ದೇಶದಲ್ಲಿ ಕೊರೊನಾ 2ನೇ ಅಲೆ ತಗ್ಗಿದ್ದು, ಬಹುತೇಕ ರಾಜ್ಯಗಳಲ್ಲಿ ಅನ್ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ ಕೊರೊನಾ ಡೆಲ್ಟಾ ರೂಪಾಂತರಿ ಸೋಂಕಿನ ಭೀತಿ ಹೆಚ್ಚಾಗಿದೆ. ಕೊರೊನಾ 3ನೇ ಅಲೆ ಮಕ್ಕಳ ಮೇಲೆ ದಾಳಿ ಮಾಡಲಿದೆ ಎಂಬ ಆತಂಕ ಪೋಷಕರಲ್ಲಿ ಮನೆ ಮಾಡಿದೆ. ಈ ಮಧ್ಯೆ ಶಾಲೆಗಳು ಶುರುವಾದರೆ ಮಕ್ಕಳನ್ನು ಕಳುಹಿಸಲು ಯೋಚಿಸುತ್ತಿರುವ ಪೋಷಕರಿಗೆ ಗುಡ್ನ್ಯೂಸ್ ಸಿಕ್ಕಿದೆ. ಸೆಪ್ಟೆಂಬರ್ ಹೊತ್ತಿಗೆ ಮಕ್ಕಳಿಗೂ ಕೊರೊನಾ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.
ಸೆಪ್ಟೆಂಬರ್ ಹೊತ್ತಿಗೆ ಮಕ್ಕಳಿಗೆ ವ್ಯಾಕ್ಸಿನ್ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ನಂತರ ಶಾಲೆಗಳನ್ನು ತೆರಯಬೇಕು. ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇರುವ ಪ್ರದೇಶಗಳಲ್ಲಿ ಮಾತ್ರ ಶಾಲೆಗಳನ್ನು ತೆರೆಯಲು ಅನುಮತಿ ನೀಡಬೇಕು ಎಂದು ಗುಲೇರಿಯಾ ಸಲಹೆ ನೀಡಿದರು. ಮೊದಲು ಪ್ರೌಢ ಶಾಲೆಗನ್ನು ತೆರೆಯಬೇಕು. ಪ್ರಾಥಮಿಕ ಶಾಲೆಗಳನ್ನು ತೆರೆಯುವ ಬಗ್ಗೆ ಸರ್ಕಾರಗಳು ಅವಸರ ಮಾಡಬಾರದು.
ಇನ್ನು ಡೆಲ್ಟಾ ವೈರಸ್ ಸೇರಿದಂತೆ ಕೊರೊನಾ ನಂತರದ ಕಾಯಿಲೆಗಳಿಗೆ ಬೂಸ್ಟರ್ ಡೋಸ್ ಉತ್ತಮ ಎಂದಿದ್ದಾರೆ. 2 ಡೋಸ್ ಕೊರೊನಾ ಲಸಿಕೆ ಪಡೆದವರಿಗೆ ಮತ್ತೊಂದು ಡೋಸ್ ಲಸಿಕೆಯನ್ನು ಬೂಸ್ಟರ್ ಡೋಸ್ನಂತೆ ಕೊಡಬೇಕು. ಮೊದಲು ಎಲ್ಲರಿಗೂ 2 ಡೋಸ್ ಲಸಿಕೆ ನೀಡುವಲ್ಲಿ ಸರ್ಕಾರ ಕಾರ್ಯನಿರ್ವಹಿಸಬೇಕು. ಈ ವರ್ಷಾಂತ್ಯದಲ್ಲಿ ಬೂಸ್ಟರ್ ಅಗತ್ಯ ಬೀಳಬಹುದು. ಹೆಚ್ಚುವರಿ ಡೋಸ್ ಲಸಿಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕಾರಿ ಎಂದರು.
ದೇಶದ ಜನರಲ್ಲಿ ರೋಗನಿರೋಧಕ ಶಕ್ತಿ ಮಟ್ಟ ಏರಿಕೆಯಾದರೆ ಕೊರೊನಾ ಸೋಂಕು ಸೇರಿದಂತೆ ಎಲ್ಲಾ ರೀತಿಯ ಫಂಗಸ್ ಕಾಯಿಲೆಗಳ ವಿರುದ್ಧ ಹೋರಾಡಬಹುದು. ಕೊರೊನಾ ಸೋಂಕಿನ ಹೊಸ ರೂಪಾಂತರಿಗಳ ವಿರುದ್ಧವೂ ಹೋರಾಡಲು ಬೂಸ್ಟರ್ ಡೋಸ್ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ