ಕೊಡಗು : ಕೊಡಗು ಜಿಲ್ಲೆಯಲ್ಲಿ (Kodagu District) ಕೋವಿಡ್ ಸೋಂಕಿನ (COVID Pandemic) ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ. ಮತ್ತೊಂದೆಡೆ ಪಕ್ಕದ ರಾಜ್ಯ ಕೇರಳ (Kerala), ಪಕ್ಕದ ಜಿಲ್ಲೆ ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ (Udupi)ಯಲ್ಲೂ ಓಮೈಕ್ರಾನ್ ಸೋಂಕು (Omicron Variant) ಉಲ್ಭಣವಾಗುತ್ತಿದೆ. ಆದರೆ ಕೇರಳ, ದಕ್ಷಿಣ ಕನ್ನಡಗಳಿಂದ ಕೊಡಗಿಗೆ ಸಂಪರ್ಕ ಕಲ್ಪಿಸುವ ಸಂಪಾಜೆಯಲ್ಲಿ (Sampaje) ತೆರೆಯಲಾಗಿದ್ದ ಕೋವಿಡ್ ತಪಾಸಣಾ ಕೇಂದ್ರವನ್ನು (Check Post) ಕಳೆದ ಎರಡು ತಿಂಗಳ ಹಿಂದೆಯೇ ಮುಚ್ಚಲಾಗಿದೆ. ಇದು ಕೊಡಗು ಜಿಲ್ಲೆಗೆ ಓಮೈಕ್ರಾನ್ ಸೋಂಕು ಹರಡುವ ಹೆದ್ದಾರಿ ಆಗುವ ಆತಂಕ ತಂದೊಡ್ಡಿದೆ.
ಕೇರಳ ರಾಜ್ಯದಲ್ಲಿ ಈಗಲೂ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿಯೇ ಕೇರಳದಿಂದ ಕೊಡಗಿಗೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯ ಮಾಡಲಾಗಿದೆ. ಕೊಡಗಿಗೆ ಕೋವಿಡ್ ಹರಡಬಾರದೆಂಬ ದೃಷ್ಟಿಯಿಂದಲೇ ಕೇರಳದಿಂದ ಕೊಡಗಿಗೆ ನೇರ ಸಂಪರ್ಕ ಕಲ್ಪಿಸುವ ಅಂತರ್ ರಾಜ್ಯ ಗಡಿಗಳಾದ ವಿರಾಜಪೇಟೆ ತಾಲ್ಲೂಕಿನ ಮಾಕುಟ್ಟ, ಪೊನ್ನಪೇಟೆ ತಾಲ್ಲೂಕಿನ ಕುಟ್ಟ ಮತ್ತು ಮಡಿಕೇರಿ ತಾಲ್ಲೂಕಿನ ಕರಿಕೆಯಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆದು ಪರಿಶೀಲನೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Omicron: ಭೀತಿ ಹುಟ್ಟಿಸುತ್ತಿರುವ ಓಮೈಕ್ರಾನ್ನ ಕೆಲ 'ಅಸಹಜ’ ಲಕ್ಷಣಗಳು ಪತ್ತೆ
ಕೊಡಗಿನ ಸಂಪಾಜೆ ಚೆಕ್ಪೋಸ್ಟ್ ನಲ್ಲಿ ತಪಾಸಣೆಯೇ ಇಲ್ಲ
ಕೇರಳದಿಂದ ಬರುವವರಿಗೆ 72 ಗಂಟೆಯೊಳಗೆ ಪಡೆದ ಆರ್ ಟಿಪಿಸಿಆರ್ ನೆಗೆಟಿವ್ ವರದಿ (RT PCR Negative Report) ಯನ್ನು ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಎರಡು ಡೋಸ್ ವ್ಯಾಕ್ಸಿನ್ ಪಡೆದಿದ್ದರೆ ಮಾತ್ರವೇ ಈ ಚೆಕ್ ಪೋಸ್ಟ್ ಗಳ ಮೂಲಕ ಕೊಡಗಿಗೆ ಎಂಟ್ರಿ ನೀಡಲಾಗುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ಕೊಡಗಿನ ಸಂಪಾಜೆ ಚೆಕ್ಪೋಸ್ಟ್ ನಲ್ಲಿ ಯಾವ ಪರಿಶೀಲನೆಯನ್ನು ಮಾಡುತ್ತಿಲ್ಲ.
ಸಂಪಾಜೆ ಚೆಕ್ ಪೋಸ್ಟ್ ಮೂಲಕ ಎಂಟ್ರಿ
ಪರಿಶೀಲನೆ ಮಾತಿರಲಿ, ಕೊನೆ ಪಕ್ಷ ಸಿಬ್ಬಂದಿಯೂ ಕೋವಿಡ್ ಪರಿಶೀಲನಾ ಕೇಂದ್ರದಲ್ಲಿ ಇಲ್ಲ. ಕಾಸರಗೋಡು ಮಾರ್ಗವಾಗಿ ಕೇರಳದಿಂದ ಬರುವವರು ಸಂಪಾಜೆ ಚೆಕ್ ಪೋಸ್ಟ್ ಮೂಲಕವೇ ಕೊಡಗಿಗೆ ಬರುತ್ತಾರೆ. ಕೇರಳದ ಕಾಸರಗೋಡು ಭಾಗದಿಂದ ಬರುವವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಕೋವಿಡ್ ವರದಿಯನ್ನು ಪರಿಶೀಲಿಸಬೇಕು. ಆದರೆ ಅಲ್ಲಿ ಪರಿಶೀಲಿಸುತ್ತಿಲ್ಲ. ಇದನ್ನೇ ಅಡ್ವಂಟೇಜ್ ಮಾಡಿಕೊಂಡಿರುವ ಕೇರಳಿಗರು ಮಾಕುಟ್ಟ, ಕರಿಕೆ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡುತ್ತಿರುವುದರಿಂದ ಕೋವಿಡ್ ನೆಗೆಟಿವ್ ವರದಿ ಇಲ್ಲದ ಬಹುತೇಕರು ಸಂಪಾಜೆ ಚೆಕ್ ಪೋಸ್ಟ್ ಮೂಲಕವೇ ಕೊಡಗಿಗೆ ಎಂಟ್ರಿಯಾಗುತ್ತಿದ್ದಾರೆ.
ಇದನ್ನೂ ಓದಿ: ಕೋವಿಡ್-19 ಹೊಸ ರೂಪಾಂತರ ಓಮೈಕ್ರಾನ್ ಇಲಿಗಳಲ್ಲಿ ಮೊದಲು ಅಭಿವೃದ್ಧಿಗೊಂಡಿದೆಯೇ..?
ಹೀಗಾಗಿ ಸಂಪಾಜೆ ಚೆಕ್ ಪೋಸ್ಟ್ ಕೊಡಗು ಜಿಲ್ಲೆಗೆ ಗಂಡಾಂತರ ತಂದೊಡ್ಡಬಹುದು. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿದ್ದ ಸಂದರ್ಭದಲ್ಲಿ ಸಂಪಾಜೆ ಚೆಕ್ ಪೋಸ್ಟ್ ನಲ್ಲಿ 10 ಲಕ್ಷ ವೆಚ್ಚದಲ್ಲಿ ಕಂಟೈನರ್ ಇರಿಸಿ ಅದಕ್ಕೆ ಪ್ರತಿಯೊಂದು ಸೌಲಭ್ಯಗಳನ್ನು ಒದಗಿಸಿ ಕೋವಿಡ್ ಪರಿಶೀಲನಾ ಕೇಂದ್ರ ತೆರೆಯಲಾಗಿತ್ತು.
ರೂಪಾಂತರಿ ವೈರಸ್ ಹರಡುವ ಆತಂಕ
ತುರ್ತು ಚಿಕಿತ್ಸೆಗಾಗಿ ಒಂದು ಬೆಡ್ಡನ್ನು ಹಾಕಿ ಸಿದ್ಧತೆ ಮಾಡಲಾಗಿತ್ತು. ಲಕ್ಷಾಂತರ ರೂಪಾಯಿ ವ್ಯಯಿಸಿ ಐದಾರು ಸಿಸಿಟಿವಿಗಳನ್ನು ಅಳವಡಿಸಲಾಗಿತ್ತು. ಇದೆಲ್ಲವೂ ಈಗ ವೇಸ್ಟ್ ಆಗಿ ಬಿದ್ದಿವೆ. ದಕ್ಷಿಣ ಕನ್ನಡ ಮತ್ತು ಕೇರಳ ರಾಜ್ಯದಲ್ಲಿ ಓಮೈಕ್ರಾನ್ ಸೋಂಕು ಹೆಚ್ಚುತ್ತಿರುವುದರಿಂದ ಗಡಿ ಗ್ರಾಮವಾಗಿರುವ ಸಂಪಾಜೆಗೂ ರೂಪಾಂತರಿ ವೈರಸ್ ಹರಡುವ ಆತಂಕವಿದೆ.
ಕೇರಳ ಮತ್ತು ಬೇರೆ, ಬೇರೆ ಜಿಲ್ಲೆಗಳಿಂದ ಕೊಡಗಿಗೆ ಪ್ರವಾಸಕ್ಕೆ ಬರುತ್ತಿರುವವರಿಗೆ ಸರ್ಕಾರ ಅಥವಾ ಜಿಲ್ಲಾಡಳಿತ ಯಾವುದೇ ನಿಯಮಗಳನ್ನು ಹೇರುತ್ತಿಲ್ಲ. ಆದರೆ, ಕೂಲಿ ನಾಲಿ ಮಾಡಿ ಬದುಕುವ ನಾವು ಮಾಸ್ಕ್ ಹಾಕದೆ ಇಲ್ಲಿಯೇ ಓಡಾಡಿದರೆ ದಂಡ ಹಾಕುತ್ತಾರೆ. ಇದು ಎಷ್ಟರಮಟ್ಟಿಗೆ ಸರಿ ಎನ್ನೋದು ಸ್ಥಳೀಯ ಪಂಚಾಯಿತಿ ಸದಸ್ಯರು ಮತ್ತು ಗ್ರಾಮದವರ ಆಗ್ರಹ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ