• ಹೋಂ
  • »
  • ನ್ಯೂಸ್
  • »
  • Corona
  • »
  • ಶಾಕಿಂಗ್: ಕೊರೋನಾದಿಂದ ಭಯಾನಕ ಒತ್ತಡ ತಾಳಲಾರದೆ ರಾಜೀನಾಮೆಗೆ ಮುಂದಾಗುತ್ತಿರುವ ಡಾಕ್ಟರ್ಸ್!

ಶಾಕಿಂಗ್: ಕೊರೋನಾದಿಂದ ಭಯಾನಕ ಒತ್ತಡ ತಾಳಲಾರದೆ ರಾಜೀನಾಮೆಗೆ ಮುಂದಾಗುತ್ತಿರುವ ಡಾಕ್ಟರ್ಸ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಸ್ಪತ್ರೆ ತುಂಬ ರೋಗಿಗಳು, ಗಂಟೆಗಳ ಲೆಕ್ಕವೇ ಇಲ್ಲದೆ ಕೆಲಸ, ಸಾಲು ಸಾಲು ಸಾವುಗಳು ವೈದ್ಯರ ಮಾನಸಿಕ ಆರೋಗ್ಯಕ್ಕೆ ಪೆಟ್ಟು ನೀಡುತ್ತಿವೆ.

  • Share this:

ಅಮೃತ್​ಸರ್​: ಕೊರೋನಾ 2ನೇ ಅಲೆಯಿಂದ ಭಾರತದ ಆರೋಗ್ಯ ವ್ಯವಸ್ಥೆ ಜರ್ಜರಿತಗೊಂಡಿದೆ. ನಿತ್ಯ 4 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೆ ತುತ್ತಾಗುತ್ತಿದ್ದು, ಆಸ್ಪತ್ರೆಗಳು ತುಂಬಿ ತುಳುಕುತ್ತಿದೆ. ಇಡೀ ದೇಶವನ್ನು ಸಾಂಕ್ರಾಮಿಕ ಸೋಂಕು ವ್ಯಾಪಿಸಿದೆ. ಆಸ್ಪತ್ರೆಗಳ ಮೇಲೆ, ವೈದ್ಯರ ಮೇಲೆ ಹಿಂದೆಂದಿಗಿಂತಲೂ ಹೆಚ್ಚಿನ ಒತ್ತಡವಿದೆ. ಡೆಡ್ಲಿ ವೈರಸ್​ನಿಂದ ತಮ್ಮನ್ನು ತಾವು ರಕ್ಷಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಭಯಾನಕ ಒತ್ತಡದಲ್ಲಿ ವೈದ್ಯರಿದ್ದಾರೆ. ಇನ್ನು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲಾಗದೆ. ಆಕ್ಸಿಜನ್​ ಸಿಗದೇ ರೋಗಿಗಳು ಸಾವಿನ ಮನೆ ಸೇರುತ್ತಿದ್ದಾರೆ. ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ವೈದ್ಯರಿದ್ದಾರೆ. ಕಣ್ಣೆದುರೇ ರೋಗಿಗಳ ಸಾವನ್ನು ನೋಡಲಾಗದೆ ಅದೆಷ್ಟೋ ವೈದ್ಯರು ತಮ್ಮ ವೃತಿಯನ್ನೇ ತೊರೆಯಲು ಮುಂದಾಗುತ್ತಿರುವ ಆಘಾತಕಾರಿ ಸಂಗತಿ ಬಯಲಾಗುತ್ತಿದೆ.


ವೈದ್ಯೋ ನಾರಾಯಣೋ ಹರಿ ಎನ್ನುತ್ತಾರೆ. ರೋಗಿಯ ಪಾಲಿಗೆ ವೈದ್ಯರೇ ದೇವರು. ವಿಧಿಯೊಂದಿಗೆ ಗುದ್ದಾಡಿ ರೋಗಿಯ ಪ್ರಾಣವನ್ನು ಕಾಪಾಡಲು ವೈದ್ಯರಿಗೆ ಮಾತ್ರ ಸಾಧ್ಯ. ಇಂಥ ವೈದ್ಯರೇ ಇಂದು ಹೆಮ್ಮಾರಿ ಸೋಂಕಿನ ವಿರುದ್ಧ ನಿಸ್ಸಹಾಯಕರಾಗುತ್ತಿದ್ದಾರೆ. ಆಕ್ಸಿಜನ್​ ಸಿಗದೆಯೋ, ಬೆಡ್​ ಸಿಗದೆಯೋ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಯಾರದ್ದೋ ತಪ್ಪಿನಿಂದ ರೋಗಿಗಳು ಪ್ರಾಣ ಬಿಡುವುದನ್ನು ನೋಡಲು ವೈದ್ಯರಿಗೆ ಸಾಧ್ಯವಾಗುತ್ತಿಲ್ಲ. ವೈದ್ಯರಾಗಿಯೂ ರೋಗಿಯ ಪ್ರಾಣ ಉಳಿಸಲಾಗುತ್ತಿಲ್ಲವಲ್ಲ ಎಂಬ ಸಂಕಟಕ್ಕೆ ವೈದ್ಯರು ಸಿಲುಕಿದ್ದಾರೆ.


ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಇರುವುದಕ್ಕಿಂತ ವೃತ್ತಿ ತೊರೆಯುವುದೇ ಲೇಸು ಎಂದು ಎಷ್ಟೋ ವೈದ್ಯರು ರಾಜೀನಾಮೆಗೆ ಮುಂದಾಗಿದ್ದಾರೆ. ಪಂಜಾಬ್​ನ ಬಟಿಂಡದಲ್ಲಿ ನಾಲ್ವರು ವೈದ್ಯರು ಒತ್ತಡದ ಕಾರಣ ಹೇಳಿ ರಾಜೀನಾಮೆ ಸಲ್ಲಿಸಿದ್ದಾರೆ. ಭಯಾನಕ ಒತ್ತಡದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ದಯವಿಟ್ಟು ವೃತ್ತಿಯಿಂದ ನಮಗೆ ಮುಕ್ತಿ ಕೊಡಿ ಎಂದು ಬೇಡಿಕೊಂಡಿದ್ದಾರೆ. ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯಿರುವುದರಿಂದ ವೃತ್ತಿಯಿಂದ ಮುಕ್ತಿ ನೀಡಲು ಸಾಧ್ಯವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.


ಇನ್ನು ಹಲವೆಡೆ ರೋಗಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದರೆ ಕುಟುಂಬಸ್ಥರು ವೈದ್ಯರು, ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದರಿಂದಲೂ ವೈದ್ಯರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ವೈದ್ಯರೊಬ್ಬರು ಕೋವಿಡ್​ ರೋಗಿಗಳ ಸಾಲು ಸಾಲು ಸಾವು ನೋಡಿ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ಕೊರೋನಾ ಯುದ್ಧದಲ್ಲಿ ಮುಂದಾಳ್ವ ವಹಿಸಿರುವ ಡಾಕ್ಟರ್​ಗಳ ಮನೋಸ್ಥೈರ್ಯವನ್ನೇ ಕಣ್ಣಿಗೆ ಕಾಣದ ಸೋಂಕು ನುಂಗಿ ಹಾಕುತ್ತಿದೆ. ನಿತ್ಯ ಕೆಲಸದ ಒತ್ತಡ ಹೆಚ್ಚುತ್ತಿದ್ದು, ವೈದ್ಯರು ಮಾನಸಿಕ ಒತ್ತಡಕ್ಕೆ ಸಿಲುಕುತ್ತಿದ್ದಾರೆ.


ಆಸ್ಪತ್ರೆ ತುಂಬ ರೋಗಿಗಳು, ಗಂಟೆಗಳ ಲೆಕ್ಕವೇ ಇಲ್ಲದೆ ಕೆಲಸ, ಸಾಲು ಸಾಲು ಸಾವುಗಳು ವೈದ್ಯರ ಮಾನಸಿಕ ಆರೋಗ್ಯಕ್ಕೆ ಪೆಟ್ಟು ನೀಡುತ್ತಿವೆ. ವೈದ್ಯರೂ ಮನುಷ್ಯರೇ ಅಲ್ಲವೇ ಸಾವು-ನೋವು ಅವರನ್ನು ಬಾಧಿಸುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಕರ್ತವ್ಯನಿರತ ವೈದ್ಯರ ಮಾನಸಿಕ ಸ್ವಾಸ್ಥ್ಯ ಕೆಡಲಿದೆ ಎಂದು ಕೆಲ ಸಂಶೋಧನೆಗಳು ಹೇಳುತ್ತಿವೆ. ಅದೇನೇ ಇರಲಿ ವೈದ್ಯರು ಈ ಸಂಕಷ್ಟ ಕಾಲದಲ್ಲಿ ವೃತಿಪರತೆ ಮೆರೆಯುವ ಅನಿವಾರ್ಯತೆ ಇದ್ದು, ವೈದ್ಯರು ಆ ನಿಟ್ಟಿನಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ. ವೈದ್ಯರ ಕೊರತೆ ಎದುರಾದರೆ ಭಾರತದ ಪರಿಸ್ಥಿತಿ ಊಹಿಸಲು ಸಾಧ್ಯವಾಗದಷ್ಟು ಹದಗೆಡಲಿದೆ.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು