ನವದೆಹಲಿ(ಜು.28): ದೇಶದಲ್ಲಿ ಈಗ ಪ್ರತಿದಿನ ಸರಿ ಸುಮಾರು 50 ಸಾವಿರ ಪ್ರಕರಣಗಳು ಕಂಡು ಬರುತ್ತಿವೆ. ಇದೇ ಸಂದರ್ಭದಲ್ಲಿ ಎರಡನೇ ಹಂತದ ಅನ್ಲಾಕ್ ಅಂತ್ಯವಾಗುತ್ತಿದೆ. ಎರಡನೇ ಹಂತದ ಅನ್ಲಾಕ್ ಮುಕ್ತಾಯವಾಗಲು ಮೂರು ದಿನಗಳು ಮಾತ್ರ ಬಾಕಿ ಇದೆ. ಹೀಗಾಗಿ ಆಗಸ್ಟ್ ಒಂದರಿಂದ ಮೂರನೇ ಹಂತದ ಅನ್ಲಾಕ್ ನಿಯಮಗಳು ಜಾರಿ ಬರಬೇಕಿದೆ. ಇದಕ್ಕಾಗಿ ಕೇಂದ್ರ ಗೃಹ ಇಲಾಖೆ ಅಂತಿಮ ಹಂತದ ತಯಾರಿ ನಡೆಸುತ್ತಿದೆ.
ಹೌದು, ನಾಳೆ ಮೂರನೇ ಹಂತದ ಅನ್ಲಾಕ್ ಸಂಬಂಧ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ನಾಳೆ ಬೆಳಗ್ಗೆ 10.30ಕ್ಕೆ ನಡೆಯಲಿರುವ ಸಂಪುಟ ಸಭೆಯಲ್ಲಿ ಅನ್ಲಾಕ್-3 ಬಗ್ಗೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಶಾಲಾ-ಕಾಲೇಜು, ಚಿತ್ರಮಂದಿರ, ವಿಮಾನ, ರೈಲು, ಮೆಟ್ರೋ, ಜಿಮ್ ಆರಂಭಿಸುವ ಬಗ್ಗೆ ನಿರ್ಧಾರ ಮಾಡುವ ಸಂಭವ ಇದೆ.
ಮೂರನೇ ಹಂತದ ಲಾಕ್ಡೌನ್ ಮಾರ್ಗಸೂಚಿ ಪ್ರಕಟಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಹೊಸ ಮಾರ್ಗಸೂಚಿ ಸ್ವರೂಪ ಹೇಗಿರಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳಿಂದ ಅಭಿಪ್ರಾಯ ಕೇಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ವಾರ ಬಿಹಾರ, ಅಸ್ಸಾಂ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಹಿಮಾಚಲ ಪ್ರದೇಶ, ಉತ್ತಾರಖಂಡ ಮುಖ್ಯಮಂತ್ರಿಗಳ ಜೊತೆ ದೂರವಾಣಿಯಲ್ಲಿ ಚರ್ಚಿಸಿದ್ದರು. ಸದ್ಯದ ಮಾಹಿತಿಗಳ ಪ್ರಕಾರ ಮೂರನೇ ಹಂತದ ಅನ್ಲಾಕ್ ನಲ್ಲಿ ಏನಿರುತ್ತೆ? ಏನಿರಲ್ಲ? ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇದೆ.
ಶಾಲೆ ಮತ್ತು ಕಾಲೇಜುಗಳು ಆರಂಭದ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ. ಶಾಲಾ-ಕಾಲೇಜುಗಳನ್ನು ಆಗಸ್ಟ್ 15ರ ಬಳಿಕ ಅಥವಾ ಸೆಪ್ಟಂಬರ್ 1ರ ನಂತರ ಆರಂಭಕ್ಕೆ ಅವಕಾಶ ನೀಡಬಹುದು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬಹುದು. ಖಾಸಗಿ ಶೈಕ್ಷಣಿಕ ಕೋಚಿಂಗ್ ಸಂಸ್ಥೆಗಳಿಗೆ ಷರತ್ತು ಬದ್ಧವಾದ ಅವಕಾಶ ನೀಡಬಹುದು. ಆಗಸ್ಟ್ ಕೊನೆಯಿಂದ ಸಿನಿಮಾ ಮಂದಿರಗಳನ್ನು ಆರಂಭಿಸಲು ಅನುಮತಿ ನೀಡಬಹುದು. ಶೇ. 25 ರಿಂದ 50 ರಷ್ಟು ವೀಕ್ಷಕರೊಂದಿಗೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಬಹುದು ಎನ್ನಲಾಗಿದೆ.
ಜಿಮ್ಗಳಿಗೆ ಷರತ್ತುಗಳನ್ನು ವಿಧಿಸಿ ಅವಕಾಶ ನೀಡುವ ಸಾಧ್ಯತೆ ಇದೆ. ಸದ್ಯಕ್ಕೆ ಪೂರ್ಣ ಪ್ರಮಾಣದ ರೈಲು ಸಂಚಾರ ಇರುವುದಿಲ್ಲ ವಿಶೇಷ ವಿಶೇಷ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಪೂರ್ಣ ಪ್ರಮಾಣದ ವಿಮಾನ ಸಂಚಾರ ಕೂಡ ಇರುವುದಿಲ್ಲ.
ವಿಮಾನ ಹಾರಾಟದ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ