ಕಾರವಾರ (ಮೇ. 31): ಹೇಳಿಕೊಳ್ಳುವಂತಹ ಆರೋಗ್ಯ ವ್ಯವಸ್ಥೆ ಇಲ್ಲದ ಉತ್ತರ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸುಧಾರಣೆ ಕಾಣುತ್ತಿದೆ. ಇದಕ್ಕೆ ಕಾರಣ ಕೊರೋನಾ ಸೋಂಕು. ಇದರಿಂದಾಗಿ ಅಂಬುಲೆನ್ಸ್ ಇಲ್ಲದ ಕಡೆ ಅಂಬುಲೆನ್ಸ್ ಬರುತ್ತಿದೆ. ಆಯಾ ಆಸ್ಪತ್ರೆಯಲ್ಲಿ ವ್ಯವಸ್ಥೆ ಸುಧಾರಣೆ ಕಾಣುತ್ತಿದೆ. ಇದು ಜಿಲ್ಲೆಯ ಜನರಲ್ಲಿ ಹೊಸ ಆಶಾ ಭಾವನೆ ಮೂಡಿಸಿದೆ. ಜಿಲ್ಲೆಯ ಯಲ್ಲಾಪುರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಯಲ್ಲಾಪುರ ಮುಂಡಗೋಡ ಕ್ಷೇತ್ರಕ್ಕೆ ತಮ್ಮ ಅನುದಾನದಲ್ಲಿ ಐದು ಅಂಬುಲೆನ್ಸ್ ಗಳನ್ನ ನೀಡಿದ್ದು, ಜನರಲ್ಲಿ ನಿಟ್ಟುಸಿರು ಬಿಡುವಂತೆ ಆಗಿದೆ. ಯಲ್ಲಾಪುರ ಮತ್ತು ಮುಂಡಗೋಡ ಎರಡು ತಾಲೂಕು ಇತ್ತೀಚಿಗೆ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿವೆ. .ಕಳೆದ ವರ್ಷ ಅಂದರೆ 2020 ಕೊರೋನಾ ಮಹಾಮಾರಿ ಮೊದಲ ಅಲೆಯಲ್ಲಿ ಎಲ್ಲಿಯೂ ಆಸ್ಪತ್ರೆ ವ್ಯವಸ್ಥೆ ಉತ್ತಮ ವಾಗಿರಲಿಲ್ಲ, ಕೇವಲ ಹೆಸರಿಗೆ ಮಾತ್ರ ಸರಕಾರಿ ಆಸ್ಪತ್ರೆಗಳಿದ್ದವು. ಆದರೆ ಅಲ್ಲಿ ವೈದ್ಯರ ಕೊರೆತೆಯಿಂದ ಹಿಡಿದು ಎಲ್ಲ ವಿಭಾಗದಲ್ಲಿಯೂ ಸಮಸ್ಯೆಗಳ ಸರಮಾಲೆಗಳೆ ಇತ್ತು. ಬಳಿಕ ಒಂದರ ಮೇಲೆ ಒಂದರಂತೆ ನಿಧಾನವಾಗಿ ಆರೋಗ್ಯ ಇಲಾಖೆಯಲ್ಲಿ ಕೊಂಚ ಬದಲಾವಣೆ ಕಂಡಿತು.
ಮೊದಲ ಅಲೆಯಲ್ಲಿ ಸರಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಳವಾಯಿತು, ಕೆಲ ಖಾಸಗಿ ಆಸ್ಪತ್ರೆಯ ಸುಲಿಗೆ ನಡುವೆ ಸರಕಾರಿ ಆಸ್ಪತ್ರೆಯೇ ಲೇಸು ಎಂದು ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯಲು ರೋಗಿಗಳು ಸರಕಾರಿ ಆಸ್ಪತ್ರೆಯನ್ನ ನೆಚ್ಚಿ ಕೊಳ್ಳುವಂತಾಯಿತು. ಹೀಗೆ ಆಸ್ಪತ್ರೆಗಳಲ್ಲಿ ಕೊಂಚ ಬದಲಾವಣೆಯೂ ಕಂಡಿತು. ಈ ನಡುವೆ ಈಗ ಎರಡನೆಯ ಅಲೆಗೆ ಬೆಚ್ಚಿ ಬಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಲ್ಲಾಪುರ ಮತ್ತು ಮುಂಡಗೋಡ ತಾಲೂಕುಗಳು ಆಸ್ಪತ್ರೆಗಳಿಗೆ ಸೌಲಭ್ಯವನ್ನು ಒದಗಿಸಲಾಗಿದ್ದು, ಇದರಿಂದ ಈಗ ಅಭಿವೃದ್ಧಿ ಕಾಣಲಾರಂಭಿಸಿದೆ,
ಸಚಿವ ಶಿವರಾಮ್ ಹೆಬ್ಬಾರ್ ಅನುದಾನಲ್ಲಿ ಬಂತು ಐದು ಅಂಬುಲೆನ್ಸ್
ಯಲ್ಲಾಪುರ ಮುಂಡಗೋಡದಲ್ಲಿ ಈ ಹಿಂದೆ ಒಂದೋ ಎರಡು ಅಂಬುಲೆನ್ಸ್ ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು. ಇದರಿಂದಾಗಿ ಮೊದಲ ಅಲೆಯಲ್ಲಿ ತೀರಾ ಸಂಕಷ್ಟ ಎದುರಾಗಿತ್ತು. ಬಹುತೇಕ ಪ್ರದೇಶಗಳಿಗೆ ಅಂಬುಲೆನ್ಸ್ ಸೇವೆ ಸಿಗದೇ ಜನರು ಸಂಕಷ್ಟಕ್ಕೆ ಒಳಗಾಗಿದ್ದರು. ಈಗ ಮತ್ತೆ ಸಂಕಷ್ಟ ಎದುರಾಗಬಾರದು ಎಂದು ಕ್ಷೇತ್ರದ ಶಾಸಕ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ತಮ್ಮ ಅನುದಾನ ದಲ್ಲಿ ಐದು ಅಂಬುಲೆನ್ಸ್ ಗಳನ್ನ ನೀಡಿದ್ದಾರೆ. ಈ ಮೂಲಕ ಕೊರೋನಾ ಮಹಾಮಾರಿಯಿಂದಾಗಿ ಜಿಲ್ಲೆಯ ಆರೋಗ್ಯ ಇಲಾಖೆಯನ್ನು ಸುಧಾರಣೆಗೆ ತರಲಾಗುತ್ತಿದೆ. ಯಲ್ಲಾಪುರ ಮತ್ತು ಮುಂಡಗೋಡ ತಾಲೂಕು ಆಸ್ಪತ್ರೆಗಳಲ್ಲಿ ಈಗ ಐದು ಅಂಬುಲೆನ್ಸ್ ಗಳು ಓಡಾಡಲಿವೆ. ಅತೀ ಹೆಚ್ಚು ರಸ್ತೆ ಅಪಘಾತಗಳು ಆಗುವ ಈ ಎರಡು ತಾಲೂಕುಗಳ ರಸ್ತೆಯಲ್ಲಿ ಅಂಬುಲೆನ್ಸ್ ಸಿಕ್ಕಿರುವುದು ರೋಗಿಗಳ ಪಾಲಿಗೆ ಆಶಾಕಿರಣವಾಗಲಿವೆ. ವಿಶೇಷ ಎಂದರೆ ಅಂಬುಲೆನ್ಸ್ ತೆರಳದ ಗ್ರಾಮಗಳಿಗೆ ಅಂಬುಲೆನ್ಸ್ ಈಗ ಹೋಗಲಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಆಕ್ಸಿಜನ್ ಘಟಕ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಾ ಆಸ್ಪತ್ರೆ ಆವರಣದಲ್ಲಿ ಜಿಲ್ಲೆಯಲ್ಲೆ ಮೊದಲ ನೈಸರ್ಗಿಕ ಆಕ್ಸಿಜನ್ ಉತ್ಪಾದನ ಘಟಕ ಸ್ಥಾಪನೆ ಆಗಿದೆ. ಈ ಹಿನ್ನಲೆ ಕೊರೋನಾ ಮಹಾಮಾರಿ ಒಂದು ಕಡೆಯಿಂದ ಸಂಕಷ್ಟದ ಸ್ಥಿತಿ ನಿರ್ಮಾಣ ಮಾಡಿದರೂ ಆರೋಗ್ಯ ಇಲಾಖೆಯ ಸ್ಥಿತಿ ಗತಿ ಸುಧಾರಿಸಿ ರೋಗಿಗಳ ಪಾಲಿಗೆ ಆಶಾಕಿರಣವಾಗುತ್ತಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ