟ್​ ಮಾಡಲಾಯಿತು. ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅಪ್ಪನನ್ನು ಒಮ್ಮೆ ನೋಡಬೇಕೆಂದು ಲಿನೋ ವೈದ್ಯರ ಬಳಿ ಗೋಗರೆದರೂ ಅದಕ್ಕೆ ಅವಕಾಶ ಸಿಗಲಿಲ್ಲ. ಲಿನೋ ಅವರ ತಂದೆಗೆ ಇದ್ದಕ್ಕಿದ್ದಂತೆ ಸ್ಟ್ರೋಕ್ ಉಂಟಾಗಿ ಕೊನೆಯುಸಿರೆಳೆದರು.

ತಾನಿದ್ದ ಆಸ್ಪತ್ರೆಯಲ್ಲೇ ದಾಖಲಾಗಿದ್ದ ಅಪ್ಪನ ಮೃತದೇಹವನ್ನು ಆ್ಯಂಬುಲೆನ್ಸ್​ನಲ್ಲಿ ಮನೆಗೆ ತೆಗೆದುಕೊಂಡು ಹೋಗುವುದನ್ನು ತನ್ನ ವಾರ್ಡ್​ನ ಕಿಟಕಿಯಿಂದಲೇ ಕಣ್ತುಂಬಿಕೊಂಡ ಲಿನೋ ಅಸಹಾಯಕರಾಗಿ ನಿಂತಿದ್ದರು. ಅವರ ಸ್ಥಿತಿಯನ್ನು ನೋಡಿದ ಆಸ್ಪತ್ರೆ ಸಿಬ್ಬಂದಿ ಕೂಡ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ನಂತರ ಲಿನೋ ಅವರ ಅಪ್ಪನ ಅಂತ್ಯಕ್ರಿಯೆಯನ್ನು ವಿಡಿಯೋ ಕಾಲ್ ಮೂಲಕ ತೋರಿಸಲಾಯಿತು.

ಇದನ್ನೂ ಓದಿ: ಕೊರೋನಾಗೆ ಮತ್ತೊಂದು ಸಾವು?; ಸೌದಿ ಅರೇಬಿಯಾದಿಂದ ಬಂದಿದ್ದ ಮಹಾರಾಷ್ಟ್ರದ 71ವರ್ಷದ ಸೋಂಕು ಶಂಕಿತ ವೃದ್ಧ ಸಾವು

'ಒಂದುವೇಳೆ ನಾನಾಗೇ ವೈದ್ಯರ ಬಳಿ ಹೋಗಿ ನನ್ನ ಅನಾರೋಗ್ಯದ ಬಗ್ಗೆ ಹೇಳದಿದ್ದರೆ ನಾನು ಅಪ್ಪನ ಕೊನೆಗಾಲದಲ್ಲಿ ಅವರ ಜೊತೆಗೆ ಇರಬಹುದಿತ್ತು, ಅವರ ಅಂತ್ಯಕ್ರಿಯೆಯನ್ನಾದರೂ ನೋಡಬಹುದಿತ್ತು. ಆದರೆ, ಒಂದುವೇಳೆ ನನಗೆ ಕೊರೋನಾ ಸೋಂಕು ತಗುಲಿದ್ದರೆ ಅದು ಬೇರೆಯವರಿಗೆ ಹರಡಬಾರದು ಎಂಬ ಕಾರಣಕ್ಕೆ ನಾನು ಆ ನಿರ್ಧಾರ ತೆಗೆದುಕೊಂಡೆ' ಎಂದು ಲಿನೋ ಅವರು ತಮ್ಮ ಫೇಸ್​ಬುಕ್ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ.ತಮ್ಮನ್ನು ತೀವ್ರ ನಿಗಾದಲ್ಲಿರಿಸುವಂತೆ ಮನವಿ ಮಾಡಿದ್ದ ಲಿನೋ ಅವರ ನಿರ್ಧಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ತಂದೆ ಸಾವಿನ ಅಂಚಿನಲ್ಲಿದ್ದರೂ ಜವಾಬ್ದಾರಿಯುತ ನಾಗರಿಕನಾಗಿ ವರ್ತಿಸಿದ ಲಿನೋ ಅವರ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊರೋನಾ ಕಾರಣದಿಂದ 100 ದಿನ ರಜೆ ಕೇಳಿ ಡಿಜಿ, ಐಜಿಪಿಗೆ ಪೊಲೀಸ್ ಕಾನ್ಸ್​ಟೇಬಲ್ ಪತ್ರ; ತಮಾಷೆಗೆ ಬರೆದಿದ್ದು ಎಂದ ಸಿಬ್ಬಂದಿ

'ನಮ್ಮ ರಾಜ್ಯದ ಯುವಕನೋರ್ವ ತನ್ನ ಅಪ್ಪನನ್ನು ನೋಡಲು ವಿದೇಶದಿಂದ ಆಗಮಿಸಿದರೂ ಆತನಿಗೆ ಅವರ ಸಾವಿನ ಸಂದರ್ಭದಲ್ಲಿ ಅಪ್ಪನ ಜೊತೆಗಿರಲು ಸಾಧ್ಯವಾಗಲಿಲ್ಲ ಎಂದು ಕೇಳಿ ಬಹಳ ಬೇಸರವಾಯಿತು. ಇಂತಹ ಸ್ಥಿತಿ ಯಾರಿಗೂ ಬಾರದಿರಲಿ. ಆದರೆ, ಆ ಸಮಯದಲ್ಲಿ ಕೂಡ ಸ್ವ ನಿರ್ಬಂಧ ಹೇರಿಕೊಂಡು, ತಪಾಸಣೆಗೆ ಸಹಕರಿಸಿದ ಆತ ತೋರಿರುವ ಸಾಮಾಜಿಕ ಬದ್ಧತೆ, ಧೈರ್ಯವನ್ನು ನಾವೆಲ್ಲರೂ ಮೆಚ್ಚಲೇಬೇಕು' ಎಂದು ಕೇರಳದ ಸಿಎಂ ಪಿಣರಾಯಿ ವಿಜಯ್ ಹೇಳಿದ್ದಾರೆ.ಈ ಬಗ್ಗೆ ಕೇರಳದ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಕೂಡ ಟ್ವೀಟ್ ಮಾಡಿದ್ದಾರೆ. 'ಲಿನೋ ಎಬೆಲ್ ಎಂಬ ಕೇರಳದ ವ್ಯಕ್ತಿ ಕೊರೋನಾ ವೈರಸ್​ ತಗುಲಿರುವ ಅನುಮಾನದಿಂದ ಸ್ವ ನಿರ್ಬಂಧ ಹೇರಿಕೊಂಡ ಹಿನ್ನೆಲೆಯಲ್ಲಿ ಆತನಿಗೆ ಅಪ್ಪನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಕೇರಳದ ಜನರಿಗಾಗಿ ಆತ ಮಾಡಿದ ತ್ಯಾಗವನ್ನು ನಾನು ಪ್ರಶಂಸಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.
First published: March 23, 2020, 3:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading