news18-kannada Updated:April 7, 2020, 3:50 PM IST
ಸಾಂದರ್ಭಿಕ ಚಿತ್ರ
ಉತ್ತರ ಕನ್ನಡ: ಜಿಲ್ಲೆಯ ಕರಾವಳಿಯಲ್ಲಿ ಇದು ಈರುಳ್ಳಿ ಮಾರಾಟದ ಸಮಯ. ಡಿಸೆಂಬರ್, ಜನವರಿಯಲ್ಲಿ ಹಾಕಲಾಗಿದ್ದ ಈರುಳ್ಳಿ ಈಗ ಉತ್ತಮ ಬೆಳೆ ಬಂದಿದೆ. ದುರಂತ ಅಂದರೆ ಬೆಳೆದ ಇರುಳ್ಳಿ ಮಾರಾಟ ಮಾಡಲು ಮಾರುಕಟ್ಟೆ ಇಲ್ಲದೆ ರೈತರಿಗೆ ಲಾಕ್ಡೌನ್ ಕಣ್ಣೀರು ತರಿಸಿದೆ.
ಕರಾವಳಿಯ ಹೊನ್ನಾವರ, ಕುಮಟಾ ತಾಲೂಕಿನ ಈರುಳ್ಳಿ ಎಂದ್ರೆ ಎಲ್ಲಿಲ್ಲದ ಬೇಡಿಕೆ. ಇಲ್ಲಿನ ರೈತರು ಸಿಹಿ ಈರುಳ್ಳಿ ಕೂಡಾ ಬೆಳೆಯುತ್ತಾರೆ. ಈ ಸಿಹಿ ಈರುಳ್ಳಿ ಖರೀದಿಸಲು ರಾಜ್ಯ ಹೊರ ರಾಜ್ಯದಿಂದ ಗ್ರಾಹಕರು ಕರಾವಳಿಯಲ್ಲಿ ಬೀಡುಬಿಡುತ್ತಿದ್ದರು. ಆದರೆ ಈಗ ಕೊರೋನಾ ವೈರಸ್ನಿಂದಾಗಿ ದೇಶ ಲಾಕ್ ಡೌನ್ ಆಗಿರುವುದು ಈರುಳ್ಳಿ ಬೆಳೆ ಬೆಳೆದ ನೂರಾರು ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಡಿಸೆಂಬರ್, ಜನವರಿಯಲ್ಲಿ ಬಿತ್ತನೆ ಮಾಡಿ ಹುಮ್ಮಸ್ಸಿನಿಂದ ಈರುಳ್ಳಿ ಬೆಳೆದ ರೈತರು ಈಗ ಉತ್ತಮ ಬೆಳೆ ಬಂದ ಮೇಲೆ ಮಾರಾಟ ಮಾಡಲಾಗದೆ ಕಂಗಾಲಾಗಿದ್ದಾರೆ. ಮೂರು ತಿಂಗಳ ಕಾಲ ಹೊಲದಲ್ಲಿ ಪಟ್ಟ ಕಷ್ಟಕ್ಕೆ ಕೊರೋನಾ ಎಂಬ ವಿಧಿ ರೈತರ ತುತ್ತನ್ನು ಕಸಿದುಕೊಂಡಿದೆ.
ಲಕ್ಷಾಂತರ ರೂ. ವೆಚ್ಚ
ಇನ್ನೂ ಈಗಾಗಲೇ ಲಕ್ಷಾಂತರ ರೂ ವೆಚ್ಚ ಮಾಡಿ ನೂರಾರು ಎಕರೆ ಜಾಗದಲ್ಲಿ ಈರುಳ್ಳಿ ಬೆಳೆ ಬೆಳೆದ ರೈತರಿಗೆ ಭೂ ತಾಯಿ ಕೈ ಕೊಟ್ಟಿರಲಿಲ್ಲ. ಉತ್ತಮ ಬೆಳೆಯ ಫಲವನ್ನೇ ರೈತರಿಗೆ ನೀಡಿತ್ತು. ಆದರೆ ಕೊರೋನಾ ದೇಶಕ್ಕೆ ವಕ್ಕರಿಸುತ್ತಿದ್ದಂತೆ ಈರುಳ್ಳಿ ಬೆಳೆ ಬೆಳೆದ ರೈತರು ತಾವು ಬೆಳೆದ ಬೆಳೆ ಮಾರಾಟ ಮಾಡಲಾಗದೆ ಹೊಲದಲ್ಲೆ ಬಿಟ್ಟು ಬರುವಂತೆ ಮಾಡಿದೆ. ಇನ್ನು ರೈತರು ಮುಂದಿನ ಲಾಕ್ ಡೌನ್ ಚಿಂತೆಯಲ್ಲಿ ಕೈಕಟ್ಟಿ ಕುಳಿತಿದ್ದಾರೆ. ಈಗಾಗಲೇ ಲಾಕ್ ಡೌನ್ ಮುಂದುವರೆಯುವ ಲಕ್ಷಣ ಹೆಚ್ಚಾಗಿ ಗೋಚರಿಸುತ್ತಿದ್ದು, ಇಲ್ಲಿನ ರೈತರಿಗೆ ದಿಕ್ಕೆ ತೋಚದಂತಾಗಿದೆ.
ಒಟ್ಟಾರೆ ಕೊರೋನಾ ರೈತರ ಬಾಳಲ್ಲಿ ಚದುರಂಗದಾಟ ಆಡುತ್ತಿದೆ. ಇಡೀ ದೇಶದ ಜನರ ಆರೋಗ್ಯ ಸೇರಿ ಆರ್ಥಿಕತೆ ಮೇಲೂ ದುಷ್ಪರಿಣಾಮ ಬೀರಿರುವ ಕೊರೋನಾ ಸೋಂಕು ರೈತ ಸಮುದಾಯವನ್ನು ಜೀವಂತ ಶವವಾಗಿಸಿದೆ.
ಇದನ್ನು ಓದಿ: ಭಾರತದಲ್ಲಿ 4,421 ಮಂದಿಗೆ ಕೊರೋನಾ ಸೋಂಕು; ಗುಣಮುಖರಾಗಿ ಡಿಸ್ಚಾರ್ಜ್ ಆದವರ ಸಂಖ್ಯೆ 325ವರದಿ: ದರ್ಶನ್ ನಾಯ್ಕ
First published:
April 7, 2020, 3:50 PM IST