ನವದೆಹಲಿ(ಸೆ. 11): ಮಾರಕ ರೋಗ ಕೊರೊನಾಗೆ ಲಸಿಕೆ ಕಂಡುಹಿಡಿಯಲಾಗುತ್ತಿದ್ದ ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಪ್ರಯೋಗಕ್ಕೆ ತಾತ್ಕಲಿಕವಾಗಿ ತಡೆ ನೀಡಲಾಗಿರುವುದರ ಸಂಬಂಧ ಇದೇ ಮೊದಲ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, 'ಕೊರೊನಾಗೆ ಲಸಿಕೆ ಕಂಡುಹಿಡಿಯುವ ಬಗ್ಗೆ ಇನ್ನೂ ಬಹಳಷ್ಟು ಪ್ರಯೋಗ ಆಗಬೇಕು' ಎಂದಿದ್ದಾರೆ. ಆಕ್ಸ್‌ಫರ್ಡ್ ಯೂನಿವರ್ಸಿಟಿ ಮತ್ತು ಅಸ್ಟ್ರಾಜೆನಿಕಾ ಕಂಪನಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಪ್ರಯೋಗಕ್ಕೆ ಒಳಪಡಿಸಲಾಗಿದ್ದ ಬ್ರಿಟನ್ ಮೂಲದ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಪ್ರಯೋಗಕ್ಕೆ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ. ಈ ಬೆಳವಣಿಗೆ ಜಾಗತಿಕ ಸಮುದಾಯಕ್ಕೆ ಎಚ್ಚರಿಕೆ ಕರೆ ಗಂಟೆ ಎಂದು ಡಾ. ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
ಸಂಶೋಧನೆಯಲ್ಲಿ ಏರಿಳಿತಗಳು ಆಗುತ್ತವೆ ಎನ್ನುವುದನ್ನು ಅರಿತುಕೊಳ್ಳಬೇಕು. ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಲಸಿಕೆ ಪ್ರಯೋಗವೂ ಏರಿಳಿತ ಕಂಡಿದೆ. ಈವರೆಗೂ ಉತ್ತಮ ಫಲಿತಾಂಶ ಹೊರ ಬಂದಿತ್ತು. ಆದರೀಗ ವ್ಯಾಕ್ಸಿನ್ನಲ್ಲಿ ಸಮಸ್ಯೆ ಕಂಡುಬಂದಿದೆ. ವ್ಯಾಕ್ಸಿನ್ ಸುರಕ್ಷಿತೆ ಬಗ್ಗೆ ಬಹಳಷ್ಟು ಪ್ರಯೋಗ ನಡೆಯಬೇಕು ಎಂದು ಡಬ್ಲ್ಯೂಎಚ್ಒ ಚೀಫ್ ಸೈಂಟಿಸ್ಟ್ ತಿಳಿಸಿದ್ದಾರೆ.
ಇದನ್ನೂ ಓದಿ: ನಾಲ್ಕು ತಿಂಗಳ ಹಿಂದೆಯೇ ಭಾರತದಲ್ಲಿ 64 ಲಕ್ಷ ಮಂದಿಗೆ ಸೋಂಕು: ಸೆರೋ ಸಮೀಕ್ಷೆ ಅಂದಾಜು
ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಪ್ರಯೋಗವೂ ಸೇರಿದಂತೆ ಈ ವರ್ಷ ಉತ್ತಮ ಬೆಳವಣಿಗೆಗಳು ಆಗಬಹುದು. ಉತ್ತಮ ಫಲಿತಾಂಶಗಳು ಬರಬಹುದೆಂದು ನೀರಿಕ್ಷೆ ಮಾಡಿದ್ದೇವೆ. ಈ ವರ್ಷ ಸಾಧ್ಯವಾಗದಿದ್ದರೆ ಮುಂದಿನ ವರ್ಷವಾದರೂ ಅದು ಸಾಧ್ಯವಾಗಬಹುದು. ಅಲ್ಲಿಯವರೆಗೆ ತಾಳ್ಮೆಯಿಂದ ಇರುವುದು ಬಹಳ ಉತ್ತಮ ಎಂದು ಹೇಳುವ ಮೂಲಕ ಕೊರೊನಾಗೆ ಲಸಿಕೆ ಲಭ್ಯವಾಗುವುದು ತಡವಾಗಬಹುದು ಎಂಬ ಸುಳಿವನ್ನು ಅವರು ಹೊರಗೆಡವಿದ್ದಾರೆ.
ಆಕ್ಸ್‌ಫರ್ಡ್-ಆಸ್ಟ್ರಾಜೆನೆಕಾ ತಯಾರಿಸಿದ ಲಸಿಕೆಯನ್ನು ಭಾರತದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರಯೋಗ ಮಾಡುತ್ತಿದೆ. ಬ್ರಿಟನ್ನಲ್ಲಿ ಇದಕ್ಕೆ ತಾತ್ಕಾಲಿಕವಾಗಿ ತಡೆ ಬಿದ್ದಿದ್ದರೂ ಸಿಐಐ ತನ್ನ ಪ್ರಯೋಗ ಮುಂದುವರಿಸಿದೆ ಎನ್ನಲಾಗಿದೆ. ಪ್ರಯೋಗದಲ್ಲಿ ಹಿನ್ನಡೆಯಾಗಿದ್ದರೂ ಆಸ್ಟ್ರಾಜೆನೆಕಾ ತನ್ನ ವ್ಯಾಕ್ಸಿನ್ ಉತ್ಪಾದನೆಗೆ ಎಲ್ಲಾ ತಯಾರಿ ಮುಂದುವರಿಸಿದೆ. ಪ್ರಯೋಗ ಯಶಸ್ವಿಯಾಗಿ ಲಸಿಕೆ ಉತ್ಪಾದನೆಗೆ ಗ್ರೀನ್ ಸಿಗ್ನಲ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕಂಪನಿ ಇದೆ.
ಇದನ್ನೂ ಓದಿ: Coronavirus Vaccine: ಮೂಗಿನ ಮೂಲಕ ಸಿಂಪಡಿಸುವ ಕೊರೋನಾ ಲಸಿಕೆ ಪ್ರಯೋಗಕ್ಕೆ ಚೀನಾ ಒಪ್ಪಿಗೆ
ಇನ್ನು, ಭಾರತದಲ್ಲಿ ಇನ್ನೂ ಕೆಲ ವ್ಯಾಕ್ಸಿನ್ಗಳು ಪ್ರಯೋಗ ಹಂತದಲ್ಲಿವೆ. ಅದರಲ್ಲಿ ಐಸಿಎಂಆರ್ ಮತ್ತು ಭಾರತ್ ಬಯೋಟೆಕ್ ಸಹಯೋಗದಲ್ಲಿ ರೂಪುಗೊಂಡಿರುವ ಕೋವ್ಯಾಕ್ಸಿನ್ ಕೂಡ ಒಂದು. ಇದೂ ಕೂಡ ಮಾನವ ಪ್ರಯೋಗದ ಹಂತದಲ್ಲಿದೆ. ಸದ್ಯಕ್ಕೆ ಭಾರತದಲ್ಲಿ ನಡೆಸಲಾಗುತ್ತಿರುವ ಪ್ರಯೋಗಗಳಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ