ಬೆಂಗಳೂರು: ದೇಶ ಮತ್ತು ರಾಜ್ಯದಲ್ಲಿ ಕೊರೋನಾ ವೈರಸ್ ಪಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅಪಾರ ಸಂಖ್ಯೆಯಲ್ಲಿ ಜನ ಸಾಯುತ್ತಲೇ ಇದ್ದಾರೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಮೇ 1 ರಿಂದ 18 ರಿಂದ 44 ವರ್ಷದವರಿಗೆ ಕೊರೋನಾ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿತ್ತು. ಆದರೆ, ಈವರೆಗೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಕ್ತ ಪ್ರಮಾಣದ ಲಸಿಕೆಯನ್ನು ಪೂರೈಕೆ ಮಾಡಿಲ್ಲ. ಹೀಗಾಗಿ ಹಲವೆಡೆ ಲಸಿಕೆ ಕಾರ್ಯ ಕ್ರಮ ಈವರೆಗೆ ನಡೆದೇ ಇಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಯೇ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಕೊರೋನಾ ಲಸಿಕೆಗಳು ಹೇರಾಳವಾಗಿ ಲಭ್ಯವಾಗುತ್ತಿದೆ. ಸ್ವತಃ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಖಾಸಗಿ ಆಸ್ಪತ್ರೆಯಲ್ಲಿ 900 ರೂ. ಹಣ ನೀಡಿ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರಚಾರ ಕಾರ್ಯದಲ್ಲಿ ತೊಡಗಿ ದ್ದಾರೆ. ಈ ನಡುವೆ ಖಾಸಗಿ ಆಸ್ಪತ್ರೆಗಳ ಲಸಿಕೆ ಸೇವಾ ಶುಲ್ಕವನ್ನೂ ಸರ್ಕಾರ ಹೆಚ್ಚಿಸಿದೆ. ಈ ನಡೆಯನ್ನು ಟೀಕಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರ ಯಾರ ಪರ? ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಖಾಸಗಿ ಆಸ್ಪತ್ರೆಗಳು ಲಸಿಕೆ ಸೇವಾ ಶುಲ್ಕವನ್ನು ಅಧಿಕಗೊಳಿಸಿರುವ ಸಂಬಂಧ ಫೇಸ್ಬುಕ್ನಲ್ಲಿ ದೀರ್ಘ ಬರವಣಿಗೆ ಮೂಲಕ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿರುವ ಸಿದ್ದರಾಮಯ್ಯ, "ಖಾಸಗಿ ಆಸ್ಪತ್ರೆಗಳ ಲಸಿಕೆ ಸೇವಾ ಶುಲ್ಕವನ್ನು ರೂ.100 ರಿಂದ 200ಕ್ಕೆ ಹೆಚ್ಚಿಸಿರುವ ರಾಜ್ಯದ ಬಿಜೆಪಿ ಸರ್ಕಾರ ಯಾರ ಹಿತರಕ್ಷಣೆ ಮಾಡುತ್ತಿದೆ? ರಾಜ್ಯದ ಜನರದ್ದೋ? ಅಥವಾ ಖಾಸಗಿ ಆಸ್ಪತ್ರೆಗಳದ್ದೋ?
ಕಳೆದ ಏಪ್ರಿಲ್ನಲ್ಲಿ ರಾಜ್ಯ ಸರ್ಕಾರ ಖಾಸಗಿ ಸಂಸ್ಥೆಗಳು ನೀಡುವ ಲಸಿಕೆಗೆ ರೂ.100 ಸೇವಾ ಶುಲ್ಕವನ್ನು ನಿಗದಿಪಡಿಸಿದ್ದರೂ, ಈಗ ಖಾಸಗಿ ಆಸ್ಪತ್ರೆಗಳು ಲಸಿಕೆಗೆ ಹೆಚ್ಚುವರಿ ಶುಲ್ಕ ಪಡೆಯುತ್ತಿವೆ. ಈ ಬಗ್ಗೆ ಸಾಕಷ್ಟು ದೂರುಗಳಿವೆ ಹೀಗಿರುವಾಗಲೇ, ಸರ್ಕಾರ ಸೇವಾ ಶುಲ್ಕವನ್ನು ದುಪ್ಪಟ್ಟುಗೊಳಿಸಿ ಸುಲಿಗೆಯನ್ನು ಬೆಂಬಲಿಸಿದೆ" ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Rahul Gandhi: ದೇಶದಲ್ಲಿ ಕೊರೋನಾ ಅಲೆ ವ್ಯಾಪಕವಾಗಲು ಪ್ರಧಾನಿ ಮೋದಿಯ ನೌಟಂಕಿ ನಾಟಕಗಳೇ ಕಾರಣ; ರಾಹುಲ್ ಗಾಂಧಿ
ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವಿರುದ್ಧವೂ ಕಿಡಿಕಾರಿರುವ ಸಿದ್ದರಾಮಯ್ಯ, "ರಾಜ್ಯದ ಜನತೆಗೆ ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಕೊರೋನಾ ಲಸಿಕೆ ಸಿಗುವಂತೆ ಮಾಡಬೇಕಾಗಿರುವ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಖಾಸಗಿ ಆಸ್ಪತ್ರೆಗಳ ಪರವಾಗಿ ಪ್ರಚಾರಕ್ಕಿಳಿದಿದ್ದಾರೆ. ಇವರು ಸಚಿವರೋ? ಅಥವಾ ಖಾಸಗಿ ಆಸ್ಪತ್ರೆಗಳ ಪ್ರಚಾರಕರೋ?
ಖಾಸಗಿ ಆಸ್ಪತ್ರೆಗಳು ಲಸಿಕಾ ತಯಾರಿಕ ಸಂಸ್ಥೆ ನಿಗದಿಪಡಿಸಿದ ದರದ ಜೊತೆಗೆ ರೂ.100 ಸೇವಾ ಶುಲ್ಕ ಮಾತ್ರ ವಸೂಲಿ ಮಾಡಬೇಕೆಂದು ಕೇಂದ್ರ ಸರ್ಕಾರದ ಸುತ್ತೋಲೆ ಇದ್ದರೂ, ಲಸಿಕೆಯನ್ನು 900ರೂ.ಗೆ ಮಾರಾಟ ಮಾಡುತ್ತಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕ್ರಮ ಏಕಿಲ್ಲ? ಈ ಬಗ್ಗೆ ಮುಖ್ಯಮಂತ್ರಿಗಳೇ ಉತ್ತರಿಸಬೇಕು" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Narada Case: ನಾರದಾ ಲಂಚ ಪ್ರಕರಣ: ಟಿಎಂಸಿ ಪಕ್ಷದ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ನಿಂದ ಮಧ್ಯಂತರ ಜಾಮೀನು!
ಕೊರೋನಾ ಲಸಿಕೆ ನೀಡುವ ಬಗ್ಗೆ ರಾಹುಲ್ ಗಾಂಧಿ ಸಹ ಮಾತನಾಡಿದ್ದು, "ದೇಶದ ಜನಸಂಖ್ಯೆಯ ಕೇವಲ ಮೂರು ಪ್ರತಿಶತದಷ್ಟು ಜನರಿಗೆ ಮಾತ್ರ ಲಸಿಕೆ ನೀಡಿದ್ದೀರಿ, ಉಳಿದವರು ಇನ್ನೂ ಅಪಾಯದಲ್ಲಿದ್ದಾರೆ. ಅಮೆರಿಕ ತನ್ನ ಅರ್ಧದಷ್ಟು ಜನಸಂಖ್ಯೆಗೆ ಲಸಿಕೆ ನೀಡಿದೆ. ಬ್ರೆಜಿಲ್ ಶೇ.8 ರಿಂದ 9% ದಷ್ಟು ಲಸಿಕೆ ನೀಡಿದೆ. ಅವರು ದೊಡ್ಡ ಮಟ್ಟದಲ್ಲಿ ಲಸಿಕೆ ಉತ್ಪಾದಿಸುವುದಿಲ್ಲ, ಆದರೆ ನಾವು ಹೆಸರಿಗಷ್ಟೇ ವಿಶ್ವದಲ್ಲಿ ಅತಿಹೆಚ್ಚು ಲಸಿಕೆ ಉತ್ಪಾದಿಸುವ ದೇಶ. ಆದರೆ, ನಮ್ಮ ಜನಗಳಿಗೇ ಲಸಿಕೆ ನೀಡಲಾಗುತ್ತಿಲ್ಲ" ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಭಾರತವು ತನ್ನ ವ್ಯಾಕ್ಸಿನೇಷನ್ ತಂತ್ರವನ್ನು ಸರಿಯಾಗಿ ಮಾಡದಿದ್ದರೆ, ಕೊರೋನಾ ವೈರಸ್ನ ಅನೇಕ ಅಲೆಗಳು ದೇಶವನ್ನು ಕಾಡುವ ಭೀತಿ ಇದೆ. ಮಾರಣಾಂತಿಕ ಕೊರೋನಾ ಮತ್ತು ಲಾಕ್ಡೌನ್ಗಳಿಗೆ ಲಸಿಕೆಗಳು ಮಾತ್ರ ಶಾಶ್ವತ ಪರಿಹಾರವಾಗ ಬಲ್ಲವು. ಸಾಮಾಜಿಕ ಅಂತರ ಮತ್ತು ಮಾಸ್ಕ್ಗಳು ತಾತ್ಕಾಲಿಕವಾದವು. ಸರಿಯಾದ ವ್ಯಾಕ್ಸಿನೇಷನ್ ತಂತ್ರವಿಲ್ಲದಿದ್ದರೆ, ಭಾರತವು ಸೋಂಕಿನ ಅನೇಕ ಅಲೆಗಳನ್ನು ಎದುರಿಸುವುದು ಸಾಧ್ಯವಿಲ್ಲ" ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ