ಹುಬ್ಬಳ್ಳಿ: ಕೊರೋನಾ ಎರಡನೆಯ ಅಲೆಯ ಅಬ್ಬರ ತುಸು ಇಳಿಮುಖ ಆಗಲಾರಂಭಿಸಿದೆ. ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇ. 5 ಕ್ಕಿಂತ ಕೆಳಕೆ ಇಳಿದಿದೆ. ಹಾಗೆಂದು ಕೊರೋನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಅನ್ನೋದಕ್ಕೆ ಆಗಲ್ಲ. ಇದರ ನಡುವೆಯೇ ಮುಂಬರುವ ದಿನಗಳಲ್ಲಿ ಮೂರನೆಯ ಅಲೆ ಬರಲಿದೆ ಅನ್ನೋ ಭೀತಿ ಜನರನ್ನು ಗಲಿಬಿಲಿಗೊಳಿಸಿದೆ. ಹೀಗಾಗಿ ಧಾರವಾಡ ಜಿಲ್ಲೆಯಲ್ಲಿ ಇಂದು ಕೈಗೊಂಡ ಕೋವಿಡ್ ವ್ಯಾಕ್ಸಿನ್ ಡ್ರೈವ್ ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಧಾರವಾಡದ ಜಿಲ್ಲೆಯಲ್ಲಿ ಆರಂಭವಾಗಿರುವ ಕೋವಿಡ್ ಲಸಿಕಾ ಮೇಳ ಮೊದಲ ದಿನ ನಿರೀಕ್ಷಿಗೂ ಮೀರಿ ಗುರಿ ಮಟ್ಟುವಲ್ಲಿ ಯಶಸ್ವಿಯಾಗಿದೆ. ಜಿಲ್ಲಾಡಾಳಿತ ಹಾಗೂ ಆರೋಗ್ಯ ಇಲಾಖೆ 201 ಲಸಿಕಾ ಕೇಂದ್ರಗಳಲ್ಲಿ 27 ಸಾವಿರ ಜನರಿಗೆ ಕೋವಿಡ್ ಲಸಿಕೆ ನೀಡಲು ಸಿದ್ದತೆ ನೆಡೆಸಿತ್ತು. ಜಿಲ್ಲಾಡಳಿತದ ಗುರಿಯನ್ನೂ ಮೀರಿ ಮೊದಲ ದಿನವಾದ ಇಂದು 27,600 ಜನರಿಗೆ ಮೊದಲ ದಿನ ಲಸಿಕೆ ನೀಡಲಾಗಿದೆ.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನ ಸಾಲುಗಟ್ಟಿ ನಿಂತು ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಬಹುತೇಕ ಎಲ್ಲ ಲಸಿಕಾ ಕೇಂದ್ರಗಳಲ್ಲಿಯೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಮ, ಪಟ್ಟಣ ಹಾಗೂ ಮಹಾನಗರಗಳಲ್ಲಿ ಸ್ಥಾಪಿಸಲಾಗಿರುವ ಲಸಿಕಾ ಕೇಂದ್ರಗಳ ವಿವರಗಳನ್ನು ಮುಂಚಿತವಾಗಿ ಸಾರ್ವಜನಿಕರಲ್ಲಿ ಪ್ರಚುರ ಪಡಿಸಲಾಗಿತ್ತು. ಲಸಿಕಾ ಮೇಳದ ಕುರಿತಾದ ಗೊಂದಲಗಳನ್ನು ಕಡಿಮೆ ಮಾಡಿದ್ದರಿಂದ ಲಸಿಕಾಕರಣ ಯಶಸ್ವಿಯಾಗಲು ಸಹಕಾರಿಯಾಗಿದೆ ಎಂದು ಜಿಲ್ಲಾ ಆರ್.ಸಿ.ಹೆಚ್.ಓ. ಡಾ.ಎಸ್.ಎಂ.ಹೊನಕೇರಿ ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯ ವ್ಯಾಕ್ಸಿನ್ ಡ್ರೈವ್ ಗೆ ಹುಬ್ಬಳ್ಳಿಯಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದ್ದರು. ಹುಬ್ಬಳ್ಳಿಯ ಸಿ.ಎ.ಆರ್. ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಜಗದೀಶ್ ಶೆಟ್ಟರ್ ಅಭಿಯಾನಕ್ಕೆ ಚಾಲನೆ ನೀಡಿದರು. ಪೊಲೀಸ್ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಕುಟುಂಬದ ಸದಸ್ಯರಿಗೆ ಕೋವಿಡ್ ವ್ಯಾಕ್ಸಿನ್ ಹಾಕಲಾಯಿತು. 18 ಮೇಲ್ಪಟ್ಟವರಿಗೆ ಕೋವಿಡ್ ವ್ಯಾಕ್ಸಿನ್ ಹಾಕಲಾಯಿತು.
ಈ ವೇಳೆ ಮಾತನಾಡಿದ ಜಗದೀಶ್ ಶೆಟ್ಟರ್, ಮುಂಚೂಣಿಯಲ್ಲಿ ನಿಂತು ಕೆಲಸ ಮಾಡೋ ಪೊಲೀಸ್ ಸಿಬ್ಬಂದಿ ಕೊರೋನಾ ವಾರಿಯರ್ಸ್ ಆಗಿದ್ದಾರೆ. ಹೀಗಾಗಿ ಅವರ ಕುಟುಂಬದ ಸದಸ್ಯರನ್ನು ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿ ಲಸಿಕೆ ಹಾಕಲಾಗ್ತಿದೆ.
ಧಾರವಾಡ ಜಿಲ್ಲೆಯಲ್ಲಿ 50 ಸಾವಿರ ವ್ಯಾಕ್ಸಿನ್ ಲಭ್ಯ
ಧಾರವಾಡ ಜಿಲ್ಲೆಯಲ್ಲಿ 26 ಸಾವಿರ ಜನರಿಗೆ ವ್ಯಾಕ್ಸಿನ್ ಹಾಕುವ ಗುರಿ ಹೊಂದಲಾಗಿದೆ. ವ್ಯಾಕ್ಸಿನ್ ಮಹಾ ಅಭಿಯಾನ ಭಾರತ ದೇಶ ಕೊರೋನಾ ಮುಕ್ತಗೊಳ್ಳಲು ನಾಂದಿ ಹಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ಮತ್ತೊಂದೆಡೆ ಹುಬ್ಬಳ್ಳಿ - ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಸಹ ಹುಬ್ಬಳ್ಳಿಯ ಗೋಕುಲ ರಸ್ತೆಯ ರಾಮಲಿಂಗೇಶ್ವರ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ವ್ಯಾಕ್ಸಿನ್ ಡ್ರೈವ್ ಗೆ ಚಾಲನೆ ನೀಡಿದರು.
ರಾಜ್ಯದಲ್ಲಿ ಇಂದು 4,867 ಸಾವಿರ ಕೊರೋನಾ ಕೇಸ್ ಪತ್ತೆಯಾಗಿದೆ. 142 ಜನ ಕೊರೋನಾಗೆ ಬಲಿಯಾಗಿದ್ದಾರೆ. 8,404 ಮಂದಿ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಪಾಸಿಟಿವಿಟಿ ದರ ಶೇ. 3.25 ರಷ್ಟಿದ್ದರೆ, ಸಾವಿನ ಪ್ರಮಾಣ ಶೇ. 2.91 ರಷ್ಟಿದೆ.
ವರದಿ - ಶಿವರಾಮ ಅಸುಂಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ