Covid Free villages: ಕೊರೋನಾ ಮುಕ್ತವಾಗುತ್ತಿದೆ ಹಳ್ಳಿಗಳು; ಮೈ‌ ಮರೆತರೆ ಅಪಾಯ...

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು ಆರು ಗ್ರಾಮ ಪಂಚಾಯತ್ ಗಳು ಇದೀಗ ಕೊರೊನಾ ಮುಕ್ತವಾಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಾರವಾರ (ಜೂ. 13): ಸತತ ಏರುಗತಿಯಲ್ಲಿ ಸಾಗುತ್ತಿದ್ದ ಕೊರೊನಾ ಪ್ರಕರಣಗಳಿಂದ ಕಂಗೆಟ್ಟಿದ್ದ ಉತ್ತರಕನ್ನಡ ಜಿಲ್ಲೆಯಲ್ಲಿ ಸದ್ಯ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಈ ಬಾರಿ ಗ್ರಾಮೀಣ ಭಾಗದಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿದ್ದು ಜಿಲ್ಲೆಯ ಜನತೆ ಆತಂಕಕ್ಕೊಳಗಾಗುವಂತಾಗಿತ್ತು. ಆದರೆ ಇದೀಗ ಜಿಲ್ಲೆಯ ಹಲವು ಗ್ರಾಮಗಳು ಕೊರೊನಾ ಮುಕ್ತವಾಗುವತ್ತ ದಾಪುಗಾಲಿಡುತ್ತಿದೆ.  ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್ ಮೊದಲನೆಯ ಅಲೆಯಲ್ಲಿ ಹಳ್ಳಿಗಳು ಸೇಫ್ ಆಗಿದ್ದವು. ಆದ್ರೆ ಎರಡನೇಯ ಅಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳು ಗ್ರಾಮೀಣ ಭಾಗಗಳಲ್ಲೇ ಪತ್ತೆಯಾಗಿದ್ದು ಜಿಲ್ಲೆಯ ಜನರ ನಿದ್ದೆಗೆಡಿಸಿತ್ತು. ಈ ನಿಟ್ಟಿನಲ್ಲಿ ಹಳ್ಳಿಗಳತ್ತ ಹೆಚ್ಚಿನ ಗಮನಹರಿಸಿದ್ದ ಜಿಲ್ಲಾಡಳಿತ ಇದೀಗ ಗ್ರಾಮೀಣ ಪ್ರದೇಶಗಳನ್ನ ಕೊರೊನಾ ಮುಕ್ತವಾಗುವತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು ಆರು ಗ್ರಾಮ ಪಂಚಾಯತ್ ಗಳು ಇದೀಗ ಕೊರೊನಾ ಮುಕ್ತವಾಗಿವೆ.

  ಅತೀ ಹೆಚ್ಚು ಹಳ್ಳಿಗಳನ್ನ ಹೊಂದಿರುವ ಜಿಲ್ಲೆಗಳಲ್ಲಿ ಉತ್ತರಕನ್ನಡ ಸಹ ಒಂದಾಗಿದೆ. ಅದರಲ್ಲೂ ಬಹುತೇಕ ಗ್ರಾಮೀಣ ಪ್ರದೇಶಗಳು ದಟ್ಟಾರಣ್ಯ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿದ್ದು ಇಂತಹ ಪ್ರದೇಶಗಳಲ್ಲೂ ಕೊರೊನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲಾಡಳಿತಕ್ಕೆ ತಲೆನೋವು ತಂದಿಟ್ಟಿದ್ದವು. ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಕಂಟೈನ್ಮೆಂಟ್, ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳನ್ನ ಮಾಡುವ ಮೂಲಕ ಕೊರೊನಾ ಮೇಲೆ ಹಿಡಿತ ಸಾಧಿಸುವಲ್ಲಿ ಕೊನೆಗೂ ಜಿಲ್ಲಾಡಳಿತ ಯಶಸ್ವಿಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಆರು ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲವಾಗಿದ್ದು ಸುಮಾರು 78 ಗ್ರಾಮ ಪಂಚಾಯತ್ ಗಳಲ್ಲಿ ಕೆಲವೇ ಪ್ರಕರಣಗಳು ಬಾಕಿ ಇದ್ದು ಶೀಘ್ರದಲ್ಲೇ ಕೊರೊನಾ ಮುಕ್ತವಾಗಲಿವೆ ಅಂತಾ ಸಿಇಓ ಮಾಹಿತಿ ನೀಡಿದ್ದಾರೆ.

  ಇನ್ನು ಜಿಲ್ಲೆಯ ಸುಮಾರು 450 ಗ್ರಾಮಗಳಲ್ಲಿ ಕಳೆದ ಹತ್ತು ದಿನಗಳ ಅವಧಿಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ಅಲ್ಲದೇ ಸುಮಾರು ಹತ್ತಕ್ಕಿಂತ ಕಡಿಮೆ ಪಾಸಿಟಿವ್ ಪ್ರಕರಣಗಳಿರುವ ಗ್ರಾಮ ಪಂಚಾಯತ್ ಗಳು ಸಾಕಷ್ಟಿದ್ದು ಹಂತ ಹಂತವಾಗಿ ಕೋವಿಡ್ ಮುಕ್ತವಾಗುತ್ತಿವೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಟಾಸ್ಕ್ ಫೋರ್ಸ್ ನಿರ್ಮಿಸಿದ್ದು ಪಂಚಾಯತ್ ವ್ಯಾಪ್ತಿಯಲ್ಲೇ ಆರೋಗ್ಯ ತಂಡವನ್ನ ನಿಯೋಜನೆ ಮಾಡುವ ಸಿದ್ಧತೆ ಮಾಡಿಕೊಳ್ಳಲಾಗಿದೆ.

  ಇದನ್ನು ಓದಿ: ರಾಮನಗರದಲ್ಲಿ ನಿಖಿಲ್ ಹವಾ; ಚನ್ನಪಟ್ಟಣದಲ್ಲಿ ಮುಖಂಡರ ಸಾವಿನಿಂದ ಮಾಜಿ ಸಿಎಂ ಹೆಚ್.ಡಿ.ಕೆ ಹಿಮ್ಮುಖ

  ಅವು ಕಾಲ ಕಾಲಕ್ಕೆ ಫೀವರ್ ಸರ್ವೆ ಮಾಡುವ ಮೂಲಕ ಕೊರೊನಾ ಹಬ್ಬುವಿಕೆಯ ಮೇಲೆ ನಿಗಾ ಇರಿಸಲಿದ್ದು ಮೂರನೇಯ ಅಲೆಯ ಸಿದ್ಧತೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಅಂತಾ ಸಿಇಓ ತಿಳಿಸಿದ್ದಾರೆ. ಇನ್ನು ಒಂದೆರಡು ದಿನದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲೂ ಅನ್ ಲಾಕ್ ಜಾರಿಯಾಗಲಿದ್ದು ಗ್ರಾಮೀಣ ಪ್ರದೇಶಗಳಲ್ಲೂ ಜನ ಸಂಚಾರ ಹೆಚ್ಚಾಗುವ ಸಾಧ್ಯತೆ ಇದೆ ಈ ನಿಟ್ಟಿನಲ್ಲಿ ಕೊರೊನಾ ಮುಕ್ತವಾದ ಗ್ರಾಮಗಳ ಜನರೂ ಹೆಚ್ಚಿನ ನಿಗಾವಹಿಸಿ ಕೊರೊನಾ ಮಾರ್ಗಸೂಚಿಗಳನ್ನ ಸೂಕ್ತವಾಗಿ ಪಾಲಿಸಬೇಕಿದೆ ಅಂತಾ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಒಟ್ಟಾರೇ ಕೊರೊನಾದಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿ ಗ್ರಾಮಗಳು ಇದೀಗ ಕೊರೊನಾ ಮುಕ್ತವಾಗುವತ್ತ ಸಾಗುತ್ತಿರೋದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ ಕೊರೊನಾ ಮುಕ್ತವಾಗಿರುವ ಗ್ರಾಮಗಳ ಜನರು ಕೋವಿಡ್ ಮಾರ್ಗಸೂಚಿಗಳನ್ನ ಪಾಲಿಸಿದಾಗ ಮಾತ್ರ ಮೂರನೇ ಅಲೆಯಿಂದ ದೂರ ಉಳಿಯಬಹುದಾಗಿದ್ದು ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟಬುತ್ತಿ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:Seema R
  First published: