ಗದಗ: ಕೊರೊನಾ ಕರಾಳತೆ ನಿದ್ದೆಯಲ್ಲಿದ್ದವರನ್ನು ಬೆಚ್ಚಿ ಬೀಳಿಸುತ್ತಿದೆ. ಆದರೆ ಜಿಲ್ಲೆಯ ಬನಹಟ್ಟಿ ಗ್ರಾಮದಲ್ಲಿ ಅದ್ಯಾವುದರ ಭಯವೂ ಇಲ್ಲದೇ ಊರ ದೇವರ ಜಾತ್ರೆಯನ್ನು ಭರ್ಜರಿ ಆಗಿ ಮಾಡಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರದ ಪರಿವೇ ಇಲ್ಲದೇ ಓಕುಳಿಯಲ್ಲಿ ಜನ ಮೈಮರೆತಿದ್ದರು. ಇತ್ತ ಅಧಿಕಾರಿಗಳ ನಿರ್ಲಕ್ಷವೂ ಕೂಡ ಇದಕ್ಕೆ ಕಾರಣವಾಗಿತ್ತು. ಈ ಕುರಿತು ನ್ಯೂಸ್ 18 ಕನ್ನಡದಲ್ಲಿ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಭೆ ಮಾಡಿ ಗ್ರಾಮವನ್ನೇ ಲಾಕ್ ಡೌನ್ ಮಾಡಲು ಮುಂದಾಗಿದ್ದಾರೆ.
ಬನಹಟ್ಟಿ ಗ್ರಾಮದಲ್ಲಿ ಹನುಮಂತ ದೇವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಹಿನ್ನಲೆ ಗ್ರಾಮದ ಜನರು ಹನುಮಂತ ದೇವರ ಓಕುಳಿ ಆಟವಾಡಿದ್ದಾರೆ. ಓರ್ವ ಮಹಿಳೆ ದೊಣ್ಣೆ ಹಿಡಿದು ನೀರು ಎರೆಚುವವರಿಗೆ ಬೆನ್ನಟ್ಟುವ ಮೂಲಕ ಈ ಆಚರಣೆ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಹನುಮಂತ ದೇವರ ಓಕುಳಿ ಆಟವಾಡಲು ಜನರು ಕೊರೋನಾ ಮರೆತು ತಮಗೆ ಅರಿವೆ ಇಲ್ಲದೇ ಹಬ್ಬ ಮಾಡಿದ್ದಾರೆ.
ಇನ್ನು ಈ ಓಕಳಿ ನೋಡೋಕು ಬೇರೆ ಊರಿಂದ ನೂರಾರು ಜನರು ನೆರೆದಿದ್ರು. ಯಾವುದೇ ಮಾಸ್ಕ್ ಹಾಗೂ ದೈಹಿಕ ಅಂತರ ಇಲ್ಲದೇ ಜನ ಈ ಆಚರಣೆಯಲ್ಲಿ ಭಾಗಿಯಾಗಿದ್ರು. ಕೊರೋನಾ ವೈರಸ್ ಸಿಕ್ಕ ಸಿಕ್ಕವರನ್ನ ಬಲಿ ಪಡೆಯುತ್ತಿರುವ ಸಂದರ್ಭದಲ್ಲಿ ಓಕುಳಿ ಮೂಲಕ ಜನರು ಬೇಜವಾಬ್ದಾರಿ ವರ್ತನೆ ತೋರಿದರು. ಸರ್ಕಾರ ಲಾಕ್ ಡೌನ್ ಅಸ್ತ್ರ ಪ್ರಯೋಗ ಮಾಡಿದರೂ ನಿಯಮ ಉಲ್ಲಂಘಿಸಿ ಓಕುಳಿ ಹಬ್ಬ ಆಚರಿಸಿದ್ದಾರೆ. ಇದಕ್ಕೆ ಪಂಚಾಯತಿ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ.
ಇದನ್ನೂ ಓದಿ: ನಿಮಗೆ ಬ್ಲ್ಯಾಕ್ ಫಂಗಸ್ ತಗುಲಿದೆಯಾ ಎಂದು ನೀವೇ ಪರೀಕ್ಷಿಸಿಕೊಳ್ಳಬಹುದು; ಈ ಲಕ್ಷಣಗಳು ಕಂಡು ಬಂದರೆ ಎಚ್ಚರವಹಿಸಿ
ಈ ಕುರಿತು ನ್ಯೂಸ್ 18 ಕನ್ನಡದ ವರದಿ ಪ್ರಸಾರ ಮಾಡಿತ್ತು ವರದಿಗೆ ಎಚ್ಚೆತ್ತಗೊಂಡ ತಹಶಿಲ್ದಾರ ಎ.ಡಿ ಅಮರವಾಡಿಗ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ದೌಡಾಯಿಸಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಇನ್ನು ಗ್ರಾಮಕ್ಕೆ ದೌಡಾಯಿಸಿದ ತಹಶೀಲ್ದಾರ್ ಗ್ರಾಮದ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿದರು. ಅಧಿಕಾರಿಗಳ ಕಣ್ತಪ್ಪಿಸಿ ಕೋವಿಡ್ ನಿಯಮ ಉಲ್ಲಂಘಿಸಿ ಜಾತ್ರೆ ಮಾಡಿದ ಕಾರಣ ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ನಾಲ್ಕು ದಿನಗಳ ಕಾಲ ಗ್ರಾಮವನ್ನು ಲಾಕ್ ಡೌನ್ ಮಾಡಲಾಗಿದೆ.
ಈ ವೇಳೆ ದಿನಸಿ ಹಾಗೂ ಹಾಲಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಿಡಿಯೋದಲ್ಲಿ ಕಾಣುವ ವ್ಯಕ್ತಿಗಳಿಗೆ ದಂಡದ ಜೊತೆಗೆ ಪರೀಕ್ಷೆಗೊಳಪಡಿಸಲಾಗುವುದು. ಜೊತೆಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಮಾಡಲಾಗುವುದು. ದೇವಸ್ಥಾನ ಸಮೀತಿ ಹಾಗು ಅರ್ಚಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.
ಜನ ಮರಳೋ ಜಾತ್ರೆ ಮರಳೋ ಎನ್ನುವಂತೆ ಇಂಥ ಗಂಭೀರತೆಯಲ್ಲೂ ಕೊರೊನಾಗೆ ಕ್ಯಾರೇ ಎನ್ನದೇ ಇಲ್ಲಿನ ಜನತೆ ಜಾತ್ರೆ ಆಚರಿಸಿದ್ದಾರೆ. ಕೆಲವರು ಮಾಡಿದ ತಪ್ಪಿನಿಂದ ಇಡೀ ಊರಿಗೆ ಊರೇ ಬೀಗ ಬಿದ್ದಿದ್ದು ಇದೀಗ ಸಂಕಷ್ಟದ ಜೊತೆಗೆ ಆತಂಕಕ್ಕೀಡಾಗುವಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ