ಆಫ್ರಿಕಾದಲ್ಲಿ (Africa) ಮೊದಲು ಕಾಣಿಸಿಕೊಂಡು ಇಡೀ ಜಗತ್ತಿನಲ್ಲೆಡೆ ಹರಡುತ್ತಿರುವ ‘ಓಮೈಕ್ರಾನ್’ ರೂಪಾಂತರಿ (Omicron Variant) ಕೊರೊನಾ ವೈರಸ್ (Corona Virus) ಇಡೀ ಜಗತ್ತನ್ನು ತುದಿಗಾಲ ಮೇಲೆ ನಿಲ್ಲಿಸಿದೆ. ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿರುವ ಈ ರೂಪಾಂತರಿ ವೈರಸ್ನ ಸೋಂಕಿನ ಸಾಮರ್ಥ್ಯವನ್ನು ಯಾರೂ ನಿರ್ಲಕ್ಷಿಸಬಾರದು ಎಂದು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ (WHO) ಎಲ್ಲ ದೇಶಗಳಿಗೂ ಎಚ್ಚರಿಕೆ ನೀಡಿದೆ. ಇದರ ಬೆನ್ನಿಗೇ ಇಡೀ ವಿಶ್ವ ‘ಓಮಿಕ್ರಾನ್’ ರೂಪಾಂತರಿ ವೈರಸ್ ನಿಯಂತ್ರಣಕ್ಕೆ ಕಟ್ಟೆಚ್ಚರಿಕೆಯ ಕ್ರಮಗಳಿಗೆ ಮುಂದಾಗಿವೆ. ಸರ್ಕಾರಿ ಇಲಾಖೆಗಳು ಈಗಾಗಲೇ ವೈರಸ್ ಹರಡುವಿಕೆ ಪತ್ತೆ ಹಚ್ಚಲು ಮತ್ತು ನಿಯಂತ್ರಿಸಲು ತೀವ್ರ ಪ್ರಯಾಸ ಪಡುತ್ತಿವೆ. ತನ್ನ ಪ್ರೋಟೀನ್ ನಲ್ಲಿ 30 ಮುಳ್ಳುಗಳನ್ನು ಹೊಂದಿರುವ ‘ಓಮೈಕ್ರಾನ್’, 2000ರಲ್ಲಿ ವಿಶ್ವದಾದ್ಯಂತ ಕೊರೊನಾ ಸಾಂಕ್ರಾಮಿಕ (COVID Pandemic) ಶುರುವಾದಾಗಿನಿಂದ ಅತ್ಯಂತ ಹೆಚ್ಚು ರೂಪಾಂತರಗೊಂಡಿರುವ ವೈರಸ್ (Virus) ಆಗಿದೆ.
ಆಫ್ರಿಕಾದಲ್ಲಿ ಪತ್ತೆಯಾಗಿರುವ ಈ ರೂಪಾಂತರಿ ಕೊರೊನಾ ವೈರಸ್, ಎರಡನೇ ಅಲೆಯಲ್ಲಿ ಭಾರಿ ಸಾವು ನೋವಿಗೆ ಕಾರಣವಾಗಿದ್ದ ಡೆಲ್ಟಾ ರೂಪಾಂತರಿ ವೈರಸ್ಗಿಂತ 4 ಪಟ್ಟು ಹೆಚ್ಚು ಸೋಂಕುಕಾರಿಯಾಗಿದೆ ಎಂದು ಇತ್ತೀಚಿನ ಅಧ್ಯಯನ ವರದಿಗಳು ಹೇಳಿವೆ. ಅಲ್ಲದೆ ‘ಓಮೈಕ್ರಾನ್’ ರೂಪಾಂತರಿ ವೈರಸ್ ಲಸಿಕೆಯಿಂದ ಪಡೆದಿರುವ ರೋಗ ನಿರೋಧಕ ಶಕ್ತಿಯನ್ನೂ ಭೇದಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ.
ಶೀಘ್ರವಾಗಿ ಹರಡುತ್ತಿರುವ ‘ಒಮೈಕ್ರಾನ್’ ರೂಪಾಂತರಿ ವೈರಸ್ ಬಗ್ಗೆ ಮತ್ತಷ್ಟು ದತ್ತಾಂಶಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಆರಂಭದಲ್ಲಿ ಈ ರೂಪಾಂತರಿ ವೈರಸ್ನಿಂದ ರೋಗಿಗಳಲ್ಲಿ ಸೌಮ್ಯ ರೋಗ ಲಕ್ಷಣಗಳು ಮಾತ್ರ ಕಾಣಿಸಿಕೊಳ್ಳುತ್ತಿವೆ. ತೀವ್ರ ಪ್ರಮಾಣದ ರೋಗ ಲಕ್ಷಣಗಳೊಂದಿಗೆ ಭಾರಿ ಸಾವು ನೋವಿಗೆ ಕಾರಣವಾಗಿದ್ದ ಡೆಲ್ಟಾ ವೈರಸ್ ಹಾಗೂ ಮತ್ತಿತರ ರೂಪಾಂತರಿ ವೈರಸ್ಗಳಂತೆಯೇ ಓಮಿಕ್ರಾನ್ ವೈರಸ್ ನ ರೋಗ ಲಕ್ಷಣಗಳಿದ್ದರೂ, ರೋಗಿಗಳನ್ನು ಉಪಚರಿಸುತ್ತಿರುವ ವೈದ್ಯರು ಹಾಗೂ ಸಂಶೋಧಕರು ಕೆಲವು ‘ಅಸಹಜ’ ರೋಗ ಲಕ್ಷಣಗಳನ್ನು ಗಮನಿಸುತ್ತಿದ್ದಾರೆ.
ಭಿನ್ನವಾದ ಹೊಸ ರೋಗ ಲಕ್ಷಣ ಪತ್ತೆ
ಓಮೈಕ್ರಾನ್ ರೂಪಾಂತರಿ ವೈರಸ್ ಸೋಂಕಿಗೆ ಒಳಗಾಗಿರುವ ರೋಗಿಗಳಲ್ಲಿ ರಾತ್ರಿ ವೇಳೆ ಕೆಲವು ‘ಅಸಹಜ’ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ವೈದ್ಯರು ಮತ್ತು ಸಂಶೋಧಕರು. ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ತಜ್ಞ ಡಾ. ಆ್ಯಂಗಲಿಕ್ ಕೊಯೆಟ್ಜೀ ರೋಗಿಗಳಲ್ಲಿ ಡೆಲ್ಟಾ ರೂಪಾಂತರಿ ವೈರಸ್ನಿಂದ ಕಾಣಿಸಿಕೊಳ್ಳುತ್ತಿದ್ದ ರೋಗ ಲಕ್ಷಣಗಳಿಗಿಂತ ಭಿನ್ನವಾದ ಹೊಸ ರೋಗ ಲಕ್ಷಣವೊಂದನ್ನು ಪತ್ತೆ ಹಚ್ಚಿದ್ದಾರೆ.
ಈ ರೋಗ ಲಕ್ಷಣದ ಮೂಲಕ ಪರೀಕ್ಷಾ ವರದಿ ಬರುವುದಕ್ಕೂ ಮುನ್ನ ಓಮೈಕ್ರಾನ್ ವೈರಸ್ ಸೋಂಕಿನ ಸಾಮರ್ಥ್ಯ ಅಳೆಯಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ. ಇತರೆ ರೂಪಾಂತರಿ ವೈರಸ್ ಸೋಂಕಿಗೆ ಒಳಗಾಗಿದ್ದ ರೋಗಿಗಳಲ್ಲಿ ಕಂಡು ಬರುತ್ತಿದ್ದ ಸುಸ್ತು ಹಾಗೂ ನಿಶ್ಯಕ್ತಿಯ ಜೊತೆಗೆ ಓಮೈಕ್ರಾನ್ ಸೋಂಕಿಗೆ ಒಳಗಾದ ರೋಗಿಗಳು ರಾತ್ರಿ ಹೊತ್ತು ವಿಪರೀತ ಬೆವರುವ ಲಕ್ಷಣಗಳು ಕಾಣಿಸಿಕೊಂಡಿವೆ. ಹಲವಾರು ರೋಗಿಗಳು ಈ ರೋಗ ಲಕ್ಷಣದಿಂದ ಬಳಲುತ್ತಿರುವುದು ವರದಿಯಾಗಿದೆ.
ಕೆಲವು ರೋಗಿಗಳಂತೂ ರಾತ್ರಿ ಹೊತ್ತು ಕಾಣಿಸಿಕೊಳ್ಳುತ್ತಿರುವ ವಿಪರೀತ ಬೆವರಿನಿಂದ ಅವರ ಬಟ್ಟೆ ಹಾಗೂ ಹಾಸಿಗೆಯನ್ನೆಲ್ಲ ತೋಯಿಸುತ್ತಿದ್ದಾರೆ. ಇದರೊಂದಿಗೆ ಓಮೈಕ್ರಾನ್ ಸೋಂಕಿತರಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ಅಸಹಜ ರೋಗ ಲಕ್ಷಣವೆಂದರೆ ಕೆರೆತವಿರುವ ಒಣ ಗಂಟಲು. ಇತರೆ ರೂಪಾಂತರಿ ವೈರಸ್ಗಳಂತೆಯೇ ಓಮಿಕ್ರಾನ್ ಸೋಂಕಿತರಲ್ಲಿ ಒಣ ಗಂಟಲು ಕಂಡು ಬರುತ್ತಿದ್ದರೂ, ಕೆಲವು ರೋಗಿಗಳು ಗಂಟಲಲ್ಲಿ ವಿಪರೀತ ಕೆರೆತವುಂಟಾಗುತ್ತಿದೆ ಎಂದು ದೂರಿದ್ದಾರೆ ಎಂದು ವರದಿಯಾಗಿದೆ.
ಇದರೊಂದಿಗೆ ಓಮಿಕ್ರಾನ್ ಸೋಂಕಿತರಲ್ಲಿ ಸೌಮ್ಯ ಸ್ವರೂಪದ ಜ್ವರ, ಒಣ ಕೆಮ್ಮು ಹಾಗೂ ನಿಶ್ಯಕ್ತಿ ಕಂಡು ಬರುತ್ತಿದೆ. ಡೆಲ್ಟಾ ರೋಗ ಲಕ್ಷಣದಲ್ಲಿ ಕಾಣಿಸಿಕೊಂಡಿದ್ದ ವಾಸನೆ ನಷ್ಟ ಓಮೈಕ್ರಾನ್ ಸೋಂಕಿತರಲ್ಲಿ ಕಂಡು ಬಂದಿಲ್ಲ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ