ಫಿರೋಜಾಬಾದ್ (ಆಗಸ್ಟ್ 31); ಕೊರೋನಾ ವೈರಸ್ (Coronavirus) ಈಗಾಗಲೇ ಭಾರತದಲ್ಲಿ ಮಾರಣಾಂತಿಕವಾಗಿದೆ. ಮೊದಲ ಮತ್ತು ಎರಡನೇ ಅಲೆ ಸಾಲು ಸಾಲಾಗಿ ಲಕ್ಷಾಂತರ ಜನರ ಜೀವವನ್ನು ಬಲಿ ಪಡೆದಿದೆ. ಈ ನಡುವೆ ಮೂರನೇ ಕೊರೋನಾ ಅಲೆ ಉಂಟುಮಾಡಬಹುದಾದ ಅನಾಹುತಕ್ಕೆ ಇಡೀ ದೇಶ ಹೆದರಿರುವುದು ಸುಳ್ಳಲ್ಲ. ತಜ್ಞರು ಸಹ ಈ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ದೇಶದ ಆರೋಗ್ಯ ವ್ಯವಸ್ಥೆ ಯನ್ನು ಮತ್ತಷ್ಟು ಸುಧಾರಿಸುವಂತೆ ಸೂಚನೆಯನ್ನೂ ನೀಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇದೀಗ ಫಿರೋಜಾಬಾದ್ನಲ್ಲಿ (Firozabad) ಸುಮಾರು 40 ಮಂದಿ ನಿಗೂಢ ರೋಗಕ್ಕೆ (Mysterious Fever) ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಣ ಕಳೆದುಕೊಂಡ ವರಲ್ಲಿ 33 ಜನ ಮಕ್ಕಳು ಎಂಬ ಸುದ್ದಿ ಆತಂಕ್ಕೆ ಕಾರಣವಾಗಿದೆ. ಮಕ್ಕಳು ನಿಗೂಢ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಈ ನಗರಕ್ಕೆ ಭೇಟಿ ನೀಡಿದ್ದಾರೆ. ಮಥುರಾಗೆ ಹೋಗುವ ದಾರಿಯಲ್ಲಿ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದ ಫಿರೋಜಾಬಾದ್ಗೆ ಭೇಟಿ ನೀಡಿದ ಬಳಿಕ ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಯೋಗಿ ಆದಿತ್ಯನಾಥ್, "ನಿಗೂಢ ರೋಗಕ್ಕೆ ಈವರೆಗೆ 40 ಜನ ಮೃತಪಟ್ಟಿದ್ದಾರೆ. ಈ ಪೈಕಿ 33 ಮಕ್ಕಳು ಸಹ ಇದ್ದು ಇದು ಆತಂಕಕಾರಿ ಬೆಳವಣಿಗೆ ಯಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿಯೊಬ್ಬ ರೋಗಿಗೂ ಸರಿಯಾದ ಚಿಕಿತ್ಸೆ ಸಿಗುವ ಬಗ್ಗೆ ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸದೆ ಇರುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ.
ಅಲ್ಲದೆ, ಇಷ್ಟು ಜನರ ಸಾವಿಗೆ ಕಾರಣವಾದ ನಿಗೂಢ ರೋಗದ ಬಗ್ಗೆ ತನಿಖೆ ನಡೆಸಿ ಸತ್ಯಾಂಶವನ್ನು ತಿಳಿಯುವಂತೆ ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನ ವೈದ್ಯರ ತಂಡಕ್ಕೆ ತಿಳಿಸಿದ್ದೇನೆ" ಎಂದು ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಪ್ರದೇಶದಿಂದ ರೋಗಿಗಳನ್ನು ಕರೆತರಲು ಹೆಚ್ಚಿನ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ಸುದಾಮ ನಗರಕ್ಕೂ ಸಿಎಂ ಆದಿತ್ಯನಾಥ್ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯ ವರದಿಗಳ ಪ್ರಕಾರ ಈ ನಿಗೂಢ ರೋಗಕ್ಕೆ ತುತ್ತಾಗಿ ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ. ಜೊತೆಗೆ ಖಾಸಗಿ ವೈದ್ಯಕೀಯ ಮೂಲಸೌಕರ್ಯದ ಮೇಲೆ ಹೆಚ್ಚಿನ ಒತ್ತಡ ಇದೆ ಎಂದು ತಿಳಿಸಿವೆ.
ಪ್ರಸ್ತುತ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 200 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ವೈದ್ಯಕೀಯ ಆಸ್ಪತ್ರೆಯ (ಸ್ವಾಯತ್ತ) ಪ್ರಿನ್ಸಿಪಾಲ್ ಮತ್ತು ಡೀನ್ ಡಾ.ಸಂಗೀತಾ ಅನೀಜಾ ಹೇಳಿದರು. ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲ ರೋಗಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಳು ನೆಗೆಟಿವ್ ಇದೆ ಎಂದು ಹೇಳಿದ್ದಾರೆ.
"ಕಳೆದ ಐದು ದಿನಗಳಲ್ಲಿ ಈ ಪ್ರಕರಣಗಳು ಇದ್ದಕ್ಕಿದ್ದಂತೆ ಏರಿಕೆಯಾಗಿದೆ. ಸೋಂಕಿತರಲ್ಲಿ 90% ಮಕ್ಕಳು. ಅವರಲ್ಲಿ ಹಲವರು ಡೆಂಗ್ಯೂಗೆ ಒಳಗಾಗಿದ್ದಾರೆ. ಆದರೆ ಇತರರ ಪ್ಲೇಟ್ಲೆಟ್ಗಳ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಅವರು ಡೆಂಗ್ಯೂಗೆ ಒಳಗಾಗಿಲ್ಲ" ಎಂದಿದ್ದಾರೆ ಎಂದು ದಿ ಹಿಂದೂ ಉಲ್ಲೇಖಿಸಿದೆ.
ಆಸ್ಪತ್ರೆಗೆ ದಖಲಾಗಿರುವವರಲ್ಲಿ ಅಧಿಕ ಜ್ವರ, ಅತಿಸಾರ ಮತ್ತು ವಾಂತಿ ಸಾಮಾನ್ಯ ಲಕ್ಷಣಗಳಾಗಿವೆ. ಲಕ್ನೋದ ತನಿಖ ತಂಡ ನಮ್ಮೊಂದಿಗಿದೆ. ಅವರು ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ನೆರೆಯ ಆಗ್ರಾ ಮತ್ತು ಮಥುರಾದಿಂದಲೂ ಇದೇ ರೀತಿಯ ಪ್ರಕರಣಗಳು ವರದಿಯಾಗುತ್ತಿವೆ ಎಂದು ಡಾ.ಅನೆಜಾ ಹೇಳಿದ್ದಾರೆ. ಸದ್ಯ 1 ರಿಂದ 8 ನೇ ತರಗತಿಯವರೆಗೆ ತರಗತಿಗಳನ್ನು ಒಂದು ವಾರ ಮುಚ್ಚಲು ಜಿಲ್ಲಾಡಳಿತ ನಿರ್ಧರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ