• ಹೋಂ
  • »
  • ನ್ಯೂಸ್
  • »
  • Corona
  • »
  • ಕಲಾವಿದರಿಗೆ ಲಾಕ್‌ಡೌನ್ ಪರಿಹಾರ‌ ಮರೀಚಿಕೆ? ಉತ್ತರಕನ್ನಡ ಜಿಲ್ಲಾ ಕಲಾವಿದರ ಗೋಳು ಕೇಳೋರ್ಯಾರು?

ಕಲಾವಿದರಿಗೆ ಲಾಕ್‌ಡೌನ್ ಪರಿಹಾರ‌ ಮರೀಚಿಕೆ? ಉತ್ತರಕನ್ನಡ ಜಿಲ್ಲಾ ಕಲಾವಿದರ ಗೋಳು ಕೇಳೋರ್ಯಾರು?

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಸರ್ಕಾರ ನಿಯಮಾವಳಿ ಸಡಿಲಿಸಿ, ತಾಂತ್ರಿಕ ಸಮಸ್ಯೆ ಬಗೆಹರಿಸಿ ಅಂಥವರಿಗೆ ಪರಿಹಾರ ಸಿಗುವಂಥ ವ್ಯವಸ್ಥೆ ಮಾಡಬೇಕಾಗಿದೆ. ಹೀಗೆ ಮಾಡುವುದರಿಂದ ಇನ್ನೂ ಸಾವಿರಾರು ಅರ್ಹ ಬಡ ಕಲಾವಿದರಿಗೆ ಅಲ್ಪ ಪ್ರಮಾಣದಲ್ಲಿ ಸಹಾಯ ಮಾಡಿದಂತೆ ಆಗುತ್ತದೆ.

  • Share this:

ಕಾರವಾರ: ಕೊರೋನಾ ಅಟ್ಟಹಾಸದಿಂದಾಗಿ  ಕಳೆದೆರಡು ವರ್ಷಗಳಿಂದ ಕಲಾವಿದರ  ಜೀವನ ಮೂರಾಬಟ್ಟೆಯಾಗಿದೆ. ಮಹಾಮಾರಿಯ ರುದ್ರ ನರ್ತನ ದಿಂದಾಗಿ ಯಕ್ಷಗಾನ, ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯದೇ ಕಲಾವಿದರು ಕಂಗಾಲಾಗಿದ್ದರು. ಹೀಗಾಗಿ ರಾಜ್ಯದ ಕಲಾವಿದರಿಗೆ ಲಾಕ್ ಡೌನ್ ಪರಿಹಾರವನ್ನು ಸರ್ಕಾರ ಘೋಷಿಸಿದೆ. ಆದರೆ ಪರಿಹಾರ ಪಡೆಯಲು ವಿಧಿಸಿದ ಕಠಿಣ ನಿಯಮಾವಳಿ ಹಾಗೂ ತಾಂತ್ರಿಕ ತೊಂದರೆಯಿಂದ ಕಲಾವಿದರಿಗೆ ಪರಿಹಾರ ಸಿಗದಂತಾಗಿದೆ.


ಅರ್ಜಿ ಸಲ್ಲಿಸಲು ಹೈರಾಣಾದ ಕಲಾವಿದರು


ಮಹಾಮಾರಿ ಕೊರೋನಾದಿಂದಾಗಿ ರಾಜ್ಯದಲ್ಲಿ ಕಲಾವಿದರ ಸ್ಥಿತಿ ಅಯೋಮಯವಾಗಿದೆ. ಕಲೆಯನ್ನೇ ನಂಬಿ ಜೀವನ ನಡೆಸುತ್ತಿದ್ದ ಕಲಾವಿದರಿಗೆ ಕೋವಿಡ್ ಬರ ಸಿಡಿಲಿನಂತೆ ಬಡಿದಿದೆ. ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ವಿಧಿಸಿದ ಕಠಿಣ ಕ್ರಮದಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಯಕ್ಷಗಾನ, ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿಲ್ಲ. ಹೀಗಾಗಿ ಕಲಾವಿದರ ಪರಿಸ್ಥಿತಿ ತೀರಾ ಅಸಹನೀಯವಾಗಿದೆ. ಕಲಾವಿದರ ಸಂಕಷ್ಟ ಅರಿತು ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಅವರು  ಕಲಾವಿದರಿಗೆ ತಲಾ 3 ಸಾವಿರ ರೂ. ಲಾಕ್‌ಡೌನ್‌ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಸೇವಾ ಸಿಂಧು ಪೋರ್ಟಲ್ ಮೂಲಕ ಜೂನ್ 5 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಈ ಅವಧಿಯಲ್ಲಿ ಲಾಕ್ ಡೌನ್ ಇದ್ದಿದ್ರಿಂದ ಬಹುತೇಕ ಕಲಾವಿದರಿಗೆ ಅರ್ಜಿ ಸಲ್ಲಿಸಲು ಆಗಿಲ್ಲ.  ಪರಿಹಾರಕ್ಕಾಗಿ ಅರ್ಜಿ ಸಲ್ಲಿಬೇಕಾದರೆ 35 ವರ್ಷ ವಯಸ್ಸಾಗಿರಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರಬಾರದು. 2020-21 ನೇ ಸಾಲಿನ ಸಾಮಾನ್ಯ ವಿಶೇಷ ಘಟಕ, ಗಿರಿಜನ ಉಪ ಯೋಜನೆಯಡಿ, ಸಾಂಸ್ಕೃತಿಕ ಚಟುವಟಿಕೆಗೆ ಕಲಾ ಸಂಘಗಳ ಪರವಾಗಿ ಸಹಾಯಧನ ಪಡೆದಿರಬಾರದು, ವಾದ್ಯ ಪರಿಕರ, ವೇಷಭೂಷಣ ಖರೀದಿ, ಶಿಲ್ಪಕಲೆ ಚಿತ್ರಕಲಾ ಪ್ರದರ್ಶನಕ್ಕೆ ಸಹಾಯಧನ ಪಡೆದಿರಬಾರದು. ಕಲಾವಿದರಾಗಿ ಕೆಲಸ ಮಾಡಲು ಪ್ರಾರಂಭಿಸಿ ಕನಿಷ್ಠ 10 ವರ್ಷವಾಗಿರಬೇಕು. ಹೀಗೆ ನಿಯಮಾವಳಿಗಳನ್ನು ವಿಧಿಸಲಾಗಿದೆ.  ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 595 ಅರ್ಜಿಗಳು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಇದನ್ನು ಓದಿ: ವಿದ್ಯಾರ್ಥಿನಿಗೆ ಬೇಬಿ ಎಂದು ಕರೆದ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಪ್ರಾಧ್ಯಾಪಕ; ಕಾಲೇಜು ಪರ ರಾಮಲಿಂಗಾರೆಡ್ಡಿ ಎಂಟ್ರಿ


ಪರಿಹಾರ ಮರೀಚಿಕೆ?


ಮೇ 28 ರಿಂದ ಜೂನ್ 5 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆ ಅವಧಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಇದ್ದ ಕಾರಣ ಜನ ಹೊರ ಬರಲು ಸಾಧ್ಯವಾಗಿಲ್ಲ. ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಕಾರಣವಾಗಿತ್ತು. ಅಲ್ಲದೇ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕೂಡ ಸೇವಾ ಸಿಂಧು ಪೊರ್ಟಲ್ ಒಪನ್ ಆಗದೇ ಇರೋದ್ರಿಂದ ಕಲಾವಿದರಿಗೆ ಪರಿಹಾರ ಮರೀಚಿಕೆಯಾದಂತಾಗಿದೆ. ಉತ್ತರ ಕನ್ನಡ  ಜಿಲ್ಲೆಯಲ್ಲಿ, ಸಂಗೀತ, ನೃತ್ಯ, ನಾಟಕ, ಜಾನಪದ, ಯಕ್ಷಗಾನ ಕಲಾವಿದರು ಸೇರಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರಿದ್ದಾರೆ.  ಶೇಕಡಾ 50ಕ್ಕಿಂತ ಹೆಚ್ಚಿನ ಕಲಾವಿದರು ತೀರ ಸಂಕಷ್ಟದ ಪರಿಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸಂಕಷ್ಟದಲ್ಲಿ ಇರುವವರಿಗೆಲ್ಲಾ ಸಹಾಯಧನದ ಅವಶ್ಯಕತೆ ಇದೆ.   ಹೀಗಾಗಿ ಕಲಾವಿದರಿಗೆ ಲಾಕ್ ಡೌನ್ ಪರಿಹಾರ ಮರೀಚಿಕೆಯಾದಂತಾಗಿದೆ.


ಈಗಾಗಲೇ ಬಂದ ಅರ್ಜಿಗಳನ್ನ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.  ರಾಜ್ಯದಲ್ಲಿ ಒಟ್ಟು ಸುಮಾರು 16 ಸಾವಿರ ಕಲಾವಿದರಿಗೆ ಮಾತ್ರ ಪರಿಹಾರ ನೀಡೋದಾಗಿ ಸರ್ಕಾರ ತಿಳಿಸಿದೆ. ಆದರೆ ಬಹುತೇಕ ಕಲಾವಿದರಿಗೆ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಸರ್ಕಾರ ನಿಯಮಾವಳಿ ಸಡಿಲಿಸಿ, ತಾಂತ್ರಿಕ ಸಮಸ್ಯೆ ಬಗೆಹರಿಸಿ ಅಂಥವರಿಗೆ ಪರಿಹಾರ ಸಿಗುವಂಥ ವ್ಯವಸ್ಥೆ ಮಾಡಬೇಕಾಗಿದೆ. ಹೀಗೆ ಮಾಡುವುದರಿಂದ ಇನ್ನೂ ಸಾವಿರಾರು ಅರ್ಹ ಬಡ ಕಲಾವಿದರಿಗೆ ಅಲ್ಪ ಪ್ರಮಾಣದಲ್ಲಿ ಸಹಾಯ ಮಾಡಿದಂತೆ ಆಗುತ್ತದೆ.

Published by:HR Ramesh
First published: