ಕೇಂದ್ರದಿಂದ ಪಾವತಿಯಾಗದ ಜಿಎಸ್‌ಟಿ ಬಾಕಿ, ಕಾಡುತ್ತಿರುವ ಕೊರೋನಾ; ಹದಗೆಡಲಿದೆ ದಕ್ಷಿಣ ರಾಜ್ಯಗಳ ಆರ್ಥಿಕ ಪರಿಸ್ಥಿತಿ

ದೇಶದಲ್ಲಿ ಕೊರೋನಾ ಹರಡುವಿಕೆ ನಿಲ್ಲದಿದ್ದರೆ, ಲಾಕ್‌ಡೌನ್ ಮುಂದುವರೆದರೆ ದಕ್ಷಿಣ ರಾಜ್ಯಗಳ ಆರ್ಥಿಕ ಬೆಳವಣಿಗೆಯ ಇಂಜಿನ್ ಸ್ಥಗಿತವಾಗಲಿದೆ, ಪರಿಣಾಮ ಈ ಹಿಂದೆ ಎಂದೂ ನೋಡಿರದಷ್ಟು ಹೀನಾಯ ಸ್ಥಿತಿಯನ್ನು ದಕ್ಷಿಣ ರಾಜ್ಯಗಳು ಎದುರಿಸಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೆಂಗಳೂರು; ಕೊರೋನಾ ತುರ್ತು ಪರಿಸ್ಥಿತಿ ಮತ್ತು ಏಖಾಏಕಿ ಘೋಷಿಸಲಾದ ಲಾಕ್‌ಡೌನ್ ತೀರ್ಮಾನ ದಕ್ಷಿಣ ರಾಜ್ಯಗಳ ಕೈಗಾರಿಕೀಕರಣಗಳ ಅಭಿವೃದ್ಧಿಯ ಮೇಲೆ ತೀವ್ರ ಪೆಟ್ಟು ನೀಡಿದೆ. ಕೇರಳ ಹೊರತುಪಡಿಸಿ ಕರ್ನಾಟಕ, ಅವಿಭಜಿತ ಆಂಧ್ರಪ್ರದೇಶ (ತೆಲಂಗಾಣ ಮತ್ತು ಆಂಧ್ರ) ಮತ್ತು ತಮಿಳುನಾಡು ಭಾರತದ ಆರ್ಥಿಕತೆ ಬೆಳವಣಿಗೆಯ ಪ್ರಮುಖ ಸ್ತಂಭಗಳಾಗಿವೆ. ಆದರೆ, ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಅನುಷ್ಠಾನದ ನಂತರ ಈ ರಾಜ್ಯಗಳೂ ಸಹ ಗಂಭೀರ ಆದಾಯ ಬಿಕ್ಕಟ್ಟನ್ನು ಎದುರಿಸುತ್ತಿವೆ.

ಈ ನಡುವೆ ಕೊರೋನಾ ಹಠಾತ್ ದಾಳಿ ಮತ್ತು ಏಕಾಏಕಿ ಲಾಕ್‌ಡೌನ್ ನಿರ್ಧಾರ ದಕ್ಷಿಣ ರಾಜ್ಯಗಳ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಪರಿಣಾಮ ಜನ ಪ್ರತಿನಿಧಿಗಳ ಮತ್ತು ಸರ್ಕಾರಿ ನೌಕರರ ವೇತನವನ್ನು ಕಡಿತಗೊಳಿಸಬೇಕು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಪರಿಣಾಮ, ಜಿಎಟಿ, ನೋಂದಣಿ, ಸ್ಟಾಂಪ್ ಡ್ಯೂಟಿ, ಸಾರಿಗೆ ಮತ್ತು ಅಬಕಾರಿ ಆದಾಯ ಸೇರಿದಂತೆ ಎಲ್ಲಾ ರೀತಿಯ ಆದಾಯವೂ ಸಂಪೂರ್ಣವಾಗಿ ಸ್ಥಗಿತವಾಗಿದ್ದು ರಾಜ್ಯದ ಆರ್ಥಿಕತೆ ಗಂಭೀರ ಅಪಾಯಕ್ಕೆ ಸಿಲುಕಿಸಿದೆ.

ದಕ್ಷಿಣದ ಎಲ್ಲಾ ಐದು ರಾಜ್ಯಗಳು ಸೀಮಿತ ಸಂಪನ್ಮೂಲಗಳೊಂದಿಗೆ ಕರೋನಾ ವಿರುದ್ಧ ಹೋರಾಡುತ್ತಿವೆ. ಕೇಂದ್ರವು ಕಳೆದ ವಾರ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ (ಎಸ್‌ಡಿಆರ್‌ಎಫ್) ಅಲ್ಪ ಪ್ರಮಾಣದ ಹಣವನ್ನು ಬಿಡುಗಡೆ ಮಾಡಿದ್ದು, ಎಲ್ಲರಿಗೂ ಕರೋನಾ ಸಂಬಂಧಿತ ವೆಚ್ಚಗಳಿಗೆ ಇದನ್ನು ಬಳಸುವಂತೆ ಕೇಳಿಕೊಂಡಿದೆ.

ಆದರೆ, ಆರ್ಥಿಕವಾಗಿ ಕುಸಿದಿರುವ ದಕ್ಷಿಣದ ರಾಜ್ಯಗಳು ಇಷ್ಟು ಚಿಕ್ಕ ಪ್ರಮಾಣದ ಹಣದಿಂದ ಕೊರೋನಾವನ್ನು ಎದುರಿಸುವುದು ಸಾಧ್ಯವಿಲ್ಲ. ಹೀಗಾಗಿ ಹಣಕ್ಕಾಗಿ ಪರದಾಡುತ್ತಿರುವ ಈ ರಾಜ್ಯಗಳಿಗೆ ನ್ಯಾಯವಾಗಿ ಸಲ್ಲಬೇಕಾದ ಜಿಎಸ್‌ಟಿ ಪಾಲನ್ನೂ ಕೇಂದ್ರ ನೀಡದ ಕಾರಣ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ ಎನ್ನಲಾಗುತ್ತಿದೆ.

ಮಾರಣಾಂತಿಕ ಕೊರೋನಾ ವೈರಸ್ ಸಾಮೂದಾಯಿಕವಾಗಿ ಇನ್ನೂ ಹರಡಿಲ್ಲದ ಪಕ್ಷದಲ್ಲಿ ಇದರ ವಿರುದ್ಧ ಹೋರಾಟ ನಡೆಸಲು ಪ್ರತಿ ರಾಜ್ಯಕ್ಕೂ ಕನಿಷ್ಠ 10,000 ಕೋಟಿ ರೂ ಹಣ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ಕರ್ನಾಟಕ:

ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ ಜಿಎಸ್‌ಟಿ ಸಂಗ್ರಹದ ಪಾಲಾಗಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಇನ್ನೂ 5,000 ಕೋಟಿ ರೂ. ಪಾವತಿ ಮಾಡಿಲ್ಲ. ಕಳೆದ ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕದ ಪಾಲನ್ನೂ ಸಹ ಕೇಂದ್ರ ಸಂಪೂರ್ಣವಾಗಿ ಪಾವತಿಸಿಲ್ಲ. ಇನ್ನೂ ರಾಜ್ಯಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಹಲವಾರು ಅನುದಾನಗಳು ಯೋಜನೆಗಳು ಲಭ್ಯವಾಗದ ಕಾರಣ ಇದು ರಾಜ್ಯದ ಆರ್ಥಿಕತೆಯನ್ನು ಮತ್ತಷ್ಟು ಜಟಿಲಗೊಳಿಸಿದೆ.

ಕರ್ನಾಟಕವು 2018 ಮತ್ತು 2019 ರಲ್ಲಿ ಸತತ ಎರಡು ಪ್ರವಾಹಗಳಿಗೆ ಸಾಕ್ಷಿಯಾಗಿದೆ. ಈ ಪ್ರವಾಹದಿಂದಾಗಿ 50,000 ಕೋಟಿಗಿಂತ ಹೆಚ್ಚು ಹಣ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, ಈ ಸಂದರ್ಭದಲ್ಲೂ ಸಹ ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ಗಮನಾರ್ಹ ಹಣ ಸಹಾಯ ನೀಡಿರಲಿಲ್ಲ.

ಹೀಗಾಗಿ ಹದಗೆಡುತ್ತಿರುವ ರಾಜ್ಯದ ಆರ್ಥಿಕತೆಯ ಕುರಿತು ಆತಂಕ ವ್ಯಕ್ತಪಡಿಸಿರುವ ಹಾಗೂ ಸ್ವತಃ ಹಣಕಾಸು ಖಾತೆಯನ್ನು ಹೊಂದಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ತುರ್ತು ಹಣವನ್ನು ಹೊಂದಿಸಲು ಸರ್ಕಾರಿ ನೌಕರರ ವೇತನವನ್ನು ಕಡಿತಗೊಳಿಸುವ ಸುಳಿವು ನೀಡಿದ್ದಾರೆ.

ಈ ನಡುವೆ ವಿವಿಧ ಯೋಜನೆಗಳ ಅಡಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ರೂ. 20,000 ಕೋಟಿ ಬಾಕಿ ನೀಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಹೇಳಿಕೊಂಡಿದೆ.

ತಮಿಳು ನಾಡು

ತಮಿಳುನಾಡಿನಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಾಗಿಲ್ಲ. ಲಾಕ್‌ಡೌನ್ ಬೆನ್ನಿಗೆ ಅಲ್ಲಿನ ಸಿಎಂ ಎಡಪ್ಪಾಡಿ ಪಳನಿಸಾಮಿ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹತ್ತಾರು ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ.

ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಗಳಿಗೆ ರೂ.1000, ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆ, ಬೇಳೆಕಾಳುಗಳು, ಇತರೆ ರಾಜ್ಯಗಳಿಂದ ತಮಿಳುನಾಡಿಗೆ ಆಗಮಿಸಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಉಚಿತ ಪಡಿತರ ಸರಬರಾಜು, ತೃತೀಯ ಲಿಂಗಿಗಳಿಗೆ ಅಮ್ಮಾ ಕ್ಯಾಂಟೀನ್‌ನಲ್ಲಿ ಕಡಿಮೆ ಬೆಲೆಗೆ ಆಹಾರ, ರಾಜ್ಯದಾದ್ಯಂತ ಮನೆಯಿಲ್ಲದವರಿಗೆ ಆಹಾರ ಒದಗಿಸಲು ವ್ಯವಸ್ಥೆ ಮಾಡುವುದು ಹೀಗೆ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಘೋಷಿಸಿದೆ.

ಈ ನಡುವೆ ಲಾಕ್ಡೌನ್‌ನಿಂದಾಗಿ ರೈತರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಭೂಮಿಯಲ್ಲಿ ಎಲ್ಲಾ ಬೆಳೆಗಳ ಫಸಲು ಕೈಗೆ ಬಂದಿದ್ದು ಅದನ್ನು ಗ್ರಾಹಕರಿಗೆ ತಲುಪಿಸಲು ಸಾಧ್ಯವಾದಗೆ ರೈತರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಪರಿಣಾಮ ತರಕಾರಿ ಹೂ ಮತ್ತು ಹಣ್ಣಗಳು ಮಣ್ಣು ಪಾಲಾಗುತ್ತಿವೆ. ಇದು ಸಹ ಸ್ವಾಭಾವಿಕವಾಗಿ ತಮಿಳುನಾಡಿನ ಆರ್ಥಿಕತೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ.

ಹೀಗಾಗಿ ಕೊರೋನಾ ಮಹಾಮಾರಿಯ ವಿರುದ್ಧ ಹೋರಾಡಲು ತಮಿಳುನಾಡು ಸರ್ಕಾರ ಕೇಂದ್ರದಿಂದ ರೂ .10,000 ಕೋಟಿ ಸಹಾಯವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ. ಜನ ಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರ ವೇತನವನ್ನು ಕಡಿತಗೊಳಿಸುವ ಕುರಿತು ತಮಿಳುನಾಡು ಸರ್ಕಾರ ಈವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

ಈ ನಡುವೆ ಕೇಂದ್ರದಿಂದ ಇನ್ನೂ ತಮಿಳುನಾಡಿಗೆ ಪಾವತಿಯಾಗಬೇಕಿರುವ ಬಾಕಿ ಹಣ ಬರೋಬ್ಬರಿ 12,263 ಕೋಟಿ ರೂ. ಎನ್ನಲಾಗುತ್ತಿದೆ.

ತೆಲಂಗಾಣ

ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಜನ ಪ್ರತಿನಿಧಿಗಳ ಮತ್ತು ಸರ್ಕಾರಿ ನೌಕರರ ವೇತನವನ್ನು ಕಡಿತ ಮಾಡುವ ತೀರ್ಮಾನ ತೆಗೆದುಕೊಂಡವರ ಪೈಕಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮೊದಲಿಗರು. ಅಧಿಕಾರ ಹಂಚಿಕೆ ಅಡಿಯಲ್ಲಿ ಕೇಂದ್ರದಿಂದ ತೆಲಂಗಾಣಕ್ಕೆ ಪಾವತಿಯಾಗಬೇಕಾದ 3737 ಕೋಟಿ ರೂ. ಇನ್ನೂ ಬಾಕಿ ಇದೆ. ವಿವಿಧ ಗುತ್ತಿಗೆದಾರರಿಗೆ ಕೇಂದ್ರದಿಂದ ಬಾಕಿ ಇರುವ ಬಿಲ್ 20,000 ಕೋಟಿ ರೂ ಎನ್ನಲಾಗಿದೆ.

ಇದಲ್ಲದೆ, ತೆಲಂಗಾಣ ರಾಜ್ಯ ಸರ್ಕಾರ ಈವರೆಗೆ ಕರೋನಾ ವಿರುದ್ಧ ಹೋರಾಡಲು 500 ಕೋಟಿ ರೂ. ಖರ್ಚು ಮಾಡಿದೆ. ಇದೇ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ತಾನು ನೀಡುವುದಾಗಿ ಘೋಷಿಸಿದ್ದ 500 ಕೋಟಿ ರೂ ಹಣವನ್ನು ಈವರೆಗೆ ನೀಡಿಲ್ಲ. ಪ್ರಚಲಿತದಲ್ಲಿರುವ ಕೇಂದ್ರ ರೈತು ಬಂಧು ಯೋಜನೆಯ ಸುಮಾರು 2000 ಕೋಟಿ ರೂ ಹಾಗೂ ಕೃಷಿ ಸಾಲ ಮನ್ನಾ ಇನ್ನೂ ಬಾಕಿ ಇದೆ.

ಆಂಧ್ರಪ್ರದೇಶ

ದಕ್ಷಿಣದ 5 ರಾಜ್ಯಗಳ ಪೈಕಿ 2014ರ ರಾಜ್ಯ ವಿಭಜನೆಯ ನಂತರ ಅತ್ಯಂತ ಭೀಕರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ರಾಜ್ಯ ಎಂದರೆ ಆಂಧ್ರಪ್ರದೇಶ. ಅಧಿಕಾರ ಹಂಚಿಕೆ ಪ್ಯಾಕೇಜ್ ಅಡಿಯಲ್ಲಿ ಕೇಂದ್ರ ಸರ್ಕಾರ ಆಂಧ್ರಪ್ರದೇಶಕ್ಕೆ ನೀಡಬೇಕಿರುವ 3500 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಈ ನಡುವೆ COVID-19 ವಿರುದ್ಧದ ಹೋರಾಟಕ್ಕೆ ಆಂಧ್ರಪ್ರದೇಶ ಸರ್ಕಾರ ತನ್ನ ಖಜಾನೆಯಿಂದಲೇ 408 ಕೋಟಿ ರೂ. ಬಿಡುಗಡೆ ಮಾಡಿದೆ. ಇನ್ನೂ ವಿವಿಧ ಕಾಮಗಾರಿಗಳಿಗಾಗಿ ಕೇಂದ್ರದಿಂದ ಸಂದಾಯವಾಗಬೇಕಿದ್ದ18,000 ಕೋಟಿ ರೂ ಬಾಕಿ ಇದೆ.

ಕೇರಳ

ಉತ್ತರ ಕರ್ನಾಟಕದಂತೆಯೇ ಕೇರಳ ರಾಜ್ಯವೂ ಸಹ 2018-2019 ರಲ್ಲಿ ಇತಿಹಾದ ಕಾರಣ ಎರಡು ವಿನಾಶಕಾರಿ ಪ್ರವಾಹಗಳಿಗೆ ಸಾಕ್ಷಿಯಾಗಿತ್ತು. ಇನ್ನೂ ದಕ್ಷಿಣದ ಇತರೆ ರಾಜ್ಯಗಳಿಗಿಂತ ಭಿನ್ನ ಆರ್ಥಿಕತೆ ಹೊಂದಿರುವ ಕೇರಳದಲ್ಲಿ ಯಾವುದೇ ಪ್ರಮುಖ ಕೈಗಾರಿಕೆಗಳಿಲ್ಲ.

ಹಣಕಾಸು ಇಲಾಖೆಯ ಉನ್ನತ ಮಟ್ಟದ ಮೂಲಗಳ ಪ್ರಕಾರ ಕೇರಳ ಸರ್ಕಾರಕ್ಕೆ ಕೇಂದ್ರದಿಂದ 7500 ಕೋಟಿ ರೂ ಸಂದಾಯವಾಗಬೇಕು .1) ಜಿಎಸ್‌ಟಿ ಪರಿಹಾರ 2) ಎಂಜಿಎನ್ಆರ್‌ಇಎಸ್ ಹಣ ಮತ್ತು 3. ಭತ್ತದ ಸಂಗ್ರಹಕ್ಕೆ ಸಲ್ಲಬೇಕಾದ ಹಣ ಈ ಮೂರರಿಂದ ಕೇರಳಕ್ಕೆ ಸಲ್ಲಬೇಕಾದ ಹಣದ ಪ್ರಮಾಣ 7500 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಜಿಎಸ್‌ಟಿ ಪರಿಹಾರವನ್ನು ಕೇಂದ್ರ ಸರ್ಕಾರವೇ ನಿರ್ಧರಿಸುವುದರಿಂದ ಇದು ನಿಖರವಾಗಿಲ್ಲ. ಆದ್ದರಿಂದ ಇದನ್ನು ಕೇರಳ ಸರ್ಕಾರದ ಅಂದಾಜು ಎಂದು ಹೇಳಲಾಗುತ್ತಿದೆ.

ದೇಶದಲ್ಲಿ ಕೊರೋನಾ ಹರಡುವಿಕೆ ನಿಲ್ಲದಿದ್ದರೆ, ಲಾಕ್‌ಡೌನ್ ಮುಂದುವರೆದರೆ ದಕ್ಷಿಣ ರಾಜ್ಯಗಳ ಆರ್ಥಿಕ ಬೆಳವಣಿಗೆಯ ಇಂಜಿನ್ ಸ್ಥಗಿತವಾಗಲಿದೆ, ಪರಿಣಾಮ ಈ ಹಿಂದೆ ಎಂದೂ ನೋಡಿರದಷ್ಟು ಹೀನಾಯ ಸ್ಥಿತಿಯನ್ನು ದಕ್ಷಿಣ ರಾಜ್ಯಗಳು ಎದುರಿಸಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ.

(ಈ ಬರಹಕ್ಕಾಗಿ ಹೈದರಾಬಾದ್‌ನ ರಮಣ, ತಿರುವನಂತಪುರಂನ ಚಂದ್ರಕಾಂತ್ ಮತ್ತು ಚೆನ್ನೈನ ಯುವರಾಜ್ ಅವರಿಂದ ಮಾಹಿತಿ ಪಡೆಯಲಾಗಿದೆ)

ಇದನ್ನೂ ಓದಿ : ’ನಾನು ಎಲ್ಲಿ ಮಲಗಿದ್ದೀನಿ ಎಂದು ಸ್ವತಃ ಡಿ.ಕೆ. ಶಿವಕುಮಾರ್ ಬಂದು ನೋಡಲಿ’; ಸಚಿವ ಈಶ್ವರಪ್ಪ ತಿರುಗೇಟು
First published: