ಉತ್ತರಪ್ರದೇಶದಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಿ; ಸಿಎಂ ಯೋಗಿ ಆದಿತ್ಯನಾಥ್​ಗೆ ಪತ್ರ ಬರೆದ ಕೇಂದ್ರ ಸಚಿವ!

ಉತ್ತರಪ್ರದೇಶದಲ್ಲಿ ಶನಿವಾರ ಕೊರೋನಾ ವೈರಸ್‌ನಿಂದಾಗಿ 298 ಜನರು ಸಾವನ್ನಪ್ಪಿದ್ದಾರೆ.  26,847 ಹೊಸ ಪ್ರಕರಣಗಳು ಕಂಡುಬಂದಿದ್ದು, ರಾಜ್ಯದ ಸೋಂಕಿನ ಸಂಖ್ಯೆ 14,80,315 ಕ್ಕೆ ಏರಿಕೆಯಾಗಿದೆ. ಉತ್ತರಪ್ರದೇಶದಲ್ಲಿ ಈವರೆಗೆ 15,170 ಜನ ಕೋವಿಡ್​ಗೆ ಬಲಿಯಾಗಿದ್ದಾರೆ.

ಕೇಂದ್ರ ಸಚಿವ ಸಂತೋಷ್ ಗಂಗ್ವಾರ್.

ಕೇಂದ್ರ ಸಚಿವ ಸಂತೋಷ್ ಗಂಗ್ವಾರ್.

 • Share this:
  ನವ ದೆಹಲಿ (ಮೇ 09); ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಭಾನುವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಉತ್ತರಪ್ರದೇಶದ ಆರೋಗ್ಯ ವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬರೇಲಿಯ ಬಿಜೆಪಿ ಸಂಸದರೂ ಆಗಿರುವ ಗಂಗ್ವಾರ್, ಉತ್ತರ ಪ್ರದೇಶದ ಆರೋಗ್ಯ ಮೂಲಸೌಕರ್ಯಗಳನ್ನು ಸುಧಾರಿಸಲು ಕೆಲವು ಕ್ರಮಗಳನ್ನು ಆದಿತ್ಯನಾಥ್ ಅವರಿಗೆ ಸೂಚಿಸಿದ್ದಾರೆ.

  ತಮ್ಮ ಪತ್ರದಲ್ಲಿ ಕೆಲವು ಅಂಶಗಳನ್ನು ಉಲ್ಲೇಖಿಸಿರುವ ಸಂತೋಷ್ ಗಂಗ್ವಾರ್, "ಉತ್ತರಪ್ರದೇಶದ ಆರೋಗ್ಯ ಅಧಿಕಾರಿಗಳು ಯಾರ ಕರೆಯನ್ನೂ ಸ್ವೀಕರಿಸುತ್ತಿಲ್ಲ. ರೋಗಿಗಳು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ರೆಫರಲ್ ಪತ್ರದ ಹೆಸರಿನಲ್ಲಿ ಓಡಾಡಿಸಲ್ಪಡುತ್ತಿದ್ದಾರೆ. ಅಲ್ಲದೆ, ಉತ್ತರಪ್ರದೇಶದಲ್ಲಿ ಆಮ್ಲಜನಕದ ಕೊರತೆ ಎದುರಾಗಿದ್ದು, ಆ ಬೇಡಿಕೆಯನ್ನು ನಿಭಾಯಿಸಲು ಬರೇಲಿಯಲ್ಲಿ ಶೀಘ್ರದಲ್ಲೇ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಬೇಕು" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

  ಅಲ್ಲದೆ, "ಆಸ್ಪತ್ರೆಗಳಲ್ಲಿ ಬಳಸುವ ಬೈಪ್ಯಾಪ್ ಯಂತ್ರಗಳು, ವೆಂಟಿಲೇಟರ್‌ಗಳು ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ವೈದ್ಯಕೀಯ ಉಪಕರಣಗಳ ಬೆಲೆಯನ್ನು ಉತ್ತರಪ್ರದೇಶ ಸರ್ಕಾರ ಶೀಘ್ರದಲ್ಲೇ ಸರಿ ಸ್ಥಿತಿಗೆ ತರಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಎಂಎಸ್‌ಎಂಇ ಅಡಿಯಲ್ಲಿ ರಿಯಾಯಿತಿ ನೀಡಬೇಕು.

  ಬರೇಲಿಯಲ್ಲಿ ಆಮ್ಲಜನಕದ ಕೊರತೆ ಇದೆ ಎಂದು ನಾನು ತಿಳಿದುಕೊಂಡಿದ್ದೇನೆ, ಏಕೆಂದರೆ ಅನೇಕ ಜನರು ತಮ್ಮ ಮನೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಆಮ್ಲಜನಕ ಸಿಲಿಂಡರ್​ಗಳನ್ನು ಸಂಗ್ರಹಿಸಿದ್ದಾರೆ. ಹೀಗಾಗಿ ಆಮ್ಲಜನಕ ಸಿಲಿಂಡರ್‌ಗಳ ಅಗತ್ಯವಿದ್ದು, ಯಾರಿಗೆ ಅದು ಲಭ್ಯವಾಗಿಲ್ಲವೋ ಅಂತವರನ್ನು ಗುರುತಿಸಬೇಕು. ಅಂತವರಿಗೆ ಅಗತ್ಯ ಸೌಲಭ್ಯಗಳನ್ನು ತಲುಪಿಸಬೇಕು. ಆಮ್ಲಜನಕವನ್ನೂ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿದ್ದು, ಸರ್ಕಾರ ಇದಕ್ಕೂ ಕಡಿವಾಣ ಹಾಕಬೇಕು" ಎಂದು ಪತ್ರದಲ್ಲಿ ಬರೆಯಲಾಗಿದೆ.

  ಈ ನಡುವೆ ಉತ್ತರ ಪ್ರದೇಶ ಸರ್ಕಾರವು ಕೊರೋನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ರಾಜ್ಯದಲ್ಲಿ ಹೇರಿದ್ದ ಕರ್ಫ್ಯೂವನ್ನು ಮೇ 17 ರವರೆಗೆ ವಿಸ್ತರಿಸಿದೆ.

  ಉತ್ತರಪ್ರದೇಶದಲ್ಲಿ ಶನಿವಾರ ಕೊರೋನಾ ವೈರಸ್‌ನಿಂದಾಗಿ 298 ಜನರು ಸಾವನ್ನಪ್ಪಿದ್ದಾರೆ.  26,847 ಹೊಸ ಪ್ರಕರಣಗಳು ಕಂಡುಬಂದಿದ್ದು, ರಾಜ್ಯದ ಸೋಂಕಿನ ಸಂಖ್ಯೆ 14,80,315 ಕ್ಕೆ ಏರಿಕೆಯಾಗಿದೆ. ಉತ್ತರಪ್ರದೇಶದಲ್ಲಿ ಈವರೆಗೆ 15,170 ಜನ ಕೋವಿಡ್​ಗೆ ಬಲಿಯಾಗಿದ್ದಾರೆ.

  ಭಾರತದಲ್ಲಿ ಕೊರೋನಾ ಕೇಕೆ:

  ಈ ನಡುವೆ ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌

  ಇದನ್ನೂ ಓದಿ: Arvind Kejriwal: ದೆಹಲಿಯಲ್ಲಿ ಕೈಮೀರಿದ ಕೊರೋನಾ; ಮೇ.17ರ ವರೆಗೆ ಲಾಕ್​ಡೌನ್ ವಿಸ್ತರಿಸಿದ ಅರವಿಂದ ಕೇಜ್ರಿವಾಲ್ ಸರ್ಕಾರ

  ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌ ಜನರು ಹಾಗೂ ಏಪ್ರಿಲ್ 17ರಿಂದ ದಿನ‌ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ದೇಶದ ಕೊರೊನಾ ಪೀಡಿತರ ಸಂಖ್ಯೆ ಎರಡು ಕೋಟಿಯನ್ನೂ ದಾಟಿದೆ. ಅಲ್ಲದೆ ಈಗ ನಾಲ್ಕು ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗುವ ಟ್ರೆಂಡ್ ಮುಂದುವರೆದಿದೆ.

  ಶನಿವಾರ 4,03,738 ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 3,86,444 ಜನ ಮಾತ್ರ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,22,96,414ಕ್ಕೆ ಏರಿಕೆ ಆಗಿದೆ.‌ ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನ‌ ಸಾವನ್ನಪ್ಪುತ್ತಿದ್ದಾರೆ. ಶನಿವಾರ 4,092 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 2,42,362ಕ್ಕೆ ಏರಿಕೆ ಆಗಿದೆ.
  Published by:MAshok Kumar
  First published: