ನಾಲ್ಕೈದು ರಾಜ್ಯ ಸರ್ಕಾರಗಳನ್ನು ಒಪ್ಪಿಸಿದ ವಿಜಯಪುರ ಅಧಿಕಾರಿಗಳು; ತವರಿಗೆ ಮರಳಿದ 3 ಸಾವಿರ ಉತ್ತರ ಭಾರತೀಯ ಕಾರ್ಮಿಕರು

ಭಾರತ ಲಾಕ್ಡೌನ್ ಹಿನ್ನೆಲೆಯಲ್ಲಿ ಈ ಕಾರ್ಮಿಕರು ತಮ್ಮ ತವರಿಗೆ ತೆರಳಲು ಶತಾಯಗತಾಯ ಪ್ರಯತ್ನ ನಡೆಸಿದ್ದರು. ಆದರೆ, ಬೆಂಗಳೂರಿನಿಂದ ಬಂದ ಇವರಿಗೆ ಮಹಾರಾಷ್ಟ್ರದ ಪೊಲೀಸರು ಪ್ರವೇಶ ನಿರಾಕರಿಸಿದ್ದರಿಂದ ಕರ್ನಾಟಕದಲ್ಲಿಯೇ ಉಳಿದಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಜಯಪುರ(ಮಾ. 29): ಇಲ್ಲಿಯ ಜಿಲ್ಲಾಡಳಿತ ದೇಶಕ್ಕೆ ಮಾದರಿಯಾಗಬಲ್ಲ ಮಾನವೀಯ ಕೆಲಸ ಮಾಡಿದೆ.  ಅದು ಒಂದಲ್ಲ ಎರಡಲ್ಲ ನಾಲ್ಕಾರು ರಾಜ್ಯ ಸರಕಾರಗಳು ಸೇರಿ ಕೈಗೊಳ್ಳಬೇಕಾದ ನಿರ್ಣಯಕ್ಕೆ ವಿಜಯಪುರ ಜಿಲ್ಲಾಡಳಿತ ಸಾಕ್ಷಿಯಾಗಿದೆ. ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ವಿಜಯಪುರ ಎಸ್ಪಿ ಅನುಪಮ ಅಗರವಾಲ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಗೋವಿಂದರೆಡ್ಡಿ ಈ ಶ್ಲಾಘನೀಯ ಕಾರ್ಯದ ಮುಂದಾಳತ್ವ ವಹಿಸಿದವರು.

ಕೊರೋನಾ ಭೀತಿಯಲ್ಲಿ ಬೆಂಗಳೂರಿನಲ್ಲಿದ್ದ ಉತ್ತರ ಭಾರತೀಯ ಮೂಲದ ಕೂಲಿ ಕಾರ್ಮಿಕರ ಸಂಕಷ್ಟ ನಿವಾರಣೆ ಮಾಡುವ ಕೆಲಸ ಮಾಡಿತ್ತು ವಿಜಯಪುರ ಜಿಲ್ಲಾಡಳಿತ. ಬೆಂಗಳೂರಿನಿಂದ ಹೊರಟು ಮಹಾರಾಷ್ಟ್ರ ಗಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಬರೋಬ್ಬರಿ 3 ಸಾವಿರ ಮಂದಿಗೆ ಅವರವರ ಊರು ತಲುಪಿಸಲು ಜಿಲ್ಲಾಡಳಿತ ಹಾಕಿದರ ಪರಿಶ್ರಮ ಹಾಗೂ ತೋರಿದ ಮುತುವರ್ಜಿ ನಿಜಕ್ಕೂ ಅಭಿನಂದನೀಯ.

ಆಗಿದ್ದೇನು?

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 3000 ಜನ ತಮ್ಮ ತವರಾದ ಉತ್ತರ ಭಾರತದ ನಾನಾ ರಾಜ್ಯಗಳಿಗೆ ತೆರಳುತ್ತಿದ್ದರು. ಇವರು ಸಂಚರಿಸುತ್ತಿದ್ದ ಕಂಟೇನರ್, ಗೂಡ್ಸ್ ವಾಹನಗಳು ಮತ್ತು ಕಾರು, ಜೀಪುಗಳನ್ನು ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಮಹಾರಾಷ್ಟ್ರದ ಸೋಲಾಪುರ ಪೊಲೀಸರು ತಡೆದು ಲಾಠಿಚಾರ್ಜ್ ಮಾಡಿ ವಾಪಸ್ ಕಳುಹಿಸಿದ್ದರು.  ಹೀಗಾಗಿ ಇವರು ಕರ್ನಾಟಕದ ಗಡಿ ಗ್ರಾಮ ಧೂಳಖೇಡದಲ್ಲಿಯೇ ತಮ್ಮ ಮಕ್ಕಳು, ಮಹಿಳೆಯರು, ಹಿರಿಯರೊಂದಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 13ರಲ್ಲಿಯೇ ಕುಳಿತಿದ್ದರು. ಕೊರೊನಾ ಬಗ್ಗೆ ಮೊದಲೇ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಗ್ರಾಮದ ಜನರಲ್ಲಿಯೂ ಈ ಘಟನೆ ಆತಂಕ ತಂದಿತ್ತು.  ಶುಕ್ರವಾರ ರಾತ್ರಿ ಈ ಬಗ್ಗೆ ಮಾಹಿತಿ ತಿಳಿದ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಮತ್ತು ತಂಡ ಈ 3000 ಜನರಿಗೆ ಧೂಳಖೇಡ ಗ್ರಾಮದ ಬಳಿ ಶಾಲೆಯಲ್ಲಿ ಉಳಿಯಲು ಅವಕಾಶ ಕಲ್ಪಿಸಿತ್ತು.  ಅಲ್ಲದೇ, ಭಾರತ ಲಾಕ್​ಡೌನ್ ಹಿನ್ನೆಲೆಯಲ್ಲಿ ಪ್ರಧಾನಿ ಸೂಚನೆಯಂತೆ ಇವರೆಲ್ಲರಿಗೂ ನಾನಾ ಕಡೆ ಊಟ ಮತ್ತು ವಸತಿ ಸೌಕರ್ಯ ಕಲ್ಪಿಸಲು ಮುಂದಾಗಿತ್ತು.  ಆದರೆ, ಈ 3000 ಸಾವಿರ ಜನ ಮಾತ್ರ ತಾವು ತಮ್ಮೂರಿಗೆ ಹೋಗಿಯೇ ಸಿದ್ಧ ಎಂದು ಪಟ್ಟು ಹಿಡಿದರರು.  ಶನಿವಾರ ಸಂಜೆಯಿಂದ ಧೂಳಖೇಡದಲ್ಲಿಯೇ ಠಿಕಾಣಿ ಹೂಡಿದ ಡಿಸಿ ವೈ.ಎಸ್ ಪಾಟೀಲ, ಎಸ್ಪಿ ಅನುಪಮ ಅಗರವಾಲ ಮತ್ತು ಜಿ.ಪಂ. ಸಿಇಓ ಗೋವಿಂದ ರೆಡ್ಡಿ ಅವರು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದರು. ವಿಜಯಪುರ ಜಿಲ್ಲಾಧಿಕಾರಿಗಳು ಈ ಮಾಹಿತಿಯನ್ನು ಸರಕಾರದ ಗಮನಕ್ಕೆ ತಂದರೂ ಮಹಾರಾಷ್ಟ್ರದವರು ಒಪ್ಪಲಿಲ್ಲ.

ಇದನ್ನೂ ಓದಿ: ಕೊರೋನಾ ಬಿಕ್ಕಟ್ಟು: ಸರ್ವಪಕ್ಷಗಳ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು

ಇಲ್ಲಿ ಇರಲು ಕಾರ್ಮಿಕರೂ ಒಪ್ಪಲಿಲ್ಲ. ಆತ್ತ ಕಡೆ ಒಳಗಡೆ ಬಿಡಲು ಮಹಾರಾಷ್ಟ್ರ ಒಪ್ಪುತ್ತಿಲ್ಲ.  ಈ ಜನರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಬೇಕೆಂದರೆ ಅವರಲ್ಲಿ ಮಹಿಳೆಯರು ಮತ್ತು ಮಕ್ಕಳು, ಹಿರಿಯ ನಾಗರಿಕರೂ ಇದ್ದರು. ಪರಿಸ್ಥಿತಿ ಹೀಗಿರವಾಗ ವಿಜಯಪುರ ಜಿಲ್ಲಾಡಳಿತಕ್ಕೆ ಇದೊಂದು ಗಂಭೀರ ಸಮಸ್ಯೆಯಾಯಿತು. ಈ 3000 ಸಾವಿರ ಜನರಿಗೆ ಮೊದಲಿಗೆ ಸ್ಕೀನಿಂಗ್ ಮಾಡಲಾಯಿತು. ಈ ಸಂದರ್ಭದಲ್ಲಿ ರಾತ್ರಿ ಆರೋಗ್ಯ ತಪಾಸಣೆ ವೇಳೆ ಇಂಡಿ ತಾಲೂಕು ಆರೋಗ್ಯಾಧಿಕಾರಿ ಅರ್ಚನಾ ಕುಲಕರ್ಣಿ ದಿಢೀರನೆ ಅಸ್ವಸ್ಥರಾದ ಘಟನೆಯೂ ನಡೆಯಿತು. ಮಧುಮೇಹದಿಂದ ಬಳಲುತ್ತಿದ್ದ ಅವರನ್ನು ಇಂಡಿಗೆ ಚಿಕಿತ್ಸೆಗೆ ಕಳುಹಿಸಿ ಕೊಡಲಾಯಿತು.

ಈ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಿ ಕೊಡಲು ಕೊನೆಗೆ ನಾನಾ ಹಂತಗಳಲ್ಲಿ ಮಾತುಕತೆಯಾಗಿ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶ ಸರಕಾರಗಳ ಮಟ್ಟದಲ್ಲಿ ಮಾತುಕತೆ ನಡೆಯಿತು.

ಈ ಮಾತುಕತೆ ಫಲಪ್ರದವಾದ ತಕ್ಷಣವೇ ಶನಿವಾರ ಮಧ್ಯರಾತ್ರಿ 2 ಗಂಟೆಗೆ ವಿಜಯಪುರದಿಂದ ಸುಮಾರು 70ಕ್ಕೂ ಹೆಚ್ಚು ಸರಕಾರಿ ಬಸ್ಸುಗಳನ್ನು ಮತ್ತು ಆ ಬಸ್ಸುಗಳಲ್ಲಿ 3,000 ಜನರಿಗೆ ಬೇಕಾದ ಬಿಸ್ಕೆಟ್ ಮತ್ತು ಇತರ ಅವಶ್ಯಕ ಸಾಮಗ್ರಿಗಳನ್ನು ಕೊಟ್ಟು ಧೂಳಖೇಡಕ್ಕೆ ಕಳುಹಿಸಿದರು. ಅಲ್ಲದೇ, ಬೆಳಗ್ಗೆ 11 ಗಂಟೆಯ ಸುಮಾರಿಗೆ ಈ ಎಲ್ಲ ಬಸ್ಸುಗಳಲ್ಲಿ ರಾಜಸ್ಥಾನಕ್ಕೆ ಸೇರಿದ 2,200 ಜನ ಮತ್ತು ಇತರ ರಾಜ್ಯಗಳಿಗೆ ಸೇರಿದ 800 ಜನರನ್ನು ಅವರವರ ಊರುಗಳಿಗೆ ತಲುಪುವಂತೆ ಕಳುಹಿಸಿಕೊಟ್ಟರು.

ಈ ಮಧ್ಯೆ ಮಹಾರಾಷ್ಟ್ರ ಈ ಕಾರ್ಮಿಕರು ಯಾರೂ ತಮ್ಮ ರಾಜ್ಯದಲ್ಲಿ ಕೆಳಗಿಳಿಯಬಾರದು ಎಂದು ಕಟ್ಟಪ್ಪಣೆ ವಿಧಿಸಿತ್ತು. ಆದರೆ, ಈ 3,000 ಜನರಲ್ಲಿ ಸುಮಾರು ಜನ ಮಹಾರಾಷ್ಟ್ರದವರಾಗಿದ್ದರೆಂಬುದು ಗಮನಾರ್ಹ.

ಒಟ್ಟಾರೆ, ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ನೇತೃತ್ವದ ಜಿಲ್ಲಾಡಳಿತ ಕರ್ನಾಟಕದ ಗಡಿಯಲ್ಲಿ ಸಿಲುಕಿದ್ದ 3000 ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪುವಂತೆ ಮಾಡಿದ್ದು ಮಾತ್ರ ಬಸವ ನಾಡಿನ ಅಧಿಕಾರಿಗಳ ಮಾನವೀಯತೆಗೆ ಸಾಕ್ಷಿಯಾಗಿದೆ.

ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಎಸ್ಪಿ ಅನುಪಮ ಅಗರವಾಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಮತ್ತು ಅವರ ತಂಡಗಳಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.

ವರದಿ: ಮಹೇಶ ವಿ. ಶಟಗಾರ

First published: