ಚಾಮರಾಜನಗರ(ಏ.02): ಮಾರಕ ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟಲು ಈಗಾಗಲೇ ಕರ್ನಾಟಕ ಕೇರಳ ಗಡಿಬಂದ್ ಮಾಡಲಾಗಿದೆ. ಆದರೆ ಅಗತ್ಯ ವಸ್ತುಗಳ ಸಾಗಾಣಿಕೆಗೆ ಅವಕಾಶ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಚಾಮರಾಜನಗರ ಜಿಲ್ಲೆ ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ ಬಳಿ ಸಂಪೂರ್ಣವಾಗಿ ಗಡಿ ಬಂದ್ ಮಾಡಲಾಗಿತ್ತು. ಆದರೆ ರೈತರು ಬೆಳೆದ ಉತ್ಪನ್ನಗಳ ಸಾಗಾಟಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸೂಚನೆ ನೀಡಿದ್ದರು. ಇದೀಗ ಎರಡೂ ರಾಜ್ಯಗಳ ನಡುವೆ ದಿನಸಿ, ಹಾಲು, ಹಣ್ಣು ತರಕಾರಿಯಂತಹ ಅಗತ್ಯ ವಸ್ತುಗಳ ಸಾಗಾಣಿಕೆಗೆ ಮತ್ತೆ ಅವಕಾಶ ನೀಡಲಾಗಿದೆ. ಇದರಿಂದಾಗಿ ಎರಡೂ ರಾಜ್ಯಗಳ ನಡುವೆ ನೂರಾರು ವಾಹನಗಳ ಓಡಾಟ ಶುರುವಾಗಿದೆ
ಕಳೆದ 8 ದಿನಗಳಿಂದ ಬಂದ್ ಆಗಿದ್ದ ಗುಂಡ್ಲುಪೇಟೆ ಎಪಿಎಂಸಿ ತರಕಾರಿ ಮಾರುಕಟ್ಟೆ ಇಂದಿನಿಂದ ಮತ್ತೆ ಆರಂಭವಾಗಿದೆ. ಇಲ್ಲಿ ತರಕಾರಿ ಖರೀದಿಸಲು ಕೇರಳದ ನೂರಾರು ವ್ಯಾಪಾರಿಗಳು ಆಗಮಿಸತೊಡಗಿದ್ದಾರೆ. ಹಾಗೆಯೆ ಇಲ್ಲಿನ ವ್ಯಾಪಾರಿಗಳು ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿ ಕೇರಳಕ್ಕೆ ಕೊಂಡೊಯ್ದು ಮಾರಾಟ ಮಾಡಿ ಬರತೊಡಗಿದ್ದಾರೆ.
ಇತ್ತೀಚೆಗೆ ನೆರೆಯ ಕೇರಳದಲ್ಲಿ ಅತಿಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿರುವುದು ಕೇರಳಕ್ಕೆ ಹೊಂದಿಕೊಂಡಂತಿರುವ ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚು ಆತಂಕವುಂಟು ಮಾಡಿದೆ.
ಅದರಲ್ಲೂ ತರಕಾರಿ ಖರೀದಿ ಹಾಗು ಮಾರಾಟಕ್ಕೆ ನೂರಾರು ಮಂದಿ ಎರಡು ರಾಜ್ಯಗಳ ನಡುವೆ ಓಡಾಟ ನಡೆಸುವುದರಿಂದ ಅವರಿಗೆ ಕೇರಳದಲ್ಲಿ ಕೊರೊನಾ ಸೋಂಕು ತಗುಲುವ ಸಾಧ್ಯತೆಗಳನ್ನು ಅಲ್ಲೆಗೆಳೆಯುವಂತಿಲ್ಲ. ಹಾಗಾಗಿ ಜಿಲ್ಲೆಯ ಜನರಲ್ಲಿ ಸಹಜವಾಗಿಯೇ ಆತಂಕ ಮನೆಮಾಡಿದೆ.
ರೈತರಿಗೆ ಅನುಕೂಲ ಮಾಡಿಕೊಡುವ ಹೆಸರಿನಲ್ಲಿ ಕೇರಳ ಗಡಿ ಬಂದ್ ಸಡಿಲ ಗೊಳಿಸಿರುವುದು ಸರಿಯಾದ ಕ್ರಮವಲ್ಲ, ಅಗತ್ಯ ವಸ್ತುಗಳ ಸಾಗಾಣಿಕೆ ನೆಪದಲ್ಲಿ ನೂರಾರು ಮಂದಿ ಸಂಚರಿಸುವುದರಿಂದ ಕೇರಳದಿಂದ ಕೊರೋನಾ ಸೋಂಕು ಹರಡುವ ಸಾಧ್ಯತೆಗಳೇ ಹೆಚ್ಚು, ಹಾಗಾಗಿ ಕೇರಳ ಗಡಿ ಸಂಪೂರ್ಣ ಬಂದ್ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ರೈತ ಸಂಘದ ಮುಖಂಡ ಮಾಡ್ರಳ್ಳಿ ಮಹದೇವಪ್ಪ ಆತಂಕ ವ್ಯಕ್ತಪಡಿಸುತ್ತಾರೆ.
ಅಗತ್ಯ ವಸ್ತುಗಳ ನೆಪದಲ್ಲಿ ನೂರಾರು ವಾಹನಗಳು ಗಡಿದಾಟಿ ಹೋಗಿಬರುತ್ತಿವೆ. ಒಂದು ವೇಳೆ ಸೋಂಕು ತಗುಲಿದರೆ ಇದರ ಹೊಣೆ ಯಾರು ಹೊರುತ್ತಾರೆ? ಈ ನಡುವೆ ಕೇರಳ ಗಡಿಯನ್ನು ಸಂಪೂರ್ಣ ಬಂದ್ ಮಾಡುವ ಮೂಲಕ ಕೊರೋನಾ ಸೊಂಕು ಹರಡುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ಗುಂಡ್ಲುಪೇಟೆ ತಾಲೋಕು ರೈತ ಸಂಘ ತಹಸೀಲ್ದಾರ್ ನಂಜುಂಡಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಇದನ್ನೂ ಓದಿ : ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ 8 ಜನ - ಉತ್ತರ ಕನ್ನಡ ಜಿಲ್ಲೆಯ ಜನತೆಯಲ್ಲಿ ಆತಂಕ
ಜಿಲ್ಲೆಯಲ್ಲಿ ಬೆಳೆದ ತರಕಾರಿ ಮತ್ತಿತರ ಕೃಷಿ ಉತ್ಪನ್ನಗಳನ್ನು ಸದ್ಯಕ್ಕೆ ಸರ್ಕಾರವೇ ಖರೀದಿಸಿ ನಮ್ಮ ಜಿಲ್ಲೆಯಲ್ಲೇ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು. ಸಾಧ್ಯವಾದರೆ ನಮ್ಮ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಪೂರೈಸಬೇಕು ರೈತ ಸಂಘ ಆಗ್ರಹಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ