ಅಮೆರಿಕದ ಒತ್ತಡಕ್ಕೆ ಮಣಿದ ಭಾರತ; 24 ಔಷಧಗಳ ರಫ್ತು ನಿಷೇಧ ತೆರವು

ಉನ್ನತ ಮೂಲಗಳ ಪ್ರಕಾರ, ಅಮೆರಿಕದ ಒತ್ತಡ ಹೆಚ್ಚಾಗಿದ್ದರಿಂದಲೇ ಭಾರತ 24 ಔಷಧಗಳ ಮೇಲಿನ ನಿಷೇಧವನ್ನು ತುರ್ತಾಗಿ ತೆರವುಗೊಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ (ಏ. 7): ಕೊರೋನಾ ವೈರಸ್​ ಚಿಕಿತ್ಸೆಗೆ ಬಳಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಅಮೆರಿಕಕ್ಕೆ ಸರಬರಾಜು ಮಾಡದಿದ್ದರೆ ಅದರ ಪರಿಣಾಮವನ್ನು ಭಾರತ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಎಚ್ಚರಿಕೆ ನೀಡಿದ ಬೆನ್ನಲ್ಲೇ 24 ಔಷಧಿಗಳ ರಫ್ತಿನ ಮೇಲಿನ ನಿರ್ಬಂಧವನ್ನು ಭಾರತ ಸರ್ಕಾರ ತೆರವುಗೊಳಿಸಿದೆ.

ವಿಶ್ವದ ಎಲ್ಲ ದೇಶಗಳಲ್ಲೂ ಬಳಸಲಾಗುವ ಜೆನೆರಿಕ್ ಔಷಧಗಳನ್ನು ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ಭಾರತ ಕೂಡ ಒಂದು. ಇದುವರೆಗೂ ನಿಷೇಧ ಹೇರಲಾಗಿದ್ದ 24 ಔಷಧಗಳ ರಫ್ತಿನ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ತೆರವುಗೊಳಿಸಿ ಅದೇಶ ಹೊರಡಿಸಿದೆ. ಕೊರೋನಾ ವೈರಸ್​ ಪ್ರಮಾಣ ಭಾರತದಲ್ಲಿ ಹೆಚ್ಚಾದ ನಂತರ ಕಳೆದ ತಿಂಗಳು ಸರ್ಕಾರ ಲಾಕ್​ಡೌನ್ ಘೋಷಿಸಿತ್ತು. ಆ ವೇಳೆ ಬೇರೆ ದೇಶಗಳ ಜೊತೆಗಿನ ಎಲ್ಲ ಸಂಪರ್ಕವೂ ಕಳಚಿಬಿದ್ದಿತ್ತು. ಅಂತಾರಾಷ್ಟ್ರೀಯ ವಿಮಾನಗಳು, ಹಡಗುಗಳ ಸಂಚಾರವೂ ಸ್ಥಗಿತಗೊಂಡಿದ್ದರಿಂದ ಹಾಗೂ ಲಾಕ್​ಡೌನ್​ನಿಂದಾಗಿ ಔಷಧಗಳ ತಯಾರಿಕೆ ಸ್ಥಗಿತಗೊಂಡಿದ್ದರಿಂದ 26 ಔಷಧಗಳ ರಫ್ತಿನ ಮೇಲೂ ನಿಷೇಧ ಹೇರಲಾಗಿತ್ತು. ಅವುಗಳಲ್ಲಿ 24 ಔಷಧಗಳ ಮೇಲಿನ ನಿಷೇಧವನ್ನು ತೆರವುಗೊಳಿಸಲಾಗಿದೆ.

ಇದನ್ನೂ ಓದಿ: ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡದಿದ್ದರೆ ಭಾರತದೊಂದಿಗಿನ ಸಂಬಂಧದ ಮೇಲೆ ಪರಿಣಾಮ; ಟ್ರಂಪ್ ಎಚ್ಚರಿಕೆ

ಆದರೆ, ನೋವು ನಿವಾರಕವಾಗಿ ಬಳಸಲಾಗುವ ಪ್ಯಾರಾಸಿಟಮಲ್ ಮಾತ್ರೆಯ ಮೇಲಿನ ನಿಷೇಧವನ್ನು ಇನ್ನೂ ತೆರವುಗೊಳಿಸಿಲ್ಲ. ಲಾಕ್​ಡೌನ್ ಅವಧಿ ಮುಗಿಯುವ ಮೊದಲೇ ದಿಢೀರ್ ಎಂದು 24 ಔಷಧಗಳ ರಫ್ತು ನಿಷೇಧವನ್ನು ತೆರವುಗೊಳಿಸಿರುವುದಕ್ಕೆ ನಿಖರ ಕಾರಣವೇನೆಂಬುದನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಆದರೆ, ಉನ್ನತ ಮೂಲಗಳ ಪ್ರಕಾರ, ಅಮೆರಿಕದ ಒತ್ತಡ ಹೆಚ್ಚಾಗಿದ್ದರಿಂದಲೇ ಈ ನಿಷೇಧವನ್ನು ತುರ್ತಾಗಿ ತೆರವುಗೊಳಿಸಲಾಗಿದೆ.

ನಾನು ಈ ಬಗ್ಗೆ ಭಾನುವಾರ ಬೆಳಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಭಾರತವೇನಾದರೂ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ರಫ್ತಿನ ಮೇಲಿನ ನಿಯಂತ್ರಣ ತೆರವುಗೊಳಿಸದಿದ್ದರೆ ನಮ್ಮೆರಡು ದೇಶಗಳ ನಡುವಿನ ಸಂಬಂಧ ಮೊದಲಿನ ಹಾಗೆ ಇರುವುದಿಲ್ಲ. ಆಗ ಈ ಸಂಬಂಧವನ್ನು ಮುಂದುವರೆಸಬೇಕಾದ ಅಗತ್ಯವೂ ನಮಗೆ ಇರುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ವೈಟ್​ಹೌಸ್​ನಲ್ಲಿ ಸೋಮವಾರ ಹೇಳಿದ್ದರು.

ಇದನ್ನೂ ಓದಿ: ಕೊರೋನಾ ಸೋಂಕಿತ ಬ್ರಿಟನ್​​ ಪ್ರಧಾನಿ ಬೋರಿಸ್​ ಆರೋಗ್ಯ ಸ್ಥಿತಿ ಗಂಭೀರ; ಐಸಿಯುಗೆ ಶಿಫ್ಟ್​

 
First published: