HOME » NEWS » Coronavirus-latest-news » VACCINE TEAM HIT WITH RODS BY MOB IN RURAL MADHYA PRADESH LG

Madhya Pradesh: ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದ್ದಕ್ಕೆ ಆರೋಗ್ಯ ಸಿಬ್ಬಂದಿಗೆ ರಾಡ್​ನಿಂದ ಥಳಿಸಿದ ಗ್ರಾಮಸ್ಥರು

ತಹಶೀಲ್ದಾರ್ ಹಾಗೂ ಆರೋಗ್ಯ ಸಿಬ್ಬಂದಿ ಗ್ರಾಮಸ್ಥರ ಜೊತೆ ಮಾತನಾಡುತ್ತಿರುವಾಗ, 50 ಮಂದಿಯನ್ನೊಳಗೊಂಡ ಒಂದು ಗುಂಪು ಕಬ್ಬಿಣದ ರಾಡ್​ಗಳು ಹಾಗೂ ಕತ್ತಿಗಳಿಂದ ನಮ್ಮ ಮೇಲೆ ಮೇಲೆ ದಾಳಿ ಮಾಡಿದರು ಎಂದು ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.

Latha CG | news18-kannada
Updated:May 25, 2021, 11:52 AM IST
Madhya Pradesh: ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದ್ದಕ್ಕೆ ಆರೋಗ್ಯ ಸಿಬ್ಬಂದಿಗೆ ರಾಡ್​ನಿಂದ ಥಳಿಸಿದ ಗ್ರಾಮಸ್ಥರು
ಆರೋಗ್ಯ ಸಿಬ್ಬಂದಿ
  • Share this:
ಭೋಪಾಲ್(ಮೇ 25): ದೇಶಕ್ಕೆ ವಕ್ಕರಿಸಿರುವ ಮಹಾಮಾರಿ ಕೊರೋನಾ ವೈರಸ್​ ಜನರ ಜೀವ ಹಿಂಡುತ್ತಿದೆ. ಜನರ ಜೀವ ಉಳಿಸಲು ದೇಶಾದ್ಯಂತ ವ್ಯಾಕ್ಸಿನ್​ ಕೂಡ ನೀಡಲಾಗುತ್ತಿದೆ. ಆದರೆ ಕೊರೋನಾ ವ್ಯಾಕ್ಸಿನ್​ ಬಗ್ಗೆ ಜನರಿಗಿರುವ ಭಯ, ಆತಂಕ ಮಾತ್ರ ದೂರವಾಗಿಲ್ಲ. ಸರ್ಕಾರ ಎಷ್ಟೇ ಜಾಗೃತಿ ಮೂಡಿಸಲು ಯತ್ನಿಸಿದರೂ ಸಹ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜನರಿಗೆ ವ್ಯಾಕ್ಸಿನ್ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು ಸರ್ಕಾರ ಶತ ಪ್ರಯತ್ನ ನಡೆಸುತ್ತಿದೆ, ಆದರೂ ಸಹ ಕೆಲವಡೆ ಜನರು ಭಯ ಹಾಗೂ ತಪ್ಪು ಕಲ್ಪನೆಗಳಿಂದ ಪೂರ್ವಾಗ್ರಹ ಪೀಡಿತರಾಗಿ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿಲ್ಲ. ಇದಕ್ಕೆ ಪೂರಕ ಎಂಬಂತೆ ಮಧ್ಯಪ್ರದೇಶದ ಒಂದು ಹಳ್ಳಿಯಲ್ಲಿ ವ್ಯಾಕ್ಸಿನ್​ ಬಗ್ಗೆ ಅರಿವು ಮೂಡಿಸಲು ಬಂದ ಸರ್ಕಾರಿ ಅಧಿಕಾರಿಗಳಿಗೆ ಗ್ರಾಮಸ್ಥರು ಥಳಿಸಿರುವ ಘಟನೆ ನಡೆದಿದೆ.

ಹೌದು, ಜನರಿಗೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಸಿಬ್ಬಂದಿಗಳ ತಂಡವು ಮಹಿಳಾ ತಹಶೀಲ್ದಾರ್​​ ನೇತೃತ್ವದಲ್ಲಿ ಮಧ್ಯಪ್ರದೇಶದ ಉಜ್ಜೈನ್​ ಜಿಲ್ಲೆಯ ಮಲಿಖೇಡಿ ಗ್ರಾಮಕ್ಕೆ ಭೇಟಿ ನೀಡಿತ್ತು. ಈ ವೇಳೆ ಪರ್ಡಿ ಸಮುದಾಯಕ್ಕೆ ಸೇರಿದ ಗ್ರಾಮಸ್ಥರು ತಮ್ಮ ಹಳ್ಳಿಗೆ ಬಂದ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ. ಕಬ್ಬಿಣದ ರಾಡ್​ನಿಂದ ಆರೋಗ್ಯ ಸಿಬ್ಬಂದಿಯನ್ನು ಥಳಿಸಿ ಓಡಿಸಿದ್ದಾರೆ ಎನ್ನಲಾಗಿದೆ.

ಈ ಮೊದಲು ಕೂಡ ಆರೋಗ್ಯ ಸಿಬ್ಬಂದಿ ಈ ಗ್ರಾಮಕ್ಕೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ಮನವರಿಕೆ ಮಾಡಲು ಯತ್ನಿಸಿದ್ದರು. ಆದರೆ ಆಗಲೂ ಸಹ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದಾಗಿರಲಿಲ್ಲ. ಮತ್ತೆ ಸೋಮವಾರ ತಂಡವು ಮಲಿಖೇಡಿ ಗ್ರಾಮಕ್ಕೆ ಭೇಟಿ ನೀಡಿ ಲಸಿಕೆ ಬಗ್ಗೆ ಅರಿವು ಮೂಡಿಸಿ, ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಹೇಳಲು ಮುಂದಾಗಿದ್ದರು. ಈ ವೇಳೆ, ಕೆಲವು ಗ್ರಾಮಸ್ಥರು ಆರೋಗ್ಯ ಸಿಬ್ಬಂದಿ ತಂಡದ ಓರ್ವ ವ್ಯಕ್ತಿ ಮೇಲೆ ದಾಳಿ ನಡೆಸಿದ್ದಾರೆ. ದಾಳಿಗೆ ಒಳಗಾದ ವ್ಯಕ್ತಿ(ಮೊಹಮ್ಮದ್​ ಖುರೇಷಿ) ಅದೇ ಗ್ರಾಮ ಪಂಚಾಯತಿಯ ಮಹಿಳಾ ಪದಾಧಿಕಾರಿಯ ಪತಿ ಎಂದು ತಿಳಿದು ಬಂದಿದ್ದು, ಆತ ಕೂಡ ಆರೋಗ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: K Sudhakar: 1,763 ವೈದ್ಯರು ಹಾಗೂ ವೈದ್ಯಾಧಿಕಾರಿಗಳ ನೇಮಕಾತಿಯಿಂದ ಆರೋಗ್ಯ ವ್ಯವಸ್ಥೆ ಬಲವಾಗಲಿದೆ: ಸಚಿವ ಡಾ.ಕೆ.ಸುಧಾಕರ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆದ ಈ ವಿಡಿಯೋದಲ್ಲಿ, ಘಟನೆ ಬಳಿಕ ಆರೋಗ್ಯ ಸಿಬ್ಬಂದಿ ಅಲ್ಲಿಂದ ಕಾಲ್ಕಿತ್ತಿರುವ ದೃಶ್ಯ ಇದೆ.

ಮಹಿಳಾ ತಹಶೀಲ್ದಾರ್, ಎನ್​ಎಂ, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಪಟ್ವಾಡಿಗಳು ಮಲಿಖೇಡಿ ಗ್ರಾಮಕ್ಕೆ ಭೇಟಿ ನೀಡಿ ಲಸಿಕೆ ಬಗ್ಗೆ ಇರುವ ತಪ್ಪು ಕಲ್ಪನೆಗಳು ಹಾಗೂ ಗೊಂದಲಗಳನ್ನು ನಿವಾರಿಸಿ, ವ್ಯಾಕ್ಸಿನ್​ ಹಾಕಿಸಿಕೊಳ್ಳಿ ಎಂದು ಪ್ರೇರೇಪಿಸಲು ಮುಂದಾಗಿದ್ದರು. ಈ ಕುರಿತಾಗಿ ತಹಶೀಲ್ದಾರ್ ಹಾಗೂ ಆರೋಗ್ಯ ಸಿಬ್ಬಂದಿ ಗ್ರಾಮಸ್ಥರ ಜೊತೆ ಮಾತನಾಡುತ್ತಿರುವಾಗ, 50 ಮಂದಿಯನ್ನೊಳಗೊಂಡ ಒಂದು ಗುಂಪು ಕಬ್ಬಿಣದ ರಾಡ್​ಗಳು ಹಾಗೂ ಕತ್ತಿಗಳಿಂದ ನಮ್ಮ ಮೇಲೆ ಮೇಲೆ ದಾಳಿ ಮಾಡಿದರು ಎಂದು ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.

ಲಸಿಕೆ ಬಗ್ಗೆ ಜನರಲ್ಲಿ ಸರಿವು ಮೂಡಿಸುತ್ತಿದ್ದರೆ, ಗ್ರಾಮಸ್ಥರು ನಮ್ಮ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದರು. ತಹಶೀಲ್ದಾರ್​ ಹಾಗೂ ತಂಡದ ಸದಸ್ಯರು ಪ್ರಾಣಾಪಾಯದಿಂದ ಪಾರಾದರು. ಆದರೆ ಈ ದಾಳಿಯಲ್ಲಿ ನನ್ನ ತಲೆಗೆ ಪೆಟ್ಟಾಗಿದೆ ಎಂದು ಗಾಯಗೊಂಡ ವ್ಯಕ್ತಿ ಶಕೀಲ್ ಮೊಹಮ್ಮದ್ ಖುರೇಷಿ ಹೇಳಿದ್ದಾರೆ.ಇನ್ನು, ಈ ದಾಳಿಗೆ ಸಂಬಂಧಿಸಿದಂತೆ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೆಚ್ಚುವರಿ ಎಸ್​ಪಿ ಆಕಾಶ್​ ಭೂರಿಯಾ ಹೇಳಿದರು.
Youtube Video

ಭಾರತವು ಇಲ್ಲಿಯವರೆಗೆ ಎರಡು ಲಸಿಕೆಗಳನ್ನು ಪರಿಚಯಿಸಿದೆ. ಭಾರತ್​ ಬಯೋಟೆಕ್​​ನ ಕೋವ್ಯಾಕ್ಸಿನ್​ ಮತ್ತು ಕೋವಿಶೀಲ್ಡ್​​. ಇದನ್ನು ಸೀರಮ್​ ಸಂಸ್ಥೆ ತಯಾರಿಸಿದ್ದು, ಅಸ್ಟ್ರಾಜೆನೆಕಾ ಆಕ್ಸ್​ಫರ್ಡ್​​ ಯೂನಿವರ್ಸಿಟಿ ಅಭಿವೃದ್ಧಿಪಡಿಸಿದೆ.ಮೂರನೆಯದು ರಷ್ಯಾದ ಸ್ಪುಟ್ನಿಕ್-​ ವಿ ತುರ್ತು ಬಳಕೆಗಾಗಿ ಅನುಮೋದನೆ ಪಡೆದಿದೆ. ಆದರೆ ಇನ್ನೂ ಸಹ ಈ ಲಸಿಕೆ ಹಾಕುವ ಕಾರ್ಯ ನಡೆದಿಲ್ಲ.
Published by: Latha CG
First published: May 25, 2021, 9:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories