HOME » NEWS » Coronavirus-latest-news » VIJAYAPURA DISTRICT IN ORANGE ZONE RH

ಆರೆಂಜ್ ಝೋನ್​ನಲ್ಲಿ ವಿಜಯಪುರ ಜಿಲ್ಲೆ; ಗುಮ್ಮಟ ನಗರಿ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಹಲವು ವಿನಾಯಿತಿ

ವಿಜಯಪುರ ಜಿಲ್ಲೆಯಲ್ಲಿ ಈವರೆಗೆ 1,990 ಜನರ ಮೇಲೆ ನಿಗಾ ಇರಿಸಲಾಗಿದೆ. 424 ಜನರು 28 ದಿನಗಳ ನಿಗಾ ಪೂರೈಸಿದ್ದಾರೆ. 1,564 ಜನರು 28 ದಿನಗಳ ನಿಗಾದಲ್ಲಿದ್ದಾರೆ. 46 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇಬ್ಬರು ಕೊರೋನಾಗೆ ಬಲಿಯಾಗಿದ್ದಾರೆ.  11 ಜನರು ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

news18-kannada
Updated:May 2, 2020, 7:10 PM IST
ಆರೆಂಜ್ ಝೋನ್​ನಲ್ಲಿ ವಿಜಯಪುರ ಜಿಲ್ಲೆ; ಗುಮ್ಮಟ ನಗರಿ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಹಲವು ವಿನಾಯಿತಿ
ಸಚಿವೆ ಶಶಿಕಲಾ ಜೊಲ್ಲೆ
  • Share this:
ವಿಜಯಪುರ: ವಿಜಯಪುರ ಜಿಲ್ಲೆ ಆರೆಂಜ್ ಜೋನ್​ನಲ್ಲಿದೆ. ಈ ಹಿನ್ನೆಲೆಯಲ್ಲಿ ಮೇ 4 ರಿಂದ ವಿಜಯಪುರ ನಗರ ಹೊರತುಪಡಿಸಿ ತಾಲೂಕು ಕೇಂದ್ರಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ವಿಜಯಪುರದಲ್ಲಿ ಅಧಿಕಾರಿಗಳೊಂದಿಗೆ ಸಭೆ ಮತ್ತು ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದದ ಬಳಿಕ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿರುವ ನಾಲ್ಕು ಕಂಟೇನ್ಮೇಂಟ್ ಜೋನ್ ಮುಂದುವರೆಯಲಿದೆ. ಆ ಭಾಗದಲ್ಲಿ ಪರಿಶೀಲನೆಗಾಗಿ ನಾಲ್ಕು ತಂಡಗಳ ರಚನೆ ಮಾಡಲಾಗಿದೆ. ಇಂದು ವಿಜಯಪುರದಲ್ಲಿಯೇ ಕೊರೋನಾ ಲ್ಯಾಬ್ ಟೆಸ್ಟ್ ಕಾರ್ಯಾರಂಭ ಮಾಡಿದೆ ಎಂದು ತಿಳಿಸಿದರು.

ದಿನಕ್ಕೆ 25 ರಿಂದ 30 ಜನರ ಗಂಟಲು ದ್ರವದ ಮಾದರಿ ಟೆಸ್ಟ್ ಮಾಡಬಹುದಾಗಿದೆ.  ಮಹಾರಾಷ್ಟ್ರದಿಂದ ವಿಜಯಪುರ ಜಿಲ್ಲೆಗೆ ಬರುವವರಿಗೆ ಷರತ್ತುಬದ್ಧ ಅನುಮತಿ ನೀಡಲಾಗುತ್ತಿದೆ. ಬೇರೆ ರಾಜ್ಯ, ಜಿಲ್ಲೆಗಳಿಂದ ಬರುವವರು ಆರೋಗ್ಯ ಪ್ರಮಾಣ ಪತ್ರ ತರಬೇಕು. ಇಂಡಿ ಮತ್ತು ನಾಗಠಾಣ ಮತಕ್ಷೇತ್ರಗಳು ಮಹಾರಾಷ್ಟ್ರದ ಗಡಿಯಲ್ಲಿವೆ. ಆ ಭಾಗದ ಶಾಸಕರ ಸಲಹೆಗೆ ಅನುಗುಣವಾಗಿ ಆ ಭಾಗದಲ್ಲಿ ವ್ಯಾಪಾರ ವಹಿವಾಟು ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಜಯಪುರ ಜಿಲ್ಲೆಯಲ್ಲಿ ಈವರೆಗೆ 1,990 ಜನರ ಮೇಲೆ ನಿಗಾ ಇರಿಸಲಾಗಿದೆ. 424 ಜನರು 28 ದಿನಗಳ ನಿಗಾ ಪೂರೈಸಿದ್ದಾರೆ. 1,564 ಜನರು 28 ದಿನಗಳ ನಿಗಾದಲ್ಲಿದ್ದಾರೆ. 46 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇಬ್ಬರು ಕೊರೋನಾಗೆ ಬಲಿಯಾಗಿದ್ದಾರೆ.  11 ಜನರು ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.  ಈವರೆಗೆ 2,119 ಜನರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಲ್ಲಿ 1,934 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ 139 ಜನರ ವರದಿಗಾಗಿ ಕಾಯಲಾಗುತ್ತಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ಎಸ್ಪಿ ಅನುಪಮಾ ಅಗರವಾಲ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಬಿಜೆಪಿ ಶಾಸಕ ಸೋಮನಗೌಡ ಬಿ. ಪಾಟೀಲ ಸಾಸನೂರ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಉಪಸ್ಥಿತರಿದ್ದರು.

ಇದಕ್ಕೂ ಮುಂಚೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವೆ ಶಶಿಕಲಾ ಎ. ಜೊಲ್ಲೆ, ವಿಜಯಪುರ ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾಗಿರುವ ಕೊರೋನಾ ಸೋಂಕುಗಳು ಮತ್ತು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮಾಹಿತಿ ಪಡೆದರು. ಈ ಸಭೆಯಲ್ಲಿ ಮಾತನಾಡಿದ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲ, ಗೋವಾದಲ್ಲಿನ ಜಿಲ್ಲೆಯ ಕಾರ್ಮಿಕರಿಗೆ ವಿಜಯಪುರ ಜಿಲ್ಲೆಗೆ ಪ್ರವೇಶ ನೀಡಲು ಅವಕಾಶ ಕಲ್ಪಿಸುವಂತೆ ತಿಳಿಸಿದರು. ಅಲ್ಲದೇ, ಕಂಟೇನ್ಮೆಂಟ್ ವಲಯದಲ್ಲಿ ಆರೋಗ್ಯ ಸೇತು ಆಪ್ ಕಡ್ಡಾಯಗೊಳಿಸಲು, ರತ್ನಾಪುರ ಕಂಟೆನ್ಮೇಂಟ್ ಭಾಗದ ಎನ್.ಆರ್.ಇ.ಸಿ.ಜಿ.ಎ ಅಡಿ ಕಾರ್ಡ್ ಇದ್ದವರಿಗೆ ತಲಾ ರೂ. 2000 ಸಹಾಯಧನ ಒದಗಿಸುವಂತೆ ಆಗ್ರಹಿಸಿದರು.

ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಎಸ್. ಪಾಟೀಲ ಮಾತನಾಡಿ, ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಹೊರತಾದ ರೋಗಿಗಳಿಗಾಗಿ ಪ್ರತ್ಯೇಕ ವಿಭಾಗ ಮಾಡಿ ಇತರೆ ಕಾಯಿಲೆಗಳ ಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕು. ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ವಿಜಯಪುರ ನಗರ ಮತ್ತು ಜಿಲ್ಲೆಯ ಕಾರ್ಮಿಕರಿಗೆ ತಲಾ ರೂ. 2000 ರೂಪಾಯಿ ಸಹಾಯಧನ ಒದಗಿಸಲು ಕ್ರಮ ಕೈಗೊಳ್ಳಬೇಕು. ಕಟ್ಟಡ, ಕೃಷಿ, ರೈತರ ಚಟುವಟಿಕೆಗಳಿಗೆ ಅವಶ್ಯಕ ವಿನಾಯಿತಿ ನೀಡುವಂತೆ ಒತ್ತಾಯಿಸಿದರು.ಇದನ್ನು ಓದಿ: ಕರ್ನಾಟಕ ಲಾಕ್​​ಡೌನ್​​ಗೆ ಹಲವು ವಿನಾಯ್ತಿ​​​: ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಮಾತನಾಡಿ, ರೈತರ ತೋಟಗಾರಿಕೆ ಬೆಳೆಗಳನ್ನು ಆವರ್ತ ನಿಧಿಯಡಿ ಸೇರಿಸಿ ಬೆಂಬಲ ಬೆಲೆ ನೀಡಬೇಕು.  ಮಹಾರಾಷ್ಟ್ರದ ರಾಜ್ಯದ ಉಜನಿ ಜಲಾಶಯದಿಂದ ಭೀಮಾ ನದಿಗೆ ಹೆಚ್ಚುವರಿ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು .

ಮುದ್ದೇಬಿಹಾಳ ಬಿಜೆಪಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ, ದೇವರ ಹಿಪ್ಪರಗಿ ಬಿಜೆಪಿ ಶಾಸಕ ಸೋಮನಗೌಡ ಬಿ. ಪಾಟೀಲ ಸಾಸನೂರ, ಸಿಂದಗಿ ಜೆಡಿಎಸ್ ಶಾಸಕ ಎಂ. ಸಿ, ಮನಗೂಳಿ, ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಎಫ್. ಚವ್ಹಾಣ ಕೂಡ ನಾನಾ ಸಲಹೆ ನೀಡಿದರು.
Youtube Video
First published: May 2, 2020, 7:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories