HOME » NEWS » Coronavirus-latest-news » VILLAGERS OF HONNAVARA TALUK DESPERATE WITH THE FOREST ENTRY BAN DUE TO KFD DISEASE HK

ಮಂಕಿ ಗ್ರಾಮದ ಸಾವಯವ ಕೃಷಿಕರಿಗೆ ಮಂಗನ ಕಾಯಿಲೆಯೇ ದೊಡ್ಡ ವಿಲನ್

ಇಲ್ಲಿನ ಬಹುತೇಕ ರೈತರು ಸಾವಯವ ಕೃಷಿಯನ್ನೇ ಮಾಡುತ್ತಿದ್ದು, ಇವರಿಗೆ ಕೊಟ್ಟಿಗೆ ಗೊಬ್ಬರಕ್ಕೆ ತರಗೆಲೆ ಬೇಕಾಗುತ್ತದೆ. ಇದಕ್ಕೆ ನೂರಾರು ವರ್ಷಗಳಿಂದ ಸ್ಥಳೀಯ ಅರಣ್ಯವನ್ನೇ ಅವಲಂಬಿಸಿದ್ದಾರೆ.

news18-kannada
Updated:April 29, 2020, 7:46 AM IST
ಮಂಕಿ ಗ್ರಾಮದ ಸಾವಯವ ಕೃಷಿಕರಿಗೆ ಮಂಗನ ಕಾಯಿಲೆಯೇ ದೊಡ್ಡ ವಿಲನ್
ಗ್ರಾಮಸ್ಥರು
  • Share this:
ಕಾರವಾರ(ಏ. 29): ಕೊರೋನಾ ಲಾಕ್ ಡೌನ್‌ನಿಂದ‌ ಉತ್ತರ ಕನ್ನಡ ಜಿಲ್ಲೆಯ ರೈತರು ಸಮಸ್ಯೆ ಎದುರಿಸುತ್ತಿರುವಾಗಲೇ ಸರಕಾರ ಕೃಷಿ‌ ಚಟುವಟಿಕೆಗೆ ಅವಕಾಶ ನೀಡಿರುವುದರಿಂದ ಕೊಂಚ ನಿರಾಳರಾಗಿದರು. ಆದರೆ, ಮಂಗನ ಕಾಯಿಲೆ ರೋಗ ರೈತರ ನಿದ್ದೆ ಕೆಡಿಸಿ ಕೊರೋನಾ ಬೇಕು ಮಂಗನ ಕಾಯಿಲೆ ಬೇಡ ಎನ್ನುವ ಹಾಗೆ ಆಗಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ರೈತರ ಕೃಷಿಗೆ ಬೇಕಾಗಿರುವ ತರಗೆಲೆ ಸಮಸ್ಯೆ ಉಂಟಾಗಿದ್ದು, ಅರಣ್ಯಕ್ಕೆ ಹೋಗಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ಕಾರಣ ಇಲ್ಲಿ ವ್ಯಾಪಕವಾಗಿ ಹರಡಿಕೊಂಡಿರುವ ಮಂಗನಕಾಯಿಲೆ ಭಯ. ಮಂಕಿ ಗ್ರಾಮದ ಸುತ್ತಮುತ್ತ ತಾಳಮಕ್ಕಿ, ಬಾಲಯ್ಯನವಾಡೆ, ದೊಡ್ಡಗುಂದ, ದೇವಿಕಾನ, ಬೋಳೆಬಸ್ತಿ ಹೀಗೆ ಹಲವು ಹಳ್ಳಿಗಳಲ್ಲಿ ನೂರಾರು ರೈತರಿದ್ದಾರೆ.

ಇವರಿಗೆ ಸಾವಿರಾರು ಎಕರೆ ಕೃಷಿ ಭೂಮಿಯಿದ್ದು, ಹೆಚ್ಚಾಗಿ ಭತ್ತ ಬೆಳೆಯುತ್ತಾರೆ. ಇಲ್ಲಿನ ಬಹುತೇಕ ರೈತರು ಸಾವಯವ ಕೃಷಿಯನ್ನೇ ಮಾಡುತ್ತಿದ್ದು, ಇವರಿಗೆ ಕೊಟ್ಟಿಗೆ ಗೊಬ್ಬರಕ್ಕೆ ತರಗೆಲೆ ಬೇಕಾಗುತ್ತದೆ. ಇದಕ್ಕೆ ನೂರಾರು ವರ್ಷಗಳಿಂದ ಸ್ಥಳೀಯ ಅರಣ್ಯವನ್ನೇ ಅವಲಂಬಿಸಿದ್ದಾರೆ. ಆದರೆ, ಈಗ ಈ ಭಾಗದಲ್ಲಿ ಮಂಗನ ಕಾಯಿಲೆ ಜೋರಾಗಿದ್ದು ರೈತರಿಗೆ ತರಗೆಲೆ ತರಲು ಸುರಕ್ಷತಾ ದೃಷ್ಟಿಯಿಂದ ಅರಣ್ಯ ಇಲಾಖೆ ಬಿಡುತ್ತಿಲ್ಲ.

ವರ್ಷದಲ್ಲಿ ಕೇವಲ 15 ರಿಂದ 20 ದಿನ ಮಾತ್ರ ರೈತರಿಗೆ ಅರಣ್ಯಕ್ಕೆ ಹೋಗಲು ಅವಕಾಶ ಮಾಡಿಕೊಟ್ಟರೂ ಸಾಕು. ಈ ವೇಳೆ ತರಗೆಲೆ ತಂದು ರಾಶಿ ಮಾಡಿಕೊಳ್ಳುತ್ತೇವೆ. ಇದು ಮಳೆ ಬರುವ ಮುಂಚೆಯೇ ಆಗಬೇಕು. ಈ ವರ್ಷ ಯಾವ ರೈತರಿಗೂ ಅರಣ್ಯಕ್ಕೆ ಪ್ರವೇಶಕ್ಕೆ ಬಿಡುತ್ತಿಲ್ಲ. ತರಗೆಲೆ ಇಲ್ಲದಿದ್ದರೆ ಕೃಷಿ ಮಾಡುವುದು ಕಷ್ಟ. ತರಗೆಲೆಯಿಂದ ಮಾಡಿದ ಸಾವಯವ ಗೊಬ್ಬರ ಬಳಸಿದರೆ ಮಾತ್ರ ಇಲ್ಲಿನ ಭೂಮಿಯಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯ. ಅರಣ್ಯ ಇಲಾಖೆಯವರು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಇದ್ದರೂ ಕೂಡಾ ಸುರಕ್ಷತೆ ಮುಂದಿಟ್ಟು ಕೈಗೊಂಡ ಕ್ರಮವಾಗಿದೆ.

ಇದನ್ನೂ ಓದಿ :  ಕೊರೋನಾ ಹೋರಾಟಕ್ಕೆ ಸಿಎಂ ಪರಿಹಾರ ನಿಧಿಗೆ ಪಾಕೆಟ್ ಮನಿ ನೀಡಿದ ಹಾವೇರಿ ಪುಟಾಣಿಗಳು!

ಒಟ್ಟಿನಲ್ಲಿ ಇಲ್ಲಿನ ರೈತರಿಗೆ ಕೊರೋನಾ ದಿಂದ ಮುಕ್ತಿ ಸಿಕ್ಕಿ ಕೃಷಿ ಚಟುವಟಿಕೆ ಆರಂಭವಾಯಿತು ಎನ್ನುವುವಾಗಲೇ  ಮಂಗನ ಕಾಯಿಲೆ ಭೂತ ಬಿಟ್ಟು ಬಿಡದೆ ಕಾಡುತ್ತಿದೆ. ಮುಂದೆ ಸೂಕ್ತ ಕ್ರಮಕ್ಕೆ ಅರಣ್ಯ ಇಲಾಖೆ ಮುಂದಾಗಿ ರೈತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸ ಬೇಕಾಗಿದೆ.

(ವರದಿ : ದರ್ಶನ್ ನಾಯ್ಕ)
First published: April 29, 2020, 7:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories