ವಿದೇಶದಿಂದ ಮರಳಿದವರ ಬಡಾವಣೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ; ಸೂಚನೆ ಪಾಲಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ

ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯ ಕಾರ್ಯ ವೈಖರಿಯನ್ನು ಪರಿಶೀಲಿಸಲು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಂಗಳವಾರ ರಾತ್ರಿ ಈ 44 ಜನ ವಾಸಿಸುವ ಬಡಾವಣೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯಪುರ ಜಿಲ್ಲಾಧಿಕಾರಿ

ವಿಜಯಪುರ ಜಿಲ್ಲಾಧಿಕಾರಿ

  • Share this:
ವಿಜಯಪುರ(ಮಾ. 18): ಕೊರೊನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲಾಡಳಿತಗಳು ಸಾಕಷ್ಟು ಮುನ್ನೆಚ್ಚರಿಕೆ ವಹಿಸಿವೆ.  ಅದರಲ್ಲೂ ವಿದೇಶಗಳಿಂದ ಮರಳಿದ ವ್ಯಕ್ತಿಗಳ ಮೇಲೆ ತೀವ್ರ ನಿಗಾ ವಹಿಸಿವೆ.  ಈಗಾಗಲೇ ಕೆಲವು ಪ್ರವಾಸಿಗರು ಸರಕಾರ ನಿಗದಿಪಡಿಸಿರುವ 14 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅವರಲ್ಲಿ ಕೊರನಾ ಭೀತಿ ಇಲ್ಲವಾಗಿದೆ. ಇದೇ ರೀತಿ ವಿಜಯಪುರ ಜಿಲ್ಲಾಡಳಿತವೂ ವಿದೇಶಗಳಿಂದ ಮರಳಿದವರ ಮೇಲೆ ತೀವ್ರ ನಿಗಾ ವಹಿಸಿತ್ತು.  ಫೆ. 1 ರಿಂದ ಈವರೆಗೆ ವಿಜಯುರ ಜಿಲ್ಲೆಯ 244 ಜನ ವಿದೇಶಗಳಿಂದ ಮರಳಿದ್ದಾರೆ. ಇವರನ್ನು ಈವರೆಗೆ 14 ದಿನ ಮತ್ತು 28 ದಿನಗಳಂತೆ ಮನೆಯಲ್ಲಿಯೇ ನಿಗಾ ವಹಿಸುವಂತೆ ವಿಜಯಪುರ ಜಿಲ್ಲಾಡಳಿತ ಸೂಚನೆ ನೀಡಿತ್ತು.  ಈ 244 ಜನರಲ್ಲಿ 10 ಜನರು 28 ದಿನ ಪೂರೈಸಿದ್ದಾರೆ. ಈ ಅವಧಿಯಲ್ಲಿ ಅವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಲ್ಲ. ಹೀಗಾಗಿ ಅವರನ್ನು ಮುಕ್ತಗೊಳಿಸಲಾಗಿದೆ.

ಮಂಗಳವಾರದವರೆಗೆ 66 ಜನ 14 ದಿನ ಮನೆಯಲ್ಲಿಯೇ ನಿಗಾದಿಂದ ಮುಕ್ತರಾಗಿದ್ದರು. ಇವರಿಗೆ ಮುಂದಿನ 14 ದಿನಗಳವರೆಗೆ ಪ್ರತಿನಿತ್ಯ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸುವ ಕೆಲಸವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ನಡೆಸುತ್ತಿದ್ದಾರೆ. ಇನ್ನುಳಿದ 168 ಜನರಿಗೆ ಮೊದಲಿಗೆ 14 ದಿನಗಳ ಕಾಲ ಮನೆಯಲ್ಲಿಯೇ ನಿಗಾಕ್ಕೆ ಸೂಚಿಸಲಾಗಿದೆ. ಇವರಲ್ಲಿ 5 ಜನರಲ್ಲಿ ಕೊರೊನಾ ಲಕ್ಷಣಗಳ ಶಂಕೆ ಹಿನ್ನೆಲೆಯಲ್ಲಿ ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ವರದಿ ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ಇವರೆಲ್ಲ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಇದನ್ನೂ ಓದಿ: ಸ್ಯಾನಿಟೈಸರ್​, ಥರ್ಮಲ್​ ಸ್ಕ್ರೀನಿಂಗ್​ ಬೇಡ; ಕೊರೋನಾ ಭೀತಿ ನಡುವೆಯೂ ಶಾಸ್ತ್ರಕ್ಕೆ ಪ್ರಾಮುಖ್ಯತೆ ನೀಡಿದ ರೇವಣ್ಣ

ಇದೇ ರೀತಿ ಸೋಮವಾರ ದುಬೈ ಪ್ರವಾಸ ಮುಗಿಸಿ 44 ಜನ ವಿಜಯಪುರಕ್ಕೆ ಮರಳಿದ್ದರು. ಇವರು ವಿಜಯಪುರ ತಲುಪುವುದಕ್ಕಿಂತಲೂ ಮುಂಚೆ ಅವರನ್ನು ಶಿವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿ ಯಾರಲ್ಲೂ ಕೊರೊನಾ ಲಕ್ಷಣಗಳು ಇಲ್ಲ ಎಂದು ಘೋಷಿಸಲಾಗಿತ್ತು. ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ 14 ದಿನ ಮನೆಯಲ್ಲಿಯೇ ಇರಬೇಕು. ಎಲ್ಲಿಗೂ ಹೋಗಬಾರದು ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಮನವರಿಕೆ ಮಾಡಿ ಎಚ್ಚರಿಕೆಯನ್ನೂ ನೀಡಲಾಗಿತ್ತು.

ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯ ಕಾರ್ಯ ವೈಖರಿಯನ್ನು ಪರಿಶೀಲಿಸಲು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಂಗಳವಾರ ರಾತ್ರಿ ಈ 44 ಜನ ವಾಸಿಸುವ ಬಡಾವಣೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಅಲ್ಲದೇ, ಆರೋಗ್ಯ ಇಲಾಖೆ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇದನ್ನೂ ಓದಿ: ಆಗ್ನೇಯ ಪದವೀಧರ ಕ್ಷೇತ್ರ: ಬಿಜೆಪಿಯಲ್ಲಿ ಬಿಗ್ ಫೈಟ್; ಹಾಲನೂರು ಲೇಪಾಕ್ಷ್​ಗೆ ಟಿಕೆಟ್ ನೀಡಲು ಒತ್ತಾಯ

ಅಷ್ಟಕ್ಕೂ ವಿಜಯಪುರ ಜಿಲ್ಲಾಧಿಕಾರಿ ಈ ಪ್ರದೇಶಕ್ಕೆ ಭೇಟಿ ನೀಡಲು ಪ್ರಮುಖ ಕಾರಣ ಮಾತ್ರ ಗಂಭೀರವಾಗಿತ್ತು. ಈ ಎಲ್ಲ 44 ಜನರಿಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಮತ್ತು ವಿಜಯಪುರ ಜಿಲ್ಲೆಯ ಶಿವಣಗಿಯಲ್ಲಿ ತಪಾಸಣೆ ನಡೆಸಲಾಗಿತ್ತು. ಆದರೆ, ಇವರಲ್ಲಿ ಕೆಲವರು ಆರೋಗ್ಯ ಇಲಾಖೆ ಸೂಚನೆಗಳನ್ನು ಪಾಲಿಸದೇ ಮನೆ ಬಿಟ್ಟು ಬೇರೆ ಬೇರೆ ಕಡೆ ತಿರುಗಾಡಿದ್ದಾರೆ. ಈ ವಿಷಯ ತಿಳಿದ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ಆರೋಗ್ಯ ಇಲಾಖೆಯ ಅಧಿಕಾರಿಗಳ ಕಾರ್ಯ ವೈಖರಿ ಪರಿಶೀಲನೆ ನೆಪದಲ್ಲಿ 44 ಜನ ವಾಸಿಸುವ ಬಡಾವಣೆಗೆ ತೆರಳಿ ಕೊರೊನಾ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.  ಅಷ್ಟೇ ಅಲ್ಲ, ನೀಡಿದ ಸೂಚನೆಗಳನ್ನು ಪಾಲಿಸದೇ ಇದ್ದರೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

- ಮಹೇಶ ವಿ. ಶಟಗಾರ

First published: